Advertisement

ಕನಕದಾಸರಿಂದ ಕನ್ನಡ ಸಾಹಿತ್ಯ ಶ್ರೀಮಂತ

07:59 PM Apr 05, 2021 | Team Udayavani |

ಹರಿಹರ: ತಮ್ಮ ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಶ್ರೇಯಸ್ಸು ಕನಕದಾಸರಿಗೆ ಸಲ್ಲುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ನಗರ ಹೊರವಲಯದ ಬೆಳ್ಳೂಡಿ ಸಮೀಪದ ಕಾಗಿನಲೆ ಕನಕ ಗುರುಪೀಠದ ಶಾಖಾ ಮಠದ ಐದನೇ ವಾರ್ಷಿಕೋತ್ಸವದ ನಿಮಿತ್ತ ಭಾನುವಾರ ನಡೆದ ವಿದ್ಯಾರ್ಥಿನಿಲಯ, ನವೀಕರಿಸಿದ ಬೀರದೇವರ ದೇವಸ್ಥಾನ, ಮುಖ್ಯದ್ವಾರ, ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬದುಕಿನ ಮೌಲ್ಯಗಳನ್ನು, ಸಾಮಾಜಿಕ ನೀತಿಗಳನ್ನು ಸರಳ ಭಾಷೆಯಲ್ಲಿ ಪ್ರಚಾರ ಮಾಡಿ, ಲೋಕದ ಡೊಂಕನ್ನು ತಿದ್ದಿದವರು ದಾಸರು. ಜಾತ್ಯತೀತ, ಸಾಮಾಜಿಕ ನ್ಯಾಯದ ಬದುಕಿಗೆ ಮಾದರಿಯಾದ ದಾಸ ಶ್ರೇಷ್ಠರ ಉನ್ನತ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಶರಣರ ಕಾಲ, ದಾಸರ ಕಾಲ ಈ ನಾಡಿಗೆ ಮಹತ್ವದ್ದು. 12ನೇ ಶತಮಾನದಲ್ಲಿ ಬಸವಾದಿ ಶರಣರು ಮಾಡಿದ ಸಾಮಾಜಿಕ ಕ್ರಾಂತಿಯ ನೆರಳಿನಲ್ಲೇ 15-16ನೇ ಶತಮಾನದ ದಾಸ ಶ್ರೇಷ್ಠರ ಕೀರ್ತನೆಗಳು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಪ್ರಚುರಪಡಿಸುವಲ್ಲಿ ಯಶಸ್ವಿಯಾದವು ಎಂದು ತಿಳಿಸಿದರು.

ಅನ್ನ, ಅರಿವು, ಆಶ್ರಯವೆಂಬ ತ್ರಿವಿಧ ದಾಸೋಹ ನೀಡುವಲ್ಲಿ ಮಠ-ಪೀಠಗಳ ಸದಾ ಮುಂದು. ಸಾಕ್ಷರತೆ, ಶಿಕ್ಷಣದ ಮೂಲಕ ರಾಜ್ಯದ ಅಭಿವೃದ್ಧಿಯಲ್ಲಿ ಮಠಗಳ ಪಾತ್ರ ಮಹತ್ವದ್ದಾಗಿದೆ. ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು ಜಾತಿ, ಮತ ಭೇದವಿಲ್ಲದೆ ಎಲ್ಲ ವರ್ಗದ ಬಡವರಿಗೆ ನೆರವಾಗುತ್ತಿವೆ. ಮಠಗಳ ಸೇವೆಯನ್ನು ಗುರುತಿಸಿರುವ ಮೊಟ್ಟ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಿದ್ದಾರೆ ಎಂದು ಬಣ್ಣಿಸಿದರು. ನಿರಂಜನಾನಂದಪುರಿ ಶ್ರೀಗಳು ಸಮಾಜ ಸಂಘಟನೆಗೆ ಸದಾ ಶ್ರಮಿಸುತ್ತಿದ್ದಾರೆ. ಸಮಾಜವೇ ತಂದೆ-ತಾಯಿ ಎಂದುಕೊಂಡು ಸಮುದಾಯಕ್ಕೆ ಸಂಸ್ಕಾರದ ಜೊತೆಗೆ ಸೌಕರ್ಯಗಳನ್ನು ದೊರಕಿಸಲು ಹೋರಾಡುತ್ತಿರುವುದು ಸಮಾಜ ಬಾಂಧವರ ಅದೃಷ್ಟ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸಚಿವ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂದು ಸಾಮಾಜಿಕ ತಾರತಮ್ಯದ ವಿರುದ್ಧ ಸಮರ ಸಾರಿದ ಭಕ್ತ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಸಾಮಾಜಿಕ ನ್ಯಾಯ ಪ್ರತಿಪಾದಿಸಿದ ದಾಸ ಶ್ರೇಷ್ಠರ ತತ್ವಾದರ್ಶಗಳು ಎಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದರು. ಎಸ್‌ಟಿ ಮೀಸಲಾತಿ ಹೋರಾಟದ ಪಾದಯಾತ್ರೆ ಐತಿಹಾಸಿಕ ಕಾರ್ಯಕ್ರಮ.

