Advertisement

ಬಂಗಾಳ ದುರ್ಗಾಮಾತೆಯ ಆರಾಧನೆ

12:32 PM Sep 30, 2019 | Suhan S |

ಗದಗ: ನವರಾತ್ರಿ ಅಂಗವಾಗಿ ನಾಡಿನಾದ್ಯಂತ ಜಗನ್ಮಾತೆ ದುರ್ಗಾ ದೇವಿಯನ್ನು 9 ದಿನಗಳ ಕಾಲ ಪೂಜಿಸಲಾಗುತ್ತದೆ. ಆದರೆ, ಗದುಗಿನಲ್ಲಿ ನೆಲೆಸಿರುವ ಪಶ್ಚಿಮ ಬಂಗಾಳ ಮೂಲದ ನಿವಾಸಿಗಳು ಮಾತ್ರ 5 ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಆರಾಧಿಸುತ್ತಾರೆ. ದುರ್ಗೆಯೊಂದಿಗೆ ವಿಘ್ನೇಶ್ವರ, ಸರಸ್ವತಿ, ಲಕ್ಷ್ಮೀದೇವಿಯೊಂದಿಗೆ ಕಾರ್ತಿಕ ಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗುತ್ತದೆ. ಪಶ್ಚಿಮ ಬಂಗಾಳದ ಮಾದರಿಯಲ್ಲೇ ಪೂಜಿಸುವುದು ಇಲ್ಲಿನ ವಿಶೇಷ.

Advertisement

ನವರಾತ್ರಿ ನಿಮಿತ್ತ ಇಲ್ಲಿನ ಸರಾಫ್‌ ಬಜಾರ್‌ನ ಶ್ರೀ ಜಗದಂಬಾ ದೇವಸ್ಥಾನದ ಸಮೀಪ ಪ್ರತಿವರ್ಷದಂತೆ ಈ ಬಾರಿಯೂ ಬೆಂಗಾಲಿ ಸಾರ್ವಜನಿಕ ದುರ್ಗಾ ಪೂಜಾ ಸಮಿತಿಯಿಂದ ಅ. 4ರಂದು ದುರ್ಗೆಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಸಿಂಹದ ಮೇಲೇರಿ ಅಸುರನನ್ನು ಸಂಹರಿಸುವ ದುರ್ಗಾ ದೇವಿಯೊಂದಿಗೆ ಮೂಷಿಕ ಸಹಿತ ಗಣೇಶ, ಗೂಬೆ ಮೇಲೆ ನಿಂತಿರುವ ಲಕ್ಷ್ಮೀದೇವಿ, ವೀಣೆಧಾರಿ ಸರಸ್ವತಿ ಹಾಗೂ ನವಿಲಿನೊಂದಿಗೆ ನಿಂತಿರುವ ಕಾರ್ತಿಕ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಐದು ಅಡಿ ಎತ್ತರದ ದುರ್ಗಾ ದೇವಿ, ಇನ್ನಿತರೆ ದೇವರ 3 ಅಡಿ ಎತ್ತರದ ಮಣ್ಣಿನ ಪ್ರತಿಮೆಗಳು ನೋಡುಗರಲ್ಲಿ ಭಕ್ತಿ, ಭಾವ ಹೆಚ್ಚಿಸುತ್ತವೆ.

ಷಷ್ಠಿಯಿಂದ ವಿಜಯದಶಮಿ (ಅ. 4ರಿಂದ ಅ. 8) ವರೆಗೆ ಐದೂ ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತದೆ. ಪಶ್ಚಿಮ ಬಂಗಾಳದ ಜೀವನದಿ ಗಂಗೆಯಿಂದ ತಂದಿರುವ ನೀರಿನ ಪ್ರೋಕ್ಷಣೆಯಿಂದಲೇ ಪ್ರತಿನಿತ್ಯ ಪೂಜಾ ವಿಧಿ-ವಿಧಿಧಾನಗಳು ಶುಭಾರಂಭಗೊಳ್ಳುತ್ತವೆ. ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ವಿಶೇಷ ಸಿಹಿ ಖಾದ್ಯಗಳೊಂದಿಗೆ ಪೂಜೆ ಸಲ್ಲಿಸಲಾಗುತ್ತದೆ.

