ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಶಾಸಕರನ್ನು ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್‌ನಲ್ಲಿ ಇರಿಸಿದ್ದಾಗ ಆನಂದ್ ಸಿಂಗ್ ಹಾಗೂ ಕಂಪ್ಲಿ ಗಣೇಶ್ ನಡುವೆ ಕುಸ್ತಿ ನಡೆದು ರಾಜ್ಯವ್ಯಾಪಿ ಸುದ್ದಿ ಆಗಿದ್ದು, ಆನಂದ್ ಸಿಂಗ್ ಆಸ್ಪತ್ರೆ ಸೇರಿದ್ದು ಆ ನಂತರ ರಾಜಿ ಪಂಚಾಯ್ತಿ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಬಿಡದಿ ಈಗಲ್ಟನ್ ರೆಸಾರ್ಟ್ ಘಟನೆ ನಂತರ ಕಂಪ್ಲಿ ಗಣೇಶ್ ಅವರ ಖದರ್ ಬೇರೆಯೇ ಆಗಿದೆ. ವಿಧಾನಸಭೆ ಅಧಿ ವೇಶನದಲ್ಲೂ ಮೊದಲು ಅವರಿಗೆ ಆತ್ಮೀಯರಾಗಿದ್ದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ಇದೀಗ ಅಂತರ ಕಾಯ್ದುಕೊಂಡಿರುವುದು ಗಮನಿಸಬಹುದು!
ಯತ್ನಾಳರನ್ನೇ ಸ್ಪೀಕರ್ ಸ್ಥಾನದಲ್ಲಿ ಕೂಡಿಸಿ!
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಾಕಿಸ್ತಾನ ಏಜೆಂಟ್ ಎಂದು ಹೇಳಿದ್ದ ಹೇಳಿಕೆ ವಿಧಾನಸಭೆಯಲ್ಲಿ ಸಾಕಷ್ಟು ಗದ್ದಲಕ್ಕೆ ಕಾರಣವಾಗಿತ್ತು. ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರಂತೂ ಯತ್ನಾಳ್ ಅವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಸದನದಿಂದ ಹೊರ ಹಾಕಲೇಬೇಕು ಎಂದು ಪಟ್ಟು ಹಿಡಿದು ಹೋರಾಟ ನಡೆಸಿದ್ದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಂತೂ ಯತ್ನಾಳ್ ಅವರನ್ನು ಸದನದಿಂದ ಹೊರ ಹಾಕದಿದ್ದರೆ ಸದನವೇ ನಡೆಯಲು ಬಿಡುವುದಿಲ್ಲ ಎಂದು ಘರ್ಜಿಸುತ್ತಿದ್ದರು.
ಕಾಂಗ್ರೆಸ್‌ನವರು ಸದನದ ಬಾವಿಯಲ್ಲಿ ನಿಂತು ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಘೋಷಣೆ ಕೂಗುತ್ತಿದ್ದರೆ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಕುಳಿತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆಡಳಿತ ಪಕ್ಷದ ಶಾಸಕರು ಭೇಟಿ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದರು. ನೀವೊಬ್ಬರಾದ್ರೂ ಧೈರ್ಯ ಮಾಡಿ ಹೇಳಿದೀರಾ. ನಾವು ನಿಮ್ ಜೊತೆ ಇದ್ದೇವೆ ಎಂದು ವಿಶ್ ಮಾಡುವುದು ಸಾಮಾನ್ಯವಾಗಿತ್ತು. ಕಾಂಗ್ರೆಸ್‌ನವರು ಎರಡು ದಿನವಾದರೂ ತಮ್ಮ ಪ್ರತಿಭಟನೆಯಿಂದ ಹಿಂದೆ ಸರಿಯದೇ ಗಲಾಟೆ ಮುಂದುವರೆಸಿದ್ದರಿಂದ ಬಿಜೆಪಿಯ ಹಿರಿಯ ಸದಸ್ಯರೊಬ್ಬರು ಬಸನಗೌಡ ಯತ್ನಾಳ್ ಅವರನ್ನೇ ಸ್ಪೀಕರ್ ಕುರ್ಚಿಯಲ್ಲಿ ಕೂಡುವ ತಂಡದಲ್ಲಿ ಕೂಡಿಸಿದ್ರೆ, ಅವರೇ ಗಲಾಟೆ ಮಾಡುವವರನ್ನ ಸದನದಿಂದ ಹೊರ ಹಾಕುತ್ತಾರೆ ಎಂದು ಸಲಹೆ ಕೊಟ್ಟಿದ್ದರಂತೆ. ಕಡೆಗೆ ಸ್ಪೀಕರ್ ಕಾಗೇರಿಯವರೇ ಚರ್ಚೆಗೆ ಅವಕಾಶ ಕೊಡದಿದ್ದಾಗ ಕಾಂಗ್ರೆಸ್‌ನವರು ರಾಜ್ಯಪಾಲರಿಗೆ ದೂರು ನೀಡಿ ಸಮಾಧಾನ ಪಟ್ಟುಕೊಳ್ಳುವಂತಾಯಿತು.
ಇನ್ನೇನೋ ಹೇಳಿದ ಸಚಿವರು!
ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಮೇಲೆ ಸಚಿವರು ರೇಗಾಡುವುದು ಸಾಮಾನ್ಯ. ಇತ್ತೀಚಿಗೆ ಸಚಿವರೊಬ್ಬರು ತಮ್ಮ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಪರಿಶೀಲಿಸಲು ಕಚೇರಿ ತೆರಳಿದರು. ಬಹುತೇಕ ಅಧಿಕಾರಿಗಳು ಗೈರಾಗಿದ್ದನ್ನು ಕಂಡು ಸಿಬ್ಬಂದಿಗೆ ತರಾಟೆ ತೆಗೆದುಕೊಳ್ಳಲು ಹೋಗಿ “ಇದೇನೂ ಗೋಪಾಲಪ್ಪನ ಛತ್ರವೇ’ ಎಂದು ಹೇಳಿಬಿಟ್ಟರು! ಏನೋ ಹೇಳಲು ಹೋಗಿ ಇನ್ನೇನನ್ನೋ ಹೇಳಿ ಪೇಚೆಗೆ ಸಿಕ್ಕಿಕೊಂಡ ಸಚಿವರು, ತಡವರಿಸುತ್ತಾ ಏನ್ ರೀ ಇಲಾಖೆಯಲ್ಲಿ ಇಷ್ಟು ಅವ್ಯವಸ್ಥೆಯೇ ? ಎಲ್ಲಿ ನೋಡಿದ್ರೂ ಕಸ ಇದೆ. ಶೌಚಾಲಯವನ್ನಾದರೂ ನೋಡಿದ್ದೀರಾ ಎಂದು ಮತ್ತೂಮ್ಮೆ ಅಧಿಕಾರಿಯನ್ನು ಕೇಳಿದ ಪ್ರಸಂಗ ನಡೆಯಿತು. ನಂತರ 5 ಮಹಡಿಯಲ್ಲಿದ್ದ ಎಲ್ಲ ಕಚೇರಿಗೆ ತೆರಳಿ ಹಾಜರಾತಿ ಹಾಕಿದರು. ಸಮಯಕ್ಕೆ ಸರಿಯಾಗಿ ಬಾರದವರ ಲಿಸ್ಟ್ ಕಳುಹಿಸಿ ಎಂದು ಹೊರಟರು.
* ಮೋಹನ್, ಹಿತೇಶ್, ಗಂಗಾವತಿ