ಉಡುಪಿ/ಮಂಗಳೂರು: ಕರಾವಳಿಯಾದ್ಯಂತ ಅನಂತನ ಚತುರ್ದಶಿ ವ್ರತವನ್ನು ಮಂಗಳವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಭಾದ್ರಪದ ಶುಕ್ಲ ಪಕ್ಷದ ಚತುರ್ದಶಿಯಂದು ಇದನ್ನು ಆಚರಿಸಲಾಗುತ್ತಿದ್ದು, ಸ್ಥಳೀಯವಾಗಿ ನೋಂಪು ಎಂದು ಕರೆಯುತ್ತಾರೆ. ಇದು ಅತ್ಯಂತ ಪುರಾತನ ವ್ರತವಾಗಿದೆ.
ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣದೇವರಿಗೆ ಅನಂತಾಸನ ಅಲಂಕಾರವನ್ನು ಪುತ್ತಿಗೆ ಮಠದ ಕಿರಿಯ ಶ್ರೀಸುಶ್ರೀಂದ್ರ ತೀರ್ಥ ಶ್ರೀಪಾದರು ನಡೆಸಿದರೆ, ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನಡೆಸಿದರು. ಉಡುಪಿ ಭಂಡಾರಕೇರಿ ಮಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡ ಶ್ರೀವಿದ್ಯೆàಶತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು.
ವಿವಿಧೆಡೆಗಳಲ್ಲಿರುವ ಅನಂತಪದ್ಮನಾಭ, ಅನಂತೇಶ್ವರ, ವೆಂಕಟರಮಣ, ಲಕ್ಷ್ಮೀವೆಂಕಟೇಶ ದೇವಸ್ಥಾನಗಳಲ್ಲಿ ಅನಂತನ ವ್ರತದ ಪೂಜೆ ನಡೆದವು. ಸ್ವಾಮೀಜಿಯವರು ಚಾತುರ್ಮಾಸ್ಯ ವ್ರತ ಕೈಗೊಂಡ ಕಡೆಗಳಲ್ಲಿ ಪೂಜೆ ಸಲ್ಲಿಸಿದರು. ಪೆರ್ಡೂರು, ಹೆಬ್ರಿ, ಉಡುಪಿ ಪಣಿಯಾಡಿ, ತಿರುವನಂತಪುರ, ಮಧೂರು, ಮಂಜೇಶ್ವರ, ಕುಡುಪು ಮೊದಲಾದ ದೇವಸ್ಥಾನಗಳಲ್ಲಿ, ಸಾಂಪ್ರದಾಯಿಕವಾಗಿ ಆಚರಿಸುವ ಮನೆಗಳಲ್ಲಿ ವೈದಿಕರು ಅನಂತನ ವ್ರತದ ಪೂಜೆ ನಡೆಸಿದರು.
ಅನಂತ ವ್ರತ ಪೂಜೆಯನ್ನು ನಡೆಸಿದ ಮರುದಿನ ಬುಧವಾರ ಸ್ವಾಮೀಜಿಯವರು ಚಾತುರ್ಮಾಸ ವ್ರತದ ಸೀಮೋಲ್ಲಂಘನೆ ಮಾಡುವರು.