ಮುಂಬೈ: ದಕ್ಷಿಣ ಆಫ್ರಿಕಾ ಪ್ರವಾಸದ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿ ಸಮಬಲ ಮಾಡಿಕೊಂಡ ಟೀಂ ಇಂಡಿಯಾ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಪ್ರಗತಿ ಸಾಧಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಅಂತರದ ಸೋಲನುಭವಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ತಿರುಗಿ ಬಿದ್ದ ರೋಹಿತ್ ಪಡೆ ಏಳು ವಿಕೆಟ್ ಅಂತರದ ಗೆಲುವು ಸಾಧಿಸಿದೆ.
ಈ ಗೆಲುವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮರಳಿ ಪಡೆಯಲು ಟೀಂ ಇಂಡಿಯಾಗೆ ಸಹಾಯ ಮಾಡಿದೆ. ಸೆಂಚುರಿಯನ್ ಟೆಸ್ಟ್ ನಲ್ಲಿ ಸೋಲಿನ ನಂತರ ತಂಡವು ಆರನೇ ಸ್ಥಾನಕ್ಕೆ ಕುಸಿದಿತ್ತು. ಕಳೆದೆರಡು ಚಾಂಪಿಯನ್ ಶಿಪ್ ನಲ್ಲಿ ಫೈನಲ್ ತಲುಪಿದ್ದ ಭಾರತವು ಮತ್ತೊಮ್ಮೆ ಫೈನಲ್‌ನಲ್ಲಿ ಸ್ಥಾನದ ಪ್ರಯತ್ನದಲ್ಲಿದೆ.
ಸದ್ಯ 54.16 ಗೆಲುವಿನ ಪ್ರತಿಶತದೊಂದಿಗೆ ಭಾರತದ ಮೊದಲ ಸ್ಥಾನದಲ್ಲಿದೆ. 50ರ ಸರಾಸರಿ ಹೊಂದಿರುವ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ನಾಲ್ಕು ಮತ್ತು ಐದನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮತ್ತು ಬಾಂಗ್ಲಾ ತಂಡಗಳೂ ಶೇ.50ರಷ್ಟು ಗೆಲುವಿನ ಪ್ರತಿಶತ ಹೊಂದಿದೆ.
ಇದು WTC25 ಋತುವಿನ ಆರಂಭಿಕ ಹಂತದಲ್ಲಿದ್ದಾಗ, ಜನವರಿ 25 ರಂದು ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧ ಮುಂಬರುವ ಐದು ಪಂದ್ಯಗಳ ತವರು ಟೆಸ್ಟ್ ಸರಣಿಯಲ್ಲಿ ಭಾರತವು ಹೆಚ್ಚಿನ ಅಂಕಗಳನ್ನು ಗಳಿಸುವ ಗುರಿಯನ್ನು ಹೊಂದಿದೆ.