Advertisement

ದರ್ಬೆ ಬೈಪಾಸ್‌ ಸರ್ಕಲ್‌ ಸಂಚಾರ ಕ್ರಮಬದ್ಧ

03:56 PM Dec 31, 2017 | Team Udayavani |

ಪುತ್ತೂರು: ಅವೈಜ್ಞಾನಿಕ ಹಾಗೂ ಅಪಾಯಕಾರಿ ಸಂಚಾರಕ್ಕೆ ಕಾರಣವಾಗಿದ್ದ ದರ್ಬೆ ಅಶ್ವಿ‌ನಿ ಬಳಿಯ ಬೈಪಾಸ್‌ ರಸ್ತೆ ಸರ್ಕಲ್‌ನಲ್ಲಿ ಸಂಚಾರ ವ್ಯವಸ್ಥೆಯನ್ನು ಕ್ರಮಬದ್ಧವಾಗಿಸುವ ನಿಟ್ಟಿನಲ್ಲಿ ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Advertisement

ಉದಯವಾಣಿ ಪ್ರಯತ್ನ
ಪುತ್ತೂರು ನಗರದಿಂದ ಹಾಗೂ ಬೈಪಾಸ್‌ ಮೂಲಕ ದಿನಂಪ್ರತಿ ಸಾವಿರಾರು ವಾಹನಗಳು ಸಂಪರ್ಕಿಸಿ ಸಂಚರಿಸುವ ಈ ಸರ್ಕಲ್‌ನಲ್ಲಿ ಸಂಚಾರ ನಿಯಮವನ್ನು ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಸಂಚಾರ ನಡೆಸುತ್ತಿರುವ ಹಾಗೂ ವೃತ್ತ ಅವೈಜ್ಞಾನಿಕವಾಗಿರುವ ಕುರಿತು ಉದಯವಾಣಿ ಸುದಿನದಲ್ಲಿ ಹಲವು ಬಾರಿ ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆಯಲಾಗಿತ್ತು.

ಪೊಲೀಸ್‌ ಕ್ರಮ
ಬೈಪಾಸ್‌ ಮೂಲಕ ಹೆದ್ದಾರಿ ಪ್ರವೇಶಿಸುವ ವಾಹನಗಳು ಸರ್ಕಲ್‌ಗೆ ಸುತ್ತು ಬಂದು ಸಂಚರಿಸಲು ಹಾಗೂ ನಗರ ಪ್ರವೇಶಿಸುವ ವಾಹನಗಳು ಸುತ್ತು ಬರಲು ಪೂರಕವಾಗುವಂತೆ ತಾತ್ಕಾಲಿಕ ರಸ್ತೆ ಬೇಲಿ ಅಳವಡಿಸಲಾಗಿದೆ. ಈ ಕ್ರಮವನ್ನು ಸಂಚಾರ ಪೊಲೀಸರು ಕೈಗೊಂಡು ನಿಗಾ ಇರಿಸಿದ್ದಾರೆ. ಸ್ಥಳೀಯಾಡಳಿತ ಒಪ್ಪಿಕೊಂಡಂತೆ ಶೀಘ್ರ ವೃತ್ತದ ಅಭಿವೃದ್ಧಿಗೆ ಕ್ರಮ ಕೈಗೊಂಡರೆ ಸಂಚಾರಕ್ಕೆ ಸಂಬಂಧಿಸಿದ ದೊಡ್ಡ ಸಮಸ್ಯೆ ಬಗೆಹರಿಯಲಿದೆ. ಸೂಕ್ತ ಮಾರ್ಗಸೂಚಿ, ಸಂಚಾರ ನಿಯಮದ ಫಲಕವನ್ನೂ ಅಳವಡಿಸಬೇಕಾದ ಆವಶ್ಯಕತೆ ಇದೆ.

ಅವೈಜ್ಞಾನಿಕ ಸರ್ಕಲ್‌ನ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಅಂದಿನ ಪುತ್ತೂರು ಸಹಾಯಕ ಕಮಿಷನರ್‌ ಡಾ| ರಾಜೇಂದ್ರ ಕೆ.ವಿ. ಅವರು ಸ್ಥಳೀಯಾಡಳಿತ ನಗರಸಭೆಗೆ ಸೂಚಿಸಿದ್ದರು. ಸಂಚಾರ ಠಾಣೆಯ ಎಸ್‌ಐ ನಾಗರಾಜ್‌ ಅವರೂ ಅವೈಜ್ಞಾನಿಕ ಸರ್ಕಲ್‌ ವ್ಯವಸ್ಥೆಯ ಕುರಿತು ಸಹಾಯಕ ಕಮಿಷನರ್‌ಗೆ ಮಾಹಿತಿ ನೀಡಿದ್ದರು.

