ಹೈದರಾಬಾದ್: ವರ್ಷಾಂತ್ಯದ ಆಸ್ಟ್ರೇಲಿಯ ಪ್ರವಾಸದ ವೇಳೆ ಕ್ವಾರಂಟೈನ್ ಪ್ರಕ್ರಿಯೆ ಇರುವುದರಿಂದ ಭಾರತ 26 ಸದಸ್ಯರ ಜಂಬೋ ತಂಡವನ್ನು ಕಳುಹಿಸುವುದು ಒಳ್ಳೆಯದು ಎಂಬುದಾಗಿ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಎಂ.ಎಸ್.ಕೆ. ಪ್ರಸಾದ್ ಹೇಳಿದ್ದಾರೆ.
ಇದಕ್ಕಾಗಿ ಭಾರತ ಮತ್ತು ಭಾರತ ‘ಎ’ ತಂಡವನ್ನು ಕ್ಲಬ್ ಮಾಡುವುದು ಉತ್ತಮ ಎಂದಿದ್ದಾರೆ.
‘ಆಸ್ಟ್ರೇಲಿಯದಲ್ಲಿ 14 ದಿನಗಳ ಕ್ವಾರಂಟೈನ್ ಮಾಡಬೇಕಾಗುತ್ತದೆ. ಪ್ರವಾಸಿ ತಂಡಗಳು ಮುನ್ನೆಚ್ಚರಿಕೆಯ ಕ್ರಮವನ್ನೂ ತೆಗೆದುಕೊಳ್ಳಬೇಕಾಗುತ್ತದೆ.
ಕೋವಿಡ್ ಕಾಲದಲ್ಲಿ ಆಗಾಗ ವಿದೇಶ ಸಂಚಾರ ಮಾಡಲು ನಿರ್ಬಂಧವಿದೆ. ಹೀಗಾಗಿ ಭಾರತ 26 ಸದಸ್ಯರನ್ನೊಳಗೊಂಡ ಬೃಹತ್ ತಂಡವನ್ನು ಆಸ್ಟ್ರೇಲಿಯಕ್ಕೆ ರವಾನಿಸುವುದು ಒಳ್ಳೆಯದು’ ಎಂದು ಕಳೆದ ಫೆಬ್ರವರಿಯಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಪ್ರಸಾದ್ ಹೇಳಿದರು.
‘ಇದಕ್ಕಾಗಿ ಭಾರತ ಮತ್ತು ‘ಎ’ ತಂಡವನ್ನು ಒಟ್ಟುಗೂಡಿಸುವುದು ಉತ್ತಮ ನಿರ್ಧಾರವಾಗಬಹುದು. ಬಾಗಿಲು ತಟ್ಟುತ್ತಿರುವ ಯುವ ಆಟಗಾರರ ಪ್ರತಿಭೆಯನ್ನೂ ಗಮನಿಸಲು ಸಾಧ್ಯ.
ಉದಾಹರಣೆಗೆ, ಎಡಗೈ ವೇಗಿ ಖಲೀಲ್ ಅಹ್ಮದ್ ತಂಡದಲ್ಲಿದ್ದರೆ ಮಿಚೆಲ್ ಸ್ಟಾರ್ಕ್ ಅವರನ್ನು ಎದುರಿಸಲು ಅಭ್ಯಾಸ ನಡೆಸಬಹುದು. ಇಂಗ್ಲೆಂಡ್ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ಥಾನ ತಂಡಗಳೂ ಹೆಚ್ಚಿನ ಸಂಖ್ಯೆಯ ಆಟಗಾರರನ್ನು ಹೊಂದಿರುವುದನ್ನು ಗಮನಿಸಬಹುದು’ ಎಂದು ಪ್ರಸಾದ್ ಹೇಳಿದರು.