Advertisement

ದೇಶದ ಚಿತ್ತ ನಂದಿಗ್ರಾಮ ದತ್ತ…

12:35 AM Apr 01, 2021 | Team Udayavani |

ನಂದಿಗ್ರಾಮ: ವ್ಹೀಲ್‌ಚೇರ್‌ನ ಚಕ್ರದ ಗುರುತು, ಜೈಶ್ರೀರಾಮ್‌- ವಂದೇಮಾತರಂನ ಉದ್ಘೋಷ, ಸಂಘರ್ಷ- ಕಗ್ಗೊಲೆಗಳ ಕಾರ್ಮೋಡ, ಸರಸ್ವತಿ- ದುರ್ಗಾ ಮಂತ್ರ ಪಠನ, ಮಂತ್ರ- ಗೋತ್ರಗಳ ಮೆಲುಕು, ದೇಗುಲ ಯಾತ್ರೆ, ಸೆಲ್ಫಿ- ಲಾಠಿಯೇಟು, ತೋರಣ- ಬ್ಯಾರಿಕೇಡ್‌ಗಳು…

Advertisement

ಪಶ್ಚಿಮ ಬಂಗಾಲದ ನಂದಿಗ್ರಾಮದಲ್ಲಿ ಕಳೆದೆರಡು ತಿಂಗಳುಗಳಿಂದ ಮೂಡಿದ ಚಿತ್ರಗಳು ಇವು. ಪಂಚರಾಜ್ಯ ಚುನಾವಣೆಯಲ್ಲೇ ಹೈವೋಲ್ಟೆಜ್‌ ಕ್ಷೇತ್ರ ಅಂತನ್ನಿಸಿಕೊಂಡ ನಂದಿಗ್ರಾಮದಲ್ಲಿ ಗುರುವಾರ ಮತದಾನ ನಡೆಯಲಿದೆ. ಬಿಜೆಪಿಯ ಪಂಥಾಹ್ವಾನ ಸ್ವೀಕರಿಸಿದ ಮಮತಾ ಬ್ಯಾನರ್ಜಿಗೆ ಇಲ್ಲಿ ಅಗ್ನಿಪರೀಕ್ಷೆ. ದೀದಿ ವಿರುದ್ಧ ಸಿಡಿದೆದ್ದು ಬಿಜೆಪಿ ಸೇರಿದ ಸುವೇಂದು ಅಧಿಕಾರಿಗೂ ಇದು ಸತ್ವಪರೀಕ್ಷೆ. ರಾಜ್ಯ ರಾಜಕೀಯದ ಭವಿಷ್ಯ ನಿರ್ಧರಿಸುವ ಅಖಾಡ ಅಂತಲೇ ನಂದಿಗ್ರಾಮವನ್ನು ಕರೆಯಲಾಗುತ್ತಿದೆ.

144 ಸೆಕ್ಷನ್‌ ಜಾರಿ: ಹೈಪ್ರೊಫೈಲ್‌ ಅಖಾಡ ನಂದಿಗ್ರಾಮದಲ್ಲಿ ಬುಧವಾರ ರಾತ್ರಿಯಿಂದಲೇ 144 ಸೆಕ್ಷನ್‌ ಜಾರಿಗೊಂಡಿದ್ದು, ಚುನಾವಣ ಆಯೋಗ ಹೆಲಿಕಾಪ್ಟರ್‌ಗಳ ನಿರಂತರ ಹಾರಾಟದ ಮೂಲಕ ವಾಯು ಕಣ್ಗಾವಲು ಹೆಚ್ಚಿಸಿದೆ. ಕೇಂದ್ರ ಭದ್ರತ ಪಡೆಯ 22 ತುಕಡಿಗಳು, 355 ಮತಗಟ್ಟೆಗಳ ಮೇಲೆ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿವೆ. ನಿರ್ಣಾಯಕ ಜಂಕ್ಷನ್‌ಗಳಲ್ಲಿ ರಾಜ್ಯಪೊಲೀಸರು ಚೆಕ್‌ಪೋಸ್ಟ್‌ ತೆರೆದು, ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ತ್ವರಿತ ಪ್ರತಿಕ್ರಿಯೆ ತಂಡ (ಕ್ಯೂಆರ್‌ಟಿ) 22 ಸಿಬ್ಬಂದಿಯನ್ನು ಆಯೋಗ ಅಲ್ಲಲ್ಲಿ ನಿಯೋಜಿಸಿದೆ.

