ರಾಮನಗರ: ಕಾಂಗ್ರೆಸ್ ಬಹುಮತ ಪಡೆದ ಬೆನ್ನಲ್ಲೇ ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಹರಕೆ ಹೊರುವವರ ಸಂಖ್ಯೆ ಹೆಚ್ಚಾಗಿದೆ. ಅವರ ಜನ್ಮದಿನದಂತೆ ಕೆಲ ಕಾರ್ಯಕರ್ತರು ಡಿ.ಕೆ.ಶಿವಕುಮಾರ್‌ರ ಪರವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸಿಎಂ ಗಾದಿಗಾಗಿ ಪ್ರಾರ್ಥಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಡಿ.ಕೆ.ಶಿವಕುಮಾರ್ ಕಟ್ಟಾ ಬೆಂಬಲಿಗನಾದ ಯುವ ಕಾಂಗ್ರೆಸ್ ಮುಖಂಡ ಪಿ.ಹಳ್ಳಿ ದೊಡ್ಡಿ ಮಲ್ಲೇಶ್ ಧರ್ಮಸ್ಥಳಕ್ಕೆ ತೆರಳಿ ದೇವರ ಮುಂದೆ ಡಿ.ಕೆ.ಶಿವಕುಮಾರ್‌ರ ಭಾವಚಿತ್ರ ಹಿಡಿದು ಮುಖ್ಯಮಂತ್ರಿ ಮಾಡು ಎಂದು ಪೂಜೆ ಸಲ್ಲಿಸಿದ್ದಾರೆ.
ಇನ್ನು ತಾಲೂಕಿನ ಇತಿಹಾಸ ಪ್ರಸಿದ್ಧ ಕೊರಣಗೆರೆ ಗ್ರಾಮದ ಬೆಟ್ಟದಲ್ಲಿನ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸಂಕಲಗೆರೆ ಕಿಟ್ಟಿ ಹಾಗೂ ಭೈರಾಪಟ್ಟಣ ಗ್ರಾಮದ ಸಂತೋಷ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಅವರು ಈ ಬಾರಿ ಸಿಎಂ ಸ್ಥಾನ ಅಲಂಕರಿಸಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಗೆಲುವಿಗೆ ಶ್ರಮ: ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಭಾವಿ ಒಕ್ಕಲಿಗ ಮುಖಂಡರು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಕಾರಣದಿಂದ ಅವರಿಗೆ ಮುಖ್ಯಮಂತ್ರಿ ಗಾದಿ ದೊರೆಯಬೇಕು. ದೇವರು ಅವರಿಗೆ ಅಧಿಕಾರ, ಆರೋಗ್ಯ ಮತ್ತು ಆಯುಷ್ಯ ನೀಡಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆಂದರು.
ಜೆಡಿಎಸ್ ಮುಖಂಡರಿಂದಲೂ ಬ್ಯಾಟಿಂಗ್: ತಾಲೂಕಿನ ಕೆಲ ಜೆಡಿಎಸ್ ಮುಖಂಡರು ಒಕ್ಕಲಿಗ ಸಮುದಾಯದ ನಾಯಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇನ್ನು ಒಕ್ಕಲಿಗ ಸಮುದಾಯಕ್ಕೆ ಸೇರಿದ ಜೆಡಿಎಸ್ ಮುಖಂಡರು ನಮ್ಮ ಸಮುದಾಯದ ನಾಯಕ ಎಂಬ ಕಾರಣಕ್ಕೆ ಡಿ.ಕೆ.ಶಿವಕುಮಾರ್‌ರನ್ನು ಬೆಂಬಲಿಸುತ್ತಿದ್ದೇವೆ ಎಂದು ಪೋಸ್ಟ್ ಅನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಹಾರೋಹಳ್ಳಿ: ಡಿ.ಕೆ.ಶಿವಕುಮಾರ್ ಜನ್ಮದಿನದಂದು ತಾಲೂಕಿನ ಪಿಳ್ಳಿಗೌಡನ ದೊಡ್ಡಿ ಗಾಮದ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಿದರು.