Advertisement

ಕುಸ್ತಿಪಟುಗಳಿಂದ ಪ್ರಶಸ್ತಿ ಹಿಂದಿರುಗಿಸುವ ಬೆದರಿಕೆ

12:48 AM May 05, 2023 | Team Udayavani |

ಹೊಸದಿಲ್ಲಿ: ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್‌ ಭೂ ಷಣ್‌ ಶರಣ್‌ ಸಿಂಗ್‌ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳು ಜಂತರ್‌ಮಂತರ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ.

Advertisement

ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ದಿಲ್ಲಿ ಪೊಲೀಸರ ನಡುವೆ ಮಾತಿನ ಚಕಮಕಿ ಮತ್ತು ಹೊಡೆದಾಟ ನಡೆದ ಕಾರಣ ಇಬ್ಬರು ಕುಸ್ತಿಪಟುಗಳು ಗಾಯಗೊಂಡಿದ್ದಾರೆ. ಪೊಲೀಸರ ಕೆಟ್ಟ ವರ್ತನೆಯಿಂದ ಆಘಾತಗೊಂಡಿರುವ ಕುಸ್ತಿಪಟುಗಳು ಇದೀಗ ಪದ್ಮಶ್ರೀ ಸಹಿತ ತಾವು ಗಳಿಸಿರುವ ಪದಕಗಳನ್ನು ಸರಕಾರಕ್ಕೆ ಹಿಂದಿರುಗಿಸುವ ಬೆದರಿಕೆಯೊಡ್ಡಿದ್ದಾರೆ. ಇಂತಹ ಅವಮಾನಗಳಿಂದ ನಾವು ದೇಶಕ್ಕಾಗಿ ಗಳಿಸಿರುವ ಗೌರವಗಳು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದವರು ಹೇಳಿದ್ದಾರೆ.
ಬುಧವಾರ ರಾತ್ರಿ 11 ಗಂಟೆಯ ಸುಮಾರಿಗೆ ಕುಸ್ತಿಪಟುಗಳು ರಾತ್ರಿ ತಂಗಲು ಮಡಚುವ ಹಾಸಿಗೆಗಳನ್ನು ತರುತ್ತಿದ್ದಾಗ ಕರ್ತವ್ಯದಲ್ಲಿದ್ದ ಪೊಲೀಸ್‌ ಸಿಬಂದಿ ಆ ಬಗ್ಗೆ ವಿಚಾರಣೆ ಮಾಡಲು ಪ್ರಾರಂಭಿಸಿದರು. ಇದರಿಂದ ಮಾತಿನ ಚಕಮಕಿ ಆರಂಭವಾಯಿತಲ್ಲದೇ ಹೊಡೆದಾಟಕ್ಕೂ ತಿರುಗಿತು.

ಕುಸ್ತಿಪಟುಗಳ ಪ್ರಕಾರ, ಪೊಲೀಸ್‌ ಅಧಿಕಾರಿಗಳು ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸಿದರು ಮತ್ತು ಮಹಿಳಾ ಕುಸ್ತಿಪಟುಗಳನ್ನು ನಿಂದಿಸಿದರು. ವಿನೇಶ್‌ ಪೊಗಟ್‌ ಮತ್ತು ಸಾಕ್ಷಿ ಮಲಿಕ್‌ ಅವರು ಪುರುಷ ಪೊಲೀಸ್‌ ಅಧಿಕಾರಿಗಳು ತಮ್ಮನ್ನು ನಿಂದಿಸಿದ್ದಾರೆ ಮತ್ತು ತಳ್ಳಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

“ಕುಸ್ತಿಪಟುಗಳನ್ನು ಈ ರೀತಿ ನಡೆಸಿಕೊಂಡರೆ, ನಾವು ದೇಶಕ್ಕಾಗಿ ಗಳಿಸಿದ ಪದಕಗಳನ್ನು ಏನು ಮಾಡಬೇಕು. ನಮಗೆ ಅದರ ಅಗತ್ಯವಿಲ್ಲ. ಎಲ್ಲ ಪದಕಗಳು ಮತ್ತು ಪ್ರಶಸ್ತಿಗಳನ್ನು ಸರಕಾರಕ್ಕೆ ಹಿಂದಿರುಗಿಸುತ್ತೇವೆ. ಅದರ ಬದಲಿಗೆ ನಾವು ಸಾಮಾನ್ಯ ಜೀವನವನ್ನು ನಡೆಸುತ್ತೇವೆ ಎಂದು ಒಲಿಂಪಿಕ್‌ ಕಂಚಿನ ಪದಕ ವಿಜೇತ ಬಜರಂಗ್‌ ಗುರುವಾರ ಪತ್ರಕರ್ತರಿಗೆ ತಿಳಿಸಿದರು.

