Advertisement

ಬಾಯಿ ಬೊಂಬಾಯಿ

10:09 AM Mar 06, 2020 | mahesh |

ಜೋವಾಕ್ವಿಮ್‌ ಅನ್ನೋ ವ್ಯಕ್ತಿಯ ಬಾಯಿ ಬಹಳ ವಿಶಾಲವಾಗಿದೆ. ಕಾಫಿ ಕಪ್‌, ತಟ್ಟೆಗಳು, ಬಾಟಲಿಗಳು ಎಲ್ಲವನ್ನೂ ಅದರಲ್ಲಿ ಬಚ್ಚಿಡಬಹುದು. ಜಗತ್ತಿನ ವಿಚಿತ್ರ, ವಿಸ್ಮಯಕಾರಿ ಬಾಯಿ ಇವನದು. . ಹೆಬ್ಟಾವಿನ ಹಾಗೆ ಈ ಬಾಯಿಯೊಳಗೆ ಹಾಕಿದ ವಸ್ತುಗಳನ್ನು ಒಳಗೆ ತುಂಬಿಕೊಳ್ಳುವುದಕ್ಕೆ ಜಾಗ ಕೊಡುತ್ತದೆ.

Advertisement

ಕೆಲವರಿಗೆ ಮಾತು ಹೆಚ್ಚಿರುತ್ತದೆ. ಅದಕ್ಕೆ ಅವರನ್ನು ದೊಡ್ಡ ಬಾಯಿ ಎನ್ನುವುದು ವಾಡಿಕೆ. ಏನು ದೊಡ್ಡ ಗಂಟಲಪ್ಪಾ ಅವನದು ಅಂತ ಕೂಡ ಮಾತಾಡಿಕೊಳ್ತಾರೆ. ಇಂಥ ದೊಡ್ಡ ಬಾಯಿ ಅವರ ಜೊತೆ ಜನ ಸಮಾನ್ಯವಾಗಿ ದೂರ ಇರುತ್ತಾರೆ. ಸಾಕಪ್ಪ ಸಹವಾಸ ಅಂತ. ಆದರೆ ಇವರು ಹಾಗಲ್ಲ. ಇವರ ಬಾಯಿಯೇ ದೊಡ್ಡದು. ಜಗತ್ತಿನಲ್ಲಿ ಇಷ್ಟು ದೊಡ್ಡ ಗಾತ್ರದ ಬಾಯಿ ಬೇರೆ ಯಾರಿಗೂ ಇಲ್ಲವೆಂಬ ದಾಖಲೆ ಇವರ ಹೆಸರಲ್ಲೇ ಇದೆ. ಇದು ಸ್ಥಿತಿ ಸ್ಥಾಪಕ ಗುಣವಿರುವ ಬಾಯಿ. ಅದರ ಅಳತೆ ಏಳು ಇಂಚಿನಷ್ಟಿದೆ. ಹೆಬ್ಟಾವಿನ ಹಾಗೆ ಈ ಬಾಯಿಯೊಳಗೆ ಹಾಕಿದ ವಸ್ತುಗಳನ್ನು ಒಳಗೆ ತುಂಬಿಕೊಳ್ಳುವುದಕ್ಕೆ ಜಾಗ ಕೊಡುತ್ತದೆ.

ವಯಸ್ಸು 30 ವರ್ಷ
ಇವನು ಅಂಗೋಲದ ಫ್ರಾನ್ಸಿಸ್ಕೋ ಡೊಮಿಂಗೋ ಜೊವಾಕ್ವಿಮ್‌ ಎಂಬ ಯುವಕ. 1990ರಲ್ಲಿ ಅವನು ಜನಿಸಿದ. ಅವನಿಗೆ ಏನಾದರೂ ಸಾಧಿಸಬೇಕೆಂಬ ಆಸೆ ಇತ್ತು. ತನ್ನ ಬಾಯಿ ಇತರರ ಹಾಗೆ ಇಲ್ಲ, ರಬ್ಬರಿನಂತೆ ಹಿಗ್ಗುವ ಸ್ಥಿತಿಸ್ಥಾಪಕ ಗುಣ ಹೊಂದಿದೆ ಎಂಬುದನ್ನು ತಿಳಿದುಕೊಂಡ ಚಿಂತಾಕ್ರಾಂತನಾಗಲಿಲ್ಲ. ಬದಲಾಗಿ, ಈ ಬಾಯಿ ನನಗೆ ದೇವರು ಕೊಟ್ಟ ವರ ಎಂದುಕೊಂಡ. ಹೀಗೆ ಅಂದು ಕೊಂಡು ಸುಮ್ಮನೆ ಇದ್ದರೆ ಏನು ಪ್ರಯೋಜನ? ಹಾಗಾಗಿ, ಮೊದಲು ತನ್ನ ವಿಶಾಲ ಬಾಯಿಯ ಒಳಗೆ ಕೋಕಾ ಕೋಲ ಪಾನೀಯದ ಕ್ಯಾನನ್ನು ತೂರಿಸಿ, ಮೆಲ್ಲಗೆ ಹೊರಗೆ ತೆಗೆಯಲು ಪ್ರಯತ್ನಿಸಿದ. ಫ್ರಾನ್ಸಿಸ್ಕೋ ಅದರಲ್ಲಿ ಯಶಸ್ವಿಯಾದ. ಮುನ್ನೂರು ಮಿಲಿಲೀಟರ್‌ ಪಾನೀಯವಿರುವ ಕ್ಯಾನು ಸರಾಗವಾಗಿ ಹೊಕ್ಕು ಹೊರಬೀಳುವಷ್ಟು ಬಾಯಿ ಹಿಗ್ಗುತ್ತಿತ್ತು.