ಮಾಡಲೂ ಇಲ್ಲ, ಬಿಡಲೂ ಇಲ್ಲ
ಸರ್ಕಲ್‌ ಅಭಿವೃದ್ಧಿಯ ನಿಟ್ಟಿನಲ್ಲಿ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಕೆಲವು ತಿಂಗಳ ಹಿಂದೆ ಪರಿವೀಕ್ಷಣೆ ನಡೆಸಿದ್ದು, ಪುತ್ತೂರು ನಗರ ಯೋಜನಾ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸುವ ಕುರಿತು ಅಧ್ಯಕ್ಷ ಕೌಶಲ್‌ ಪ್ರಸಾದ್‌ ಶೆಟ್ಟಿ ಭರವಸೆ ನೀಡಿ ಪಿಡಬ್ಲ್ಯೂಡಿ ಎಂಜಿನಿಯರ್‌ಗೆ ರೂಪುರೇಷೆ ಸಿದ್ಧಪಡಿಸಲು ತಿಳಿಸಲಾಗಿತ್ತು. ಆದರೆ ಮಧ್ಯೆ ಪ್ರವೇಶಿಸಿದ ನಗರಸಭಾ ಆಡಳಿತ ಈ ಸರ್ಕಲ್‌ನ ಅಭಿವೃದ್ಧಿಗೆ ನಗರಸಭೆ ಬದ್ಧವಾಗಿದ್ದು, ಪುಡಾದಿಂದ ಅಭಿವೃದ್ಧಿ ಮಾಡುವ ಆವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಈ ಘಟನೆಗಳು ಕಳೆದು 3 ತಿಂಗಳು ಕಳೆದರೂ ನಗರಸಭೆಯಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿಲ್ಲ.

Advertisement

ಶೀಘ್ರದಲ್ಲಿ ಕಾಮಗಾರಿ ಆರಂಭ
ನಗರದ ಅಶ್ವಿ‌ನ್‌ ಬಳಿಯ ಬೈಪಾಸ್‌ ಸರ್ಕಲ್‌, ಮಂಜಲ್ಪಡ್ಪು ಬಳಿಯ ಸರ್ಕಲ್‌, ದರ್ಬೆ ಜಂಕ್ಷನ್‌, ಎಸಿ ಕ್ವಾರ್ಟರ್ಸ್‌ ರಸ್ತೆಯ ಸರ್ಕಲ್‌ ಸಹಿತ ಹಲವು ವೃತ್ತಗಳ ಅಭಿವೃದ್ಧಿಗೆ ನಗರಸಭೆ 43 ಲಕ್ಷ ರೂ. ಮೀಸಲಿರಿಸಿದೆ ಹಾಗೂ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ.
ಜಯಂತಿ ಬಲ್ನಾಡು
  ಅಧ್ಯಕ್ಷರು, ನಗರಸಭೆ 

ಉದ್ದೇಶ ಕೈಬಿಟ್ಟಿದೆ
ದರ್ಬೆ ಬೈಪಾಸ್‌ ಸರ್ಕಲ್‌ ಪುತ್ತೂರು ನಗರಕ್ಕೆ ಮುಖವಿದ್ದಂತೆ. ಪುತ್ತೂರಿಗೆ ಸುಂದರ ಮುಖದಂತೆ ಸರ್ಕಲ್‌ನ್ನು ಅಭಿವೃದ್ಧಿಗೊಳಿಸುವ ದೃಷ್ಟಿಕೋನವಿಟ್ಟುಕೊಂಡಿದ್ದೆವು. ಆದರೆ ನಗರಸಭೆ ಆಡಳಿತ ನಾವು ಅಭಿವೃದ್ಧಿಪಡಿಸುತ್ತೇವೆ. ಅನುದಾನವಿಟ್ಟು ಕೂಡಲೇ ಟೆಂಡರ್‌
ಮಾಡುತ್ತೇವೆ ಎಂದಾಗ ಪುಡಾ ಈ ಉದ್ದೇಶ ಕೈಬಿಟ್ಟಿದೆ.
–  ಪ್ರಸಾದ್‌ ಕೌಶಲ್‌ ಶೆಟ್ಟಿ
   ಅಧ್ಯಕ್ಷರು, ಪುಡಾ

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next