Advertisement

ವಿ.ವಿ.ಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ ತಪ್ಪು ಭಾಷಾಂತರ!

11:13 PM Nov 01, 2019 | Lakshmi GovindaRaju |

ಬೆಂಗಳೂರು: ಕನ್ನಡ ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ಹೊತ್ತುಕೊಂಡಿರುವ ವಿಶ್ವವಿದ್ಯಾಲಯಗಳು ಕನ್ನಡವನ್ನೇ ಮರೆತಿವೆ. ಬೆಂಗಳೂರು ಕೇಂದ್ರ, ಕರ್ನಾಟಕ, ಕಲಬುರಗಿ ವಿವಿಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ತಪ್ಪು-ತಪ್ಪಾಗಿ ಭಾಷಾಂತರ ಮಾಡುವ ಮೂಲಕ ಎಡವಟ್ಟು ಮಾಡಿಕೊಂಡಿವೆ! ವೆಬ್‌ಸೈಟ್‌ಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳು, ಅಧಿಸೂಚನೆಗಳು, ಗಣ್ಯರ ಸಂದೇಶಗಳು, ಪರೀಕ್ಷೆ ವೇಳಾಪಟ್ಟಿ ಸೇರಿ ಮುಂತಾದ ಮಾಹಿತಿಗಳು ತಪ್ಪಾಗಿ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿ ಶೈಕ್ಷಣಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

Advertisement

ಕರ್ನಾಟಕ ಏಕೀಕರಣಗೊಂಡು 64 ವರ್ಷವಾದರೂ, ರಾಜ್ಯದ ವಿಶ್ವವಿದ್ಯಾಲಯಗಳ ವೆಬ್‌ಸೈಟ್‌ಗಳು ಮಾತ್ರ ಸಂಪೂರ್ಣ ಕನ್ನಡೀಕರಣವಾಗಿಲ್ಲ. ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಬಹುತೇಕ ವಿವಿಗಳ ವೆಬ್‌ಸೈಟ್‌ಗಳಲ್ಲಿ ಕನ್ನಡವನ್ನು ಗೂಗಲ್‌ ತರ್ಜುಮೆ ಮಾಡಲಾಗಿದ್ದು, ಅರ್ಥಗಳು ಅನರ್ಥವಾಗಿವೆ. ವೆಬ್‌ಸೈಟ್‌ನಲ್ಲಿ ಕನ್ನಡ ಮುಖ್ಯ ಭಾಷೆಯಾಗದೇ ಆಯ್ಕೆ ಭಾಷೆಯಾಗಿಯೇ ಉಳಿದಿದೆ. ಕರ್ನಾಟಕದಲ್ಲಿ 18 ರಾಜ್ಯ ವಿಶ್ವವಿದ್ಯಾಲಯಗಳು, ಒಂದು ಕೇಂದ್ರ ವಿಶ್ವವಿದ್ಯಾಲಯ, 15 ಡೀಮ್ಡ್ ವಿಶ್ವವಿದ್ಯಾಲಯಗಳಿದ್ದು, ಸರ್ಕಾರದ ಹಿಡಿತದಲ್ಲಿರುವ ರಾಜ್ಯ ವಿವಿಗಳ ವೆಬ್‌ಸೈಟ್‌ನಲ್ಲಿ ತಪ್ಪಾದ ಕನ್ನಡ ಬಳಕೆ ಮಾಡುವ ಮೂಲಕ ಪ್ರಾದೇಶಿಕ ಭಾಷೆಗೆ ಅಪಮಾನ ಮಾಡಿವೆ.

ವಿಶ್ವವಿದ್ಯಾಲಯದಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು. ವೆಬ್‌ಸೈಟ್‌ನಲ್ಲಿ ಕನ್ನಡ ತಂತ್ರಾಂಶ ಅಳವಡಿಸಿಕೊಂಡು ಇಂಗ್ಲಿಷ್‌ ಆಯ್ಕೆಯಾಗಿರಬೇಕು. ಇಂಗ್ಲಿಷನ್ನು ಗೂಗಲ್‌ ತರ್ಜುಮೆ ಮಾಡಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಬಾರದು. ಕನ್ನಡ ಉಳಿಸಲು ಮುಂದಾಗ ಬೇಕು ಹೀಗೆ ಮುಂತಾದ ಕನ್ನಡ ಪರ ಚಿಂತನೆಗಳ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಅಂದಿನ ರಾಜ್ಯ ಸರ್ಕಾರ ಎರಡು ವರ್ಷದ ಹಿಂದೆಯೇ ವಿವಿಗಳಿಗೆ ಪತ್ರ ಬರೆದಿದ್ದವು. ಆದರೆ, ಪತ್ರಕ್ಕೆ ಕ್ಯಾರೇ ಎನ್ನದ ವಿವಿಗಳು ಕನ್ನಡವನ್ನೇ ಕಡೆಗಣಿಸಿವೆ. ನೆರೆರಾಜ್ಯ ತಮಿಳುನಾಡಿನಲ್ಲಿನ ವಿಶ್ವವಿದ್ಯಾಲಯ ಗಳು ತಮಿಳನ್ನೇ ಮುಖ್ಯ ಭಾಷೆಯನ್ನಾಗಿಸಿದ್ದು, ಭಾಷಾ ಬದ್ಧತೆ ತೋರಿಸಿವೆ.

