ಕೊಳ್ಳೇಗಾಲ: ತಾಲೂಕಿನ ಕಟ್ಟಡ ಕಾರ್ಮಿಕರಿಗೆ ಹುಳುಗಳು ಇರುವ ಹಾಗೂ ಅವಧಿ ಮೀರಿದ ಆಹಾರದ ಕಿಟ್ ವಿತರಿಸಲಾಗಿದೆ. ಕೋವಿಡ್ ಹಿನ್ನೆಲೆ ಕೆಲಸವಿಲ್ಲದ ಕಾರಣ ಕಟ್ಟಡ ಕಾರ್ಮಿಕರಿಗೆ ಕೊಳ್ಳೇಗಾಲ ತಾಲೂಕಿಗೆ 5 ಸಾವಿರ ಆಹಾರ ಕಿಟ್ ಮಂಜೂರಾಗಿತ್ತು. ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಕಿಟ್‌ಗಳನ್ನು ವಿತರಿಸರಲಿಲ್ಲ.
ಮಂಗಳವಾರ ಪಟ್ಟಣದ ಆರ್ ಎಂಸಿ ಆವರಣದ ಉಗ್ರಾಣದಲ್ಲಿ ಅಕ್ಕಿ, ಬೇಳೆ, ಗೋದಿಗಳಿರುವ ಆಹಾರದ ಕಿಟ್ ವಿತರಿಸಲಾಗಿದೆ. ಆದರೆ, ಆಹಾರದಲ್ಲಿ ಹುಳುಗಳು ಕಂಡು ಬರುತ್ತಿವೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿದ ಸಮಯದಲ್ಲಿ ಅಕ್ಕಿ, ಬೇಳೆ, ಗೋಧಿ ಪ್ಯಾಕೆಟ್‌ನಲ್ಲಿ ಹುಳುಗಳು ಇರುವುದು ಕಂಡುಬಂದಿದೆ. ಜೊತೆಗೆ ಅವಧಿ ಮೀರಿದ ಗೋಧಿಯನ್ನು ಸಹ ವಿತರಿಸಿರುವುದು ದೃಢಪಟ್ಟಿದೆ. ಈ ಕಿಟ್‌ಗಳ ಬದಲು ಬೇರೆ ಆಹಾರ ಪದಾರ್ಥಗಳನ್ನು ನೀಡಿ ಎಂದು ಒತ್ತಾಯಿಸಿದಾಗ, “ಇದು ಉಚಿತವಾಗಿ ನೀಡುವುದು, ಬೇಕಾದರೆ ತೆಗೆದುಕೊಂಡು ಹೋಗಿ. ಇಲ್ಲವಾದರೆ ದಾರಿಯಲ್ಲಿಯೇ ಬಿಸಾಡಿ ಹೋಗಿ’ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ ಎಂದು ಕಾರ್ಮಿಕರು ದೂರಿದ್ದಾರೆ.
ಇದನ್ನೂ ಓದಿ:
ಪೊಲಿಟಿಕಲ್ ಡ್ರಾಮಾಕ್ಕೆ ಕ್ರೇಜಿಸ್ಟಾರ್ ನಿರ್ದೇಶನ
ತಾಲೂಕಿನಲ್ಲಿ 9,542 ಮಂದಿ ಕಟ್ಟಡ ಕಾರ್ಮಿಕರಿದ್ದು, ಎಲ್ಲರಿಗೂ ಆಹಾರ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಪ್ರತಿ ಆಹಾರ ಕಿಟ್‌ನಲ್ಲಿ 3 ಕೆ.ಜಿ. ಅಕ್ಕಿ, ಬೇಳೆ, ಸಕ್ಕರೆ, ಸೋಪು, ಗೋದಿ ಹಿಟ್ಟು, ಎಣ್ಣೆ, ಉಪ್ಪು ಇರುತ್ತದೆ. ತಾಲೂಕಿನಲ್ಲಿ 4210 ನೋಂದಾಯಿತಿ ಸದಸ್ಯರಿಗೆ ಕಾರ್ಮಿಕ ಇಲಾಖೆ ವತಿಯಿಂದ ತಲಾ 5 ಸಾವಿರ ರೂ.ನಗದನ್ನು ಖಾತೆಗಳಿಗೆ ಸಂದಾಯ ಮಾಡಲಾಗಿದೆ.
ಅಕ್ಟೋಬರ್ ತಿಂಗಳಿನಲ್ಲಿ ಆಹಾರ ಕಿಟ್ ಸರಬರಾಜು ಮಾಡಲಾಗಿದೆ. ಅಕ್ಕಿ, ಬೇಳೆ ಯಲ್ಲಿ ಒಂದರೆಡೆ ಹುಳು ಕಂಡು ಬಂದಿದೆ. ಇದನ್ನು ಬಿಸಲಿನಲ್ಲಿ ಒಣಗಿಸಿದರೆ ಹುಳುಗಳು ಸತ್ತು ಹೋಗುತ್ತವೆ. ಅವಧಿ ಮೀರಿದ ಗೋಧಿಯನ್ನು ಹಿಂಪಡೆಯುತ್ತೇವೆ. ಇದರ ಬಗ್ಗೆ ಈಗಾಗಲೇ ಇಲಾಖೆ ಆಯುಕ್ತರಿಗೆ ಮಾಹಿತಿ ನೀಡಲಾಗಿದೆ.
ಚಂದ್ರು, ಕಾರ್ಮಿಕ ಅಧಿಕಾರಿ