Advertisement

Worm infestation: ಭತ್ತದ ಬೆಳೆಗೆ ಮಾರಕ ಎಲೆ ಸುರುಳಿ, ಕೊಳವೆ ಹುಳು ಬಾಧೆ

09:42 AM Sep 22, 2023 | Team Udayavani |

ಕೋಟ: ಕರಾವಳಿಯಾದ್ಯಂತ ಭತ್ತದ ಬೆಳೆಯಲ್ಲಿ ಎಲೆ ಸುರುಳಿ, ಕೊಳವೆ ಹುಳು ಬಾಧೆ ವ್ಯಾಪಿಸುತ್ತಿದ್ದು ಕೀಟಬಾಧೆಗೆ ಒಳಗಾದ ಭತ್ತದ ಗದ್ದೆ ಸಂಪೂರ್ಣ ನಾಶವಾಗುತ್ತಿದೆ. ಮಳೆ ತಡವಾಗಿ ಆರಂಭವಾಗಿರುವುದು ಹಾಗೂ ಕಡಿಮೆ ಪ್ರಮಾಣದಲ್ಲಿರುವುದು ಇದಕ್ಕೆ ಪ್ರಮುಖ ಕಾರಣ.

Advertisement

ಎಲೆ ಸುರುಳಿ ಕೀಟಗಳು ಆರಂಭದಲ್ಲಿ ಭತ್ತದ ಎಲೆಗಳ ಮೇಲೆ ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಯಿಂದ ಹೊರಬಂದ ಮರಿಹುಳಗಳು ತಿಳಿ ಹಸುರು ಬಣ್ಣದ್ದಾಗಿದ್ದು, ಅವುಗಳು ಎಲೆಗಳ ಅಂಚನ್ನು ಒಳಭಾಗಕ್ಕೆ ಸುರುಳಿ ಮಾಡಿಕೊಂಡು ಹಸುರು ಭಾಗ ಅಥವಾ ಪತ್ರಹರಿತ್ತನ್ನು ತಿನ್ನುತ್ತವೆ. ಇದರಿಂದ ಎಲೆಯ ಮೇಲೆ ಬಿಳಿ ಬಣ್ಣದ ಉದ್ದನೆಯ ಪಟ್ಟಿಗಳು ಕಾಣಿಸಿಕೊಳ್ಳುತ್ತವೆ. ಕ್ರಮೇಣ ಎಲೆ ಒಣಗುತ್ತದೆ ಹಾಗೂ ಗಿಡದಿಂದ ಗಿಡಕ್ಕೆ ಹರಡಿ ಸಂಪೂರ್ಣ ಜಮೀನು ಬೂದು ಬಣ್ಣಕ್ಕೆ ತಿರುಗುತ್ತದೆ. ಹೇರಳ ಪ್ರಮಾಣದಲ್ಲಿ ಮಳೆಯಾದರೆ ಹುಳುಗಳು ಸಾವನ್ನಪ್ಪುತ್ತವೆ. ಆದರೆ ಮಳೆ ಕಡಿಮೆ ಇರುವುದು ಬೆಳವಣಿಗೆಗೆ ಪೂರಕವಾಗಿದೆ.

ಕರಾವಳಿಯಲ್ಲಿ ವ್ಯಾಪಕ

ಈ ಕೀಟ ಲಕ್ಷಣ ಆರಂಭದಲ್ಲಿ ಕಾಪು, ಕಾರ್ಕಳದಲ್ಲಿ ಕಾಣಿಸಿಕೊಂಡಿತ್ತು. ಪ್ರಸ್ತುತ ಬ್ರಹ್ಮಾವರ ತಾಲೂಕಿನ ಕೋಟ, ಪಾರಂಪಳ್ಳಿ, ಬ್ರಹ್ಮಾವರ ತಾಲೂಕಿನ ವಿವಿಧೆಡೆ, ಬೈಂದೂರು ಪರಿಸರಕ್ಕೂ ವ್ಯಾಪಿಸುತ್ತಿದೆ. ಕೋಟ, ಪಾರಂಪಳ್ಳಿಯ ಕೆಲವು ಗದ್ದೆಗಳು ಸಂಪೂರ್ಣ ನಾಶವಾಗಿವೆ. ದ.ಕ. ಜಿಲ್ಲೆಯಲ್ಲೂ ಈ ಸಮಸ್ಯೆಯಿದೆ. ಇದರ ಲಕ್ಷಣವನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ ಸಮಗ್ರ ಹತೋಟಿ ಕ್ರಮ ಕೈಗೊಂಡರೆ ಉತ್ತಮ ಎಂದು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.

ಹತೋಟಿ ಹೇಗೆ?

Advertisement

ಹುರಿಹಗ್ಗವನ್ನು ರೋಗ ಬಾಧಿ ತ ಭತ್ತದ ಬೆಳೆಯ ಮೇಲೆ ಎಳೆಯುತ್ತ ಹುಳುಗಳ ಮರಿಗಳನ್ನು ನೀರಿಗೆ ಬೀಳಿಸಿ ನಾಶ ಮಾಡಬೇಕು. ಗದ್ದೆಯಲ್ಲಿ ತುಂಬಿರುವ ನೀರಿಗೆ ಸೀಮೆ ಎಣ್ಣೆ (1 ಹೆಕ್ಟೇರ್‌ಗೆ 1 ಲೀ.) ಬೆರೆಸಿದರೆ ಬಿದ್ದ ಮರಿ ಹುಳುಗಳು ಬೇಗ ಸಾಯುತ್ತವೆ. ಬೇವಿನ ಎಣ್ಣೆ (ಅಜಾಡಿರೆಕ್ಟಿನ್‌ 10000 ಪಿಪಿಎಂ)ಯನ್ನು ಪ್ರತೀ ಲೀಟರ್‌ ನೀರಿಗೆ 3 ಎಂಎಲ್‌ನಂತೆ ಬೆರೆಸಿ ಗರಿಗಳ ಮೇಲೆ ಸಿಂಪಡಿಸುವುದು ಅಥವಾ ಕ್ಲೋರೋಫೈರಿಫಾಸ್‌ 20 ಇ.ಸಿ.ಯನ್ನು ಪ್ರತೀ ಲೀಟರ್‌ ನೀರಿಗೆ 2 ಎಂಎಲ್‌ನಂತೆ ಬೆರೆಸಿ ಗರಿಗಳ ಮೇಲೆ ಸಿಂಪಡಿಸುವುದರಿಂದ ಹುಳುಗಳ ಹತೋಟಿ ಸಾಧ್ಯ. ರೋಗ ಲಕ್ಷಣ ಇಲ್ಲದಿರುವ ಗದ್ದೆಗಳಿಗೂ ಮುಂಜಾಗರೂಕತಾ ಕ್ರಮವಾಗಿ ಔಷಧ ಸಿಂಪಡಿಸುವುದು ಉತ್ತಮ ಎಂದು ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ. ­

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next