ಯಾದಗಿರಿ: ಶನಿವಾರ ರಾತ್ರಿ ಬೀಸಿದ ಬಿರುಗಾಳಿಗೆ ರೈತರೊಬ್ಬರ ಪಪ್ಪಾಯಿ ಬೆಳೆ ಮಣ್ಣು ಪಾಲಾಗಿದೆ. ಜಿಲ್ಲೆಯ ಸುರಪುರ ತಾಲೂಕು ಬಿಜಾಸಪುರದ ರೈತ ದುರ್ಗಪ್ಪ ಎಂಬುವವರ ಬೆಳೆ ನಾಶವಾಗಿದ್ದು, ತನ್ನ ಎರಡು ಎಕರೆ ಜಮೀನಿನಲ್ಲಿ ಪಪ್ಪಾಯಿ ಬೆಳೆದಿದ್ದ ರೈತ ಈಗ ಕಣ್ಣೀರು ಸುರಿಸುವಂತಾಗಿದೆ. ಪಪ್ಪಾಯಿ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಿದರೆ ಹಣ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಬಿರುಗಾಳಿಗೆ ಬರೆ ಎಳೆದಿದೆ.
ಬಿರುಗಾಳಿಗೆ ಪಪ್ಪಾಯಿ ಗಿಡಗಳು ನೆಲಕಚ್ಚಿದ ಪರಿಣಾಮ ಸುಮಾರು 30 ಟನ್‌ನಷ್ಟು ಹಣ್ಣುಗಳು ಮಣ್ಣು ಪಾಲಾಗಿದೆ ಎಂದು ಅಂದಾಜಿಸಲಾಗಿದೆ. ಒಂದೊಂದು ಗಿಡದಲ್ಲಿ 100ರಿಂದ 150ಕಾಯಿ ಬಿಟ್ಟಿದ್ದವು. ಒಂದೆರಡು ದಿನಗಳಲ್ಲಿ ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಬಿರುಗಾಳಿ ಬರೆ ಎಳೆದಿದೆ. ಮೇಲಾಗಿ ಜಿಲ್ಲೆಯಲ್ಲಿ ತೋಟಗಾರಿಕೆ ಫಸಲಿಗೆ ವಿಮಾ ಸೌಲಭ್ಯವೂ ಇಲ್ಲದಿರುವುದು ರೈತ ಸಮೂಹವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಕಾಯಿ ಸರಿಯಾಗಿ ಬೆಳೆದಿತ್ತು. ಒಂದೆರಡು ದಿನದಲ್ಲಿ ಕಟಾವು ಮಾಡಿ ಹೈದರಾಬಾದ್ ಮಾರುಕಟ್ಟೆಗೆ ಸಾಗಿಸಬೇಕು ಎನ್ನುವ ವಿಚಾರವಿತ್ತು. ಶನಿವಾರ ರಾತ್ರಿ ಬೀಸಿದ ಗಾಳಿಗೆ ಪಪ್ಪಾಯಿ ಗಿಡಗಳು ನೆಲಕ್ಕುರುಳಿವೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಸಂಬಂಧಿಸಿದ ಅಧಿಕಾರಿಗಳು ತನ್ನ ಕಷ್ಟಕ್ಕೆ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸುವ ಕಾರ್ಯ ಮಾಡಬೇಕು.
ದುರ್ಗಪ್ಪ
ಬಿಜಾಸಪುರ ರೈತ