ಚೆನ್ನೈ: ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ಅವರು ಇದೀಗ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಪುತ್ರಿ ಖತೀಜಾ ಅವರು ಬುರ್ಖಾ ಧರಿಸಿರುವ ಕುರಿತಾಗಿ ಕಮೆಂಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಖತೀಜಾ ಅವರು ಬುರ್ಖಾ ಧರಿಸಿರುವ ಫೊಟೋವನ್ನು ನೋಡಿದಾಗಲೆಲ್ಲಾ ನನಗೆ ಉಸಿರುಗಟ್ಟಿದ ಅನುಭವ ಉಂಟಾಗುತ್ತದೆ ಎಂದು ತಸ್ಲಿಮಾ ಅವರು ಮಾಡಿರುವ ಟ್ವೀಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಮಾತ್ರವಲ್ಲದೇ ಇದಕ್ಕೆ ರಹಮಾನ್ ಪುತ್ರಿ ನೀಡಿರುವ ಉತ್ತರವೂ ಸಹ ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ.
ತಸ್ಲಿಮಾ ನಸ್ರೀನ್ ಅವರು ಇಂದು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ರಹಮಾನ್ ಪುತ್ರಿ ಖತೀಜಾ ಅವರು ಬುರ್ಖಾ ಧರಿಸಿಕೊಂಡಿರುವ ಫೊಟೋ ಒಂದನ್ನು ಹಾಕಿ ಆ ಪೋಸ್ಟ್ ನಲ್ಲಿ ಹೀಗೆ ಬರೆದುಕೊಂಡಿದ್ದರು.
‘ನಾನು ನಿಜವಾಗಿಯೂ ರಹಮಾನ್ ಅವರ ಸಂಗೀತವನ್ನು ಇಷ್ಟಪಡುತ್ತೇನೆ. ಆದರೆ ಅವರ ಪ್ರೀತಿಯ ಪುತ್ರಿಯನ್ನು ನೋಡಿದಾಗಲೆಲ್ಲಾ ನನಗೆ ಉಸಿರುಗಟ್ಟಿದ ಭಾವನೆ ಉಂಟಾಗುತ್ತದೆ. ಸುಸಂಸ್ಕೃತ ಕುಟಂಬದ ಸುಶಿಕ್ಷಿತ ಮಹಿಳೆಯರೂ ಸಹ ಸುಲಭವಾಗಿ ಬ್ರೈನ್ ವಾಶ್ ಗೆ ತುತ್ತಾಗುತ್ತಿದ್ದಾರೆ ಎಂಬುದು ನಿಜವಾಗಿಯೂ ನೋವಿನ ಸಂಗತಿ’ ಎಂದು ತಸ್ಲಿಮಾ ಅವರು ಬರೆದುಕೊಂಡಿದ್ದರು.
Related Articles
ನಸ್ರಿಮಾ ಅವರ ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಖತೀಜಾ ಅವರು, ‘ದೇಶದಲ್ಲಿ ಇಷ್ಟಲ್ಲಾ ವಿಷಯಗಳು ನಡೆಯುತ್ತಿದ್ದರೂ ಜನರು ಮಾತ್ರ ಮಹಿಳೆಯೊಬ್ಬಳು ಧರಿಸುವ ಉಡುಗೆಯ ಕುರಿತಾಗಿ ಚಿಂತೆ ವ್ಯಕ್ತಪಡಿಸುತ್ತಾರೆ. ಇದು ನನ್ನ ಆಯ್ಕೆ ಮತ್ತು ಈ ವಿಚಾರ ನಿಮ್ಮನ್ನು ಉಸಿರುಗಟ್ಟಿಸುತ್ತದೆ ಎಂದಾದರೆ ದಯವಿಟ್ಟು ತಾಜಾ ಗಾಳಿಗೆ ನಿಮ್ಮ ಮೈಯನ್ನು ಒಡ್ಡಿಕೊಳ್ಳಿ’ ಎಂಬ ಅರ್ಥದ ವಿವರವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ.