Advertisement
ಸರ್ಕಾರದ ನೀತಿಗಳು ವರ್ತಮಾನದ ಆಗುಹೋಗುಗಳನ್ನು ಮಾತ್ರ ಆಧರಿಸುತ್ತಿವೆ. ಭವಿಷ್ಯದ ಕಿಂಚಿತ್ ಆಲೋಚನೆಯನ್ನೂ ಮಾಡುತ್ತಿಲ್ಲ ಎಂದು ಆರೋಪಿಸಲು ಮೇಲ್ನೋಟಕ್ಕೇ ಸಾಕಷ್ಟು ದೃಷ್ಟಾಂತಗಳು ಲಭ್ಯವಾಗುತ್ತಿವೆ. ಇತ್ತೀಚೆಗಂತೂ ಸರ್ಕಾರದ ಕರಡು ಕಾಯ್ದೆ, ಕಾನೂನುಗಳನ್ನು ನಿರ್ದಿಷ್ಟ ಹಿತಾಸಕ್ತಿಗಳ ಗುಂಪುಗಳು ವಿರೋಧಿಸುವುದಕ್ಕಿಂತ ಜನಸಾಮಾನ್ಯರು, ಜನಪರ ಸಂಘಟನೆಗಳೇ ವಿರೋಧಿಸುತ್ತಿವೆ ಎಂಬುದರ ಅರ್ಥ ವಿಶ್ಲೇಷಿಸಲು ಹೆಚ್ಚಿನ ಪಾಂಡಿತ್ಯ ಬೇಡ. ಆ ಬಂಡವಾಳ ಶಾಹಿ ಗುಂಪುಗಳಿಗೇ ಸರ್ಕಾರ ಹೇಳುತ್ತಿದೆ, ನಾವಿರುವುದು ನಿಮಗಾಗಿ!
ದೇಶದ ಅರಣ್ಯ ನೀತಿ 1952ರ ವೇಳೆಯಲ್ಲಿಯೇ ರೂಪುಗೊಂಡಿತ್ತು. ಇನ್ನೂ ಹಿಂದೆ ಹೋದರೆ 1894ರಲ್ಲಿಯೇ ಬ್ರಿಟಿಷ್ ಸಾಮ್ರಾಜ್ಯದ ಅರಣ್ಯ ನೀತಿಯೊಂದು ಜಾರಿಯಲ್ಲಿತ್ತು. 1988ರಲ್ಲಿ ಹೊಸದಾದ ಅರಣ್ಯ ನೀತಿ ಹಳೆಯ ನೀತಿಯ ಅಂಶಗಳನ್ನು ಬದಿಗಿಟ್ಟು ಜಾರಿಗೆ ಬಂದಿತು. ಒಂದರ್ಥದಲ್ಲಿ ಈ ನೀತಿ ಹೆಚ್ಚು ಹಸಿರುವಾಸಿಯಾಗಿತ್ತು. ಅಂಕಿಅಂಶಗಳನ್ನೇ ನಂಬುವುದಾದರೆ, ಅರಣ್ಯ ಸ್ಥಿತಿಗತಿ ವರದಿಯಲ್ಲಿ 2015ರಿಂದ ಅರಣ್ಯ ಪ್ರಮಾಣದಲ್ಲಿ ಶೇ. 0.21ರ ವೃದ್ಧಿ ಕಂಡಿದೆ ಎಂದು ಹೇಳಲಾಗಿದೆ. ದೇಶದ 32,87,569 ಚದರ ಕಿ.ಮೀ ಪ್ರದೇಶದಲ್ಲಿ 7,08,273 ಚದರ ಕಿ.ಮೀ ಕಾಡು ಕಾಣಿಸುತ್ತದೆ ಎಂದು ಅದು ಹೇಳಿದೆ. 1989ರಲ್ಲಿ ದೇಶದಲ್ಲಿ ಶೇ. 19.47ರಷ್ಟಿದ್ದ ಕಾಡು ಶೇ. 33ಕ್ಕೆ ಬರಬೇಕು ಎಂಬುದು ಅವತ್ತಿನ ಜನಪ್ರತಿನಿಧಿಗಳ ಆಶಯವಾಗಿತ್ತು!
Related Articles
Advertisement
ಸರ್ಕಾರದ ಮಾಹಿತಿಯ ಪ್ರಕಾರ, ಕಳೆದ 30 ವರ್ಷಗಳಲ್ಲಿ 14 ಸಾವಿರ ಚದರ ಕಿ.ಮೀ ಕಾಡಿಗೆ ಮಂಗಳ ಹಾಡಿ 23,716 ಉದ್ಯಮಗಳನ್ನು ಆಹ್ವಾನಿಸಲಾಗಿದೆ. ಪ್ರಸ್ತುತ 134.4 ಕೋಟಿ ಜನಸಂಖ್ಯೆಯ ದೇಶದಲ್ಲಿ 2025ರ ವೇಳೆಗೆ ಜನಸಂಖ್ಯೆ 145 ಕೋಟಿಗೆ ಏರಬಹುದು. ಅಷ್ಟೇ ಅಲ್ಲ, ಇದೇ ರೀತಿ ಮುಂದುವರಿದರೆ 2050ರ ಸಮಯದಲ್ಲಿ ಬರೋಬ್ಬರಿ 166 ಕೋಟಿ ಜನಸಂಖ್ಯೆ ನಮ್ಮದಾಗಬಹುದು ಎಂದು ಅಂದಾಜಿಸಲಾಗಿದೆ. ಜನಸಂಖ್ಯೆಯ ವೃದ್ಧಿ ಆಗುವ ವೇಗಕ್ಕೆ ಅನುಸಾರವಾಗಿ ಎರಡು ಪಟ್ಟು ಕಾಡು ನಾಶವಾಗುವುದು ಬಹುತೇಕ ಖರೆ.
ಅರಣ್ಯವೂ ದುಡಿಮೆಯ ಬಾಬ್ತು!ಕರಡು ಅರಣ್ಯ ನೀತಿ ಕೂಡ ವಾಣಿಜ್ಯೀಕೃತವಾದ ಸರ್ಕಾರದ ನಿಲುವುಗಳನ್ನು ಪದೇ ಪದೇ ದೃಢಪಡಿಸುತ್ತದೆ. ಅರಣ್ಯದ ಮರ ಸಂಪತ್ತಿನಿಂದ ಯಾವ ರಾಜ್ಯಗಳೂ ಈ ಸಂದರ್ಭದಲ್ಲಿ ಹೆಚ್ಚಿನ ಆದಾಯವನ್ನು ಪಡೆಯುತ್ತಿಲ್ಲ. ಈ ಮೂಲದಿಂದ ಹೆಚ್ಚು ಆದಾಯವನ್ನು ಪಡೆಯುವಂತೆ ಯೋಜನೆಗಳನ್ನು ರೂಪಿಸಬೇಕು ಎಂದು ಈ ಅರಣ್ಯ ನೀತಿ ಒಂದೆಡೆ ಹೇಳುತ್ತದೆ. ಈ ಹತ್ತು ಪುಟಗಳ ಕರಡು ಅರಣ್ಯಾಧಾರಿತ ಉದ್ಯಮ ಬೆಳವಣಿಗೆಗೆ ಒತ್ತು ನೀಡುತ್ತದೆ. ಇದರಿಂದ ಹಸಿರು ಉದ್ಯೋಗಗಳು ಜಾಸ್ತಿಯಾಗುತ್ತವೆ ಎಂಬ ಪದ ವಿಜೃಂಭಣೆಯನ್ನೂ ನಾವು ಕಾಣಬಹುದು. ಇದೇ ವೇಳೆ ಕಾಡು ಉದ್ಯಮ ಎಂಬ ವ್ಯಾಖ್ಯೆಯನ್ನೂ ಮಾಡಿ ಉದ್ಯಮಕ್ಕಾಗಿಯೇ ಪ್ಲಾಂಟೇಷನ್‌ಗಳನ್ನು ಮಾಡುವುದಕ್ಕೆ ಅರಣ್ಯ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ದುಃಸ್ಥಿತಿಯಲ್ಲಿರುವ ಕಾಡನ್ನು ವಿವರಿಸುವುದು ಕಷ್ಟ. ಶೇ. 100ರಷ್ಟು ಮೇಲ್ಭಾಗ ಆವರಿಸಿರುವುದನ್ನು ಕಾಡು ಎಂಬುದನ್ನು ಕಾಡು ಎಂಬುದು, ಶೇ. 