ಸುಪ್ರೀಂ ಆದೇಶ ಹಿನ್ನಡೆಯಲ್ಲ: ಪ್ರತಿಭಟನೆ ಮುಂದುವರಿಕೆ

Advertisement

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ ಆದೇಶವು ನಮಗೆ ಹಿನ್ನಡೆಯಲ್ಲ. ನಾವು ಪ್ರತಿಭಟನೆಯನ್ನು ಮುಂದುವರಿಸಲಿದ್ದೇವೆ ಎಂದು ಪ್ರತಿಭಟನ ನಿರತ ಕುಸ್ತಿಪಟುಗಳು ಗುರುವಾರ ಹೇಳಿದ್ದಾರೆ.

ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಹೊರಿಸಿದ ಮೂವರು ಮಹಿಳಾ ಕುಸ್ತಿಪಟುಗಳ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಗುರುವಾರ ಮುಕ್ತಾಯಗೊಳಿಸಿತ್ತು. ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು ಏಳು ದೂರುದಾರರಿಗೆ ಸಾಕಷ್ಟು ಭದ್ರತೆಯನ್ನು ಒದಗಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

“ನಾವು ಸುಪ್ರೀಂ ಕೋರ್ಟ್‌ ಆದೇಶವನ್ನು ಗೌರವಿಸುತ್ತೇವೆ, ಪ್ರತಿಭಟನೆ ಮುಂದುವರಿಯುತ್ತದೆ” ಎಂದು ರಿಯೋ ಒಲಿಂಪಿಕÕ… ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್‌ ಹೇಳಿದ್ದಾರೆ. ಕಳೆದ ಎಪ್ರಿಲ್‌ 23ರಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

“ಸುಪ್ರೀಂ ಕೋರ್ಟ್‌ ಏನೇ ಮಾಡಿದರೂ ನಾವು ಅವರಿಗೆ ಋಣಿಯಾಗಿದ್ದೇವೆ, ಯಾಕೆಂದರೆ 6 ದಿನಗಳ ಕಾಲ ಪೊಲೀಸರು ಎಫ್‌ಐಆರ್‌ ದಾಖಲಿಸಲಿಲ್ಲ. ಸುಪ್ರೀಂ ಕೋರ್ಟ್‌ ಆದೇಶಿಸಿದಾಗ ಮಾತ್ರ ಎಫ್‌ಐಆರ್‌ ದಾಖಲಿಸಲಾಗಿದೆ. ಕೋರ್ಟ್‌ನ ಆದೇಶಕ್ಕೆ ನಾವು ಬದ್ಧರಾಗಿ ಇರಲಿದ್ದೇವೆ ಎಂದು ವಿನೇಶ್‌ ಅವರು ಹೇಳಿದರು.

ಪ್ರತಿಭಟನ ಸ್ಥಳಕ್ಕೆ ಪ್ರವೇಶಿಸಲು ತಡೆ
ಹೊಸದಿಲ್ಲಿ:ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಇತರ ಕುಸ್ತಿಪಟುಗಳು ತೆರಳದಂತೆ ದಿಲ್ಲಿ ಪೊಲೀಸರು ತಡೆದಿದ್ದಾರೆ.
ಜಂತರ್‌ಮಂತರ್‌ನಲ್ಲಿರುವ ಪ್ರತಿಭಟನ ಸ್ಥಳದಲ್ಲಿ ಸಾಕ್ಷಿ ಮಲಿಕ್‌, ವಿನೇಶ್‌ ಪೊಗಟ್‌ ಮತ್ತು ಬಜರಂಗ್‌ ಪುನಿಯಾ ಪತ್ರಿಕಾಗೋಷ್ಠಿ ನಡೆಸುತ್ತಿದ್ದರೂ, ಪೊಲೀಸರು ಇತರ ಕುಸ್ತಿಪಟುಗಳಿಗೆ ಸ್ಥಳಕ್ಕೆ ಪ್ರವೇಶಿಸಲು ನಿರಾಕರಿಸಿದರು.

ವಿನೇಶ್‌ ಅವರ ಸೋದರ ಸಂಬಂಧಿ ಗೀತಾ ಪೊಗಟ್‌ ಪ್ರತಿಭಟನೆ ಸ್ಥಳಕ್ಕೆ ಪ್ರವೇಶಿಸಲು ಯತ್ನಿಸಿದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಗೀತಾ ಸೇರಿದಂತೆ ಇಬ್ಬರಿಂದ ಮೂವರನ್ನು ಜಹಾಂಗೀರಪುರಿ ಬಳಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next