Advertisement

Worship festival: ಮಂತ್ರಾಲಯದ ಶ್ರೀ ರಾಯರು ಆಶಿಸಿದ್ದಾದರೂ ಏನು?

01:15 AM Aug 21, 2024 | Team Udayavani |

ಶ್ರೀರಾಘವೇಂದ್ರ ಸ್ವಾಮಿಗಳು 1671 ಶ್ರೀವಿರೋಧಿಕೃನ್ನಾಮಸಂವತ್ಸರದ ಶ್ರಾವಣ ಬಹುಳ ಬಿದಿಗೆಯಂದು ಮಂತ್ರಾಲಯದಲ್ಲಿ ವೃಂದಾವನ ಪ್ರವೇಶ ಮಾಡಿದರು. ರಾಯರು ವೃಂದಾವನ ಪ್ರವೇಶಿಸಿ 353 ವರ್ಷಗಳಾಗಿದ್ದು 353ನೆಯ ಆರಾಧನೋತ್ಸವ ನಾಡಿನಾದ್ಯಂತ ಆ. 20ರಿಂದ 22ರ ವರೆಗೆ ನಡೆಯುತ್ತಿದೆ.

Advertisement

ತಮಿಳುನಾಡಿನ ಭುವನಗಿರಿಯಲ್ಲಿ ಜನಿಸಿ ಕರ್ನಾಟಕದ ಗಡಿಭಾಗ ಆಂಧ್ರ ಪ್ರದೇಶದ ಮಂತ್ರಾಲಯದಲ್ಲಿ ವೃಂದಾ ವನ ಪ್ರವೇಶಿಸಿದ ಶ್ರೀರಾಘವೇಂದ್ರ ಸ್ವಾಮಿ ಗಳನ್ನು ರಾಯರು ಎಂದು ಕರೆಯುವುದು ಪ್ರತೀತಿ. ಅವರು ಸತ್ಯ ಮತ್ತು ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಿದವರು ಅನ್ನುವುದು “ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ| ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನವೇ||’ ಎಂಬ ಧ್ಯಾನಶ್ಲೋಕದಲ್ಲಿ ಕಂಡುಬರುತ್ತದೆ. ಸತ್ಯದ ದಾರಿಯೇ ಪರಮೋಚ್ಚ ಧರ್ಮ ಎನ್ನುವುದನ್ನು ವಿವಿಧ ಧಾರ್ಮಿಕ ನೇತಾ ರರು ಪ್ರತಿಪಾದಿಸಿರುವುದೂ ಕಂಡು ಬರುತ್ತದೆ.

ಮನುಕುಲವೇ ದಿಕ್ಕುತಪ್ಪುತ್ತಿರುವ ಈ ಕಾಲಘಟ್ಟದಲ್ಲಿ ಕಾಣುವ ಲೋಕದಿಂದ ನಮಗಾರಿಗೂ ಕಾಣದ ಲೋಕಕ್ಕೆ ತೆರಳುವ ಹೊತ್ತಿನಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳು ಕೊಟ್ಟ ಕೊನೆಯ ಸಂದೇಶವೇ ಸತ್ಯದ ದಾರಿ, ಋತದ ದಾರಿ. ಶ್ರೀ ರಾಯರ ಭಕ್ತ ಕೋಟಿವರ್ಗ ಮನಸ್ಸು ಮಾಡಿದರೆ ಸಮಾಜದ ದಿಕ್ಕನ್ನೇ ಸರಿಪಡಿಸಲು ಸಾಧ್ಯವಿದೆ. ರಾಘವೇಂದ್ರ ಸ್ವಾಮಿಗಳು ತಾವು ವೃಂದಾವನ ಪ್ರವೇಶಿಸುವ ದಿನವನ್ನು ನಿಗದಿಪಡಿಸಿ ಪೂಜೆಗಳೆಲ್ಲವನ್ನೂ ಮಾಡಿ ಅನಂತರ ತಮ್ಮ ನಿರ್ದೇಶನದಂತೆ 6×6 ಅಡಿ ಸುತ್ತಳತೆಯ ವೃಂದಾವನ ಗುಹೆ ಯನ್ನು ಪ್ರವೇಶಿಸಿದರು.

