Advertisement

ನಡುಗಡ್ಡೆ ಸೇತುವೆಗಳಿಗೆಮುಕ್ತಿ ಎಂದು? ಕುಂಟುತ್ತ ಸಾಗಿವೆ ಕಾಮಗಾರಿಗಳು

06:04 PM Aug 13, 2021 | Team Udayavani |

ರಾಯಚೂರು: ಯಾವುದೇ ಕಾಮಗಾರಿ ಕಾರಣಾಂತರಗಳಿಂದ ವಿಳಂಬವಾಗುವುದು ಸಾಮಾನ್ಯ. ಆದರೆ, ಕೃಷ್ಣಾ ನದಿಯ ನಡುಗಡ್ಡೆಗಳಿಗೆ ಸಂಪರ್ಕ ಕಲ್ಪಿಸಲು ನಿರ್ಮಿಸುತ್ತಿರುವ ಸೇತುವೆಗಳು ಮಾತ್ರ ದಶಕಗಳೇ ಕಳೆದರೂ ಮುಗಿಯುವ ಲಕ್ಷಣ ತಿಳಿಯುತ್ತಿಲ್ಲ.

Advertisement

ತಾಲೂಕಿನ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಕುರ್ವಕಲಾ, ಕುರ್ವಕುರ್ದಾ ಗ್ರಾಮಗಳು ಹಾಗೂ ಸುಕ್ಷೇತ್ರ ನಾರದಗಡ್ಡೆಗಳಿವೆ. ಆಂಧ್ರಪ್ರದೇಶ ಸರ್ಕಾರವು ಕರ್ನಾಟಕದ ಸಹಯೋಗದಲ್ಲಿ ಜುರಾಲಾ ಪ್ರಿಯದರ್ಶಿನಿ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಿಸುವ ವೇಳೆ ನಡುಗಡ್ಡೆಗಳಿಗೆ ಸೇತುವೆ ನಿರ್ಮಿಸಲು ಅನುದಾನ ಒದಗಿಸಿದೆ. ಆದರೆ, ದಶಕಗಳಾದರೂ ಸೇತುವೆ ಕಾಮಗಾರಿ ಆರಂಭವಾಗಿಲ್ಲ. ಡಿ.ರಾಂಪೂರ ಮತ್ತು ಕುರ್ವಕುಲಾ ಬಳಿ ಸೇತುವೆ ನಿರ್ಮಾಣ ಆರಂಭಿಸಿ ಅರ್ಧಕ್ಕೆ ಕೈಬಿಡಲಾಗಿದೆ. ಕಾಮಗಾರಿ ಯಾವಾಗ ಶುರುವಾಗುವುದೋ ಎಂದು ನಡುಗಡ್ಡೆ ನಿವಾಸಿಗಳು ಕಾದು ಕೂರುವಂತಾಗಿದೆ. 2019ರಲ್ಲಿ ಉಂಟಾದ ಪ್ರವಾಹದ ವೇಳೆ ಸೇತುವೆ ತಡೆಗೋಡೆಗಳು ಕೊಚ್ಚಿ ಹೋಗಿದ್ದವು.

