ಸಾಗರ: ಯುವಕನೊಬ್ಬನ ಕಣ್ಣಿನಲ್ಲಿ ಇದ್ದ 3 ಸೆಂಟಿಮೀಟರ್ ಉದ್ದದ ಜೀವಂತ ಹುಳವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ಘಟನೆ ಸಾಗರ ಉಪವಿಭಾಗಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.
ತಾಲೂಕಿನ ಮಂಡಗಳಲೆ ಗ್ರಾಮದ 19 ವರ್ಷದ ಯುವಕ ಕಣ್ಣು ನೋವಿನಿಂದ ಬಳಲುತ್ತಿದ್ದ. ಶುಕ್ರವಾರ ಸಾಗರ ಉಪ ವಿಭಾಗ ಆಸ್ಪತ್ರೆಗೆ ಬಂದಾಗ ಯುವಕನ ಕಣ್ಣಿನ ಅಕ್ಷಿ ಪಟಲದಲ್ಲಿ ಸುತ್ತುತ್ತಿದ್ದ ಹುಳವನ್ನು ಆಸ್ಪತ್ರೆಯ ನೇತ್ರ ತಜ್ಞ ಡಾ. ಪ್ರಮೋದ್‌ಕುಮಾರ್ ಗಮನಿಸಿದ್ದಾರೆ. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪರಪ್ಪ ಅವರ ಅನುಮತಿ ಹಾಗೂ ಹಿರಿಯ ವೈದ್ಯರ ಸಲಹೆ ಮೇರೆಗೆ ಡಾ. ಪ್ರಮೋದ್‌ಕುಮಾರ್ ಜೀವಂತ ಹುಳವನ್ನು ಹೊರತೆಗೆದಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ನೇತ್ರದ ಒಳ ಪದರದಿಂದ ಇದೇ ಮೊದಲ ಬಾರಿಗೆ ಜೀವಂತ ಹುಳವನ್ನು ತೆಗೆಯಲಾಗಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ:ಶಾಂತಿಯುತ ರಾಜ್ಯದಲ್ಲಿ ಗಲಭೆ ನಿರ್ಮಾಣದ ಷಡ್ಯಂತ್ರ ನಡೆಯುತ್ತಿದೆ: ಈಶ್ವರಪ್ಪ
ಇಂತಹ ಪ್ರಕರಣ ನಮ್ಮ ದೇಶದಲ್ಲಿ ಅಪರೂಪಕ್ಕೆ ಕಂಡುಬರುತ್ತದೆ. ಇದು ಹೆಚ್ಚಾಗಿ ಆಫ್ರಿಕಾ ದೇಶದಲ್ಲಿ ಕಾಣಿಸಿಕೊಳ್ಳುತ್ತದೆ. ಸಾಗರ ಆಸ್ಪತ್ರೆಯಲ್ಲಿ ಇದು ಮೊದಲ ಹಾಗೂ ವಿಶೇಷ ಶಸ್ತ್ರಚಿಕಿತ್ಸೆ ಎಂದು ಡಾ. ಪ್ರಮೋದ್ ತಿಳಿಸಿದ್ದಾರೆ.
ಹುಳದ ಕುರಿತು ಮತ್ತಷ್ಟು ಅಧ್ಯಯನಕ್ಕೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಪರೂಪದ ಶಸ್ತ್ರಚಿಕಿತ್ಸೆಗೆ ಫಿಜಿಷಿಯನ್ ಡಾ ಸುಭೋತ್, ಓಟಿ ಟೆಕ್ನಿಷಿಯನ್ ಪ್ರಜಾವಲ್ಯ, ಸ್ಟಾಫ್ ನರ್ಸ್‌ಗಳಾದ ವಸಂತ, ಜುಬೇದಾ ಆಲಿ ಅವರು ಸಾಥ್ ನೀಡಿದ್ದಾರೆ.