Advertisement

ಯಾದಗಿರಿ: ಆಕಳು-ಎಮ್ಮೆ ಸಾವಿಗೆ ಕೇವಲ 10 ಸಾವಿರ

06:39 PM Mar 17, 2021 | Team Udayavani |

ಯಾದಗಿರಿ: ವನ್ಯ ಜೀವಿಗಳ ಉಪಟಳದಿಂದ ಬಲಿಯಾದ ಸಾಕು ಪ್ರಾಣಿಗಳ ಸಾವಿಗೆ ಅರಣ್ಯ ಇಲಾಖೆ ಬಿಡಿಗಾಸಿನ ಪರಿಹಾರ ನೀಡುತ್ತಿದೆ. ಇದು ರೈತಾಪಿ ವಲಯದಲ್ಲಿ ಅಸಮಾಧಾನ ಮೂಡಿಸಿದ್ದು, ಲಕ್ಷಾಂತರ ಬೆಲೆ ಬಾಳುವ ಪ್ರಾಣಿಗಳಿಗೆ ಕನಿಷ್ಟ ಪರಿಹಾರ ನೀಡಲಾಗುತ್ತಿದೆ. ಪರಿಹಾರ ಮೊತ್ತ ಹೆಚ್ಚಿಸಬೇಕು ಎನ್ನುವ ಕೂಗು ಕೇಳಿ ಬಂದಿದೆ.

Advertisement

ಪ್ರಸ್ತುತ ಸಾಕು ಪ್ರಾಣಿಗಳಾದ ಆಕಳು-ಎಮ್ಮೆ ಖರೀದಿಸಲು 50 ಸಾವಿರದಷ್ಟು ಹಣ ನೀಡಿ ಖರೀದಿಸಬೇಕಿರುವ ಅನಿವಾರ್ಯತೆಯಿದೆ. ಇದನ್ನು ಕಳೆದುಕೊಂಡ ರೈತ ಸಮುದಾಯಕ್ಕೆ ಇಲಾಖೆ ಬಿಡಿಗಾಸು ಪರಿಹಾರ ನೀಡುತ್ತಿದ್ದು, ಇದು ಯಾವ ನ್ಯಾಯ ಎನ್ನುತ್ತಿದೆ ರೈತ ಸಮೂಹ.

ಈಗಷ್ಟೇ ಬೇಸಿಗೆ ಕಾಲ ಆರಂಭವಾಗುತ್ತಿದ್ದು, ವನ್ಯಜೀವಿಗಳು ನಾಡಿನತ್ತ ಮುಖ ಮಾಡುವ ಆತಂಕ ಎದುರಾಗಿದೆ. ಬೆಳೆಯುತ್ತಿರುವ ನಗರೀಕರಣ, ಅರಣ್ಯ ನಾಶದಿಂದ ವನ್ಯಜೀವಿಗಳು ನಾಡಿನಲ್ಲಿ ಪ್ರತ್ಯಕ್ಷವಾಗುವುದಲ್ಲದೇ, ಮನುಷ್ಯ ಹಾಗೂ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುವ ಪ್ರಕರಣಗಳು ಆಗಾಗ ನಡೆಯುವುದು ಸಾಮಾನ್ಯವಾಗಿದೆ.

ಜಿಲ್ಲೆಯ ಯಾದಗಿರಿ ತಾಲೂಕಿನ ವ್ಯಾಪ್ತಿಯಲ್ಲಿ 21038 ಹೆಕ್ಟೇರ್‌, ಸುರಪುರ 5145 ಹೆ. ಹಾಗೂ ಶಹಾಪುರದಲ್ಲಿ 2684 ಹೆ. ಅರಣ್ಯ ಪ್ರದೇಶ ಸೇರಿ ಜಿಲ್ಲೆಯಲ್ಲಿ ಒಟ್ಟು 28868 ಹೆಕ್ಟೇರ್‌ ಪ್ರದೇಶವಿದ್ದು, ಮೊಸಳೆ, ಚಿರತೆ, ತೋಳ ಹಾಗೂ ಕಾಡು ಹಂದಿ ದಾಳಿಯಾಗಿರುವ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದೆ.

2019-20ರಲ್ಲಿ ಜಿಲ್ಲೆಯಲ್ಲಿ ಮೊಸಳೆ ದಾಳಿಗೆ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಕುರಿ, ಆಕಳು, ಎಮ್ಮೆ ಸೇರಿ 12 ಪ್ರಾಣಿಗಳು ಮೃತಪಟ್ಟಿದ್ದು, ಒಬ್ಬ ವ್ಯಕ್ತಿ ಗಾಯಗೊಂಡಿರುವ ಪ್ರಕರಣ ನಡೆದಿದೆ. ವ್ಯಕ್ತಿ ಸಾವಿಗೆ 5 ಲಕ್ಷ, ಗಾಯಗೊಂಡವರಿಗೆ 30 ಸಾವಿರ, ಕುರಿಗೆ ತಲಾ 5 ಸಾವಿರ ಹಾಗೂ ಆಕಳು-ಎಮ್ಮೆಗೆ ತಲಾ 10 ಸಾವಿರ ಸೇರಿ 8.51ಲಕ್ಷ ಪರಿಹಾರ ನೀಡಲಾಗಿದೆ.

