Advertisement

ಮಸ್ಟರಿಂಗ್‌ ಕೇಂದ್ರಕ್ಕೊಂದು ಸುತ್ತು 

11:28 AM May 12, 2018 | |

ಮಂಗಳೂರು: ಒಂದು ಕೈಯಲ್ಲಿ ಬ್ಯಾಗು… ಇನ್ನೊಂದು ಕೈಯಲ್ಲಿ ಇವಿಎಂ ಪೆಟ್ಟಿಗೆ… ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಕರವಸ್ತ್ರವನ್ನೋ, ಸೀರೆಯ ಸೆರಗನ್ನೋ ತಲೆಗೆ ಹೊದ್ದುಕೊಂಡು ತಮಗಾಗಿ ಸಿದ್ಧವಾಗಿರುವ ಬಸ್‌ಗಳು ಎಲ್ಲಿವೆ ಎಂದು ಹುಡುಕಾಡುತ್ತಿದ್ದ ಚುನಾವಣ ಸಿಬಂದಿ….

Advertisement

ಇದು ರಾಜ್ಯ ವಿಧಾನಸಭೆಗೆ ಶನಿವಾರ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತ ಗಟ್ಟೆಗಳಿಗೆ ತೆರಳಲು ಮಂಗಳೂರಿನಲ್ಲಿ ಸಿದ್ಧವಾಗಿದ್ದ ಅಧಿಕಾರಿಗಳ ಧಾವಂತದ ಸ್ಥೂಲನೋಟವಿದು.

ಮೂಡಬಿದಿರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಧಿಕಾರಿಗಳಿಗೆ ಮಂಗಳೂರಿನ ಕೆಪಿಟಿಯಲ್ಲಿ ಮಸ್ಟರಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ರೊಸಾರಿಯೋ ಪಿಯು ಕಾಲೇಜಿನಲ್ಲಿ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉರ್ವ ಕೆನರಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ, ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಬಂಟ್ಸ್‌ಹಾಸ್ಟೆಲ್‌ನ ಶ್ರೀ ರಾಮಕೃಷ್ಣ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಈ ನಾಲ್ಕು ಕೇಂದ್ರಗಳ ಮೂಲಕ ಸಮೀಪದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಯಿತು.

ನಾಲ್ಕೂ ಕೇಂದ್ರಗಳಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ನೂರಾರು ಕಾಲೇಜುಗಳ ಶಿಕ್ಷಕರು, ಪಂಚಾಯತ್‌ ಅಧಿಕಾರಿಗಳು ಸೇರಿದಂತೆ ಎಲ್ಲ ಸ್ತರದ ಅಧಿಕಾರಿಗಳು ಸೇರಿದ್ದರು. ಕಾಲೇಜಿನ ಮುಂಭಾಗದಲ್ಲಿ ಯಾವ ಬೂತ್‌ಗಳಿಗೆ ಯಾವ ಅಧಿಕಾರಿ ಎಂಬುದನ್ನು ನಮೂದಿಸಿದ್ದರು. ಇದನ್ನು ನೋಡಿಕೊಂಡೇ ಎಲ್ಲ ಅಧಿಕಾರಿಗಳು ಮತಯಂತ್ರ ಪಡೆದುಕೊಳ್ಳಲು ತೆರಳಿದರು.

ಹೊಟ್ಟೆ ತುಂಬಾ ಚಾ-ತಿಂಡಿ-ಊಟ!
ರಾಜ್ಯದ ಇತರ ಕೆಲವು ಜಿಲ್ಲೆಗಳಲ್ಲಿ ಅಧಿಕಾರಿಗಳಿಗೆ ಉಪಾಹಾರ ಹಾಗೂ ಮಧ್ಯಾಹ್ನ ಊಟ ಸಮರ್ಪಕವಾಗಿ ನೀಡಿಲ್ಲ ಎಂದು ಆರೋಪಿಸಿ ಪ್ರತಿಭಟನೆ ಕೈಗೊಂಡ ಸುದ್ದಿ ಇದ್ದರೆ, ಮಂಗಳೂರಿನಲ್ಲಿ ಮಾತ್ರ ಇದಕ್ಕೆ ಆಸ್ಪದವಿರಲಿಲ್ಲ. ಜಿಲ್ಲಾಡಳಿತದ ನೇತೃತ್ವದಲ್ಲಿ ಮಂಗಳೂರಿನ ನಾಲ್ಕೂ ಕೇಂದ್ರದಲ್ಲೂ ಭರ್ಜರಿ ಊಟ-ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯ ಕ್ಯಾಟರಿಂಗ್‌ ಸಂಸ್ಥೆಯವರು ಊಟ, ತಿಂಡಿಯ ವ್ಯವಸ್ಥೆ ನಿರ್ವಹಿಸಿದ್ದರು. ‘ಇಷ್ಟರವರೆಗೆ ಕೆಲವು ಬಾರಿ ನಾವು ಚುನಾವಣೆ ಕೆಲಸ ನಿರ್ವಹಿಸಿದ್ದೆವು. ಆದರೆ ಇಲ್ಲಿಯವರೆಗೆ ಇಷ್ಟು ಶುಚಿ-ರುಚಿಯಾದ ಊಟ, ತಿಂಡಿ ವ್ಯವಸ್ಥೆಯನ್ನು ನೋಡಿರಲಿಲ್ಲ. ಜಿಲ್ಲಾಡಳಿತದ ಶ್ರಮ ಶ್ಲಾಘನೀಯ’ ಎಂದು ಕ್ಲಸ್ಟರಿಂಗ್‌ ಕೇಂದ್ರದಲ್ಲಿದ್ದ ಅಧಿಕಾರಿ ಯಶೋದಾ ಅವರು ‘ಉದಯವಾಣಿ ಸುದಿನ’ಕ್ಕೆ ತಿಳಿಸಿದರು.  

