ಹೊಸದಿಲ್ಲಿ: ದೆಹಲಿ ವಕ್ಫ್ ಮಂಡಳಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ(AAP) ಅಮಾನತುಲ್ಲಾ ಖಾನ್ ಅವರನ್ನು ಬಿಡುಗಡೆ ಮಾಡುವಂತೆ ದೆಹಲಿ ನ್ಯಾಯಾಲಯವು ಗುರುವಾರ(ನ14) ಆದೇಶಿಸಿದೆ ಮತ್ತು ಅವರ ವಿರುದ್ಧ ಸಲ್ಲಿಸಲಾದ ಚಾರ್ಜ್ ಶೀಟ್ ಅನ್ನು ಸ್ವೀಕರಿಸಲು ನಿರಾಕರಿಸಿದೆ.
ದೆಹಲಿ ವಕ್ಫ್ ವಿಷಯದಲ್ಲಿ ಖಾನ್ ಅವರ ಜಾಮೀನು ಪ್ರಧಾನಿ ನರೇಂದ್ರ ಮೋದಿ ಅವರ “ಸುಳ್ಳು ಪ್ರಕರಣ” ವನ್ನು ಬಹಿರಂಗಪಡಿಸಿದೆ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ, ರಾಜ್ಯ ಸಭಾ ಸಂಸದ ಸಂಜಯ್ ಸಿಂಗ್ ಸಾಮಾಜಿಕ ತಾಣದಲ್ಲಿ ಕಿಡಿ ಕಾರಿದ್ದಾರೆ.
ಜಾರಿ ನಿರ್ದೇಶನಾಲಯ (ED) ಸೆಪ್ಟೆಂಬರ್ 2 ರಂದು ಖಾನ್ ಅವರನ್ನು ಮತ್ತು ನಂಟು ಹೊಂದಿರುವ ಇತರ ಕೆಲವರ ವಿರುದ್ಧ ಮನಿ ಲಾಂಡರಿಂಗ್ ತನಿಖೆಯ ಭಾಗವಾಗಿ ಬಂಧಿಸಿತ್ತು. ದೆಹಲಿಯ ಓಖ್ಲಾ ಪ್ರದೇಶದಲ್ಲಿನ ಅವರ ನಿವಾಸದ ಮೇಲೆ ಕೇಂದ್ರ ಸಂಸ್ಥೆ ಶೋಧ ನಡೆಸಿದ ನಂತರ ಮನಿ ಲಾಂಡರಿಂಗ್ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು.
ಶಾಸಕ ಖಾನ್ ವಿರುದ್ಧದ ಹಣ ವರ್ಗಾವಣೆ ಪ್ರಕರಣವು ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ವಕ್ಫ್ ಮಂಡಳಿಯಲ್ಲಿನ ಅಕ್ರಮಗಳು ಮತ್ತು ದೆಹಲಿ ಭ್ರಷ್ಟಾಚಾರ ವಿರೋಧಿ ದಾಖಲಿಸಿದ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೂಡ ಒಂದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.
ಅಕ್ಟೋಬರ್ 29 ರಂದು ಇಡಿ 110 ಪುಟಗಳ ಮೊದಲ ಪೂರಕ ಪ್ರಾಸಿಕ್ಯೂಷನ್ ದೂರನ್ನು ಸಲ್ಲಿಸಿ, ಖಾನ್ ಅವರು ದೆಹಲಿ ವಕ್ಫ್ ಬೋರ್ಡ್‌ನಲ್ಲಿನ ಭ್ರಷ್ಟಾಚಾರದ ಮೂಲಕ ಹಣ ಸಂಪಾದಿಸಿದ್ದಾರೆ ಎಂದು ಆರೋಪಿಸಿತ್ತು.
ಬಿಡುಗಡೆ ಆದೇಶದ ಬಳಿಕ ಅಮಾನತುಲ್ಲಾ ಖಾನ್ ಅವರನ್ನು ಸಮರ್ಥಿಸಿಕೊಂಡಿರುವ ದೆಹಲಿಯ ಪರಿಸರ ಸಚಿವ ಗೋಪಾಲ್ ರಾಯ್ ”ಆಮ್ ಆದ್ಮಿ ಪಕ್ಷದ ನಾಯಕರೆಲ್ಲ ಈಗ ಹೊರಗಿದ್ದಾರೆ. ಸತ್ಯವನ್ನು ಸೋಲಿಸಲು ಸಾಧ್ಯವಿಲ್ಲ ಮತ್ತು ನಾವು ಸಂಪೂರ್ಣ ಶಕ್ತಿಯೊಂದಿಗೆ ದೆಹಲಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ’ ಎಂದು ಹೇಳಿದ್ದಾರೆ.