ಉಡುಪಿ: ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಕೃತಕ ಉಸಿರಾಟದ ವ್ಯವಸ್ಥೆ ಮುಂದುವರಿಸಲಾಗಿದೆ.
ಆಮ್ಲಜನಕ, ರಕ್ತದೊತ್ತಡ ಸರಿಯಾಗಿದ್ದು, ಯಾಂತ್ರಿಕ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತಿದೆ. ಅವರನ್ನು ಇನ್ನೂ ತೀವ್ರ ನಿಗಾ ವಿಭಾಗದಲ್ಲಿ ಪರೀಕ್ಷಿಸಬೇಕಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಪೇಜಾವರ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ತೀವ್ರ ನಿಗಾ ಘಟಕದಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ.
ಹಲವೆಡೆ ಪೂಜೆ-ಪುನಸ್ಕಾರ: ಪೇಜಾವರ ಶ್ರೀಗಳು ಗುಣಮುಖರಾಗುವಂತೆ ಹಾರೈಸಿ ಹಲವೆಡೆ ಪೂಜೆ, ಪುನಸ್ಕಾರಗಳು ಮುಂದುವರಿದಿವೆ. ಕಂಚಿ ಕಾಮಕೋಟಿ ಶ್ರೀ ಶಂಕರಾಚಾರ್ಯ ಪೀಠದ ಶ್ರೀ ವಿಜಯೇಂದ್ರ ಶ್ರೀಪಾದರಿಂದ ಕಂಚಿ ಮಠದ ಎಲ್ಲ ಶಾಖೆಗಳಲ್ಲಿ ವಿಶೇಷ ವೇದ ಪಾರಾಯಣ ಸಹಿತ ಪ್ರಾರ್ಥನೆ ನಡೆಯಿತು. ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಂದ ವೇದ ಪಾರಾಯಣ ನಡೆಯಿತು.
ಹುಬ್ಬಳ್ಳಿಯ ಅಖೀಲ ಭಾರತ ಮಾಧ್ವ ಮಹಾಮಂಡಲದ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಂದ ಸಾಮೂಹಿಕ ಪಾರಾಯಣ ಪ್ರಾರ್ಥನೆ ನೆರವೇರಿತು. ಅಮೆರಿಕ ಪ್ರವಾಸದಲ್ಲಿರುವ ಯುವಗಾಯಕ ರಾಯಚೂರು ಶೇಷಗಿರಿದಾಸರು ಅಲ್ಲಿನ ಕಾರ್ಯಕ್ರಮವೊಂದರಲ್ಲಿ ಶ್ರೀಗಳ ಆರೋಗ್ಯ ವೃದ್ಧಿಗಾಗಿ ಧನ್ವಂತರಿ ಸುಳಾದಿ ಗಾಯನವನ್ನು ಶ್ರೋತೃಗಳಿಂದ ಹಾಡಿಸಿ ಪ್ರಾರ್ಥಿಸಿದರು. ಇತರೆಡೆಯೂ ಪೂಜೆ, ಪ್ರಾರ್ಥನೆಗಳು ನಡೆದ ಬಗ್ಗೆ ವರದಿಯಾಗಿದೆ.
ಭೇಟಿ ನೀಡಿದ ಗಣ್ಯರು: ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಕೊಂಡೆವೂರು ಸ್ವಾಮೀಜಿ, ಮಂತ್ರಾಲಯದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದರು, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿದ್ವಾಂಸ ಡಾ| ಬನ್ನಂಜೆ ಗೋವಿಂದಾಚಾರ್ಯ ಸೇರಿ ಹಲವರು ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.
ಭಾಗವತ್‌ರಿಂದ ಫೋನ್: ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಶ್ರೀಗಳ ಆಪ್ತರಿಗೆ ದೂರವಾಣಿ ಕರೆ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ. ಸೋಮವಾರ ಸ್ವಾಮೀಜಿಯವರ ಶಿಷ್ಯೆ ಉಮಾಶ್ರೀಭಾರತಿಯವರು ಭೇಟಿ ಕೊಡುವ ಸಾಧ್ಯತೆ ಇದೆ.