2007ರ ಹೊತ್ತಿಗೆ ಈ ಸಾಧನೆಯನ್ನು ಕೈವಶ ಮಾಡಿಕೊಂಡ. 2010ರಲ್ಲಿ ಅಂಗೋಲದ ರಾಜಧಾನಿ ಲುವಾಂಡಾದಲ್ಲಿ ಚಿಕ್ವಿನ್ಹೋ ಎಂಬ ಸ್ವಾರಸ್ಯಕರ ಪಂದ್ಯ ನಡೆಯಿತು. ಅದರಲ್ಲಿ ಭಾಗವಹಿಸಿದ ಸ್ಪರ್ಧಿಗಳು ಕಾಫಿ ಕಪ್‌, ಬಿಯರ್‌ ಬಾಟಲಿ, ತಟ್ಟೆ ಇತ್ಯಾದಿಗಳನ್ನು ಬಾಯಿಯ ಒಳಗೆ ತೂರಿಸಿ ಹೊರಗೆ ತೆಗೆದು ಬಹುಮಾನ ಪಡೆಯಲು ಅಣಿಯಾಗುತ್ತಿರುವುದನ್ನು ಜೊವಾಕ್ವಿಮ್‌ ನೋಡಿದ. “ನಾನೂ ಇದರಲ್ಲಿ ಭಾಗವಹಿಸಬಹುದೆ?’ ಎಂದು ಕೇಳಿದ. ಆಯೋಜಕರು ಅವಕಾಶ ನೀಡಿದರು. ಆದರೆ, ಕೋಕಾ ಕ್ಯಾನನ್ನು ಆತ ಬಾಯಿಯೊಳಗೆ ತೂರಿಸಿ ಒಂದು ನಿಮಿಷದಲ್ಲಿ ಹದಿನಾಲ್ಕು ಸಲ ಹೊರಗೆ ತೆಗೆಯುವ ಆಟವನ್ನು ಕಂಡವರು ಮೂಕವಿಸ್ಮಿತರಾದರು. ಇವನೇನಾದರು ಮ್ಯಾಜಿಕ್‌ ಮಾಡುತ್ತಿದ್ದಾನೆಯೇ ಅಂತ ಅನುಮಾನ ಪಟ್ಟರು. ಆವತ್ತು ಅವನನ್ನು ಸೋಲಿಸಲು ಬೇರೆ ಯಾರಿಂದಲೂ ಆಗಲಿಲ್ಲ. ಬಹುಮಾನ ಬಂದದ್ದು ಇವನಿಗೇ.

ಬೀದಿ ಪ್ರದರ್ಶನ
ಬಳಿಕ ಫ್ರಾನ್ಸಿಸ್ಕೋ ಬೀದಿಗಳಲ್ಲಿ ಈ ಪ್ರದರ್ಶನ ನೀಡತೊಡಗಿದ. ಮಾಧ್ಯಮಗಳ ಗಮನ ಸೆಳೆದ. ಗಿನ್ನೆಸ್‌ ದಾಖಲೆಯ ಅಧಿಕಾರಿಗಳು ಅವನನ್ನು ಹುಡುಕಿಕೊಂಡು ಬಂದರು. ಅವನಷ್ಟು ದೊಡ್ಡ ಬಾಯಿ (6. 69 ಇಂಚು) ಜಗತ್ತಿನಲ್ಲಿ ಬೇರೊಬ್ಬರಿಗಿಲ್ಲ ಎಂದು ಪರೀಕ್ಷೆಯ ಮೂಲಕ ತಿಳಿದುಕೊಂಡು ದಾಖಲೆಯ ಪಟ್ಟಿಗೆ ಸೇರಿಸಿದರು. ಇಷ್ಟಕ್ಕೂ ಜೊವಾಕ್ವಿಮ್‌ ಈ ತನಕ ದಂತವೈದ್ಯರ ಬಳಿಗೆ ಹೋಗಿಲ್ಲ. ಅವನ ಹಲ್ಲುಗಳಿಗೆ ಏನೂ ಆಗಿಲ್ಲ. ಬಹಳ ಸ್ವತ್ಛವಾಗಿವೆ ಎಂದೂ ವೈದ್ಯರು ಹೇಳಿದ್ದಾರೆ. ಅವನ ಬಾಯಿಯ ಒಳಗಡೆ ಕಾಫಿ ಕಪ್‌, ತಟ್ಟೆಗಳು, ಬಾಟಲಿಗಳು ಎಲ್ಲವನ್ನೂ ಬಚ್ಚಿಡಬಹುದು. ಕೋಕಾ ಬಾಟಲಿ ಅರ್ಧ ಅಡಿ ಉದ್ದವಾಗಿದ್ದರೂ ಇವರ ಬಾಯಿಯೊಳಗೆ ಸಲೀಸಾಗಿ ನುಸುಳುವುದನ್ನು ನೋಡಿದರೆ ಮೈ ಎಲ್ಲಾ ಪುಳಕವಾಗುತ್ತದೆ. ಕಣ್ಣುಗಳಲ್ಲಿ ಬೆರಗು ಹುಟ್ಟತ್ತದೆ. ಇವೆಲ್ಲವೂ ನಿಜ. ಆದರೆ ಪುಟಾಣಿಗಳೇ, ನೀವು ಮಾತ್ರ ಇದನ್ನು ಅನುಕರಿಸಲು ಹೋಗಬೇಡಿ. ಓದಿ, ವಿಸ್ಮಯಪಡಿ. ಅಷ್ಟು ಮಾತ್ರ ಸಾಕು, ಗೊತ್ತಾಯಿತೇ?

Advertisement

– ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next