ಗದಗ: “ಪಬ್ ಜೀ’ ಮೊಬೈಲ್ ಗೇಮ್ ಗೀಳಿಗೆ ಅಂಟಿಕೊಂಡಿರುವ ಪ್ರಥಮ ಪಿಯು ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯ ತುಂಬೆಲ್ಲ ಗೇಮ್ ಕಾರ್ಯವೈಖರಿ ಬಗ್ಗೆ ಬರೆದಿದ್ದಾನೆ! ನಗರದ ಖಾಸಗಿ ಕಾಲೇಜೊಂದರಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿರುವ ವರುಣ (ಹೆಸರು ಬದಲಿಸಲಾಗಿದೆ) ಕಂಪ್ಯೂಟರ್ ಸೈನ್ಸ್, ಅಕೌಂಟೆನ್ಸಿ, ಎಕನಾಮಿಕ್ ಆ್ಯಂಡ್ ಬಿಸಿನೆಸ್ ಸ್ಟಡಿಸ್ ವಿಷಯಗಳನ್ನು ಆಯ್ದು ಕೊಂಡಿದ್ದ. ಕಳೆದ ತಿಂಗಳು ನಡೆದ ಪ್ರಥಮ ಪಿಯುಸಿ ಅರ್ಥಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ “ಪಬ್ ಜೀ’ ಗೇಮ್ ಹೊರತಾಗಿ ಮತ್ತೇನನ್ನೂ ಬರೆದಿಲ್ಲ. “ಜೈ ಪಬ್ ಜೀ’ ಎಂಬ ಪದದಿಂದಲೇ ಉತ್ತರ ಪತ್ರಿಕೆಯನ್ನು ಆರಂಭಿಸಿದ್ದು, ಉತ್ತರ ಪತ್ರಿಕೆ ತುಂಬ “ಆಟ’ವನ್ನೇ ವಿಶ್ಲೇಷಿಸಿದ್ದಾನೆ. ಇದನ್ನು ಕಂಡ ಮೌಲ್ಯಮಾಪಕರು ಕಾಲೇಜಿನ ಪ್ರಾಚಾರ್ಯರ ಗಮನಕ್ಕೆ ತಂದಿದ್ದಾರೆ. ಆದರೆ, ಪರೀಕ್ಷಾ ಫಲಿತಾಂಶ ಹೊರಬಿದ್ದ ಬಳಿಕವೇ ಈ ಕುರಿತು ವಿದ್ಯಾರ್ಥಿಯ ಪಾಲಕರಿಗೆ ವಿಷಯ ತಿಳಿಸಿದ್ದಾರೆ. ಜೂನ್‌ನಲ್ಲಿ ನಡೆಯಲಿರುವ ಪುನರಾವರ್ತಿತ ಪರೀಕ್ಷೆಗೆ ತಮ್ಮ ಮಗನನ್ನು ಅಣಿಗೊಳಿಸುವಂತೆ ಸಲಹೆ ನೀಡಿದ್ದಾರೆ. ಬಳಿಕ ಪಾಲಕರೊಂದಿಗೆ ನಡೆದ ಸಮಾಲೋಚನೆ ಯಲ್ಲಿ, ವಿದ್ಯಾರ್ಥಿಯು ಮನೆಯಲ್ಲಿ ಸದಾ “ಪಬ್ ಜೀ’ ಮೊಬೈಲ್ ಗೇಮ್‌ಗೆ ಅಂಟಿಕೊಳ್ಳುತ್ತಿದ್ದ ಎಂಬುದು ಗೊತ್ತಾಗಿದೆ. ವಿಶೇಷವೆಂದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.73ರಷ್ಟು ಅಂಕ ಗಳಿಸಿದ್ದ.
ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಪಬ್‌ಜೀ ಗೇಮ್ ಬಗ್ಗೆ ಬರೆದಿದ್ದಕ್ಕೆ ನನಗೆ ಈಗ ಕೋಪ ಬರುತ್ತಿದೆ. ನನ್ನ ಪೋಷಕರು ಮೊಬೈಲ್ ಕಿತ್ತು ಇರಿಸಿಕೊಂಡಿದ್ದಾರೆ. ಆದರೂ, ಗೇಮ್‌ನ ಚಿತ್ರಗಳು ನನ್ನ ತಲೆಯಲ್ಲಿ ಸುಳಿದಾಡುತ್ತಿವೆ. ಇದರಿಂದಲೇ
ನನಗೀಗ ಆ ಗೇಮ್ ಎಷ್ಟು ಅಪಾಯಕಾರಿ ಎಂಬುದು ಅರಿವಾಗಿದೆ ಎಂದು ವಿದ್ಯಾರ್ಥಿ ಪಶ್ಚಾತ್ತಾಪಪಟ್ಟು ಕೊಂಡಿದ್ದಾನೆ.