ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾ ರೈಲ್ವೇ ಕ್ಷೇತ್ರದಲ್ಲಿ ಉತ್ತೇಜನಕಾರಿ ಬೆಳವಣಿಗೆ ಕಂಡಿದೆ. ಭಾರತೀಯ ರೈಲ್ವೆ ಎಲ್‌ಎಚ್‌ಬಿ(ಲಿಂಕ್-ಹಾಫ್ಮನ್-ಬುಶ್) ಬೋಗಿಗಳನ್ನು 100 ಪ್ರತಿಶತ ಮೇಕ್ ಇನ್ ಇಂಡಿಯಾ ಯೋಜನೆಯಡಿ ನಿರ್ಮಿಸಿದೆ. ಬೋಗಿಯಲ್ಲಿ ಬಳಸಲಾಗಿರುವ ಎಲ್ಲಾ ವಸ್ತುಗಳೂ ಭಾರತ ದಲ್ಲೇ ತಯಾರಾಗಿದ್ದು. ಈ ಬೋಗಿಗಳನ್ನು ಚೆನ್ನೈನ ಐಸಿಎಫ್ (ಇಂಟೆಗ್ರಲ್ ಕೋಚ್ ಫ್ಯಾಕ್ಟರಿ)ನಲ್ಲಿ ಪಶ್ವಿಮ ವಿಭಾಗೀಯ ರೈಲ್ವೇಗಾಗಿ ತಯಾರಿಸಲಾಗಿದೆ.
ಆಧುನಿಕ ರೈಲ್ವೇ ಬೋಗಿಗಳನ್ನು 1995ರಿಂದ ಜರ್ಮನಿಯ ಲಿಂಕ್ ಹೊಫ¾ನ್-ಬುಶ್ ಕಂಪೆನಿಯ ಸಹಯೋಗದಿಂದ ತಯಾರಿಸಲಾಗುತ್ತಿದೆ. ಭಾರತದಲ್ಲೇ ಬೋಗಿ ತಯಾರಿಕೆ ಮತ್ತು ಜೋಡಣೆ ನಡೆಯುತ್ತಿತ್ತು. ಆದರೂ ಕೆಲ ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.
ಈಗ ತಯಾರಿಸಲಾಗಿರುವ ಕೋಚ್ ನಂ. ಎಲ್‌ಎಸಿಸಿಎನ್ 111 ಮತ್ತು ಎಲ್‌ಎಸ್‌ಡಿಡಿ 166 ಏಸಿ ರಹಿತ ಬೋಗಿಗಳನ್ನು ಸಂಪೂರ್ಣವಾಗಿ ಭಾರತದಲ್ಲೇ ತಯಾರಿಸಲಾಗಿದೆ. ಬೆಂಗಳೂರಿನ ರೈಲು ಚಕ್ರ ಕಾರ್ಖಾನೆಯಲ್ಲಿ ಬೋಗಿಗಳಿಗೆ ಚಕ್ರ ಅಳವಡಿಸಲಾಗಿದೆ. ಅವುಗಳ ಪರೀಕ್ಷಾರ್ಥ ಓಡಾಟವನ್ನೂ ನಡೆಸಲಾಗಿದೆ ಎಂದು ಐಸಿಎಫ್ನ ಅಧಿಕಾರಿ ಹೇಳಿದ್ದಾರೆ.
ಸದ್ಯದಲ್ಲೇ ಏಸಿ ಬೋಗಿಗಳನ್ನೂ ಸಂಪೂರ್ಣವಾಗಿ ದೇಶೀಯವಾಗಿ ತಯಾರಿಸಲಾಗುವುದು. ಅದಕ್ಕಾಗಿ ಸ್ಥಳೀಯ ತಯಾರಕರ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ರೈಲು ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ 2017ರಲ್ಲೇ ಐಸಿಎಫ್ ಕೋಚ್‌ಗಳ ನಿರ್ಮಾಣವನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ಸಂಪೂರ್ಣ ತುಕ್ಕುರಹಿತ ಉಕ್ಕಿನ ದೇಹದ ಎಲ್‌ಎಚ್‌ಬಿ ಸುರಕ್ಷಿತವಾಗಿರುತ್ತವೆ ಎಂದು ಅವರು ಹೇಳಿದ್ದಾರೆ.