40ರಷ್ಟಿದ್ದರೆ ಅದು ನಿರ್ನಾಮ ಹಂತದಲ್ಲಿರುವ ವನ ಎಂದು ವಿಶ್ಲೇಷಿಸುವುದು ತಪ್ಪಾಗುತ್ತದೆ. ಕಳೆದ ಎರಡು ದಶಕಗಳಲ್ಲಿ ನಾಶವಾಗುತ್ತಿರುವ ಕಾಡುಗಳಿಗೆ ವಿಲನ್ ಕೇವಲ ಮನುಷ್ಯನೇ ವಿನಃ ಪ್ರಕೃತಿಯಲ್ಲ. ಹೆಚ್ಚಿನ ಸಂದರ್ಭದಲ್ಲಿ ಮಾನವನೇ ವಿನಃ ನೈಸರ್ಗಿಕ ಕಾರಣದಿಂದ ಕಾಡು ನಾಶವಾಗಿಲ್ಲ. ಆದರೆ ಇದೇ ವೇಳೆ ಕಾಡಿನ ಪುನರುಜ್ಜೀವನಕ್ಕೆ ಖಾಸಗಿಯವರ ಸಹಭಾಗಿತ್ವ ಪಡೆಯಬಹುದು ಎಂಬುದು ಸರ್ಕಾರದ ದೂರಗಾಮಿ ಯೋಚನೆಗಿಂತ ದುರಾಲೋಚನೆಯಂತೆ ಕಾಣುತ್ತದೆ. ನಿಜಕ್ಕಾದರೆ ಒಂದು ಕಾಡು, ಸಂಪೂರ್ಣ ಸುರಕ್ಷೆಗೆ ಒಪ್ಪಿಸಿಬಿಟ್ಟರೆ ಕೇವಲ ಎರಡು ವರ್ಷಗಳಲ್ಲಿ ಹೊಸ ಚೈತನ್ಯ ಪಡೆದು ಮತ್ತೆ ಪುನರುಜ್ಜೀವನಗೊಳ್ಳುತ್ತದೆ. ಅರಣ್ಯ ಪ್ರದೇಶ ಹೆಚ್ಚುತ್ತಿದೆ ಎಂಬ ಮಾತು ಪದೇ ಪದೆ ಕೇಳಿಬರುತ್ತಿದೆ. ಸ್ಯಾಟಲೈಟ್ ಆಧಾರಿತವಾಗಿ ಕಾಡನ್ನು ಅಂದಾಜಿಸಲು ಹೊರಟ ಸಂದರ್ಭಗಳಲ್ಲಂತೂ ಕಾಡಿನ ಪ್ರಮಾಣದ ಲೆಕ್ಕ ಹಳಿತಪ್ಪಿದ್ದೇ ಜಾಸ್ತಿ. ಅಡಿಕೆ, ತೆಂಗು, ಅಕೇಶಿಯಾ, ನೀಲಗಿರಿಯ ನೆಡುತೋಪುಗಳನ್ನು ಕೂಡ ಈ ತಂತ್ರಜಾnನ ಕಾಡು ಎಂತಲೇ ಪರಿಗಣಿಸುತ್ತದೆ. ಪ್ರಶ್ನೆ ಬರೀ ಕಾಡಿನ ಪ್ರಮಾಣದಲ್ಲಷ್ಟೇ ಇಲ್ಲ, ಕಾಡಿನ ದಟ್ಟತೆ ಬಗ್ಗೆ ರಾಜಧಾನಿಯಲ್ಲಿ ಕುಳಿತು ಅಂಕಿಅಂಶ ಬರೆದುಕೊಳ್ಳುವವನಿಗೆ ಅರ್ಥವಾಗುವುದಿಲ್ಲ. ಇಂದು ಸಂರಕ್ಷಿತ ಅರಣ್ಯಗಳಲ್ಲೂ ಕೂಡ ಹೊರಭಾಗದಿಂದ ದಟ್ಟವಾಗಿ ಕಾಣುವ ಮರಗಳ ಸಂಖ್ಯೆ ನಡುವಿನಲ್ಲಿ ಕ್ಷೀಣಿಸಿರುತ್ತದೆ. ಕ್ಯಾನೋಪಿ ವಿಶ್ಲೇಶಿಸುವಾಗಲೂ ಈ ಕಾಡನ್ನು ದಟ್ಟ ಕಾನನ ಎಂದೇ ಪರಿಗಣಿಸಲಾಗುತ್ತದೆ. ವಾಸ್ತವದಲ್ಲಿ ಅರಣ್ಯ ದೊಡ್ಡ ಪ್ರಮಾಣದಲ್ಲಿ ವಿನಾಶವಾಗಿದೆ. ಮಲೆನಾಡು ಭಾಗದಲ್ಲಂತೂ ಇದರ ಶೇಕಡಾವಾರು ಇನ್ನಷ್ಟು ಹೆಚ್ಚು, ಥ್ಯಾಂಕ್ಸ್ ಟು ಪೊಲಿಟಿಷಿಯನ್ ಅಂಡ್ ಬಗರ್‌ಹುಕುಂ ಕಾಯ್ದೆ! ಅರಣ್ಯ ನೀತಿ ಅತ್ಲಾಗಿರಲಿ, ಜಾರಿ?