ಆದರೆ ಕರ್ನಾಟಕ ವಿಶ್ವವಿದ್ಯಾಲ ಯಗಳು ಭಾಷಾ ಬದ್ಧತೆ ಮರೆತಂತಿವೆ. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲ ಯದ ವೆಬ್‌ಸೈಟಿನಲ್ಲಿ ಕನ್ನಡ ಆಯ್ಕೆ ಭಾಷೆಯಾಗಿದ್ದು, ಪುಟ ಸಹ ಪರದೆ ಮುಂದೆ ಬರುವುದಿಲ್ಲ. ಹಾಗೇ ಕರ್ನಾಟಕ ವಿವಿಯ ವೆಬ್‌ಸೈಟ್‌ನಲ್ಲಿ ಕನ್ನಡ ಮತ್ತು ಆಂಗ್ಲ ಮಿಶ್ರಿತವಾಗಿ ಕಾರ್ಯಕ್ರಮಗಳ ಪಟ್ಟಿ ಪ್ರಕಟಿಸಲಾಗಿದೆ. “ಆನ್ಲೈನ್‌ ಇನ್ನೋವೇಷನ್‌ ಮತ್ತು ಇನ್ನೊಬೇಶನ್‌ ಸೆಂಟರ್‌(ಐಐಸಿ), ಚೇರ್ಸ್‌, ಪೀಠಗಳು, ಸೈಟ್ಮಾಪ್‌, ವಿಚಾರಣೆಯಲ್ಲಿ’ ಹೀಗೆ ಪದಗಳು ಗೂಗಲ್‌ ತರ್ಜುಮೆ ಮಾಡಲಾಗಿದೆ. ಕಲಬುರಗಿ, ತುಮಕೂರು, ಮಂಗಳೂರು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಕನ್ನಡ ಕಾಗುಣಿತ ತಪ್ಪುಗಳು ಮಾತ್ರವಲ್ಲದೇ, ಕನ್ನಡ ಪದಗಳ ಸಾಲಿನಲ್ಲಿ ಇಂಗ್ಲಿಷ್‌ ಅಕ್ಷರಗಳು ಬಂದಿದ್ದು, ಸಂಪೂರ್ಣ ಕನ್ನಡೀಕರಣ ವೆಬ್‌ಸೈಟ್‌ಗಳನ್ನಾಗಿ ಮಾರ್ಪಡಿಸುವಲ್ಲಿ ವಿಫ‌ಲವಾಗಿವೆ.

“ನನ್ನ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿ ಎಲ್ಲಾ ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ಪತ್ರ ಕಳುಹಿಸಲಾಯಿತು. ವಿವಿಗಳಲ್ಲಿ ಕನ್ನಡವನ್ನೇ ಮುಖ್ಯಭಾಷೆಯನ್ನಾಗಿ ಪರಿಗಣಿಸಬೇಕು. ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಗೂಗಲ್‌ ತರ್ಜುಮೆ ಮಾಡಬಾರದು. ಕನ್ನಡ ತಂತ್ರಾಂಶ ಅಳವಡಿಸಿ ಕೊಂಡು. ವೆಬ್‌ಸೈಟ್‌ ಪುಟ ತೆರೆಯುತ್ತಿದ್ದಂತೆ ಕನ್ನಡದಲ್ಲಿಯೇ ಎಲ್ಲಾ ವಿಷಯ ಮುದ್ರಿತವಾಗಿರಬೇಕೆಂದು ತಿಳಿಸಲಾಗಿತ್ತು. ಇದಕ್ಕೆ ವಿವಿಗಳ ಕುಲಪತಿಗಳು ಒಪ್ಪಿಕೊಂಡಿದ್ದರು. ಆದರೂ, ವೆಬ್‌ಸೈಟ್‌ಗಳಲ್ಲಿ ಕನ್ನಡ ಕಡೆಗಣಿಸಲಾಗಿದೆ. ಇದು ತಿಂದ ಮನೆಗೆ ಜಂತಿ ಎಣಿಸುವ ಕೆಲಸ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಜಿ. ಸಿದ್ಧರಾಮಯ್ಯ ತಿಳಿಸಿದರು.