Advertisement

ಆರೋಗ್ಯ ತಪಾಸಣೆಗೆ ಪ್ರತ್ಯೇಕ ಕೇಂದ್ರ
ಮಸ್ಟರಿಂಗ್‌ ಕೇಂದ್ರದಲ್ಲಿ ಅಧಿಕಾರಿಗಳ ಆರೋಗ್ಯ ತಪಾಸಣೆಯ ಹಿನ್ನೆಲೆಯಲ್ಲಿ ಪ್ರತ್ಯೇಕ ಕೇಂದ್ರವನ್ನು
ತೆರೆಯಲಾಗಿತ್ತು. ನಾಲ್ಕೈದು ವೈದ್ಯರು ಕೇಂದ್ರದಲ್ಲಿದ್ದರು. ಮತಗಟ್ಟೆ ಗಳಿಗೆ ತೆರಳುವ ಅಧಿಕಾರಿಗಳು ಆರೋಗ್ಯದಿಂದಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಯಿತು.

ಅಧಿಕಾರಿಗಳ ಕೈಯಲ್ಲಿ ಗಾಲಿ ಕುರ್ಚಿ!
ಈ ಬಾರಿ ಮತದಾರರಿಗೆ ಎಲ್ಲ ರೀತಿಯ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ಇದರಂತೆ ನಿರ್ದಿಷ್ಟ ಮತಗಟ್ಟೆ ವ್ಯಾಪ್ತಿಯಲ್ಲಿರುವ ಅಂಗವಿಕಲರಿಗಾಗಿ ಗಾಲಿ ಕುರ್ಚಿಗಳನ್ನು ಒದಗಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇವಿಎಂ/ವಿವಿಪ್ಯಾಟ್‌ ಗಳನ್ನು ಕೊಂಡೊಯ್ಯುತ್ತಿದ್ದ ಕೆಲವು ಅಧಿಕಾರಿಗಳ ಕೈಯಲ್ಲಿ ಗಾಲಿ ಕುರ್ಚಿಗಳೂ ಇದ್ದವು. 

ಮಸ್ಟರಿಂಗ್‌ ಕೇಂದ್ರಕ್ಕೆ ಮದುವೆ ಮನೆಯ ಶೃಂಗಾರ!
ಮಸ್ಟರಿಂಗ್‌ ಕೇಂದ್ರದ ಅಂಗಳಕ್ಕೆ ಶಾಮಿಯಾನದ ವ್ಯವಸ್ಥೆ ಮಾಡಲಾಗಿತ್ತು. ಬಂಟ್ಸ್‌ಹಾಸ್ಟೆಲ್‌ ಕಾಲೇಜಿನ ಮುಂಭಾಗದಲ್ಲಿ ಅದ್ದೂರಿಯಾಗಿ ಕಾಣುವ ಶಾಮಿಯಾನ ಹಾಕಲಾಗಿತ್ತು. ಇದರ ಕೆಳಗಡೆಯೇ ಚಾ-ತಿಂಡಿ-ಊಟದ ವ್ಯವಸ್ಥೆ ಮಾಡಲಾಗಿತ್ತು. ಶಾಲೆಯ ಪಕ್ಕದ ಕ್ರೀಡಾಂಗಣದಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗಿತ್ತು.

