ಹನೂರು: ವಿಷಮಿಶ್ರಿತ ಪ್ರಸಾದ ವಿತರಣೆಯಿಂದಾಗಿ 17 ಜನರ ಸಾವಿನಿಂದಾಗಿ ಮುಚ್ಚಲ್ಪಟ್ಟಿದ್ದ ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯ ಪುನಾರಂಭಕ್ಕೆ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ 4 ದಿನಗಳ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿವೆ.
ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಗೋಪುರ ನಿರ್ಮಾಣ ಸಂಬಂಧ ಉಂಟಾಗಿದ್ದ ಆಡಳಿತ ಮಂಡಳಿಯ ಕಲಹದಿಂದಾಗಿ ಭಕ್ತಾದಿಗಳಿಗೆ ವಿತರಿಸಲು ತಯಾರಿಸಲಾಗಿದ್ದ ಪ್ರಸಾದಕ್ಕೆ 2018ರ ಡಿಸೆಂಬರ್ 14ರಂದು ಕ್ರಿಮಿನಾಶಕವನ್ನು ಮಿಶ್ರಣಗೊಳಿಸಲಾಗಿತ್ತು. ಈ ಪ್ರಸಾದ ಸೇವಿಸಿದ 17 ಭಕ್ತರು ಮೃತಪಟ್ಟು, 120ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು.
ಬಳಿಕ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳನ್ನು ಬಂದ್ ಮಾಡಲಾಗಿತ್ತು.ಬಳಿಕ ದೇವಾಲಯವನ್ನು ಮುಜರಾಯಿ ಇಲಾಖೆ ತನ್ನ ಸುಪರ್ದಿಗೆ ವಹಿಸಲಾಗಿತ್ತು. ಇದೀಗ ದೇವಾಲಯವನ್ನು ಪುನಾರಂಭಿ ಸಲು ಅಕ್ಟೋಬರ್ 20ರಿಂದ ಪೂಜಾ ಕೈಂಕರ್ಯಗಳನ್ನು ಆರಂಭಿಸಲಾಗಿದೆ.
ಪ್ರಾಯಶ್ಚಿತ್ತ ಪೂಜೆ: ಸುಳ್ವಾಡಿ ಗ್ರಾಮದ ಕಿಚ್ಚುಗುತ್ತು ಮಾರಮ್ಮ ದೇವಾಲಯದಲ್ಲಿ ಧಾರ್ಮಿಕ ದತ್ತಿ ಇಲಾಖೆವತಿಯಿಂದ ಪ್ರಾಯಶ್ಚಿತ್ತ ಪೂಜೆ, ಕುಂಭಾಭಿಷೇಕ ಸೇರಿದಂತೆ ಹೋಮ-ಹವನ ಪೂಜಾ ಕೈಂಕರ್ಯಗಳನ್ನು ಆರಂಭಿಸಲಾಗಿದ್ದು 4 ದಿನಗಳ ಕಾಲ ನೆರವೇರಲಿದೆ. ಬಳಿಕ ಶನಿವಾರ 12 ಗಂಟೆಯ ಬಳಿಕ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷ ಪೂಜೆ ಹಿನ್ನೆಲೆ ದೇವಾಲಯಕ್ಕೆ ಬಣ್ಣ ಲೇಪನ ಕಾರ್ಯ ಮುಗಿದಿದ್ದು, ಆಯಾ ಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿದೆ.
ದೇವಾಲಯದ ಕಲ್ಯಾಣಿ ಬಾವಿ, ಅಡುಗೆಕೋಣೆ, ಪ್ರಾಂಗಣವನ್ನು ಶುಚಿಗೊಳಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ23 ಅರ್ಚಕರ ತಂಡ ಪೂಜಾ ಕೈಂಕರ್ಯ ಗಳನ್ನು ನೆರವೇರಿಸಲಿದ್ದಾರೆ.