Advertisement

ಸಂದೇಶಗಳು ಅನರ್ಥ: “ನಿಮ್ಮ ಉದ್ದೇಶದಲ್ಲಿ ಯಶಸ್ವಿಯಾಗಲು ನಿಮ್ಮ ಗುರಿಗೆ ನೀವು ಒಂದೇ ಮನಸ್ಸಿನ ಭಕ್ತಿ ಹೊಂದಿರಬೇಕು’ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಅಬ್ದುಲ್‌ ಕಲಾಂ ಅವರ ಸಂದೇಶವನ್ನು ಆಭಾಸವಾಗಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ತರ್ಜುಮೆ ಮಾಡಲಾಗಿದೆ. ಹಾಗೇ ರವೀಂದ್ರನಾಥ ಟ್ಯಾಗೋರ್‌ ಸಂದೇಶವನ್ನು “ಅತ್ಯುನ್ನತ ಶಿಕ್ಷಣವು ಕೇವಲ ನಮಗೆ ಮಾಹಿತಿಯನ್ನು ಕೊಡುವುದಿಲ್ಲ. ಆದರೆ ನಮ್ಮ ಜೀವನವನ್ನು ಎಲ್ಲಾ ಅಸ್ತಿತ್ವಕ್ಕೆ ಅನುಗುಣವಾಗಿ ಮಾಡುತ್ತದೆ’ ಎಂದು ಉಲ್ಲೇಖೀಸಲಾಗಿದೆ. ಅದೇ ರೀತಿ ಸ್ವಾಮಿ ವಿವೇಕಾನಂದ, ಜೆ.ಕೃಷ್ಣಮೂರ್ತಿ ಅವರ ಸಂದೇಶವನ್ನೂ ಗೂಗಲ್‌ ತರ್ಜುಮೆ ಮಾಡಲಾಗಿದೆ. ಅರ್ಥಗಳು ಅನರ್ಥವಾಗಿವೆ. ಇದೇ ವೆಬ್‌ಸೈಟ್‌ನಲ್ಲಿ ಇಂಗ್ಲಿಷನ್ನು ಅಚ್ಚುಕಟ್ಟಾಗಿ ಬರೆಯಲಾಗಿದ್ದು, ಕನ್ನಡವನ್ನೇ ಕಡೆಗಣಿಸಲಾಗಿದೆ. ಕನ್ನಡಿಗರಾಗಿ ಇಂಗ್ಲಿಷ್‌ಗೆ ಜೈ ಎಂದಂತಿದೆ.

ರಾಜ್ಯದ ವಿಶ್ವವಿದ್ಯಾಲಯಗಳ ವೆಬ್‌ಸೈಟ್‌ಗಳು ಕನ್ನಡೀಕರಣ ಆಗದಿರುವ ಬಗ್ಗೆ ಎಲ್ಲಾ ವಿವಿಗಳಿಗೆ ನೋಟಿಸ್‌ ನೀಡಲಾಗುವುದು. ಕುಲಪತಿಗಳಿಂದ ಮಾಹಿತಿ ಪಡೆದು ಒಂದು ವಾರದಲ್ಲಿಯೇ ಸರಿಪಡಿಸಲಾಗುವುದು. ಒಂದು ವೇಳೆ ಕನ್ನಡೀಕರಣವಾಗದಿದ್ದರೆ ನಿಯಮಾನುಸಾರ ಕ್ರಮಕೈಕೊಳ್ಳಲಾಗುವುದು.
-ಟಿ.ಎಸ್‌.ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವೆಬ್‌ಸೈಟ್‌ನ್ನು ಸಂಪೂರ್ಣ ಕನ್ನಡೀಕರಣ ಮಾಡಲು ತೀರ್ಮಾನಿಸಲಾಗಿದೆ. ಹಾಗೆಯೇ ಕನ್ನಡ ಕೇಂದ್ರಿತ ವಿಶ್ವವಿದ್ಯಾಲಯ ಮಾಡುವ ಮಹತ್ವಾಕಾಂಕ್ಷಿ ಯೋಜನೆ ಇದ್ದು, ಈಗಾಗಲೇ ಸಮಿತಿ ರಚಿಸಲಾಗಿದೆ.
-ಪ್ರೊ.ಎಸ್‌.ಜಾಫೆಟ್‌, ಬೆಂಗಳೂರು ಕೇಂದ್ರ ವಿವಿ ಕುಲಪತಿ

ನಾಡಿನ ಜನತೆ ಕನ್ನಡ ಭಾಷೆಯಿಂದ ಬದುಕುವಂತಾಗಬೇಕೆಂದು ಕನ್ನಡ ಗಣಕ ಉಚಿತ ತರಬೇತಿ ಕೇಂದ್ರದಿಂದ ಸತತ 16 ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಕನ್ನಡ ಹಾಗೂ ಸಂಪರ್ಕ ಭಾಷಾ ಗಣಕ ತಂತ್ರಾಂಶ ತರಬೇತಿ ನೀಡಲಾಗುತ್ತಿದೆ. ಈವರೆಗೂ 30 ಸಾವಿರ ಮಂದಿಗೆ ಉಚಿತ ತರಬೇತಿ ನೀಡಲಾಗಿದ್ದು, ಸರ್ಕಾರ ಅನುದಾನ ನೀಡುತ್ತಿಲ್ಲ. ಕನ್ನಡದ ಕೆಲಸಕ್ಕೆ ಪ್ರೋತ್ಸಾಹಿಸುತ್ತಿಲ್ಲ.
-ಡಾ.ಆರ್‌.ಎ.ಪ್ರಸಾದ್‌, ಕನ್ನಡ ಗಣಕ ಉಚಿತ ತರಬೇತಿ ಕೇಂದ್ರದ ಸಂಸ್ಥಾಪಕ ಮುಖ್ಯಸ್ಥ

* ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next