ಇವಿಎಂ/ ವಿವಿಪ್ಯಾಟ್‌ ಪರಿಶೀಲನೆ
ಮಸ್ಟರಿಂಗ್‌ ಕೇಂದ್ರದೊಳಗೆ ಹಾಜರಿದ್ದ ಅಧಿಕಾರಿಗಳು ತಮ್ಮ ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗಲಿರುವ ಇವಿಎಂಗಳನ್ನು ಪರಿಶೀಲನೆ ನಡೆಸಿ ಆ ಬಳಿಕ ಪೆಟ್ಟಿಗೆಯಲ್ಲಿ ತುಂಬಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಈ ಬಾರಿ ಹೊಸದಾಗಿ ಪರಿಚಯಿಸುತ್ತಿರುವ ವಿವಿ ಪ್ಯಾಟ್‌ಗಳನ್ನು ಕೂಡ ಪರಿಶೀಲಿಸಿ ಕ್ರಮಬದ್ಧವಾಗಿದೆಯೇ ಎಂದು ನೋಡಿಕೊಂಡರು. ಉಳಿದ ಅಧಿಕಾರಿಗಳು ಮತದಾರರ ಪಟ್ಟಿಯನ್ನು ಪರಿಶೀಲಿಸುತ್ತಿದ್ದ ದೃಶ್ಯ ಕಂಡುಬಂತು.

ಬಿಸಿಲಾದರೇನು? ಮಳೆಯಾದರೇನು?
ಕಳೆದೆರಡು ದಿನಗಳಲ್ಲಿ ಮಂಗಳೂರಿನಲ್ಲಿ ಆಗೊಮ್ಮೆ-ಈಗೊಮ್ಮೆ ಸುರಿದ ಮಳೆಯ ಪರಿಣಾಮ ನಗರದಲ್ಲಿ ಸೆಕೆಯ ಪ್ರಭಾವವೂ ಸ್ವಲ್ಪ ಇತ್ತು. ಮತಗಟ್ಟೆಗೆ ತೆರಳುತ್ತಿದ್ದ ಕೃಷ್ಣಪ್ಪ ಅವರಲ್ಲಿ ‘ಬಿಸಿಲು ಜೋರಾಗಿದೆಯಲ್ಲವೇ?’ ಎಂದು ಕೇಳಿದಾಗ ‘ಬಿಸಿಲಾದರೇನು… ಮಳೆಯಾದರೇನು… ಮತದಾನ ಯಶಸ್ವಿಯಾದರೆ ಸಾಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಖಾಸಗಿ ವಾಹನ ಚಾಲಕರಿಗೆ ಮತದಾನವಿಲ್ಲವೇ?
ಮತದಾನದ ಹಿನ್ನೆಲೆಯಲ್ಲಿ ಬಸ್‌ ಸಹಿತ ಖಾಸಗಿ ವಾಹನಗಳನ್ನು ಬಳಸಲಾಗುತ್ತದೆ. ಸರಕಾರಿ ವಾಹನಗಳ ಚಾಲಕರು-ನಿರ್ವಾಹಕರಿಗೆ ಅಂಚೆ ಮತದಾನದ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಖಾಸಗಿ ವಾಹನಗಳ ಚಾಲಕ-ನಿರ್ವಾಹಕರಿಗೆ ಮತದಾನವಿಲ್ಲವೇ? ಎಂಬುದು ಅವರ ಪ್ರಶ್ನೆ. ಬಂಟ್ಸ್‌ಹಾಸ್ಟೆಲ್‌ ಮಸ್ಟರಿಂಗ್‌ ಕೇಂದ್ರದಲ್ಲಿ ಇದ್ದ ಖಾಸಗಿ ಕಾರಿನ ಚಾಲಕರೊಬ್ಬರು ಸುದಿನ ಜತೆಗೆ ಮಾತನಾಡಿ, ‘ನಿನ್ನೆ ಸಂಜೆ ನಾನು ಮಂಗಳೂರಿನಲ್ಲಿ ಕಾರಿನಲ್ಲಿ ತೆರಳುವಾಗ ವಾಹನವನ್ನು ಪೊಲೀಸರು ನಿಲ್ಲಿಸಿ, ಮತದಾನದ ಕರ್ತವ್ಯಕ್ಕೆ ಬರುವಂತೆ ತಿಳಿಸಿದ್ದಾರೆ. ಆ ಕಾರಣದಿಂದ ನಾನು ಇಲ್ಲಿಗೆ ಬಂದಿದ್ದೇನೆ. ಆದರೆ ನನಗೆ ಮತದಾನ ಮಾಡಲು ಅವಕಾಶ ಇಲ್ಲದಂತಾಗಿದೆ. ನಾನು ಭಾರತೀಯ ನಾಗರಿಕನಲ್ಲವೇ? ಯಾಕೆ ಹೀಗೆ? ಎಂದವರು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next