ಕಾಮಗಾರಿ ಶುರುವಾಗುವ ಮುನ್ನ ಆತೂRರು ಸೇತುವೆಗೆ 14.25 ಕೋಟಿ ಹಾಗೂ ಡಿ.ರಾಂಪುರ ಸೇತುವೆಗೆ 7 ಕೋಟಿ ಅಂದಾಜು ವೆಚ್ಚ ತಯಾರಿಸಲಾಗಿತ್ತು. ಈ ಎರಡು ಸೇತುವೆಗಳನ್ನು 104 ಮೀಟರ್‌ ಎತ್ತರದಲ್ಲಿ ನಿರ್ಮಿಸಲು ನಿರ್ಧರಿಸಲಾಗಿತ್ತು. ಡಿ.ರಾಂಪುರ ಸೇತುವೆಯಲ್ಲಿ 9 ಪಿಲ್ಲರ್‌ ನಿರ್ಮಿಸಿದ್ದರೆ, ಆತೂRರು ಬಳಿ 6 ಪಿಲ್ಲರ್‌ ಕೆಲಸ ಮುಗಿದಿದೆ. ಹೈದರಾಬಾದ್‌ ಮೂಲದ ಕೆವಿಎಸ್‌ ಶೇಷಗಿರಿರಾವ್‌ ಎನ್ನುವ ಗುತ್ತಿಗೆದಾರ ಕಾಮಗಾರಿ ಹೊಣೆ ಹೊತ್ತಿದ್ದರು. ಆದರೆ, ಅಂದಾಜು
ವೆಚ್ಚಕ್ಕಿಂತ ಹೆಚ್ಚು ಖರ್ಚಾಗಲಿದೆ ಎನ್ನುವ ಕಾರಣಕ್ಕೆ ಅವರು ಅರ್ಧಕ್ಕೆ ಕೈ ಬಿಟ್ಟರು. ಬಳಿಕ ಯಾವುದೇ ಏಜೆನ್ಸಿಗಳು ಈ ಕಾಮಗಾರಿ ನಿರ್ವಹಣೆಗೆ ಮುಂದೆ ಬರುತ್ತಿಲ್ಲ. ಬಂದರೂ ಜಿಲ್ಲಾಡಳಿತದೊಂದಿಗೆ ಮಾತುಕತೆ ಫಲಪ್ರದವಾಗದೆ ಕಾಮಗಾರಿಗಿರುವ ವಿಘ್ನ ನಿವಾರಣೆ ಆಗುತ್ತಿಲ್ಲ.

ನಡುಗಡ್ಡೆ ಜನರ ಪೀಕಲಾಟ
ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಪ್ರತಿ ವರ್ಷ ಪ್ರವಾಹ ಎದುರಾದರೆ ಸಾಕು ನಡುಗಡ್ಡೆ ನಿವಾಸಿಗಳಿಗೆ ನಡುಕ ಶುರುವಾಗುತ್ತದೆ. ಲಿಂಗಸುಗೂರು, ರಾಯಚೂರು ತಾಲೂಕಿನಲ್ಲಿ ಕೃಷ್ಣ ನದಿಯಲ್ಲಿಯೇ ಇರುವ ಕೆಲವೊಂದು ನಡುಗಡ್ಡೆಗಳಲ್ಲಿ ಜನವಸತಿ ಇದ್ದು, ಅಲ್ಲೇ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸಿದರೂ ಅಲ್ಲಿನ ಕೃಷಿ ಭೂಮಿ ಬಿಟ್ಟು ಬರಲು ಒಪ್ಪುತ್ತಿಲ್ಲ. ಇದರಿಂದ ಅಲ್ಲಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳ ನಿರ್ಮಾಣ ಅನಿವಾರ್ಯ ಎನ್ನುವಂತಾಗಿದೆ.

ಜುರಾಲಾ ಯೋಜನೆ ಪೂರ್ಣಗೊಂಡ ಬಳಿಕ ರಾಯಚೂರು ತಾಲೂಕಿನ ಮೂರು ನಡುಗಡ್ಡೆಗಳಿಗೆ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. 2019ರಲ್ಲಿ ಬಸವಸಾಗರ ಜಲಾಯಶದಿಂದ 7 ಲಕ್ಷ ಕ್ಯೂಸೆಕ್‌ ಹಾಗೂ ಭೀಮಾ ನದಿಯ ಸೊನ್ನ ಜಲಾಶಯದಿಂದ 2.5 ಲಕ್ಷ ಕ್ಯೂಸೆಕ್‌ ನೀರು ಹರಿಸಿದಾಗ ಇಲ್ಲಿನ ಪರಿಸ್ಥಿತಿ ಶೋಚನೀಯವಾಗಿತ್ತು. ತುಂಬಿ ಹರಿಯುವ ನದಿಯಲ್ಲಿ ತೆಪ್ಪದ ಮೂಲಕವೇ ನಡುಗಡ್ಡೆ ಸೇರುವ ಅಲ್ಲಿನ ಜನ ಅಕ್ಷರಶಃ ಜೀವ ಕೈಯಲ್ಲಿ ಹಿಡಿದು ಬದುಕಬೇಕಿದೆ.
ಈಚೆಗೆ ತೆಪ್ಪದಲ್ಲಿ ದಾಟುವಾಗ ನಾಲ್ವರು ದುರ್ಮರಣಕ್ಕೀಡಾದ ಘಟನೆಯೂ ಹಸಿರಾಗಿದೆ.