ಬಂಗಾಳ ಶೈಲಿಯಲ್ಲೇ ನೈವೇದ್ಯ: ಷಷ್ಠಿಯಂದು ಶಿವನಿಗೆ ಶ್ರೇಷ್ಠವಾದ ಬಿಲ್ವಪತ್ರಿ ಗಿಡಕ್ಕೆ, ಸಪ್ತಮಿಯಂದು ಗಣೇಶನಿಗೆ ಪ್ರಿಯವಾದ ಬಾಳೆ ಗಿಡಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಮೂರನೇ ದಿನವಾದ ಅಷ್ಟಮಿಯಂದು 108 ಕಮಲದ ಹೂವುಗಳಿಂದ ದೇವಿಯನ್ನು ಅಲಂಕರಿಸಿ, ಪಂಚಾರತಿ, 108 ದೀಪೋತ್ಸವ ಸೇವೆಯೊಂದಿಗೆ ರಸಗುಲ್ಲ, ಕೇಜೂರ್‌ ಬತ್ತಾಸ್‌, ಸಂದೇಸ್‌ ಸೇರಿದಂತೆ ಪಶ್ಚಿಮ ಬಂಗಾಳ ಮೂಲದ ಇನ್ನಿತರೆ 8- 10 ಸಿಹಿ ಖಾದ್ಯಗಳನ್ನು ತಯಾರಿಸಿ, ಜಗದನನಿಗೆ ನೈವೇದ್ಯ ಸಮರ್ಪಿಸಲಾಗುತ್ತದೆ. ನವರಾತ್ರಿ ಕೊನೆಯ ದಿನವಾದ ವಿಜಯ ದಶಮಿಯಂದು ಐದೂ ದೇವರುಗಳಿಗೆ ವಿಶೇಷ ನೈವೇದ್ಯ ಅರ್ಪಿಸಿ, ಸಂಜೆ ಅದ್ಧೂರಿ ಮೆರವಣಿಗೆ  ನಡೆಸುವ ಮೂಲಕ ಸಂಪನ್ನಗೊಳಿಸಲಾಗುತ್ತದೆ.

ಆಚರಣೆ ಹಿನ್ನೆಲೆ: ಪಶ್ಚಿಮ ಬಂಗಾಳದಿಂದ ವಲಸೆ ಬಂದು ಗದಗ ನಗರದಲ್ಲಿ ಚಿನ್ನದ ಆಭರಣ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ನೂರಾರು ಕುಟುಂಬಗಳು, ಐದು ದಿನಗಳ ಕಾಲ ದುರ್ಗಾದೇವಿಯನ್ನು ಆರಾಧಿಸುವ ಆಚರಣೆ ಮುಂದುವರಿಸಿವೆ. ಈ ಹಬ್ಬಕ್ಕಾಗಿ ನೆರೆಯ ಹುಬ್ಬಳ್ಳಿ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಚಿನ್ನದ ಆಭರಣ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಸಂಬಂ ಧಿಕರೂ ಗದುಗಿಗೆ ಆಗಮಿಸುತ್ತಾರೆ. ಹೀಗಾಗಿ ಇದು ಬಂಗಾಳ ದುರ್ಗಾಮಾತೆ ಎಂದೂ ಜನಜನಿತವಾಗಿದೆ ಎನ್ನುತ್ತಾರೆ ಸಾರ್ವಜನಿಕ ದುರ್ಗಾಪೂಜಾ ಸಮಿತಿಯ ಪ್ರದೀಪ್‌ ಮಾಜಿ, ಗಣೇಶ್‌ ಸಿಂಗ್‌.

Advertisement

 

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next