ಬಜಪೆ: ತರಕಾರಿ ಬೆಳೆದ ಕೃಷಿಕನಿಗೆ ಸಿಗುವ ಲಾಭದ ಪ್ರಮಾಣ ಒಂದಷ್ಟು ಆದರೆ ಅದರಲ್ಲಿ ಮಧ್ಯವರ್ತಿಗಳಿಗೆ ಸಿಗುವ ಪಾಲೇ ಹೆಚ್ಚು. ಇನ್ನು ತರಕಾರಿ ಬೆಳೆಗೆ ಒಳ್ಳೆಯ ದರ ಸಿಗದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಇಂತಹ ಸಂದಿಗ್ಧತೆಯಲ್ಲಿ ತಾವು ಬೆಳೆದ ತರಕಾರಿಯನ್ನು ಯಾವ ಮಧ್ಯವರ್ತಿಗಳನ್ನು ಆಶ್ರಯಿಸದೆ ತಾವೇ ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸುತ್ತಿರುವ ಬಜಪೆ ಕೃಷಿಕರೋರ್ವರ ನಡೆ ಮಾದರಿಯಾಗಿದೆ.
ಬಜಪೆ ಜಿ.ಪಂ. ಸದಸ್ಯೆ, ಸ್ವತಃ ಕೃಷಿಕರಾಗಿರುವ ವಸಂತಿ ಕಿಶೋರ್ ಅವರು ಒಮ್ಮೆ ಬೆಳೆದ ತರಕಾರಿಯನ್ನು ಮಾರಲು ಮಾರುಕಟ್ಟೆಗೆ ತೆಗೆದುಕೊಂಡು ಹೋದಾಗ ಅಲ್ಲಿನ ಮಧ್ಯವರ್ತಿಗಳ ಹಾವಳಿ, ಬೆಂಬಲ ಬೆಲೆ ಸಿಗದಿದ್ದಾಗ ಬೇಸತ್ತು ಇದಕ್ಕೆ ತಾವೇ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ಮುಂದಾದರು. ಆ ದಾರಿಯೇ ಸ್ವತಃ ಬೆಳೆದ ತರಕಾರಿಯನ್ನು ತಾವೇ ಮಾರಾಟ ಮಾಡುವುದಾಗಿತ್ತು. ಇದರಿಂದ ಯಾವುದೇ ದಲ್ಲಾಳಿಗಳ ಕಾಟ ಇರುವುದಿಲ್ಲ ಎಂದು ಯೋಚಿಸಿದರು. ಅದರಂತೆ ಪೆರ್ಮುದೆಯ ತಮ್ಮ ಮನೆ ಎದುರೇ ತರಕಾರಿ ಮಾರಾಟ ಮಾಡಲು ಶುರು ಮಾಡಿದ್ದಾರೆ. ರಾಜ್ಯ ಹೆದ್ದಾರಿ 67 ಮನೆಯ ಸಮೀಪ ಇರುವುದರಿಂದ ಇದು ಅವರಿಗೆ ಸುಲಭವಾಗಿದೆ.
ವಸಂತಿ ಅವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಈ ಬಾರಿ ಸೌತೆ, ಕಲ್ಲಂಗಡಿ, ಬೆಂಡೆ, ಬಸಳೆ, ಮುಳ್ಳುಸೌತೆ, ಅಲಸಂಡೆ, ಸೋರೆಕಾಯಿ, ಹಾಗಲಕಾಯಿ, ಕುಂಬಳಕಾಯಿ ಹೀಗೆ ಬಗೆ ಬಗೆಯ ತರಕಾರಿಗಳನ್ನು ಬೆಳೆದಿದ್ದಾರೆ.
ಸೌತೆಗೆ ಮಾರುಕಟ್ಟೆಯಲ್ಲಿ ಕೆಜಿಗೆ 30 ರೂ. ಇದ್ದರೆ ಕೃಷಿಕರಿಗೆ ಸಿಗುವುದು ಕೇವಲ 15 ರೂ., ಊರಿನ ಬೆಂಡೆಗೆ ಕೆ.ಜಿ.ಗೆ 80 ರೂ. ಸಿಗುವುದು ಕೇವಲ 50 ರೂ., ಊರಿನ ಮುಳ್ಳು ಸೌತೆ ಕೆ.ಜಿ.ಗೆ 70 ರೂ. ಇದ್ದರೆ ಸಿಗುವುದು ಕೇವಲ 40ರೂ., ಅಲಸಂಡೆಗೆ ಕೆ.ಜಿ. ಗೆ 60 ರೂ. ಇದ್ದರೆ ಸಿಗುವುದು 30 ರೂ. ಇದನ್ನು ಮನಗಂಡು ವಸಂತಿಯವರು ಬೆಳೆಸಿದ ತರಕಾರಿ ತಾವೇ ಮಾರಾಟ ಮಾಡಿದರೆ ನಿರೀಕ್ಷಿತ ಲಾಭ ಹಾಗೂ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಊರಿನ ತರಕಾರಿ ಸಿಗಬಹುದು ಎನ್ನುವುದು ಅವರ ಅಭಿಪ್ರಾಯ.
ಮಕ್ಕಳಿಗೆ ರಜೆಯಾದ ಕಾರಣ ವಸಂತಿ ಕಿಶೋರ್ ಅವರ ಮಕ್ಕಳು ಕೂಡ ಅವರಿಗೆ ತರಕಾರಿ ಮಾರಾಟದಲ್ಲಿ ಸಹಕರಿಸುತ್ತಿದ್ದಾರೆ.ವಸಂತಿ ಅವರು ಸುಮಾರು 16 ದನಗಳನ್ನು ಸಾಕುತ್ತಿದ್ದು ಹೈನುಗಾರಿಕೆಯಲ್ಲೂ ತೊಡಗಿಸಿ ಕೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ಪತಿ ಕಿಶೋರ್ ಸಹಕಾರ ನೀಡುತ್ತಿದ್ದಾರೆ.
ಕಲ್ಲಂಗಡಿ, ಬೆಂಡೆಗೆ ಭಾರೀ ಬೇಡಿಕೆ
ಊರಿನ ಕಲ್ಲಂಗಡಿಗೆ ಭಾರೀ ಬೇಡಿಕೆ ಇದೆ. ಕಲ್ಲಂಗಡಿಯನ್ನು ನೋಡಿ ವಾಹನಗಳನ್ನು ನಿಲ್ಲಿಸಿ ಜನ ಕೊಂಡೊÂ ಯುತ್ತಿದ್ದಾರೆ. ಕೆ.ಜಿ. 30ರಂತೆ ಮಾರಾಟ ಮಾಡಲಾಗುತ್ತದೆ. ಇತರ ಕಲ್ಲಂಗಡಿಗೂ ದರ ಕಡಿಮೆ ಇಲ್ಲವಾದ ಕಾರಣ ಇದನ್ನೇ ಜನರು ಹೆಚ್ಚು ಕೊಂಡೊಯ್ಯುತ್ತಿದ್ದಾರೆ.
-ವಸಂತಿ ಕಿಶೋರ್, ಜಿ.ಪಂ. ಸದಸ್ಯೆ, ಕೃಷಿಕರು.