Advertisement

World’s longest ಸೆಲಾ ಸುರಂಗ ಲೋಕಾರ್ಪಣೆ: ಟೀಕಾಕಾರರಿಗೆ ತಿರುಗೇಟು ನೀಡಿದ ಪ್ರಧಾನಿ

07:54 PM Mar 09, 2024 | Team Udayavani |

ಗುವಾಹಟಿ: ಅರುಣಾಚಲ ಪ್ರದೇಶದಲ್ಲಿ 13,000 ಅಡಿ ಎತ್ತರದಲ್ಲಿರುವ ವಿಶ್ವದ ಅತಿ ಉದ್ದದ ಜೋಡಿ-ಪಥದ ಸೆಲಾ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೇಶಕ್ಕೆ ಸಮರ್ಪಿಸಿದರು.ಬಾರ್ಡರ್ ರೋಡ್ಸ್ ಆರ್ಗನೈಸೇಶನ್ 825 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸುರಂಗವು ಆಯಕಟ್ಟಿನ ದೃಷ್ಟಿಯಿಂದ ನಿರ್ಣಾಯಕವಾಗಿದ್ದು, ವಾಸ್ತವಿಕ ನಿಯಂತ್ರಣ ರೇಖೆಗೆ (LAC) ಸಮೀಪದಲ್ಲಿದೆ, ಇದು ತವಾಂಗ್‌ಗೆ ಎಲ್ಲಾ ಹವಾಮಾನ ಕಾಲದಲ್ಲೂ ಸಂಪರ್ಕವನ್ನು ಒದಗಿಸುತ್ತದೆ.

Advertisement

ಯೋಜನೆ ಎರಡು ಸುರಂಗಗಳನ್ನು ಒಳಗೊಂಡಿದ್ದು, ಮೊದಲನೆಯದು 1,003 ಮೀಟರ್ ಉದ್ದದ ಸಿಂಗಲ್ -ಟ್ಯೂಬ್ ಸುರಂಗ ಮತ್ತು ಎರಡನೆಯದು 1,595-ಮೀಟರ್ ಉದ್ದದ್ದಾಗಿದೆ. ತುರ್ತು ಸಂದರ್ಭಗಳಲ್ಲಿ ಎಸ್ಕೇಪ್ ಟ್ಯೂಬ್ ಕೂಡ ಇದೆ. ಇದು 8.6 ಕಿಮೀ ಉದ್ದದ ಅಪ್ರೋಚ್ ಮತ್ತು ಲಿಂಕ್ ರಸ್ತೆಗಳನ್ನು ಹೊಂದಿದೆ.

ಎಸ್ಕೇಪ್ ಟ್ಯೂಬ್ ಸಮಾನಾಂತರವಾಗಿ ನಿರ್ಮಿಸಲಾಗಿದೆ, ಪ್ರತಿ 500 ಮೀ ಕ್ರಾಸ್ ಪ್ಯಾಸೇಜ್‌ಗಳೊಂದಿಗೆ ಸಂಪರ್ಕ ಹೊಂದಿದೆ ಎಂದು BRO ಅಧಿಕಾರಿ ತಿಳಿಸಿದ್ದಾರೆ. ತುರ್ತು ಸಂದರ್ಭದಲ್ಲಿ, ಈ ಎಸ್ಕೇಪ್ ಟ್ಯೂಬ್ ಅನ್ನು ರಕ್ಷಣಾ ವಾಹನಗಳ ಚಲನೆಗೆ ಮತ್ತು ಸಿಕ್ಕಿಬಿದ್ದ ಜನರನ್ನು ಸ್ಥಳಾಂತರಿಸಲು ಬಳಸಬಹುದಾಗಿದೆ.

ದಿನಕ್ಕೆ 3,000 ಕಾರುಗಳು ಮತ್ತು 2,000 ಟ್ರಕ್‌ಗಳ ಟ್ರಾಫಿಕ್ ಸಾಂದ್ರತೆಗೆ ಅನುಗುಣವಾಗಿ ಸುರಂಗವನ್ನು ವಿನ್ಯಾಸಗೊಳಿಸಲಾಗಿದ್ದು, ಗಂಟೆಗೆ ಗರಿಷ್ಠ 80 ಕಿ.ಮೀ.ವೇಗದಲ್ಲಿ ಚಲಿಸಬಹುದಾಗಿದೆ.

Advertisement

ಈ ಪ್ರದೇಶದಲ್ಲಿ ಭಾರೀ ಮಳೆಯಿಂದ ಹಿಮಪಾತ ಮತ್ತು ಭೂಕುಸಿತದಿಂದಾಗಿ ಬಲಿಪರಾ-ಚರಿದುವಾರ್-ತವಾಂಗ್ ರಸ್ತೆಯು ಆಗಾಗ್ಗೆ ಮುಚ್ಚಲ್ಪಡುತ್ತಿದ್ದುದರಿಂದ ಈ ಯೋಜನೆಯು ಅನಿವಾರ್ಯವಾಗಿತ್ತು. ಸೆಲಾ ಸುರಂಗ ಯೋಜನೆಗೆ ಪ್ರಧಾನಿ ಮೋದಿ ಅವರು 2019 ಫೆಬ್ರವರಿ 9 ರಂದು ಅಡಿಪಾಯ ಹಾಕಿದ್ದರು. ಅದೇ ವರ್ಷದ ಏಪ್ರಿಲ್ 1 ರಂದು ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗಿತ್ತು.

“ಸೆಲಾ ಸುರಂಗದ ಉದ್ಘಾಟನೆಯು ನಮಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದ್ದು, ಕೆಲವು ವರ್ಷಗಳ ಹಿಂದೆ ನಾನು ಇದಕ್ಕೆ ಅಡಿಗಲ್ಲು ಹಾಕಿದಾಗ, ಈ ಯೋಜನೆಯು ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ ಎನ್ನುವುದು ಖಚಿತವಿಲ್ಲ ಎಂದು ಕೆಲವರು ಟೀಕಿಸಿದ್ದರು. ಇದಕ್ಕೆ ಕಾರಣವೂ ಇತ್ತು, ಹಲವಾರು ದಶಕಗಳಿಂದ ಚಾಲ್ತಿಯಲ್ಲಿದ್ದ ಕೆಲಸದ ಸಂಸ್ಕೃತಿಯು ವಿಳಂಬ ಟೀಕೆಗೆ ಕಾರಣವಾಗಿತ್ತು ಎಂದರು ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ.

“ಎನ್‌ಡಿಎ ಸರ್ಕಾರವು ವಿಭಿನ್ನ ವಿಧಾನದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈಗ ಸುರಂಗವನ್ನು ಉದ್ಘಾಟಿಸಲಾಗಿದ್ದು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ನಿಮಗೆ ಇನ್ನೊಂದು ಕಾರಣ ಒದಗಿಸುತ್ತದೆ” ಎಂದು ಪ್ರಧಾನಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next