Advertisement

Kota Shivarama Karanth: ಅನುಭವದ ಬುತ್ತಿ ಕೊಟ್ಟ ಕಾರಂತರು…

03:49 PM Jan 09, 2025 | Team Udayavani |

ಕಡಲ ತಡಿಯ ಭಾರ್ಗವ ಎಂದಾಗ ನೆನಪಾಗುವುದು ಕಾರಂತರು. ಕರಾವಳಿಯ ಅನುಭವದ ಸಾಹಿತ್ಯ ಕೃಷಿ ಮಾಡಿದ್ದಾರೆ. ಅಲ್ಲೊಂದು ಕಡೆ ಸಾಹಿತಿಗಳ ಒಂದು ಗುಂಪು ಸ್ವಾತಂತ್ರ್ಯ ಸಿಗಬೇಕೆಂಬ ಸಾಹಿತ್ಯ ಚಳುವಳಿಯಲ್ಲಿ ತನ್ನ ಬರವಣಿಗೆ ರಚಿಸಿದರೆ, ಕಾರಂತರು ಚೋಮನ ದುಡಿಯಂಥಹ ಕಾದಂಬರಿ ರಚಿಸುತ್ತಾರೆ.

Advertisement

ಇದನ್ನು ಕಂಡ ಉಳಿದ ಸಾಹಿತಿಗಳು ಕಾರಂತರ ಮೇಲೆ ಕೋಪಗೊಳ್ಳುತ್ತಾರೆ ಆದರೆ ಯಾವುದಕ್ಕೂ ಜಗ್ಗದ ಇವರು ರಾಜಕೀಯ ವಿಷಯಗಳಿಗಿಂತ ಸಮಾಜದಲ್ಲಿರುವ ಸಾಮಾಜಿಕ ಸಮಸ್ಯೆಗಳನ್ನು ಬಯಲಿಗೆಳೆಯುವ ಪ್ರಯತ್ನ ತನ್ನ ಸಾಹಿತ್ಯದ ಮುಖೇನ ಮಾಡುತ್ತಿದ್ದರು.ಅಂದು ಮಾಡಿದ ಸಾಮಾಜಿಕ ಕಾರ್ಯದಿಂದ ಅವರ ಕಾದಂಬರಿಯಾದ ಚೋಮನ ದುಡಿ ಇಂದಿಗೂ ಪ್ರಸ್ತುತವಾಗಿದೆ.

ಕಾರಂತರ ಚೋಮನ ದುಡಿ ಕಾದಂಬರಿಯು ಅಂದಿನ ಕಾಲದಲ್ಲಿದ್ದ ಉಳ್ಳವರ ಮತ್ತು ಇಲ್ಲದವರ ನಡುವಿನ ಸಂಬಂಧ, ಅಸ್ಪೃಶ್ಯತೆ, ಹೆಣ್ಣನ್ನು ಭೋಗದ ವಸ್ತುವಾಗಿ ಕಾಣುವ ಉಳ್ಳವರ ನೀಚತನ, ಕೆಲವರ್ಗದವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ – ಗತಿಯನ್ನು ಕಣ್ಣಿಗೆ ಕಟ್ಟುವಂತೆ ಈ ಕಾದಂಬರಿಯಲ್ಲಿ ಬಿಚ್ಚಿಟ್ಟಿದಾರೆ. ಅದಲ್ಲದೆ ಈ ಕಾದಂಬರಿಯಲ್ಲಿ ಮುಖ್ಯವಾಗಿ ಸಾವು – ನೋವಿನ ಸಂವೇದನೆಯನ್ನು ಕಾದಂಬರಿ ಕೊನೆತನಕವು ಇರುವುದನ್ನು ಕಾಣಬಹುದು. ಕೆಲವರ್ಗದ ನೋವನ್ನು ಮರೆಯುವ ಮತ್ತು ಖುಷಿಯನ್ನು ವ್ಯಕ್ತಪಡಿಸುವ ಸಾಧನವಾಗಿ ದುಡಿ ಈ ಕಾದಂಬರಿಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಅವರ ಕಾದಂಬರಿಗಳ ಪಟ್ಟಿ ಮಾಡುತ್ತಾ ಹೋದರೆ ಒಂದೊಂದು ಕಾದಂಬರಿಯು ಅನುಭವದ ಗೊಂಚಲು. ಅವರ ಬೆಟ್ಟದ ಜೀವ ಕಾದಂಬರಿಯಂತು ನನ್ನ ಮೆಚ್ಚಿನ ಕಾದಂಬರಿ ಯಾಗಿದೆ ಅದಲ್ಲದೆ ಮೂಕಜ್ಜಿಯ ಕನಸ್ಸು ಅಂತೂ ಕುತೂಹಲ ಹೆಚ್ಚಿಸುತ ನನ್ನ ಮನವನ್ನು ತಣಿಸುವ ಸಂಗತಿಯನ್ನು ತಿಳಿಸುತ, ಒಂದೆಡೆ ಪುಟ ತಿರುವುತ.. ತಿರುವುತ ಕುತೂಹಲ ಇನ್ನಷ್ಟು ಕೆರಳಿಸುತ್ತಿತ್ತು.