2ನೇ ಹಂತದ ಮತದಾನ: ನಂದಿಗ್ರಾಮವನ್ನೊಳಗೊಂಡ ಪೂರ್ವ ಮಿಡ್ನಾಪುರದೊಂದಿಗೆ ಪ. ಬಂಗಾಲದಲ್ಲಿ ಪಶ್ಚಿಮ ಮಿಡ್ನಾಪುರ ಭಾಗ-2, ಬಂಕುರಾ ಭಾಗ-2 ಮತ್ತು 24 ಪರಗಣಾಸ್‌ ಜಿಲ್ಲೆಗಳ ಒಟ್ಟು 30 ಕ್ಷೇತ್ರಗಳು 2ನೇ ಹಂತದ ಮತದಾನಕ್ಕೆ ಸಾಕ್ಷಿಯಾಗಲಿವೆ. ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದೆ. ಶಾಂತಿಯುತ ಮತದಾನಕ್ಕೆ ಒಟ್ಟು 800 ತುಕಡಿಗಳು ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿವೆ. 294 ಕ್ಷೇತ್ರವನ್ನೊಳಗೊಂಡ ಪ. ಬಂಗಾಲದಲ್ಲಿ ಒಟ್ಟು 8 ಹಂತದಲ್ಲಿ ಮತದಾನ ನಡೆಯಲಿದೆ.

2ನೇ ಕ್ಷೇತ್ರದಲ್ಲಿ ದೀದಿ ನಿಲ್ತಾರಾ? :

Advertisement

ಟಿಎಂಸಿ ಭದ್ರಕೋಟೆ ಭವಾನಿಪುರದಲ್ಲಿ ನಿಂತು ಗೆಲ್ಲುತ್ತಿದ್ದ ಮಮತಾ ಬ್ಯಾನರ್ಜಿ, ಈ ಬಾರಿ ಪ್ರತಿಷ್ಠೆಯ ಕಾರಣಕ್ಕಾಗಿ ನಂದಿಗ್ರಾಮ ಆರಿಸಿಕೊಂಡರು. ಆದರೆ ಕಡೆಯ 3 ದಿನ ಕ್ಷೇತ್ರದಲ್ಲಿ ತಂಗಿದ ಮೇಲೆ ನಂದಿಗ್ರಾಮದಲ್ಲಿ ಟಿಎಂಸಿಯ ಗೆಲುವು ಕಷ್ಟ ಎಂಬುದು ಅವರಿಗೆ ಮನದಟ್ಟಾಗಿದೆ ಎನ್ನಲಾಗಿದೆ. ಹೀಗಾಗಿ ಮಮತಾ ಬ್ಯಾನರ್ಜಿ ಈಗ 2ನೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಚಿಂತಿಸುತ್ತಿದ್ದಾರೆ ಎಂದು “ಮನಿಕಂಟ್ರೋಲ್‌’ ವರದಿ ಮಾಡಿದೆ. ಬಂಗಾಲಕ್ಕೆ ಇನ್ನೂ 6 ಹಂತಗಳ ಮತದಾನ ಬಾಕಿ ಇದ್ದು, ಮಮತಾ ಮತ್ತೂಂದು ಕ್ಷೇತ್ರವನ್ನು ಸ್ಪರ್ಧೆಗೆ ಆರಿಸಿಕೊಳ್ಳಲಿದ್ದಾರೆ ಎಂದು ವರದಿ ಹೇಳಿದೆ.