Advertisement

ಒಡೆಯರ್‌, ಗೊರವಯ್ಯ ಮತ್ತಿತರೆ ಪಂಗಡದವರು ಸಹ ಜೊತೆಗೂಡಿದರು. ಹಾಲುಮತ ಸಮಾಜದ ಒಳಪಂಗಡಗಳು ಮಾತ್ರವಲ್ಲದೆ ಸವಿತಾ, ಮಡಿವಾಳ, ಉಪ್ಪಾರ ಇತ್ಯಾದಿ ಎಲ್ಲಾ ಹಿಂದುಳಿದ ಸಮಾಜಗಳಿಗೆ ಮೀಸಲಾತಿ ಬೆಳಕು ನೀಡಲು ನಿರಂಜನಾನಂದ ಶ್ರೀಗಳು ಹಾಗೂ ಈಶ್ವರಾನಂದ ಶ್ರೀಗಳು ಕಂಕಣಬದ್ಧರಾಗಿದ್ದಾರೆ ಎಂದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸ್ವಾತಂತ್ರÂ ಪೂರ್ವದಿಂದಲೂ ಹಿಂದುಳಿದವರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ, ಆದರೆ ಯಡಿಯೂರಪ್ಪ ಅವರ ಅವಧಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.

ನಿರಂಜನಾನಂದಪುರಿ ಶ್ರೀಗಳು ಮೈಲಾರ ಮಠದ ಅಭಿವೃದ್ಧಿಗೆ ಅನುದಾನ ಕೋರಿದ ಒಂದೂವರೆ ತಿಂಗಳಲ್ಲೇ 10 ಕೋಟಿ ರೂ. ಮಂಜೂರಾಗಿದೆ. ಅದರಲ್ಲಿ ಈಗಾಗಲೇ ಎರಡೂವರೆ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಹಾಲುಮತ ಸಮಾಜವನ್ನು ಎಸ್‌ಟಿಗೆ ಸೇರಿಸಲು ಕೇಂದ್ರದ ಶಿಫಾರಸ್ಸಿನಂತೆ ಕುಲಶಾಸ್ತ್ರ ಅಧ್ಯಯನ ಮಾಡಲಾಗುತ್ತಿದೆ. ಎಲ್ಲಾ ಹಿಂದುಳಿದ ಸಮಾಜಗಳಿಗೂ ಕಾನೂನಾತ್ಮಕ, ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ನ್ಯಾಯ ಒದಗಿಸಲು ಸರ್ಕಾರ ಶ್ರಮಿಸುತ್ತಿದೆ. ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ಮೀಸಲಾತಿ ಮಿತಿಯನ್ನು ಹೆಚ್ಚಿಸಿದರೆ ಮಾತ್ರ ಎಲ್ಲರಿಗೂ ನ್ಯಾಯ ಸಿಗಲಿದೆ ಎಂಬುದನ್ನು ಪ್ರತಿಪಾದಿಸಿ ಸುಪ್ರೀಂ ಕೋರ್ಟ್‌ಗೆ ಅಫಿಡಾವಿಟ್‌ ಸಲ್ಲಿಸಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಚ್‌.ಎಂ. ರೇವಣ್ಣ ಮಾತನಾಡಿ, ಬೀದರ್‌ ಹಾಗೂ ಸುತ್ತಲಿನ ಜಿಲ್ಲೆಗಳ ಹಾಲುಮತ ಸಮಾಜದವರಿಗೆ ಮೀಸಲಾತಿ ಜಾತಿ ಪ್ರಮಾಣಪತ್ರ ನೀಡುವ ವಿಷಯದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸ್ಪಂದಿಸಿದೆ. ಹಾಲುಮತ ಸಮಾಜದ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕ ಭಾವನೆ ಹೊಂದಿದ್ದಾರೆ ಎಂದು ಹೇಳಿದರು. ಹೊಸದುರ್ಗ ಕನಕಗುರು ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಸಚಿವರಾದ ಆರ್‌. ಶಂಕರ್‌, ಬೈರತಿ ಬಸವರಾಜ್‌, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್‌. ರಾಮಪ್ಪ, ಎಸ್‌.ವಿ. ರಾಮಚಂದ್ರ, ಮಾಡಾಳ್‌ ವಿರೂಪಾಕ್ಷಪ್ಪ, ಅರುಣ್‌ ಕುಮಾರ್‌ ಪೂಜಾರ್‌, ಪ್ರೊ| ಲಿಂಗಪ್ಪ, ಎಂ.ಪಿ. ರೇಣುಕಾಚಾರ್ಯ, ಬಳ್ಳಾರಿ ವಿರೂಪಾಕ್ಷಪ್ಪ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಜಿಪಂ ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ, ಪ್ರಾಚಾರ್ಯ ಬೀರೇಶ್‌, ಕಾಂತೇಶ್‌, ಟ್ರಸ್ಟಿ ನಿಂಗಪ್ಪ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

Advertisement

Udayavani is now on Telegram. Click here to join our channel and stay updated with the latest news.

Next