ನಿರ್ದೇಶಕ ಕಿರಣ್ ಗೋವಿ ಮೊಗದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ, ಅವರ “ಯಾರಿಗೆ ಯಾರುಂಟು’ ಚಿತ್ರದ ಹಾಡುಗಳಿಗೆ ಎಲ್ಲೆಡೆ ಮೆಚ್ಚುಗೆ ಸಿಕ್ಕಿರುವುದು. ಅಷ್ಟೇ ಅಲ್ಲ, ಚಿತ್ರ ಫೆಬ್ರವರಿ 22 ರಂದು ಬಿಡುಗಡೆಯಾಗುತ್ತಿರುವುದು. ಆ ಖುಷಿಯಲ್ಲಿ ಚಿತ್ರತಂಡದೊಂದಿಗೆ ಮಾತಿಗೆ ಆಗಮಿಸಿದ್ದರು ಕಿರಣ್‌ಗೋವಿ. ಮೊದಲು ಮಾತು ಶುರು ಮಾಡಿದ್ದು ಗೋವಿ. “ಈ ಚಿತ್ರಕ್ಕೆ ಶೀರ್ಷಿಕೆ ಯಾವುದನ್ನು ಇಡಬೇಕು ಅಂತ ಚರ್ಚಿಸುತ್ತಿರುವಾಗ, ನಮ್ಮ ಗುರೂಜಿ ಒಬ್ಬರು “ಯಾ’ ಅಕ್ಷರದಿಂದಲೇ ಶುರುಮಾಡಿ ಒಳ್ಳೆಯದಾಗುತ್ತೆ ಎಂಬ ಸಲಹೆ ಕೊಟ್ಟರು. “ಯಾ’ ಅಕ್ಷರದಿಂದ ಏನನ್ನು ಇಡಬಹುದು ಎಂದು ಯೋಚಿಸುತ್ತಿರುವಾಗ, ಕಥೆಗೆ ಪೂರಕವಾಗಿ “ಯಾರಿಗೆ ಯಾರುಂಟು’ ಶೀರ್ಷಿಕೆ ಸೂಕ್ತವೆನಿಸಿ ಇಡಲಾಗಿದೆ. ಬದುಕಿನಲ್ಲಿ ಪ್ರತಿಯೊಬ್ಬರಿಗೂ ಒಂದೊಮ್ಮೆ “ಯಾರಿಗೆ ಯರುಂಟು’ ಎಂಬ ಪದ ನೆನಪಾಗುತ್ತೆ. ಹಾಗಾಗಿ ಅದನ್ನೇ ಆಯ್ಕೆ ಮಾಡಿದ್ದೇವೆ. ಇನ್ನು, ಈ ಕಥೆಯನ್ನು ಮೊದಲು ಮೂರ್‍ನಾಲ್ಕು ನಿರ್ಮಾಪಕರಿಗೆ ಹೇಳಿದ್ದೆ. ಕಥೆ ಇಷ್ಟವಾದರೂ ಯಾರೊಬ್ಬರೂ ಆಸಕ್ತಿ ತೋರಲಿಲ್ಲ. ಕೊನೆಗೆ ನನ್ನ ಚಿಕ್ಕಪ್ಪ ಎಸ್.ಎ.ರಘುನಾಥ್, ಕಥೆ ಕೇಳಿ, ನಿರ್ದೇಶನಕ್ಕೆ ಅವಕಾಶ ಕೊಟ್ಟರು. ಆರಂಭದಲ್ಲಿ ಬಜೆಟ್ ಕಮ್ಮಿ ಇತ್ತು. ಎರಡನೇ ಹಂತದಲ್ಲಿ ಜಾಸ್ತಿಯಾಯ್ತು. ಆದರೆ, ಕಥೆಗೆ ಪೂರಕವಾಗಿದ್ದರಿಂದ ನಿರ್ಮಾಪಕರು ಕೇಳಿದ್ದೆಲ್ಲಾ ಕೊಟ್ಟು, ಅದ್ಭುತ ಸಿನಿಮಾ ಆಗಲು ಕಾರಣರಾಗಿದ್ದಾರೆ. ಈಗ ಅವರಿಗೆ ಸಿನಿಮಾ ಮಾಡಿದ್ದಕ್ಕೂ ಹೆಮ್ಮೆ ಇದೆ. ಇನ್ನು, ಎರಡು ತಿಂಗಳ ಹಿಂದೆಯೇ ಚಿತ್ರ ರಿಲೀಸ್ ಆಗಬೇಕಿತ್ತು. ದೊಡ್ಡ ಚಿತ್ರಗಳು ಇದ್ದುದರಿಂದ ಫೆ.22 ರಂದು ಬಿಡುಗಡೆ ಮಾಡುತ್ತಿದ್ದೇವೆ. ಇನ್ನು, ಇದೊಂದು ಆರೋಗ್ಯಧಾಮದಲ್ಲಿ ನಡೆಯುವಂತಹ ಕಥೆ. ಪ್ರಶಾಂತ್ ಇಲ್ಲಿ ಮುಗ್ಧ ಹುಡುಗನ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ನೀಟ್ ಆಗಿ ನಿಭಾಯಿಸಿದ್ದಾರೆ’ ಎಂದು ವಿವರ ಕೊಟ್ಟರು ಕಿರಣ್‌ಗೋವಿ.
