ಚಿತ್ರದುರ್ಗ: “ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳನ್ನು ನೇಣಿಗೆ ಹಾಕಬೇಕು, ಸುಳ್ಳು ಮಾಹಿತಿ ನೀಡಿದರೆ ಬರೆ ಎಳೆಯುವೆ…’ ಹೀಗೆ ಕಾರ್ಮಿಕ ಇಲಾಖೆ ಸಚಿವ ವೆಂಕಟರಮಣಪ್ಪ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲೆಯ ಬರ ಪರಿಸ್ಥಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಗುಡುಗಿದರು.
ಜಿಲ್ಲೆಯಲ್ಲಿ ಕೈಗೊಂಡಿರುವ ಕುಡಿಯುವ ನೀರು ಪೂರೈಕೆ, ಶುದ್ಧ ಕುಡಿಯುವ ನೀರಿನ ಘಟಕ ಮತ್ತು ವಿಫಲ ಕೊಳವೆಬಾವಿಗಳ ಮಾಹಿತಿ ನೀಡುವಂತೆ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸಚಿವರು ಕೇಳಿದರು.
ಆದರೆ ಆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಸಚಿವರು, “ನಿಮ್ಮನ್ನು ನೇಣು ಹಾಕಬೇಕು, ಬರೀ ಸುಳ್ಳು ಮಾಹಿತಿ ನೀಡುತ್ತಿದ್ದೀರಿ, ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಸುಳ್ಳು ಮಾಹಿತಿ ನೀಡಿದರೆ ಬರೆ ಎಳೆಯುತ್ತೇನೆ, ಹುಷಾರ್’ ಎಂದರು.
ಜಿಲ್ಲೆಯ ಎಇಇಗಳ ವಿರುದ್ಧ ಕಿಡಿ ಕಾರಿದ ಸಚಿವರು, ನಿಮಗೆ ಎಷ್ಟು ವರ್ಷ ಸರ್ವೀಸ್ ಆಗಿದೆ, ನೀರಿನ ಸಮಸ್ಯೆ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ. ಜನ ನೀರಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ನೀವೇನು ಎಇಇ ಗಳೇ ಅಥವಾ ಗುಮಾಸ್ತರೇ? ಗುಮಾಸ್ತರೇ ಎಷ್ಟೋ ವಾಸಿ. ಕೇಳಿದ್ದಕ್ಕಾದರೂ ಉತ್ತರ ನೀಡುತ್ತಾರೆ. ನಿಮಗೇನು ಜ್ಞಾನ ಇಲ್ಲವೆ, ಬಾಯಿಯೇ ಬಿಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.