Advertisement

ಐದು ವರ್ಷದಿಂದ ಬಂಧನದಲ್ಲಿದ್ದಚನ್ನಕೇಶವಗೆ ಇಂದು ಪೂಜೆ ಭಾಗ್ಯ!

05:18 PM Jul 09, 2018 | Team Udayavani |

ನಾಯಕನಹಟ್ಟಿ: ಶಾಸಕ ಬಿ. ಶ್ರೀರಾಮುಲು ಗ್ರಾಮ ವಾಸ್ತವ್ಯದ ಪರಿಣಾಮವಾಗಿ ಅರ್ಚಕರ ಕುಟುಂಬಗಳ ನಡುವಿನ ಕಲಹದಿಂದ ಕಳೆದ ಐದು ವರ್ಷಗಳಿಂದ ಬೀಗಹಾಕಲಾಗಿದ್ದ ನಲಗೇತನಹಟ್ಟಿ ಗ್ರಾಮದ ಚನ್ನಕೇಶವ ದೇವಾಲಯದ ಬಾಗಿಲು ಇಂದಿನಿಂದ ಪುನಃ ತೆರೆಯಲಿದೆ.

Advertisement

ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಅವರ ಗ್ರಾಮ ಮಧ್ಯಸ್ತಿಕೆಯಿಂದ ವಿವಾದ ಸದ್ಯಕ್ಕೆ ಬಗೆಹರಿದಿದ್ದು ಜು. 9ರಿಂದ ದೇವಾಲಯದಲ್ಲಿ ಪೂಜಾ ಕಾರ್ಯಗಳು  ನರಾರಂಭಗೊಳ್ಳಲಿದೆ. ಅರ್ಚಕರ ಎರಡು ಕುಟುಂಬಗಳ ಕಲಹದ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ತೀರ್ಪು ಹೊರಬೀಳುವವರೆಗೆ ದೇವಾಲಯದ ಪೂಜಾ ಕಾರ್ಯ ನೆರವೇರಿಸಲು ಅರ್ಚಕರ ಇನ್ನೊಂದು ಕುಟುಂಬದ ಚನ್ನಕೇಶವ ಸ್ವಾಮಿ ಶನಿವಾರ ನಡೆದ ಸಂದಾನ ಸಭೆಯಲ್ಲಿ ಸಮ್ಮತಿ ಸೂಚಿಸಿದ್ದಾರೆ.

ಶಾಸಕ ಶ್ರೀರಾಮುಲು ಜೂನ್‌ 27 ರಂದು ನಲಗೇತನಹಟ್ಟಿಯ ದಲಿತ ಕುಟುಂಬದ ದುರುಗಪ್ಪ, ಮಂಜಮ್ಮನವರ ಗುಡಿಸಲಿನಲ್ಲಿ ವಾಸ್ತವ್ಯ ಹೂಡಿದ್ದರು. ಅಂದು ರಾತ್ರಿ ಚನ್ನಕೇಶವ ದೇವಾಲಯದ ಮುಂದೆ ಗ್ರಾಮಸ್ಥರ ಅಹವಾಲು ಆಲಿಸಿದ್ದರು. 

ಕಳೆದ ಐದು ವರ್ಷದಿಂದ ಗ್ರಾಮದ ಪ್ರಮುಖ ದೇವಾಲಯವಾದ ಚನ್ನಕೇಶವಸ್ವಾಮಿ ದೇವಾಲಯಕ್ಕೆ ಬೀಗ ಹಾಕಲಾಗಿದೆ. ಅರ್ಚಕ ವೃತ್ತಿ ಮುಂದುವರಿಸುವ ಬಗ್ಗೆ ಎರಡು ಕುಟುಂಬಗಳ ನಡುವೆ ಸಮಸ್ಯೆ ಇದೆ. ಹೀಗಾಗಿ ದೇವಾಲಯಕ್ಕೆ ಬೀಗ ಹಾಕಲಾಗಿದ್ದು ಪೂಜೆ ನಡೆಯುತ್ತಿಲ್ಲ. ಈ ಸಮಸ್ಯೆ ಬಗೆಹರಿಸಿಕೊಡುವಂತೆ ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದ್ದರು. 

ಇದಕ್ಕೆ ಸ್ಪಂದಿಸಿದ ಶಾಸಕರು ಅರ್ಚಕರ ಕುಟುಂಬದವರು ಹಾಗೂ ಗ್ರಾಮದ ಪ್ರಮುಖರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದರು. ಅದರ ಫಲವಾಗಿ ದೇವಾಲಯದಲ್ಲಿ ಸೋಮವಾರದಿಂದ ಪೂಜಾ ಕಾರ್ಯ ಆರಂಭವಾಗಲಿದೆ.

Advertisement

 ಏನಿದು ಪ್ರಕರಣ?: ಗ್ರಾಮದಲ್ಲಿ 1980ರಲ್ಲಿ ಚನ್ನಕೇಶವ ಸ್ವಾಮಿ ದೇವಾಲಯ ನಿರ್ಮಾಣಗೊಂಡಿತ್ತು.