Advertisement

2020-21ರಲ್ಲಿ ಇತ್ತೀಚೆಗಷ್ಟೇ ಯಕ್ಷಿಂತಿಯಲ್ಲಿ ನದಿ ದಡದ ನಿಂತ ನೀರಿನಲ್ಲಿ ಕುರಿಗಳ ಮೈ ತೊಳೆಯುವ ವೇಳೆ ಕುರಿಗಾಹಿ ಲಕ್ಷ್ಮಣ ಶಾರದಹಳ್ಳಿ ಎನ್ನುವ ವ್ಯಕ್ತಿ ಮೊಸಳೆ ದಾಳಿಗೆ ಬಲಿಯಾಗಿದ್ದು, ಮಾನವರ ಮೇಲೆ 2 ಕಾಡು ಹಂದಿ ದಾಳಿ, 1 ಚಿರತೆ ದಾಳಿ, 2 ತೋಳ ಹಾಗೂ 2 ಮಂಗ ದಾಳಿಯಾದ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇನ್ನು 21 ಕುರಿಗಳ ಮೇಲೆ ತೋಳ, ತಲಾ ಒಂದು ಆಕಳು ಮತ್ತು ಎಮ್ಮೆಯ ಮೇಲೆ ಮೊಸಳೆ ದಾಳಿಯಾಗಿದ್ದು, 3.85 ಲಕ್ಷ ರೂ. ಪರಿಹಾರ ನೀಡಲಾಗಿರುವ ಕುರಿತು ಇಲಾಖೆಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಅರಣ್ಯ ಇಲಾಖೆಯ ನಿಯಮದಂತೆ ಮಾನವರ ಮೇಲಿನ ವನ್ಯ ಜೀವಿ ದಾಳಿಯಿಂದ ಗಾಯಗೊಂಡರೆ 30 ಸಾವಿರ, ಸಾವನ್ನಪ್ಪಿದರೆ 7.50 ಲಕ್ಷ, ಆಕಳು-ಎಮ್ಮೆ ಸಾವಿಗೆ 10 ಸಾವಿರ, ಕುರಿಗೆ 5 ಸಾವಿರ ಪರಿಹಾರ ನೀಡಲಾಗುತ್ತಿದೆ. ಕಾಡು ಪ್ರಾಣಿ ದಾಳಿಯಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಮಾಸಿಕ 2 ಸಾವಿರ ಮಾಶಾಸನ ಸೌಲಭ್ಯವೂ ವಿತರಣೆಯಾಗುತ್ತಿದೆ

ವನ್ಯ ಜೀವಿಗಳಿಂದ ಗಾಯಗೊಂಡ ಮತ್ತು ಸಾವನ್ನಪ್ಪಿದ ಸಾಕು ಪ್ರಾಣಿ ಮತ್ತು ಮಾನವರ ಸಾವಿನ ಪ್ರಕರಣಗಳಿಗೆ ಇಲಾಖೆಯಿಂದ ನಿಯಮದಂತೆ ಪರಿಹಾರ ವಿತರಿಸಲಾಗಿದೆ. ವನ್ಯ ಜೀವಿಗಳ ಕುರಿತು ಸಾರ್ವಜನಿಕರು ಜಾಗೃತರಾಗಿರಬೇಕು.
ಎಂ.ಎಲ್‌. ಬಾವಿಕಟ್ಟಿ,
ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಯಾದಗಿರಿ

ಅರಣ್ಯ ನಾಶದಿಂದ ಪ್ರಾಣಿಗಳು ನಾಡಿನತ್ತ ಬರುತ್ತಿವೆ. ಆಕಳು ಮತ್ತು ಎಮ್ಮೆಯ ಖರೀದಿಸಬೇಕಿದ್ದರೆ ಬೆಲೆ ಕನಿಷ್ಟ 50 ಸಾವಿರದಷ್ಟಿದೆ. ಇದಕ್ಕೆ ಇಲಾಖೆ ಕೇವಲ ಬಿಡಿಗಾಸು ಪರಿಹಾರ ನೀಡುವುದು ರೈತಾಪಿ ಜನರನ್ನು ನೋವಿನ ಮಧ್ಯೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದಂತಾಗುತ್ತದೆ. ಹಾಗಾಗಿ ಆಕಳು ಮತ್ತು ಎಮ್ಮೆಯ ಪರಿಹಾರವನ್ನು ಹೆಚ್ಚಿಸುವುದು ಸೂಕ್ತ. ಇಲಾಖೆಯವರು ಕಾಡು ಪ್ರಾಣಿಗಳ ಕುರಿತು ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಿ ಅಮಾಯಕರ ಪ್ರಾಣ ಕಾಪಾಡಬೇಕು.
ಮಲ್ಲಿಕಾರ್ಜುನ ಸತ್ಯಂಪೇಟ, ರೈತ ಮುಖಂಡ

ಅನಿಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next