Advertisement

Communal riots: “ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಲ್ಲೆ ಖಂಡನೀಯ’: ಸುಬುಧೇಂದ್ರ ಸ್ವಾಮೀಜಿ

01:11 AM Aug 23, 2024 | Team Udayavani |

ರಾಯಚೂರು: ಯಾವುದೇ ಮತೀಯ ಹಾಗೂ ಸಮುದಾಯಗಳ ಮೇಲೆ ದಾಳಿ ಹಾಗೂ ಹಲ್ಲೆ ನಡೆಯಬಾರದು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದಿರುವ ದಾಳಿ ಖಂಡನೀಯ ಎಂದು ಮಂತ್ರಾಲಯದ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ವಿಷಾದ ವ್ಯಕ್ತಪಡಿಸಿದರು.

Advertisement

ಮಂತ್ರಾಲಯದಲ್ಲಿ ಗುರುವಾರ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಉತ್ತರಾರಾಧನೆ ಮಹೋತ್ಸವ ನಿಮಿತ್ತ ಶ್ರೀ ಪ್ರಹ್ಲಾದರಾಜರ ಮಹಾರಥೋತ್ಸವಕ್ಕೆ ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ದೇಶದಲ್ಲಿ ಶಾಂತಿ ನೆಲೆಸಲಿ. ಮತೀಯ ಗಲಭೆಗಳು ನಿಲ್ಲಲಿ. ಭಕ್ತರ ಕಷ್ಟ ನೀಗಿಸುವ ಶ್ರೀ ಗುರುರಾಯರ ವರ್ಣನೆ ಅಸಾಧ್ಯ. ಗುರುರಾಯರ ಭಕ್ತರು ದೇಶ-ವಿದೇಶಗಳ ಮೂಲೆ-ಮೂಲೆಗಳಿಂದ ಆರಾಧನೆಗೆ ಆಗಮಿಸುತ್ತಾರೆ. ದೇಶ ಸೇರಿದಂತೆ ವಿಶ್ವದಲ್ಲಿ ಶಾಂತಿ-ನೆಮ್ಮದಿ ಲಭಿಸಲಿ ಎಂದು ರಾಯರಲ್ಲಿ ಪ್ರಾರ್ಥಿಸಲಾಗುವುದು ಎಂದರು.

ರಥೋತ್ಸವ ಮೂಲಕ ಎಲ್ಲ ಭಕ್ತರಿಗೆ ದರ್ಶನ ನೀಡಲು ಪ್ರಹ್ಲಾದರಾಜರ ಅವತಾರದಲ್ಲಿ ರಾಯರು ರಥಾರೂಢರಾಗಿ ಮಂತ್ರಾಲಯದ ರಥಬೀದಿಯಲ್ಲಿ ಆಗಮಿಸುವರು. ಇದು ಎಲ್ಲರೂ ಆಚರಿಸುವ ಹಬ್ಬವಾಗಿದೆ. ರಾಯರ ಆರಾಧನಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಠದ ಎಲ್ಲ ಸಿಬಂದಿಯ ನಿರಂತರ ಪರಿಶ್ರಮದಿಂದ ಸಾಧ್ಯ. ಶ್ರೀಮಠದ ಸಿಬಂದಿಗೆ ದಿನದ ಭತ್ತೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಘೋಷಿಸಿದರು.

ಸ್ವರ್ಣ ಕವಚ ಲೋಕಾರ್ಪಣೆ
ಮಹಾರಥೋತ್ಸವಕ್ಕೆ ಹೆಲಿಕಾಪ್ಟರ್‌ ಮೂಲಕ ಶ್ರೀಗಳು ಪುಷ್ಟವೃಷ್ಟಿ ಮಾಡಿದರು. ಬೃಂದಾವನ ಸುತ್ತಲಿನ ಶಿಲಾಮಂಟಪಕ್ಕೆ ಅಳವಡಿಸುತ್ತಿರುವ ಸ್ವರ್ಣ ಕವಚವನ್ನು ಶ್ರೀಮಠದ ಪೀಠಾಧಿ ಪತಿ ಸುಬುಧೇಂದ್ರ ತೀರ್ಥರು ಹಾಗೂ ಮೈಸೂರು ರಾಜ ಮನೆತನದ ಯದುವೀರ ಒಡೆಯರ್‌ ಜಂಟಿಯಾಗಿ ಲೋಕಾರ್ಪಣೆ ಮಾಡಿದರು. ಬಳಿಕ ಪ್ರಹ್ಲಾದರಾಜರ ಗಜವಾಹನೋತ್ಸವದಲ್ಲಿ ಪಾಲ್ಗೊಂಡ ಯದುವೀರ್‌ ಚಾಮರ ಸೇವೆ ಮಾಡಿದರು.

ರಾಘವೇಂದ್ರಾನುಗ್ರಹ ಪ್ರಶಸ್ತಿ
ನಿಜವಾದ ಭಕ್ತಿ ನೋಡಬೇಕಿದ್ದರೆ ಮೈಸೂರು ದಸರಾ ನೋಡಬೇಕು ಎನ್ನುವ ಮಾತಿದೆ. ಮಂತ್ರಾಲಯದ ವೈಭವ ಕಂಡಾಗ ಆ ಮಾತನ್ನು ಸ್ವಲ್ಪ ಬದಲಿಸಿ ಮೈಸೂರು ದಸರಾ ಇಲ್ಲವೇ ರಾಯರ ಆರಾಧನೆ ನೋಡಬೇಕು ಎನ್ನಬೇಕಿದೆ ಎಂದು ಮೈಸೂರು ರಾಜ ಮನೆತನದ ಯದುವೀರ ಒಡೆಯರ್‌ ಬಣ್ಣಿಸಿದರು.

Advertisement

ರಾಯರ 353ನೇ ಆರಾಧನಾ ಮಹೋತ್ಸವ ಪ್ರಯುಕ್ತ ಗುರುವಾರ ನಡೆದ ಉತ್ತಾರಾರಾಧನೆಯಂದು ಶ್ರೀಮಠದಿಂದ ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮಠಕ್ಕೆ ಇದು ನನ್ನ ಮೊದಲ ಭೇಟಿ. ಇಂಥ ಅವಕಾಶ ಸಿಕ್ಕಿರುವುದು ದೊಡ್ಡ ಸೌಭಾಗ್ಯ ಎಂದು ಭಾವಿಸುತ್ತಿದ್ದೇವೆ. ಎಷ್ಟೋ ದಾಳಿಗಳು ನಿರಂತರವಾಗಿ ನಡೆದಾಗ್ಯೂ ನಮ್ಮ ಭಾರತದ ಪರಂಪರೆಗೆ ಕಿಂಚಿತ್ತೂ ಧಕ್ಕೆಯಾಗಿಲ್ಲ. ಇಂಥ ಪರಂಪರೆಯನ್ನು ಇದೇ ರೀತಿ ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next