ಈ ದೇವಾಲಯದ ಅರ್ಚಕರಾಗಿದ್ದ ಬೋರಯ್ಯ 2013ರಲ್ಲಿ ನಿಧನರಾದರು. ಮೃತ ಬೋರಯ್ಯಗೆ
ಚಿತ್ತಯ್ಯ, ಓಬಯ್ಯ ಹಾಗೂ ಅಜ್ಜಯ್ಯ ಎಂಬ ಮೂವರು ಮಕ್ಕಳಿದ್ದಾರೆ. ಅವರಲ್ಲಿ ಚಿತ್ತಯ್ಯ ಹಾಗೂ ಓಬಯ್ಯನವರ ಮೊಮ್ಮಕ್ಕಳು ಅರ್ಚಕ ವೃತ್ತಿಗಾಗಿ 2013ರಲ್ಲೇ ಚಳ್ಳಕೆರೆ ಸಿವಿಲ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಅಜ್ಜಯ್ಯ ಅವರ ಮೊಮ್ಮಕ್ಕಳು ಈ ವಿವಾದದಿಂದ ಹೊರಗುಳಿದಿದ್ದರು. ಈ ಸಮಸ್ಯೆ ಬಗೆಹರಿಸಲು ಹಲವಾರು ಪ್ರಯತ್ನಗಳು ನಡೆದಿದ್ದವಾದರೂ ಫಲಕಾರಿಯಾಗಿರಲಿಲ್ಲ.

ಚಳ್ಳಕೆರೆ ತಹಶೀಲ್ದಾರ್‌ ಟಿ.ಸಿ. ಕಾಂತರಾಜ್‌, ಉಪ ತಹಶೀಲ್ದಾರ್‌ ಜಗದೀಶ್‌, ಪಿಎಸ್‌ಐ ಮೋಹನ್‌ಕುಮಾರ್‌ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಶನಿವಾರ ಸಂಧಾನ ಸಭೆ ನಡೆಯಿತು. ನ್ಯಾಯಾಲಯದ ಮೆಟ್ಟಿಲೇರಿರುವ ಚಿತ್ತಯ್ಯ ಹಾಗೂ ಓಬಯ್ಯನವರ ಮೊಮ್ಮಕ್ಕಳ ಬದಲಾಗಿ ವಿವಾದದಿಂದ ದೂರವಿರುವ ಅಜ್ಜಯ್ಯನವರ ಮೊಮ್ಮಗ ಚನ್ನಕೇಶವ ಸ್ವಾಮಿ ಅರ್ಚಕ ವೃತ್ತಿ ಮುಂದುವರೆಸಬಹುದು ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ನ್ಯಾಯಾಲಯದ ತೀರ್ಪು ಹೊರಬೀಳುವವರೆಗೆ ಅರ್ಚಕರಾಗಿ ಪೂಜಾ ಕೈಂಕರ್ಯ ಕೈಗೊಳ್ಳಲು ಅಭ್ಯಂತರವಿಲ್ಲ ಎಂದು ಗ್ರಾಮಸ್ಥರು ಸಮ್ಮತಿ ಸೂಚಿಸಿದ್ದಾರೆ.

ಶಾಸಕ ಶ್ರೀರಾಮುಲು ಹಾಗೂ ಅಧಿಕಾರಿಗಳ ಸಂಧಾನ ಕೊನೆಗೂ ಯಶ್ವಸಿಯಾಗಿದೆ. ಇದರಿಂದಾಗಿ ಐದು ವರ್ಷಗಳ ನಂತರ ಚನ್ನಕೇಶವ ದೇವಾಲಯದಲ್ಲಿ ಸೋಮವಾರ ಸಂಜೆ 6 ಗಂಟೆಗೆ ಎಂದಿನಂತೆ ಪೂಜೆ ಆರಂಭವಾಗಲಿದೆ. ಇದಕ್ಕೆ ತಹಶೀಲ್ದಾರ್‌ ಟಿ.ಸಿ. ಕಾಂತರಾಜ್‌, ಗ್ರಾಪಂ ಅಧ್ಯಕ್ಷ ಪಿ.ಎನ್‌. ಮುತ್ತಯ್ಯ ಮತ್ತಿತರ ಗಣ್ಯರು ಸಾಕ್ಷಿಯಾಗಲಿದ್ದಾರೆ.

ನಲಗೇತಹಟ್ಟಿ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ಬೀಗ ಹಾಕಿದ್ದ ವಿಷಯವನ್ನು ಗ್ರಾಮಸ್ಥರು ನನ್ನ ಗಮನಕ್ಕೆ ತಂದರು. ಜನರ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವಂತೆ ತಹಶೀಲ್ದಾರ್‌ಗೆ ಸೂಚಿಸಿದ್ದೆ. ಜತೆಗೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಗ್ರಾಮಸ್ಥರಲ್ಲಿ ಮನವಿಯನ್ನೂ ಮಾಡಿದ್ದೆ. ದೇವಾಲಯಕ್ಕೆ ಬೀಗ ಹಾಕುವ ಪ್ರವೃತ್ತಿ ಸರಿಯಲ್ಲ. ಸಮಸ್ಯೆಗಳಿದ್ದಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ನಲಗೇತಹಟ್ಟಿ ಗ್ರಾಮಸ್ಥರು ನನ್ನ ಹಾಗೂ ತಹಶೀಲ್ದಾರರ ಮಾತುಗಳಿಗೆ ಗೌರವ ನೀಡಿರುವುದು ಸಂತಸ ತಂದಿದೆ. ಜನರು ದೇವರ ವಿಷಯದಲ್ಲಿ ಹೊಂದಾಣಿಕೆ ಮನೋಭಾವ ಹೊಂದಿರಬೇಕು. 
ಬಿ. ಶ್ರೀರಾಮುಲು, ಮೊಳಕಾಲ್ಮೂರು ಶಾಸಕರು.

Advertisement

Udayavani is now on Telegram. Click here to join our channel and stay updated with the latest news.

Next