ನಿರ್ಮಾಪಕ ಎಸ್.ಎ.ರಘುನಾಥ್ ಅವರಿಗೆ “ಯಾರಿಗೆ ಯಾರುಂಟು’ ಚಿತ್ರ ಮಾಡಿದ್ದಕ್ಕೆ ಈಗ ಖುಷಿ ಇದೆಯಂತೆ. ಇದೊಂದು ದೃಶ್ಯಕಾವ್ಯ. ಒಳ್ಳೆಯ ಕಥೆಗೆ ಬಂಡವಾಳ ಹಾಕುವುದು ನಿರ್ಮಾಪಕನ ಕರ್ತವ್ಯ. ನನ್ನ ಕೆಲಸವನ್ನು ನೀಟಾಗಿ ಮಾಡಿದ್ದೇನೆ. ಪ್ರತಿಯೊಬ್ಬರೂ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ರಿಲೀಸ್ ಮಾಡುವುದು ಕಷ್ಟದ ಕೆಲಸ. ಬೆಂಗಳೂರು ಫಿಲ್ಮ್ಸ್ನ ಕುಮಾರ್ ವಿತರಣೆ ಮಾಡುತ್ತಿದ್ದಾರೆ. ನಿಮ್ಮೆಲ್ಲರ ಸಹಕಾರ ಬೇಕು ಎಂದರು ರಘುನಾಥ್.
ನಾಯಕ “ಒರಟ’ ಪ್ರಶಾಂತ್‌ಗೆ ಇದು ಕಿರಣ್‌ಗೋವಿ ಜೊತೆ ಮೊದಲ ಚಿತ್ರ. “ಒಳ್ಳೆಯ ತಂಡ ಸೇರಿದರೆ ಒಳ್ಳೆಯ ಚಿತ್ರ ಆಗುತ್ತೆ. ಅದಕ್ಕೆ ಕಾರಣ “ಯಾರಿಗೆ ಯಾರುಂಟು’ ಚಿತ್ರ. ಇಂತಹ ಚಿತ್ರ ಆಗೋಕೆ ಕಾರಣ, ನಿರ್ಮಾಪಕರ ಸಹಕಾರ ಮತ್ತು ಪ್ರೋತ್ಸಾಹ. ಅವರು ಖರ್ಚು ಮಾಡಿದ್ದು ತೆರೆ ಮೇಲೆ ಕಾಣುತ್ತದೆ. ನನಗಿಲ್ಲಿ ತುಂಬಾ ಚಾಲೆಂಜಿಂಗ್ ಪಾತ್ರವಿದೆ. ಮೂವರು ನಾಯಕಿಯರ ಜೊತೆ ವಿಭಿನ್ನವಾಗಿ ಕಾಣಿಸಿಕೊಳ್ಳುವಂತಹ ಪಾತ್ರವದು. ಆ್ಯಕ್ಷನ್ ಸಿನಿಮಾ ಮಾಡಿದವನಿಗೆ ಒಂದೇ ಸಲ, ಬದಲಾವಣೆ ಕೊಡುವಂತಹ ಪಾತ್ರ ಇಲ್ಲಿದೆ’ ಎಂದರು ಪ್ರಶಾಂತ್. ನಾಯಕಿ ಲೇಖಾಚಂದ್ರ ಅವರಿಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರಂತೆ. ಶೀರ್ಷಿಕೆಗೆ ಕ್ಲೈಮ್ಯಾಕ್ಸ್ ಅರ್ಥ ಕಲ್ಪಿಸಿಕೊಡಲಿದೆ ಎಂಬುದು ಅವರ ಮಾತು.
ಕೃತಿಕಾ ಅವರಿಲ್ಲಿ ಸಿನಿಮಾದೊಳಗೆ ಸೆಲೆಬ್ರಿಟಿ ಆಗಿ ಕಾಣಿಸಿಕೊಂಡಿದ್ದು, ಯಾರನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳದ ಪಾತ್ರವಂತೆ. ಅವರನ್ನು ಕೆಣಕಿದರೆ ವ್ಯಕ್ತಿತ್ವವನ್ನೇ ಬದಲಾಯಿಸಿಕೊಳ್ಳುವ ಪಾತ್ರ ಚಾಲೆಂಜ್ ಆಗಿದೆಯಂತೆ. ಇನ್ನು, ಚಿತ್ರಕ್ಕೆ ಬಿ.ಜೆ.ಭರತ್ ಸಂಗೀತ ನೀಡಿದ್ದಾರೆ. ಆರು ಹಾಡುಗಳು ಚೆನ್ನಾಗಿ ಮೂಡಿ ಬರಲು ಕಾರಣ, ನಿರ್ದೇಶಕರು ಎನ್ನುವ ಭರತ್, “ನನ್ನ ಇಲ್ಲಿಯವರೆಗೆ ಬಂದ ಹಾಡುಗಳಿಗಿಂತ ಈ ಚಿತ್ರದ ಹಾಡುಗಳು ಭಿನ್ನವಾಗಿವೆ. ಹಾಡಲ್ಲಿ ಕಿರಣ್‌ಗೋವಿ ಕಾಣಿಸುತ್ತಾರೆ. ಬಾಲಿವುಡ್ ಮತ್ತು ಕನ್ನಡದ ಗಾಯಕರು ಹಾಡಿದ್ದಾರೆ’ ಅನ್ನುತ್ತಾರೆ ಭರತ್.