Advertisement

ಅಂದಾಜು ವೆಚ್ಚ ದುಪ್ಪಟ್ಟು
ಕುರ್ವಾಪುರ, ಕುರ್ವಕುಲಾ ಹಾಗೂ ನಾರದಗಡ್ಡೆಗೆ ಮೂರು ಸೇತುವೆಗಳು ನಿರ್ಮಾಣ ಉದ್ದೇಶವಿದೆ. ಅದರಲ್ಲಿ ಕುರ್ವಪುರ, ಕುರ್ವಕುಲಾ ಸೇತುವೆ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಅರ್ಧಕ್ಕೆ ನಿಂತಿದೆ. ಎರಡು ಸೇತುವೆಗಳಿಗೆ ಈಗಾಗಲೇ ತಲಾ 12 ಕೋಟಿ ರೂ. ಖರ್ಚು ಮಾಡಲಾಗಿತ್ತು. ಒಂದು ಮೀಟರ್‌ ಎತ್ತರ ಹೆಚ್ಚಿಸಿ ಮತ್ತೂಮ್ಮೆ ಅಂದಾಜು ವೆಚ್ಚ ನೀಡುವಂತೆ ಕೇಳಿದ್ದು, ಪ್ರತಿ ಸೇತುವೆಗೆ 21 ಕೋಟಿ ರೂ. ಖರ್ಚಾಗಲಿದೆ ಎಂದು ತಿಳಿಸಲಾಗಿದೆ. ಅದರ ಜತೆಗೆ ಜಿಎಸ್‌ಟಿ ಸೇರಿದರೆ ಇನ್ನೂ ಹೆಚ್ಚಾಗಲಿದೆ. ಇನ್ನೂ ನಾರದಗಡ್ಡೆ ಸೇತುವೆ 700 ಮೀಟರ್‌ ಉದ್ದವಿದ್ದು, 100 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ ಎಂದು ಕ್ರಿಯಾ ಯೋಜನೆ ರೂಪಿಸಲಾಗಿದೆ. ಇದು ಲೋಕೋಪಯೋಗಿ ಇಲಾಖೆಯಿಂದ ಆಗುವುದಿಲ್ಲ ಎಂಬ ಕಾರಣಕ್ಕೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸಲಾಗಿದೆ. ಆದರೆ, ಇದಕ್ಕೆ ಸಚಿವ ಸಂಪುಟ ಇನ್ನೂ ಅನುಮೋದನೆ ನೀಡಿಲ್ಲ.

ರಾಯಚೂರು ತಾಲೂಕಿನ ಕೃಷ್ಣಾ ನದಿಯ ನಡುಗಡ್ಡೆಗಳಿಗೆ ಮೂರು ಸೇತುವೆಗಳ ನಿರ್ಮಾಣಕ್ಕೆ ಸಂಬಂಧಿಸಿ ಮತ್ತೂಮ್ಮೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಈ ಹಿಂದೆ ಅರ್ಧ ಕೆಲಸ ಮಾಡಿದ್ದು, ಈಗ ಕರ್ನಾಟಕ ರಾಜ್ಯ ರಸ್ತೆ ನಿಗಮಕ್ಕೆ ಹಸ್ತಾಂತರಿಸಲಾಗಿದೆ. ಸಚಿವ ಸಂಪುಟ ಅನುಮೋದನೆಗೆ
ನೀಡಬೇಕಿದೆ.
*ಚನ್ನಬಸಪ್ಪ ಮೆಕಾಲೆ,
ಇಇ, ಲೋಕೋಪಯೋಗಿ ಇಲಾಖೆ

*ಸಿದ್ಧಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next