Advertisement
ಹೊಸದಿಲ್ಲಿ: ಕೋವಿಡ್ ವೈರಾಣುವಿನ ಆಟಾಟೋಪದಿಂದ ಇಡೀ ದೇಶ ಸಂಪೂರ್ಣ ಸ್ತಬ್ಧಗೊಂಡಿರುವಾಗ ಆಪತ್ಪಾಂಧವನಾದದ್ದು ಬೇರೆ ಯಾರೂ ಅಲ್ಲ ನಮ್ಮ ಅಂಚೆಯಣ್ಣ. ಭಾರತ ಜಗತ್ತಿನಲ್ಲೇ ಅತಿ ದೊಡ್ಡ ಅಂಚೆ ಜಾಲವನ್ನು ಹೊಂದಿದೆ. ಅಂಚೆಯೆಂದರೆ ಈಗ ಬರೀ ಪತ್ರಗಳನ್ನು ಬಟವಾಡೆ ಮಾಡುವ ಇಲಾಖೆಯಲ್ಲ.
Related Articles
Advertisement
ಅಂಚೆ ಇಲಾಖೆಯ ತುರ್ತು ಸೇವೆ ಒಂದು ಮಾದರಿಯನ್ನು ಭಾರತೀಯ ಔಷಧ ತಯಾರಕರ ಅಸೋಸಿಯೇಶನ್‌ನ ನಿರ್ದೇಶಕ ಅಶೋಕ್ ಕುಮಾರ್ ಮದನ್ ವಿವರಿಸುತ್ತಾರೆ: ಉತ್ತರ ಪ್ರದೇಶದ ಹಿರಿಯ ಅಂಚೆ ಅಧಿಕಾರಿ ಅಲೋಕ್ ಓಝಾ ಅವರಿಂದ ಮದನ್‌ಗೆ ಫೋನ್ ಕರೆಯೊಂದು ಬರುತ್ತದೆ. ನಮ್ಮಿಂದ ನಿಮಗೆ ಏನಾದರೂ ಸಹಾಯಬೇಕಾಗಬಹುದೇ ಎಂದು ಕೇಳಿದರು ಓಝಾ. ಗುಜರಾತಿನಲ್ಲಿ ಅದಾಗಲೇ ಅಂಚೆ ಇಲಾಖೆ ಔಷಧ ಸಾಗಾಟ ಪ್ರಾರಂಭಿಸಿತ್ತು. ಇಂಥ ಒಂದು ಪರಿಹಾರವನ್ನು ನಿರೀಕ್ಷಿಸುತ್ತಿದ್ದ ಮದನ್ ಕೂಡಲೇ ಈ ಕೊಡುಗೆಯನ್ನು ಒಪ್ಪಿಕೊಂಡರು.
ಅನಂತರ ಅನೇಕ ಔಷಧ ಕಂಪೆನಿಗಳು ಅಂಚೆ ಇಲಾಖೆಯ ಸೇವೆಯನ್ನು ಬಳಸಿಕೊಂಡಿವೆ. ಲಕ್ನೊದ ಡಾ| ಉಜ್ವಲಾ ಘೋಷಾಲ್‌ಗೆ 550 ಕಿ.ಮೀ ದೂರವಿರುವ ದಿಲ್ಲಿಯಿಂದ ಕೋವಿಡ್ ಟೆಸ್ಟಿಂಗ್ ಕಿಟ್‌ಗಳನ್ನು ತಲುಪಿಸಿದ್ದು ಇವುಗಳಲ್ಲಿ ಒಂದು. ಸಾಮಾನ್ಯವಾಗಿ ಅಂಚೆ ಇಲಾಖೆಯ ಪಾರ್ಸೆಲ್‌ಗಳು ಅಂಚೆ ಕಚೇರಿಗೆ ತಲುಪುತ್ತವೆ. ಅಲ್ಲಿಂದ ನಾವು ಹೋಗಿ ತರಬೇಕು. ಆದರೆ ಈ ಸಂದರ್ಭದಲ್ಲಿ ಅಂಚೆ ಇಲಾಖೆಯವರು ವೈದ್ಯಕೀಯ ಸಾಮಾಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸಿದರು.
ತಮಿಳುನಾಡಿನಿಂದ ಉತ್ತರ ಪ್ರದೇಶಕ್ಕೆ ಡೆಫ್ರಿಲ್ಲೇಟರ್ಸ್ ಸಾಗಿಸುವ ಸಮಸ್ಯೆ ಎದುರಾದಾಗ ಅದಕ್ಕೂ ಸೈ ಎಂದಿತು ಅಂಚೆ ಇಲಾಖೆ. ಓರ್ವ ಉತ್ಪಾದಕರ ಔಷಧವನ್ನು ಶೀತಲೀಕರಣ ವ್ಯವಸ್ಥೆಯಲ್ಲೇ ಸಾಗಿಸಬೇಕಿತ್ತು. ಇದಕ್ಕೂ ಹಿಂದೇಟು ಹಾಕಲಿಲ್ಲ ಅಂಚೆಯವರು.
ನಿಜವಾಗಿ ನೋಡಿದರೆ ವೈದ್ಯರು, ನರ್ಸ್‌ಗಳು, ಆರೋಗ್ಯ ಕಾರ್ಯಕರ್ತರು, ಪೊಲೀಸರು ನೀಡಿದಷ್ಟೇ ಮಹತ್ವದ ಸೇವೆಯನ್ನು ಅಂಚೆ ಇಲಾಖೆಯವರು ನೀಡಿದ್ದಾರೆ. ಕೋವಿಡ್ ವಿರುದ್ಧದ ಯುದ್ಧದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದ ಯೋಧರಲ್ಲಿ ಅಂಚೆಯವರೂ ಬರುತ್ತಾರೆ. ಆದರೆ ಅವರ ಸೇವೆ ಜಗತ್ತಿನ ಕಣ್ಣಿಗೆ ಬಿದ್ದಿಲ್ಲ ಅಷ್ಟೆ.