Advertisement

ಯಡಮೊಗೆ; ಕೊರೆಯಿಸಿ ಒಂದೂವರೆ ವರ್ಷವಾದರೂ ಸಿಗದ ಪ್ರಯೋಜನ

04:07 PM Jan 17, 2023 | Team Udayavani |

ಹೊಸಂಗಡಿ: ಯಡಮೊಗೆ ಗ್ರಾಮದ ಸಾಲಿಗದ್ದೆಯ ಕೊರಗ ಕಾಲನಿಯ ಮನೆಗಳಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಒಂದೂವರೆ ವರ್ಷದ ಹಿಂದೆ ಬೋರ್‌ವೆಲ್‌ ಕೊರೆಯಿಸಲಾಗಿತ್ತು. ಆದರೆ ಬೋರ್‌ ವೆಲ್‌ ತೆಗೆದು ಒಂದೂವರೆ ವರ್ಷವಾದರೂ ಇನ್ನೂ ಇದರ ಪ್ರಯೋಜನ ಮಾತ್ರ ಅಲ್ಲಿನ ನಿವಾಸಿಗರಿಗೆ ಸಿಕ್ಕಿಲ್ಲ. ಇದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಜ್ವಲಂತ ಸಾಕ್ಷಿ.

Advertisement

ಸಾಲಿಗದ್ದೆಯ ಕೊರಗ ಕಾಲನಿಯ ನಿವಾಸಿಗರಿಗೆ ಕುಡಿಯುವ ನೀರಿನ ಸಮಸ್ಯೆಯಿದ್ದು, ಇದಕ್ಕಾಗಿ ಅಲ್ಲಿನ ಜನರ ಬೇಡಿಕೆಯಂತೆ 2021ರಲ್ಲಿ ಇಲ್ಲಿ ಜಿ.ಪಂ.ನ 15ನೇ ಹಣಕಾಸು ಯೋಜನೆಯಡಿ ಬೋರ್‌ವೆಲ್‌ ಕೊರೆಯಿಸಲಾಗಿದೆ. ಆದರೆ ಬೋರ್‌ವೆಲ್‌ ಕೊರೆಯಿಸಿದ್ದೇ ಈವರೆಗಿನ ದೊಡ್ಡ ಸಾಧನೆಯಾಗಿದೆ. ಯಾಕೆಂದರೆ ಈ ಬೋರ್‌ವೆಲ್‌ಗೆ ಇನ್ನೂ ಮೋಟಾರು ಆಗಲಿ, ವಿದ್ಯುತ್‌ ಸಂಪರ್ಕವನ್ನು ತರುವ ಪ್ರಯತ್ನವೇ ನಡೆದಿಲ್ಲ.

ಇದರಿಂದ ಕುಡಿಯುವ ನೀರಿನ ಪ್ರಯೋಜನಕ್ಕಾಗಿ ಬೋರ್‌ವೆಲ್‌ ತೆಗೆದು ಒಂದೂವರೆ ವರ್ಷವಾದರೂ, ಇನ್ನೂ ಈ ಬೋರ್‌ವೆಲ್‌ನ ನೀರಿನ ಪ್ರಯೋಜನ ಪಡೆಯುವ ಭಾಗ್ಯ ಮಾತ್ರ ಈ ಕೊರಗ ಕಾಲನಿಯ ಜನರಿಗೆ ಬರದಿರುವುದು ಮಾತ್ರ ದುರಂತ. ಇಲ್ಲಿನ ಜನ ವಂಚಿತರಾಗಿರುವುದು ಕೇವಲ ನೀರಿನ ಸೌಲಭ್ಯದಿಂದ ಮಾತ್ರವಲ್ಲ. ಅನೇಕ ಮೂಲ ಸೌಕರ್ಯಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ. ಪೂರ್ಣ ಪ್ರಮಾಣದ ವಿದ್ಯುತ್‌ ಸೌಕರ್ಯವೂ ಸರಿಯಾಗಿ ಸಿಕ್ಕಿಲ್ಲ. ಬೋರ್‌ವೆಲ್‌ಗೆ ಮೋಟಾರು ಅಳವಡಿಸದೆ, ಕೊರಗ ಸಮುದಾಯದವರು ಕೊಳಚೆ ನೀರು ಕುಡಿಯುವಂತಾಗಿದ್ದು, ಆದಷ್ಟು ಬೇಗ ಅಲ್ಲಿಗೆ ಮೋಟಾರು, ವಿದ್ಯುತ್‌ ಅಳವಡಿಸಬೇಕು ಎಂದು ದಲಿತ ಮುಖಂಡ ಆನಂದ ಕಾರೂರು ಒತ್ತಾಯಿಸಿದ್ದಾರೆ.

ಕೆರೆಯ ನೀರು ಬಳಕೆ
ಇಲ್ಲಿ ಒಂದು ಬಾವಿಯಿದ್ದು, ಅದು ಅರ್ಧ ಮುಚ್ಚಿದಂತಿದ್ದು, ಅದರಿಂದ ನೀರು ಸೇದಿ, ಬಳಸಲು ಸಾಧ್ಯವಿಲ್ಲ. ಸದ್ಯಕ್ಕೆ ಇಲ್ಲಿನ ನಿವಾಸಿಗರಿಗೆ ಆಸರೆಯಾಗಿರುವುದು ಇಲ್ಲಿರುವ ಒಂದು ಕೆರೆಯ ನೀರು. ಇಲ್ಲಿ 10 ಮನೆಗಳಿದ್ದು, ಅವರಿಗೆ ಈ ಕೆರೆಯೇ ವರದಾನವಾಗಿದೆ. ಈಗ ಆ ಕೆರೆಯ ನೀರು ಸಹ ಕಡಿಮೆಯಾಗುತ್ತಿದ್ದು, ಇನ್ನೂ ಮುಂದೆ ಹೇಗೆ ಎನ್ನುವ ಆತಂಕ ಇಲ್ಲಿನ ಜನರದ್ದಾಗಿದೆ.

ಮೋಟಾರು ಅಳವಡಿಕೆಗೆ ಕ್ರಮ
ಸಾಲಿಗದ್ದೆಯಲ್ಲಿ ಜಿ.ಪಂ.ನಿಂದ ಬೋರ್‌ವೆಲ್‌ ಕೊರೆಯಿಸಲಾಗಿದೆ. ಮೋಟಾರು ಅಳವಡಿಸುವ ಬಗ್ಗೆ ಸುಮಾರು 2 ತಿಂಗಳ ಹಿಂದೆ ಜಿ.ಪಂ.ನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್‌ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಬಾರಿ ಮೋಟಾರು ಅಳವಡಿಸುವ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.
– ಗೋಪಾಲ ದೇವಾಡಿಗ, ಯಡಮೊಗೆ ಗ್ರಾ.ಪಂ. ಪಿಡಿಒ

Advertisement

 ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next