ಆಗ ರಾಯರು ನೀಡಿದ ಸಂದೇಶ ಹೀಗಿದೆ: “ನಾವು ಇನ್ನು ತೆರಳುತ್ತೇವೆ. ನಮ್ಮನ್ನು ನಿಮ್ಮಲ್ಲಿಗೆ ಕಳುಹಿಸಿದ ಭಗ ವಂತನೇ ನಮ್ಮನ್ನು ತನ್ನ ಬಳಿಗೆ ಕರೆದಿದ್ದಾನೆ. ಆತ ನಮಗೆ ಕೊಟ್ಟ ಕೆಲಸ ಮುಗಿದಿದೆ. ಅವರು ಕಳುಹಿಸಿದಾಗ ಬರುವುದು, ಕರೆ ದಾಗ ಹೋಗುವುದು ಎಲ್ಲರಿಗೂ ಕಡ್ಡಾಯ. ನೀವು ಯಾರೂ ದುಃಖೀಸಬೇ ಕಾಗಿಲ್ಲ. ನಾವು ನಿಮ್ಮ ಎದುರು ಇಲ್ಲದಿದ್ದರೂ ನಮ್ಮ ಗ್ರಂಥಗಳು ಇರುತ್ತವೆ. ನಮ್ಮ ಸನ್ನಿಧಾನ ವೃಂದಾವನದಲ್ಲಿರುವುದಕ್ಕಿಂತ ಗ್ರಂಥಗಳಲ್ಲಿಯೇ ಹೆಚ್ಚಾಗಿ ಇರುತ್ತವೆ. ಯಥಾಶಕ್ತಿ ಶಾಸ್ತ್ರ ಶ್ರವಣ, ಅಧ್ಯಯನ, ಸಂರಕ್ಷಣ, ಪ್ರಸರಣಗಳೇ ನಮಗೆ ನೀವು ಸಲ್ಲಿಸಬಹುದಾದ ಶ್ರೇಷ್ಠ ಸೇವೆ.

ಶಾಸ್ತ್ರಗಳ ಸಾರವನ್ನು ತಿಳಿದು ಬದುಕಬೇಕೆಂದೇ ಭಗ ವಂತನು ಇಂತಹ ಅಮೂಲ್ಯ ಜನ್ಮವನ್ನು ಎಲ್ಲರಿಗೂ ದಯಪಾಲಿಸಿದ್ದಾನೆ. ಯಾವುದೇ ಲೋಕಚಿಂತೆಗೂ ಶಾಸ್ತ್ರ ಚಿಂತ ನೆಯೇ ಶಾಶ್ವತ ಪರಿಹಾರ. ತತ್ವ  ಚಿಂತ ನೆಯೇ ಆತ್ಮವಿಕಾಸದ ಏಕೈಕ ಮಾರ್ಗ. ಆದರೆ ಎಂದಿಗೂ ವ್ಯಕ್ತಿದ್ವೇಷ ತರವಲ್ಲ. ಹರಿಗುರುಗಳ ದಯೆಯೊಂದಿಗೆ ಶ್ರದ್ಧೆ, ಪ್ರಯತ್ನ ಹೊಂದಿದ ಜನಕ್ಕೆ ಮಾತ್ರ ತತ್ವ ಜ್ಞಾನ ಮಾರ್ಗ ಕಠಿನವಾದರೂ ದುರ್ಗಮ ವೇನಲ್ಲ. ಶಾಸ್ತ್ರಗಳನ್ನು ಬಿಟ್ಟು ಬರೀ ಪವಾಡಗಳಿಂದಲೇ ತಮ್ಮನ್ನು ಗುರು ಗಳೆಂದೂ, ದೇವರೆಂದೂ ಕರೆದುಕೊಳ್ಳುವ ಜನಗಳಿಂದ ಸದಾ ದೂರ ಇರಬೇಕು. ನಾವೂ ಪವಾಡಗಳನ್ನು ತೋರಿಸಿದ್ದೇವೆ.

Advertisement

ಮಧ್ವಾಚಾರ್ಯರೂ ತೋರಿದ್ದಾರೆ. ಆದರೆ ಇದರ ಹಿಂದೆ ಯೋಗಸಿದ್ಧಿ, ಶಾಸ್ತ್ರದ ತಳಹದಿ ಇದೆ ಎಂಬುದನ್ನು ಮರೆ ಯಕೂಡದು. ಇವುಗಳನ್ನು ತೋರಿಸಿದ್ದು ಭಗವಂತನ ಮಹಿಮೆ ಎಷ್ಟು ದೊಡ್ಡದು, ಅವನ ಅನುಗ್ರಹಕ್ಕೆ ಪಾತ್ರರಾದರೆ ನಮ್ಮ ವ್ಯಕ್ತಿತ್ವಕ್ಕೆ ಎಂತಹ ಸಾಮರ್ಥ್ಯ ಬರುತ್ತದೆ ಎಂದು ತೋರಿಸಲು ಮಾತ್ರ. ಪವಾಡ ಕ್ಕಿಂತಲೂ ಶಾಸ್ತ್ರಜ್ಞಾನ, ತಣ್ತೀಜ್ಞಾನ ಮಿಗಿಲು. ಅದಿಲ್ಲದೆ ಯಾವ ಪವಾಡವೂ ನಡೆಯುವುದಿಲ್ಲ. ಶಾಸ್ತ್ರಜ್ಞಾನ, ತತ್ವ ಜ್ಞಾನವಿಲ್ಲದವರು ತೋರುವ ಪವಾಡ ವಾಮಾಚಾರ. ಜೀವನದಲ್ಲಿ ಇತರರಿಗೆ ಅನ್ಯಾಯವಾಗದಂತೆ, ನೋವಾಗದಂತೆ ಎಚ್ಚರ ವಹಿಸಬೇಕು.