ಕಥೆಯೊಳಗಡೆ ಬರುವ ಮಣಿಯ ಪಾತ್ರ ನಾನೆಯಾಗಿ ಕಲ್ಪಿಸುತ ಇನ್ನಷ್ಟು ಊಹೆಗಳ ಸುಳಿಯಲ್ಲಿ ಹೊಸದನ್ನು ತಿಳಿಯುವ ಪ್ರಯತ್ನ ನನ್ನ ಕುತೂಹಲ ಬರಿತ ಮನಸ್ಸು ಹುಡುಕುತ್ತಿತು. ಮೂಕಾಂಬಿಕಾ ಪಾತ್ರ ಅನುಭವದ ಹಿರಿತಲೆಯಾಗಿ ಬಾಲ್ಯದ ನೋವಿನ ಸಂಗತಿಗಳಿಂದ ಮೂಖೀಯಾಗಿ ಪರಿವರ್ತನೆಗೊಳ್ಳುವ ಸನ್ನಿವೇಶ ಹೆಣ್ಣಿನ ಮನದಾಳದ ನೋವು, ಸಂವೇದನೆಯನ್ನು ವಿವರವಾಗಿ ಕಣ್ಣಿಗೆ ತಾಕುವಂತೆ, ಮನಸ್ಸಿಗೆ ಮುಟ್ಟುವಂತೆ ಹೆಣೆದುಕೊಂಡಿದೆ.ಆ ದೃಶ್ಯ ಓದುವಾಗ ಕಣ್ಣಂಚಲ್ಲಿ ನೀರು ಕೆನ್ನೆಯನ್ನು ಸವರುತ್ತಿತ್ತು.

Advertisement

ಕಾಡುವಾಸ ಅಂದರೆ ದೂರ ಓಡುವಲ್ಲಿಯು ಕಾಡುಪ್ರಾಣಿಗಳ ಹಾವಳಿ ಇದ್ದರೂ ಅದನ್ನು ಎದುರಿಸಿ ಬದುಕು ಸಾಗಿಸುವ ಮುದಿಜೀವ ಬೆಟ್ಟದ ಕಾಟುಮೂಲೆಯಲ್ಲಿ ಜೀವನ ಸಾಗಿಸುವ ಪರಿಯಂತು ರೋಮಾಂಚನವನ್ನು ಮಾಡುವುದಲ್ಲದೆ ಮೈ ರೋಮ ನವೀರೇಳಿಸುವಂತೆ ಬೆಟ್ಟದಜೀವ ಕಾದಂಬರಿ ಮಾಡುತ್ತದೆ.