ಔಷಧ ಮಾತ್ರೆಗಳು ಸಿಹಿ ಲೇಪಿತವಾಗಿರುತ್ತವೆ. ಸರ್ಕಾರವೊಂದು ಹೊಸದಾದ ನೀತಿಯನ್ನು ಹೇಳುವಾಗ ಅದು ಬಾಹ್ಯವಾಗಿ ಸಿಹಿಲೇಪಿತವೇ ಆಗಿರುತ್ತದೆ. ಒಂದು ನೀತಿಯನ್ನು ಹೇಳುವುದು ಬೇರೆ, ಜಾರಿಗೊಳಿಸುವುದು ಭಿನ್ನ. ಕರಡು ಅರಣ್ಯ ನೀತಿಯಲ್ಲೂ ಮೇಲ್ನೋಟಕ್ಕೆ ಗಮನ ಸೆಳೆಯುವ ಹತ್ತಾರು ಒಳ್ಳೆಯ ಅಂಶಗಳನ್ನು ಹೆಕ್ಕಿ ತೆಗೆಯಬಹುದು. ಅಹುದಹುದು ಎನ್ನಲು ಬಯಸದವರಿಗೆ ಬೇಕಾದ ಅಡ್ಡ ಅಂಶಗಳು ಕೂಡ ಇಲ್ಲಿ ದಂಢಿಯಾಗಿ ಸಿಗುತ್ತವೆ. ಒಂದು ನೀತಿ, ಅದು ಅರಣ್ಯ ಸಂಬಂಧಿಸಿದ್ದೇ ಆಗಿರಲಿ ಅಥವಾ ಮತ್ತಾವುದೇ ಆಗಿರಲಿ, ಅದರ ಜಾರಿಯಲ್ಲಿ ಸರ್ಕಾರ ತೋರುವ ಬದ್ಧತೆ ಮೇಲೆ ಅದರ ಪರಿಣಾಮ ನಿಗದಿಯಾಗುತ್ತದೆ. ಅರಣ್ಯ ನೀತಿಯ ವಿಚಾರದಲ್ಲೂ ನಮ್ಮ ನಾಡಿನ ಕಾಡಿನ ಸಂರಕ್ಷಣೆ ಮಾಡಿಕೊಳ್ಳುವುದೇ ಪ್ರಪ್ರಥಮ ಆದ್ಯತೆ ಎಂಬುದು ಕಾಣುವುದಿಲ್ಲ. ಆರ್ಥಿಕ ತಜ್ಞರಲ್ಲಿ ಅಭಿವೃದ್ಧಿಯ ಮಾನದಂಡ ಜಿಡಿಪಿ ಎಂಬ ಕಲ್ಪನೆ ಹಾಸುಹೊಕ್ಕಾಗಿದೆ. ಒಂದು ಎಕರೆ ಜಾಗದಲ್ಲಿರುವ ಮರಗಳ ಸಂಖ್ಯೆ ಎಷ್ಟು, ಅದನ್ನು ಟಿಂಬರ್ ಆಗಿ ಮಾರಾಟ ಮಾಡಿದರೆ ಸಿಗುವ ಆದಾಯವೆಷ್ಟು ಎಂಬುದರ ಆಧಾರದ ಮೇಲೆಯೇ ಮೌಲ್ಯಗಿಟ್ಟುತ್ತದೆ. ಒಂದು ವರ್ಷ ಮರ ಮಾರಾಟದಿಂದಲೇ ಅತ್ಯಧಿಕ ಆದಾಯ ಬಂದರೆ ಆ ದೇಶದ ಜಿಡಿಪಿ ಸರಕ್ಕೆಂದು ಏರಬಹುದು. ಆದರೆ ಅರಣ್ಯ ವಿನಾಶದಿಂದಾಗುವ ದೂರಗಾಮಿ ಪರಿಣಾಮ, ಇತರ ಆದಾಯ ಮೂಲಗಳನ್ನು ಪ್ರಭಾವಿಸುವ ಅಂಶಗಳತ್ತ ಈ ಜಿಡಿಪಿ ಮಾನದಂಡ ಮೌನವಾಗುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಕಾಡೇ ಇಲ್ಲದಿದ್ದರೆ ವಯಸ್ಸಾದವರನ್ನು ಕಾಡು ಕರೆಯುತ್ತಿದೆ ಎಂದು ಹೇಳುವುದು ಸುಳ್ಳಾಗಿಯೂ ಬಿಡಬಹುದು! -ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