ಸದಾಚಾರವಿಲ್ಲದೆ ಸದ್ವಿಚಾರ ಸಿದ್ಧಿಯಾಗದು. ಹೀಗಾಗಿ ನಮಗೆ ದೇವರು ಒದಗಿಸಿದ ಕರ್ಮಗಳನ್ನು ಫ‌ಲಾಪೇಕ್ಷೆ ಇಲ್ಲದೆ ಕೃಷ್ಣಾರ್ಪಣ ಬುದ್ಧಿಯಿಂದ ಮಾಡಬೇಕು. ಉಪ ವಾಸವ್ರತಾದಿಗಳು ಸದಾಚಾರದ ಇನ್ನೊಂದು ಮುಖ. ಪ್ರತಿಯೊಬ್ಬರೂ ಏಕಾದಶಿ ಮತ್ತು ಕೃಷ್ಣಾಷ್ಟಮೀ ಉಪವಾಸ ವ್ರತಗಳನ್ನು ನಡೆಸಬೇಕು. ಸಜ್ಜನರಿಗೆ ಹಿತವಾಗುವ ಸಮಾಜಸೇವೆಯನ್ನೂ ಸಹ ಭಗವಂತನ ಪೂಜೆ ಎಂದೇ ತಿಳಿಯಬೇಕು. ಒಟ್ಟಾರೆ ನಮ್ಮ ಜೀವನ ಒಂದು ಯಜ್ಞ ವಾಗಬೇಕು.

ನಮ್ಮ ಪ್ರತೀ ಕರ್ಮವೂ ಭಗ ವಂತನ ಪೂಜೆ. ಭಗವಂತನಲ್ಲಿ ಭಕ್ತಿ ಇರ ಬೇಕು. ಅಂತಹ ಭಕ್ತಿ ಮೂಢ ಭಕ್ತಿಯಲ್ಲ. ಮೌಡ್ಯದಿಂದ ಕೂಡಿದ ಭಕ್ತಿ ಮಾತ್ರ ಮೂಢಭಕ್ತಿ. ಭಗವಂತನ ಹಿರಿಮೆಯನ್ನು ಆತ್ಮಪೂರ್ವಕ ಒಪ್ಪಿ ಗೌರವಿಸುವುದು ನಿಜವಾದ ಭಕ್ತಿ. ಉತ್ತಮರಲ್ಲಿ ಭಕ್ತಿ, ಸಮಾ ನರಲ್ಲಿ ಸ್ನೇಹಭಾವ, ಕಿರಿಯರಲ್ಲಿ ವಾತ್ಸಲ್ಯ ಇವು ಜೀವನದ ಶ್ರೇಷ್ಠ ಮೌಲ್ಯಗಳು. ನಿಮ್ಮ ಬಳಿ ಯಾರಾದರೂ ಕಷ್ಟದಲ್ಲಿ ಬಂದರೆ ಬರಿ ಕೈಯಿಂದ ಕಳುಹಿಸಬೇಡಿ. ಅಧ್ಯಾತ್ಮ ಜೀವನದ ಒಳ್ಳೆಯತನವನ್ನು ಬೇಡವೆನ್ನು ವುದಿಲ್ಲ. ಆದರೆ ಎಲ್ಲ ದಕ್ಕೂ ಭಗವಂತನೇ ಕೇಂದ್ರ ಎನ್ನುವುದನ್ನು ಮರೆಯಕೂಡದು. ನಮಗಾಗಿ ಲೋಕವಲ್ಲ, ಲೋಕ, ಲೋಕೇ ಶ್ವರನಿಗಾಗಿ ನಾವು ಎಂಬ ಸಮರ್ಪಣ ಭಾವನೆಯೇ ಅಧ್ಯಾತ್ಮ’.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next