ಯಾದಗಿರಿ: ಕಾಂಗ್ರೆಸ್ ಮುಖಂಡ ವಿಶ್ವನಾಥ ರೆಡ್ಡಿ ದರ್ಶನಾಪುರ ಎಂಬವರಿಗೆ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಬಸವರಾಜ ಅರುಣಿ ಎಂಬಾತ ಸ್ವೀಟ್ ವೊಂದರಲ್ಲಿ ವಿಷ ಬೆರೆಸಿ ತಿನ್ನಿಸಲು ಮುಂದಾಗಿದ್ದ ಎಂದು ಆರೋಪಿಸಿ ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶಹಾಪುರ ನಗರದಲ್ಲಿ (ಡಿ.26) ರಂದು ನಡೆದಿದೆ.
ಕಳೆದ ಕೆಲ ತಿಂಗಳಿಂದ ಸಹಕಾರಿ ಸಂಘದ ಜಿಲ್ಲಾ ಪ್ರವರ್ತಕ ಅಧ್ಯಕ್ಷರಾಗಲು ಅರುಣಿ ಮತ್ತು ವಿಶ್ವನಾಥ ರಡ್ಡಿ ದರ್ಶನಾಪುರ ಮಧ್ಯ ಪೈಪೋಟಿ ನಡೆದಿದ್ದು, ವಿಶ್ವನಾಥ ರಡ್ಡಿ ಅವರೇ ಅದರಲ್ಲಿ ಮೇಲುಗೈ ಸಾಧಿಸಿದ್ದರು. ಅಂದಿನಿಂದ ಪರಸ್ಪರರ ನಡುವೆ ಕಂದಕ ಉಂಟಾಗಿತ್ತು ಎನ್ನಲಾಗಿದೆ.
ಆದರೆ ನಿನ್ನೆ ಸೋಮವಾರ (ಡಿ.26) ಅದ್ಯಾವ ಕಾರಣಕ್ಕೆ ವಿಶ್ವನಾಥ ರೆಡ್ಡಿ ಅವರ ಮನೆಗೆ ಬಸವರಾಜ ಅರುಣಿ ಹೋಗಿದ್ದರೋ ಗೊತ್ತಿಲ್ಲ. ಆದರೆ ಜನರ ಬಾಯಿ ಮಾತಿನ ಮೂಲಕ ಎಲ್ಲಡೆ ಕೇಳಿ ಬರುತ್ತಿರುವುದು ವಿಶ್ವನಾಥ ರೆಡ್ಡಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸ್ನೇಹಿತರಾಗಲು ಮಾತುಕತೆ ನಡೆದಿತ್ತು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಸಿಹಿ ಹಂಚಿಕೊಳ್ಳುವ ವೇಳೆ ಅರುಣಿ ತಂದಿಟ್ಟಿದ ಸ್ವೀಟ್ ಬಾಕ್ಸ್ ಕಾರಿನಲ್ಲಿ ಬಿಟ್ಟಿದ್ದು, ಅದನ್ನು ತರಲು ವಿಶ್ವನಾಥ ರೆಡ್ಡಿ ತಮ್ಮ ಹುಡುಗನೊಬ್ಬನಿಗೆ ಹೇಳಿದರು. ಬಳಿಕ ಅರುಣಿ, ವಿಶ್ವನಾಥ ರೆಡ್ಡಿ ಅವರಿಗೆ ಸ್ವೀಟ್ ತಿನ್ನಿಸಲು ಮುಂದಾಗ್ತಾರೆ. ಆದರೆ ವಿಶ್ವನಾಥ ರೆಡ್ಡಿ ಅವರ ಮೂಗಿಗೆ ಸಿಹಿತಿಂಡಿ ಕೆಟ್ಟ ವಾಸನೆ ಬಂದಿದ್ದು, ತಕ್ಷಣ ಸಿಹಿತಿಂಡಿ ಬೇಡ, ಇದು ಸರಿಯಿಲ್ಲ, ಏನೋ ವಾಸನೆ ಬರ್ತಿದೆ ಎಂದು ಪರಿಶೀಲಿಸಿ,ಏನಿದು ಎಂದು ಅರುಣಿಯನ್ನು ಪ್ರಶ್ನಿಸಿ ಗದರಿಸಿದಾಗ ಆತ ಬೆವತು ,ತೊದಲುತ್ತಾನೆ. ಆಗ ಅಲಿದ್ದ ಎಲ್ಲರೂ ಕೋಪಗೊಂಡು ಥಳಿಸಿದ್ದಾರೆ ಎನ್ನಲಾಗಿದೆ.
ಅರುಣಿಯವರನ್ನು ಥಳಿಸಿ ಅರೆಬರೆ ಬಟ್ಟೆಯಲ್ಲಿ ಆತನನ್ನು ಹಿಡಿದು ನಿಂತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಅರುಣಿಯವರನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಿದ್ದು, ಆತ ತಾನು ವಿಷ ಬೆರೆಸಿರುವದಿಲ್ಲ. ಅದು ಹೇಗೆ ವಿಷ ಹಾಕುವೆ. ಇದೆಲ್ಲ ಸುಳ್ಳು ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿರಬಹುದು ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.
ಆದರೆ ಈ ಕುರಿತು ಅಧಿಕೃತ ಪ್ರಕರಣ ದಾಖಲಾಗಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅರುಣಿ ಮೇಲೆ ಹಲ್ಲೆ ನಡೆದಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಪರ ವಿರೋಧ ಚರ್ಚೆ ನಡೆದಿದೆ.