ಶಿರಸಿ: ಜಗತ್ತಿನಲ್ಲಿ ಈಗ ಯೋಗದ ಪ್ರಭಾವ ಹೆಚ್ಚಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೂ ವಿಶ್ವ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಯೋಗ ಮಾಡಲಿದ್ದಾರೆ. ಯೋಗಕ್ಕೂ ಋಷಿ ಮುನಿಗಳಿಗೂ ನಂಟಿದೆ. ತಪಸ್ಸುನಿರತ ಯತಿಗಳು ಏಕಾಗೃತೆ, ಆರೋಗ್ಯ ರಕ್ಷಣೆಗೆ ಯೋಗಾನುಷ್ಠಾನ ಮಾಡುತ್ತಾರೆ. ಇಂಥ ಯೋಗಾನುಷ್ಠಾನವನ್ನು ತಪ್ಪದೇ ಮಾಡುವ ಸ್ವಾಮೀಜಿಗಳಲ್ಲಿ ಒಬ್ಬರು ಸೋಂದಾ ಸ್ವರ್ಣವಲ್ಲೀಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು.
ಇವರು ನಿತ್ಯ ತಪ್ಪಿಸದೇ ಯೋಗಾಸನ, ಪ್ರಾಣಾಯಾಮ, ಧ್ಯಾನ ಮಾಡುತ್ತಾರೆ. ಒಂದು ದಿನವೂ ಬಿಡದೇ ಮುಂಜಾನೆ ಯೋಗ ಮಾಡುತ್ತಾರೆ. ಈ ಮೂಲಕ ತಪೋನಿಷ್ಠ ಜೊತೆ ಯೋಗ ನಿಷ್ಠ ಶ್ರೀಗಳೂ ಆಗಿದ್ದಾರೆ.
ಶ್ರೀಗಳು ಸನ್ಯಾಸ ದೀಕ್ಷೆ ಪಡೆಯುವದಕ್ಕಿಂತಲೂ ಮೊದಲಿನಿಂದಲೂ ನಿತ್ಯ ಪ್ರಾಣಾಯಾಮ, ಸೂರ್ಯ ನಮಸ್ಕಾರ, ಧ್ಯಾನ ಮಾಡುತ್ತಿರುವದು ವಿಶೇಷ ಆಗಿದೆ.
ನಿಯಮಿತವಾಗಿ ಭಕ್ತರು, ಶಿಷ್ಯರು, ಯುವ ಶಕ್ತಿ ಕೂಡ ಯೋಗ ಮಾಡುವಂತೆ ತಮ್ಮ ಆಶೀರ್ವಚನದಲ್ಲಿ ಪದೇ ಪದೇ ಹೇಳುತ್ತಿರುವದೂ, ಈ ಮೂಲಕ ಆರೋಗ್ಯ ರಕ್ಷಣೆ ಮಾಡಿಕೊಳ್ಳುವಂತೆ ಸಂದೇಶ ನೀಡುತ್ತಿರುವದೂ ಉಲ್ಲೇಖನೀಯವಾಗಿದೆ.
ಜೂ.೨೧ರಂದು ಬೆಳಗ್ಗೆ
6 ಕ್ಕೆ ಸ್ವರ್ಣವಲ್ಲೀಯಲ್ಲಿ ನಡೆಯಲಿರುವ ಜಿಲ್ಲಾ ಯೋಗ ದಿನಾಚರಣೆಯಲ್ಲೂ ಶ್ರೀಗಳು ಯೋಗಾಸನ ಮಾಡಲಿದ್ದಾರೆ.