ನಂದಿಗ್ರಾಮದಲ್ಲಿ ಗೋತ್ರ ಕಾರ್ಡ್‌ ಪ್ಲೇ ಮಾಡಿದ್ದರಿಂದ ದೀದಿಗೇನು ಲಾಭ? :

ಶಾಂಡಿಲ್ಯ ಎನ್ನುವುದು 8 ಪ್ರಮುಖ ಬ್ರಾಹ್ಮಣ ಗೋತ್ರಗಳಲ್ಲಿ ಒಂದು. ನಂದಿಗ್ರಾಮ ದಲ್ಲಿ ಶೇ.30 ಮುಸ್ಲಿಂ ಮತಗಳಿದ್ದರೆ, ಶೇ.70 ಹಿಂದೂ ಮತಗಳಿವೆ. ಇಲ್ಲಿ ಗೆಲ್ಲಬೇಕೆಂದರೆ ಸಾಕಷ್ಟು ಹಿಂದೂ ಮತಗಳು ಮಮತಾಗೆ ದಕ್ಕಲೇಬೇಕು. ಹಾಗಾಗಿ ತಾವು ಹಿಂದೂಗಳ ಪರ ಎಂದು ತೋರಿಸಿಕೊಳ್ಳಲು ದೀದಿ, 12ಕ್ಕೂ ಹೆಚ್ಚು ದೇಗುಲಗಳಿಗೆ ಭೇಟಿ ನೀಡಿದ್ದಾರೆ, ಚಂಡಿ ಶ್ಲೋಕ ಪಠಿಸಿದ್ದಾರೆ. ಈಗ ತಮ್ಮದು ಶಾಂಡಿಲ್ಯ ಗೋತ್ರ ಅಂತಲೂ ಹೇಳಿದ್ದಾರೆ.

ಬಿಜೆಪಿ “ರೊಹಿಂಗ್ಯಾ’ ಟೀಕೆ ಏಕೆ?: ಈಗಾಗಲೇ ಬಿಜೆಪಿ ದೀದಿಯನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಾ ಬಂದಿದೆ. ಅಲ್ಲದೇ, ಮಮತಾ ನುಸುಳುಕೋರರ ಪರ, ರೊಹಿಂಗ್ಯಾಗಳ ಪರ ಎಂದೇ ಹೇಳುತ್ತಾ ಹಿಂದೂ ಮತಗಳನ್ನು ಕ್ರೋಡೀಕರಿಸಲು ಯತ್ನಿಸಿದೆ. ಹಿಂದೂ ಮತಗಳು ದೀದಿಯಿಂದ ದೂರವಾದಷ್ಟು ಬಿಜೆಪಿಗೆ ಲಾಭ ಹೆಚ್ಚು.

ದೀದಿಯ “ದಿಢೀರ್‌ ಭಕ್ತಿ’ಗೆ ನಡ್ಡಾ ಟಾಂಗ್‌ :

“4 ವರ್ಷಗಳಿಂದ ಇಲ್ಲಿ ಸರಸ್ವತಿ ಪೂಜೆಯನ್ನೂ ಆಚರಿಸಲು ಬಿಡದಂಥ ಸ್ಥಿತಿಯನ್ನು ನೋಡಿದ್ದೇನೆ. ಈಗ ಮಮತಾ ಚಂಡಿ ಪಾಠ್ ಹೇಳುತ್ತಿದ್ದಾರೆ. ಇದನ್ನು ಮುಂಚೆ ಏಕೆ ಅವರು ಹೇಳುತ್ತಿರಲಿಲ್ಲ? ನಿರ್ಗಮನ ಖಚಿತ ಎಂದು ಅರಿವಾದ ಕೂಡಲೇ ಜನತೆಯನ್ನು ದಾರಿ ತಪ್ಪಿಸಲು ಅವರು ದಿಢೀರ್‌ ಭಕ್ತಿ ತೋರುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವ್ಯಂಗ್ಯವಾಡಿದ್ದಾರೆ. ಹೂಗ್ಲಿಯ ರ್ಯಾಲಿಯಲ್ಲಿ ಅವರು, “ರಾಮಮಂದಿರಕ್ಕೆ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ದೀದಿ ಬಂಗಾಲವನ್ನು ಬಂದ್‌ ಮಾಡಿದ್ದೇಕೆ?’ ಅಂತಲೂ ಪ್ರಶ್ನಿಸಿದ್ದಾರೆ.