ಹೆತ್ತ ಮಗನ ವಿರಹ ವೇದನೆ ಇದ್ದರು ಇರುವುದರಲ್ಲೇ ಸಂತೋಷವನ್ನು ಕಾಣುವ ಈ ಕುಟುಂಬ ಜೀವವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡು, ಗಂಡ ಹೆಂಡತಿಯ ನಡುವಿನ ಅನ್ಯೋನ್ಯತೆ, ಪ್ರೀತಿ – ಹಾಸ್ಯ ಮತ್ತು ನಿರೂಪಕರಿಗೆ ಅತಿಥಿ ಸತ್ಕಾರ ನೀಡುವ ಮೂಲಕ ತನ್ನ ಮಗನನ್ನು ಅವರಲ್ಲಿ ಕಾಣುವ ತಾಯಿಯ ಮಮತೆ ನೋಡಿದಾಗ ಹೃದಯ ತುಂಬಿ ಬರುತ್ತದೆ. ಸುಬ್ರಹ್ಮಣ್ಯ – ಸುಳ್ಯ ಪರಿಸರದ ಕಾಟುಮೂಲೆ, ಕುಮಾರಧಾರದ ಪ್ರಕೃತಿ ವರ್ಣನೆಯಂತು ಮನೋಹರವಾಗಿ ಕಣ್ಮನವನ್ನು ಸೆಳೆಯುವಂತೆ ಮಾಡುತ್ತದೆ.

ಸರಸಮ್ಮನ ಸಮಾಧಿಯಲ್ಲಿ ಸ್ತ್ರೀ ಜೀವಗಳ ಶೋಷಣೆಯನ್ನು ವಿವರವಾಗಿ ತಿಳಿಸುವ ಪ್ರಯತ್ನ ಮಾಡುತ್ತಾರೆ. ಒಂದೊಂದೆ ಹೆಣ್ಣಿನ ಜೀವನದ ಕಥೆಯನ್ನು ತಿಳಿಸುತ ಸತಿಪದ್ಧತಿ, ಸಾಮಾಜಿಕ ಕಟ್ಟಳೆ, ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯನ್ನು ಒಬ್ಬ ದಾಸಿಯನ್ನಾಗಿ ಕಾಣುವ ಪುರುಷರ ದರ್ಪ ಮತ್ತು ಹುಟ್ಟಿಕೊಂಡಿರುವ ಸಾಮಾಜಿಕ ಅಸಮಾನತೆ ಮತ್ತು ಕೆಲವು ವರ್ಗದವರ ಶೋಷಣೆಯನ್ನು ಬಿಡಿ ಬಿಡಿಯಾಗಿ ಭಾಗೀರಥಿ, ಸುನಾಲಿನಿ, ಬೆಳ್ಯಕ್ಕ, ನಾಗವೇಣಿ, ಜಾನಕಿ ಮತ್ತು ಚಂದ್ರಯ್ಯ ಪಾತ್ರ ಪ್ರಮುಖ ಅಂಶಗಳನ್ನು ಮುಂದಿಡುವಲ್ಲಿ ಸಾಹಿತಿಯ ಪಾತ್ರ ಅಗಾಧ.

ಕಾರಂತರೆ ಹೀಗೆ… ಅವರ ಕಾದಂಬರಿಗಳು ಅಂದಿನ ಕಾಲದ ಅನುಭವದ ಗೊಂಚಲನ್ನು ತೆರೆದು ಇಡುವ ಮೂಲಕ ಅಂದಿದ್ದ ಸ್ಥಿತಿಗತಿಯನ್ನು ತೆರೆದಿಡುವುದರೊಂದಿಗೆ ಸಾಮಾಜಿಕ ಸಂಗತಿಗಳನ್ನು ಓದುಗರ ಮುಂದೆ ತಿಳಿಸುವ ಪ್ರಯತ್ನವಾಗಿ ಮೂಡಿಬಂದಿದೆ.

ಮಂಗಳ

ನಾಡಜೆ, ಮಳಲಿ

Advertisement

Udayavani is now on Telegram. Click here to join our channel and stay updated with the latest news.

Next