ಯಾದಗಿರಿ: ಜಿಲ್ಲೆಯ ರೈತರು ಮುಂಗಾರು ಬಿತ್ತನೆಗೆ ಜಮೀನು ಹದಗೊಳಿಸಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಕಳೆದೆರಡು ದಿನಗಳಿಂದ ಅಲ್ಲಲ್ಲಿ ಮಳೆ ಸುರಿದಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಕೃಷಿ ಇಲಾಖೆ 2020-21ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆಗೆ ಅಗತ್ಯ ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ ಸೇರಿದಂತೆ ಅಗತ್ಯ ವಸ್ತುಗಳ ದಾಸ್ತಾನು ಮಾಡಿಕೊಂಡಿದೆ. ಇನ್ನು ಜಿಲ್ಲೆಯಲ್ಲಿ 836 ಮಿ.ಮೀ. ವಾಡಿಕೆ ಮಳೆಯ ಪ್ರಮಾಣವಿದ್ದು, ಪ್ರಸಕ್ತ ಸಾಲಿನ ಏಪ್ರಿಲ್ ತಿಂಗಳಲ್ಲಿ ಜಿಲ್ಲಾದ್ಯಂತ ಸರಾಸರಿ 18 ಮಿ.ಮೀ ಮಳೆಯಾಗಿದೆ. ಜೂನ್ 1ರಿಂದ ಮುಂಗಾರು ಆರಂಭವಾಗಿದೆ. 2 ದಿನಗಳಲ್ಲಿ ವಾಡಿಕೆ 5 ಮಿ.ಮೀ ಮಳೆಗಿಂತ ಹೆಚ್ಚಿನ ಮಳೆ (22 ಮಿ.ಮೀ) ಸುರಿದಿದೆ. ಜಿಲ್ಲೆಯಲ್ಲಿ 2,90,897 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು, ಈಗಷ್ಟೇ ಇಳೆ ತಂಪುಗೊಳಿಸುವ ಮಳೆ ಸುರಿದಿದೆ. ಮುಂಗಾರು ಬೆಳೆಗಳಾದ ಹೆಸರು, ತೊಗರಿ, ಹತ್ತಿ, ಭತ್ತ, ಸಜ್ಜೆ ಹಾಗೂ ಸೂರ್ಯಕಾಂತಿ ಬಿತ್ತೆನೆಗೆ ರೈತರು ತಯಾರಿಯಲ್ಲಿ ತೊಡಗಿದ್ದಾರೆ. ಮುಂಗಾರು ಬಿತ್ತನೆ ಕ್ಷೇತ್ರದ ಗುರಿಗೆ ಪೂರಕವಾಗಿ 25,383 ಕ್ವಿಂಟಲ್ ಬಿತ್ತನೆ ಬೀಜದ ಅವಶ್ಯಕತೆ ಇದ್ದು, 16,801.5 ಕ್ವಿಂಟಲ್ ಕೆ.ಎಸ್.ಎಸ್.ಸಿ., ಎನ್.ಎಸ್.ಸಿ ಹಾಗೂ ಖಾಸಗಿ ಪೂರೈಕೆದಾರರಿಗೆ ಬಿತ್ತನೆ ಬೀಜ ಪೂರೈಸಲು ಸಜ್ಜಾಗಿದೆ.
ರಸಗೊಬ್ಬರ, ಕೀಟನಾಶಕ ದಾಸ್ತಾನು: ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆ ಮತ್ತು ಖಾಸಗಿ ವಿತರಕರಲ್ಲಿ 21,926 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, ಏಪ್ರಿಲ್ ಮಾಹೆಗೆ 13,525 ಮೆಟ್ರಿಕ್ ಟನ್ ಪೂರೈಸಲಾಗಿದೆ. ರೈತರು ಬೆಳೆದ ಬೆಳೆಗಳಿಗೆ ರೋಗ ಮತ್ತು ಕೀಟಗಳ ನಿರ್ವಹಣೆಗಾಗಿ ಜಿಲ್ಲೆಯ ಎಲ್ಲ 16 ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಖಾಸಗಿ ಮಾರಾಟಗಾರರಲ್ಲಿ 52,027 ಲೀಟರ್/ ಕೆ.ಜಿ ದಾಸ್ತಾನಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಆರ್.ದೇವಿಕಾ ತಿಳಿಸಿದ್ದಾರೆ.
ಜಿಲ್ಲೆಯು ಭೌಗೋಳಿಕವಾಗಿ 5,16,088 ಹೆಕ್ಟೇರ್ ಪ್ರದೇಶವನ್ನು ಹೊಂದಿದ್ದು, ಒಟ್ಟು 4,42,272 ಹೆಕ್ಟೇರ್ ಸಾಗುವಳಿ ವಿಸ್ತೀರ್ಣ ಹೊಂದಿದೆ. ಸಾಗುವಳಿ ಕ್ಷೇತ್ರದ ಪೈಕಿ 2,60,058 ಹೆಕ್ಟೇರ್ ಒಣ ಭೂಮಿಯಾಗಿದ್ದು, 1,79,156 ಹೆಕ್ಟೇರ್ ನೀರಾವರಿ ಕ್ಷೇತ್ರ ಇರುತ್ತದೆ. ಜಿಲ್ಲೆಯಲ್ಲಿ ಒಟ್ಟು 71,646 ಅತೀ ಸಣ್ಣ ರೈತರು, 79,334 ಸಣ್ಣ ರೈತರು ಹಾಗೂ 75,404 ದೊಡ್ಡ ರೈತರು ಇದ್ದಾರೆ. 16ರೈತ ಸಂಪರ್ಕ ಕೇಂದ್ರಗಳಿವೆ.
ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ 510 ಕ್ವಿಂಟಲ್ ತೊಗರಿ, 152 ಕ್ವಿಂಟಲ್ ಹೆಸರು, 35 ಕ್ವಿಂಟಲ್ ಭತ್ತ (ಯಾದಗಿರಿ ತಾಲೂಕು ಮಾತ್ರ), 12.60 ಕ್ವಿಂಟಲ್ ಸಜ್ಜೆ, 4 ಕ್ವಿಂಟಲ್ ಸೂರ್ಯಕಾಂತಿ, 2.30 ಕ್ವಿಂಟಲ್ ಮೆಕ್ಕೆಜೋಳ, 15 ಕ್ವಿಂಟಲ್ ಉದ್ದು ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದ್ದು, ವಿತರಣೆ ಪ್ರಕ್ರಿಯೆ ಜಾರಿಯಲ್ಲಿದೆ. ಇನ್ನು ಜಿಲ್ಲೆಯಲ್ಲಿ 22,500 ಮೆಟ್ರಿಕ್ ಟನ್ ಯೂರಿಯಾ, 13,920 ಮೆ.ಟನ್ ಡಿಎಪಿ, 5,266 ಮೆ.ಟನ್ ಕಾಂಪ್ಲೆಕ್ಸ್, 820 ಮೆ.ಟನ್ ಎಂ.ಒ.ಪಿ, 4,204 ಮೆ.ಟನ್ ಎಸ್‌ಎಸ್‌ಪಿ, 841 ಮೆ.ಟನ್ ಮಿಕ್ಸಚರ್ ರಸಗೊಬ್ಬರಗಳ ದಾಸ್ತಾನಿದೆ.
ಅನೀಲ ಬಸೂದೆ