ಬಿಜೆಪಿ ವಿರುದ್ಧ ಒಂದಾಗಿ: ವಿಪಕ್ಷಗಳಿಗೆ ಮಮತಾ ಕರೆ :

ನಂದಿಗ್ರಾಮ ಮತದಾನದ ಹೊಸ್ತಿಲಿನಲ್ಲೇ ಮಮತಾ ಬ್ಯಾನರ್ಜಿ ಬುಧವಾರ ವಿಪಕ್ಷಗಳ ಮುಖಂಡರಿಗೆ ಪತ್ರ ಬರೆದು, “ಬಿಜೆಪಿ ವಿರುದ್ಧ ಎಲ್ಲರೂ ಒಂದಾಗಬೇಕು’ ಎಂದು ಕರೆಕೊಟ್ಟಿದ್ದಾರೆ. ವಿಪಕ್ಷ ಮುಖಂಡರಾದ ಸೋನಿಯಾ ಗಾಂಧಿ, ಶರದ್‌ ಪವಾರ್‌, ಸ್ಟಾಲಿನ್‌, ಉದ್ಧವ್‌ ಠಾಕ್ರೆ, ಜಗನ್‌ ಮೋಹನ್‌ ರೆಡ್ಡಿ, ನವೀನ್‌ ಪಟ್ನಾಯಕ್‌, ಕೆ. ಚಂದ್ರಶೇಖರ ರಾವ್‌, ಅಖೀಲೇಶ್‌ ಯಾದವ್‌, ತೇಜಸ್ವಿ ಯಾದವ್‌, ಅರವಿಂದ ಕೇಜ್ರಿವಾಲ್‌, ದೀಪಾಂಕರ್‌ ಭಟ್ಟಾಚಾರ್ಯಗೆ ಈ ಪತ್ರ ತಲುಪಿದೆ.  “ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ದಾಳಿ ಮಾಡುತ್ತಿರುವ ಬಿಜೆಪಿ ವಿರುದ್ಧ ಎಲ್ಲರೂ ಪರಿಣಾಮಕಾರಿಯಾಗಿ ಒಗ್ಗೂಡಬೇಕು. ಪರ್ಯಾಯ ಶಕ್ತಿಯನ್ನು ಕಟ್ಟಬೇಕು’ ಎಂದು ಕರೆಕೊಟ್ಟಿದ್ದಾರೆ.

ಅಸ್ಸಾಂನಲ್ಲೂ 2ನೇ ಹಂತಕ್ಕೆ ಮತ :

ಅಸ್ಸಾಂನಲ್ಲೂ 2ನೇ ಹಂತದ ಮತದಾನ ಗುರುವಾರ ನಡೆಯಲಿದ್ದು, 39 ಕ್ಷೇತ್ರಗಳ 345 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ನಿರ್ಧರಿಸಲಿದ್ದಾರೆ. ಬಿಜೆಪಿ- 34, ಕಾಂಗ್ರೆಸ್‌- 28, ಅಸ್ಸಾಂ ಗಣಪರಿಷತ್‌-6 ಯುನೈಟೆಡ್‌ ಪೀಪಲ್ಸ್‌ ಪಾರ್ಟಿ ಲಿಬರಲ್‌-3 ಅಭ್ಯರ್ಥಿಗಳನ್ನು ಇಲ್ಲಿ ನಿಲ್ಲಿಸಿವೆ. ಸಚಿವರಾದ ಪರಿಮಳ್‌ ಶುಕ್ಲವೈದ್ಯ (ಧೋಲಾಯಿ), ಭಾಬೇಶ್‌ ಕಾಲಿಟಾ (ರಾಂಗಿಯಾ), ಪಿಜೂಶ್‌ ಹಝಾರಿಕ (ಜಾಗಿರೋಡ್‌), ಡೆಪ್ಯುಟಿ ಸ್ಪೀಕರ್‌ ಅಮಿನುಲ್‌ ಹಖ್‌ (ಸೊನಾಯಿ) ಅವರೊಂದಿಗೆ ಮಾಜಿ ಸ್ವೀಕರ್‌ ದಿಲಿಪ್‌ ಕುಮಾರ್‌ ಪೌಲ್‌ (ಸಿಲ್ಚಾರ್‌) ಅವರ ಭವಿಷ್ಯ ನಿರ್ಧಾರಗೊಳ್ಳಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next