ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಯ ಮೇಲೆ ನಿರ್ಮಾಣಗೊಂಡಿರುವ ವಿಶ್ವದ ಅತೀ ಎತ್ತರದ ರೈಲ್ವೆ ಸೇತುವೆ ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ. ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯ ಬಕ್ಕಾಲ್ ಮತ್ತು ಕೌರಿ ನಡುವೆ ಈ ಸೇತುವೆ ನಿರ್ಮಾಣಗೊಂಡಿದೆ.
ಇದನ್ನೂ ಓದಿ:ಮತ್ತೆ ಬಂಧನ ಭೀತಿ: ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಚೆನಾಬ್ ನದಿಯಿಂದ 359 ಮೀಟರ್ (1,178 ಅಡಿ) ಎತ್ತರದಲ್ಲಿ ರೈಲ್ವೆ ಸೇತುವೆಯನ್ನು ನಿರ್ಮಿಸಲಾಗಿದೆ. 2003ರಲ್ಲಿ ಆರಂಭಗೊಂಡಿದ್ದ ರೈಲ್ವೆ ಸೇತುವೆ ಕಾಮಗಾರಿ ಇದೀಗ 2023ರಲ್ಲಿ ಮುಕ್ತಾಯಗೊಂಡಿದೆ. ಈಗಾಗಲೇ ಭಾರೀ ಪ್ರಮಾಣದ ಗಾಳಿ ಹೊಡೆತದ ಪರೀಕ್ಷೆ, ವಿಪರೀತ ಹವಾಮಾನದ ಪರೀಕ್ಷೆ, ಭೂಕಂಪನ ಮತ್ತು ವಿವಿಧ ತಾಂತ್ರಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಸೇತುವೆಯ ಪರಿಶೀಲನೆ ನಡೆಸಿದ್ದಾರೆ.
ಚೆನಾಬ್ ರೈಲ್ವೆ ಸೇತುವೆಯು ಪ್ಯಾರೀಸ್ ನ ಐಫೆಲ್ ಟವರ್ ಗಿಂತಲೂ ಸುಮಾರು 35 ಮೀಟರ್ ಎತ್ತರವಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಮಾನು ರೀತಿಯ ಸೇತುವೆ ನಿರ್ಮಾಣ ಪೂರ್ಣಗೊಳಿಸಲು ಹಗಲು-ರಾತ್ರಿ 300 ಸಿವಿಲ್ ಇಂಜಿನಿಯರ್ಸ್, 1,300ಕ್ಕೂ ಅಧಿಕ ಕಾರ್ಮಿಕರು ದುಡಿದಿದ್ದರು.
ಚೆನಾಬ್ ಸೇತುವೆಯು 28,000 ಸಾವಿರ ಕೋಟಿ ರೂಪಾಯಿ ವೆಚ್ಚದ ಉಧಾಮ್ ಪುರ್, ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ(ಯುಎಸ್ ಬಿಆರ್ ಎಲ್) ಭಾಗವಾಗಿದೆ. ಇದು ಸಂಕೀರ್ಣ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪರ್ಕವನ್ನು ಒದಗಿಸುವ ಮಹತ್ವದ ಸೇತುವೆ ಇದಾಗಿದೆ.
ಜಮ್ಮು-ಕಾಶ್ಮೀರ ಜನರಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಈ ಸೇತುವೆಯು ಎರಡು ದಶಕಗಳ ನಂತರ ಪೂರ್ಣಗೊಂಡಂತಾಗಿದೆ. 2003ರಲ್ಲಿ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಯೋಜನೆ ಪೂರ್ಣಗೊಳಿಸಲು ಹಲವಾರು ಡೆಡ್ ಲೈನ್ ಗಳನ್ನು ನೀಡಲಾಗಿತ್ತು. ಚೆನಾಬ್ ರೈಲ್ವೆ ಸೇತುವೆಗಾಗಿ 1,400 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ.
ಚೆನಾಬ್ ಸೇತುವೆ ನಿರ್ಮಾಣಕ್ಕಾಗಿ 25,000 ಮೆಟ್ರಿಕ್ ಟನ್ಸ್ ಸ್ಟೀಲ್, 4,000 ಟನ್ಸ್ ಉಕ್ಕು ಮತ್ತು 46,000 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಅನ್ನು ಬಳಸಲಾಗಿದೆ. ಚೆನಾಬ್ ರೈಲ್ವೆ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಈಗಾಗಲೇ ಸೇತುವೆ ಮೇಲೆ ರೈಲ್ವೆ ವ್ಯಾಗನ್ಸ್ ಪರೀಕ್ಷೆ ನಡೆಸಲಾಗಿದೆ. ಈ ವರ್ಷಾಂತ್ಯದಲ್ಲಿ ಸೇತುವೆ ಕಾರ್ಯಾರಂಭಗೊಳ್ಳುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.