Advertisement

ವಿಶ್ವ ಮಹಿಳಾ ದಿನ ವಿಶೇಷ: ಭಾರತದ ಸುಪ್ರಸಿದ್ಧ ಮಹಿಳೆಯರು

01:32 AM Mar 08, 2022 | Team Udayavani |

ಜಗತ್ತು ಇಂದು ಹವಾಮಾನ ಬದಲಾವಣೆಯಂಥ ಭೀಕರ ಸ್ಥಿತಿ ಅನುಭವಿಸುತ್ತಿದ್ದು, ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಮಹಿಳೆಯರು ಮತ್ತು ಯುವತಿಯರಿಗೆ ಹೊಸ ಹೊಸ ಜವಾಬ್ದಾರಿ ನೀಡುವ ಥೀಮ್‌ ಇರಿಸಿಕೊಂಡು ಈ ಬಾರಿಯ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಣೆ ಮಾಡಲಾಗುತ್ತಿದೆ. ಜಗತ್ತಿನ ಸುಸ್ಥಿರ ಭವಿಷ್ಯ ಮಹಿಳೆಯರ ಕೈಯಲ್ಲಿ ಇದೆ ಎಂಬುದು ವಿಶ್ವಸಂಸ್ಥೆಯ ವಾದ. ಈ ವೇಳೆಯಲ್ಲಿ ದೇಶಕ್ಕೆ ಕೀರ್ತಿ ತಂದ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಮಹಿಳಾ ಸಾಧಕಿಯರ ಕಿರು ಪರಿಚಯ ಇಲ್ಲಿದೆ.

Advertisement

ಫಲ್ಗುಣಿ ನಾಯರ್‌
ನೈಕಾ ಎಂಬ ಕಂಪೆನಿಯ ಸಿಇಒ. 2012ರಲ್ಲಿ ಆರಂಭವಾದ ಈ ಕಂಪೆನಿ ಭಾರತೀಯ ಇ-ಕಾಮರ್ಸ್‌ ನಲ್ಲಿ ದೊಡ್ಡ ಕ್ರಾಂತಿಯನ್ನೇ ಎಬ್ಬಿಸಿದೆ. ಈ ಕಂಪೆನಿ ಪ್ರಮುಖವಾಗಿ ಮಹಿಳೆಯರ ಕಾಸ್ಮೆಟಿಕ್ಸ್‌ ಮತ್ತು ಎಸೆನ್ಶಿಯಲ್‌ಗ‌ಳನ್ನೇ ಪ್ರಮುಖವಾಗಿ ಮಾರಾಟ ಮಾಡುತ್ತದೆ.


ವಿಶೇಷವೆಂದರೆ 2012ರಲ್ಲಿ ಫಲ್ಗುಣಿ ನಾಯರ್‌ ಅವರಿಗೆ 50 ವರ್ಷಗಳಾಗಿದ್ದಾಗ ಈ ಕಂಪೆನಿಯನ್ನು ಆರಂಭಿಸಿದರು. ಈಗ ಈ ಕಂಪೆನಿ ಷೇರುಪೇಟೆಯಲ್ಲಿ ಲಿಸ್ಟ್‌ ಆಗಿದ್ದು, 13 ಬಿಲಿಯನ್‌ ಅಮೆರಿಕನ್‌ ಡಾಲರ್‌ ಬೆಲೆ ಬಾಳುತ್ತದೆ. ಈಗ ದೇಶದ ಅಗ್ರ 20 ಶ್ರೀಮಂತ ಮಹಿಳೆಯರಲ್ಲಿ ಇವರೂ ಒಬ್ಬರಾಗಿದ್ದಾರೆ.

ಗುರ್ಜೀತ್‌ ಕೌರ್‌
2020-21ರಲ್ಲಿ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ ಗುರ್ಜೀತ್‌ ಕೌರ್‌ ಅವರಿಗೆ ಮಹಿಳಾ ಹಾಕಿ ಆಟಗಾರ್ತಿ ಎಂಬ ಪ್ರಶಸ್ತಿ ನೀಡಿ ಗೌರವಿಸಿತು.


2017ರಿಂದಲೂ ಭಾರತೀಯ ಮಹಿಳಾ ಹಾಕಿ ತಂಡದಲ್ಲಿ ಖಾಯಂ ಸದಸ್ಯೆಯಾಗಿರುವ ಇವರು 2018ರಲ್ಲಿ ನಡೆದ ಹಾಕಿ ವಿಶ್ವಕಪ್‌ನಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದರು. ಅಷ್ಟೇ ಅಲ್ಲ, ಕಳೆದ ವರ್ಷ ನಡೆದ ಒಲಿಂಪಿಕ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಇವರು ಬಾರಿಸಿದ ಒಂದು ಗೋಲ್‌ನಿಂದಾಗಿಯೇ ಭಾರತ ಮೊತ್ತಮೊದಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿತು.

ಮಿಥಾಲಿ ರಾಜ್‌
ಭಾರತ ಮಹಿಳಾ ಏಕದಿನ ಕ್ರಿಕೆಟ್‌ ತಂಡದ ನಾಯಕಿಯಾಗಿರುವ ಮಿಥಾಲಿ ರಾಜ್‌ ಅವರು 6 ಮಹಿಳಾ ವಿಶ್ವಕಪ್‌ ಆಡಿದ ಮೊದಲ ಮಹಿಳಾ ಕ್ರಿಕೆಟರ್‌ ಎಂಬ ಖ್ಯಾತಿ ಹೊಂದಿದ್ದಾರೆ.


ಅಷ್ಟೇ ಅಲ್ಲ, ಈ ಮೂಲಕ ಸಚಿನ್‌ ತೆಂಡೂಲ್ಕರ್‌ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ. ಅಂದರೆ, 2000, 2005, 2009, 2013, 2017 ಮತ್ತು 2022ರ ವಿಶ್ವಕಪ್‌ನಲ್ಲಿ ಆಡಿದ್ದಾರೆ. 16ನೇ ವಯಸ್ಸಿನಲ್ಲಿ ಕ್ರಿಕೆಟ್‌ಗೆ ಪಾದರ್ಪಣೆ ಮಾಡಿದ್ದ ಮಿಥಾಲಿ ರಾಜ್‌, ಮೊದಲ ಪಂದ್ಯದಲ್ಲೇ ಅಜೇಯ 114 ರನ್‌ ಬಾರಿಸಿದ್ದರು. 2021ರಲ್ಲಿ ಮಿಥಾಲಿ ರಾಜ್‌ ಅವರಿಗೆ ಮೇಜರ್‌ ಧ್ಯಾನ್‌ ಚಂದ್ರ ಖೇಲ್‌ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ಮಹಿಳಾ ಕ್ರಿಕೆಟರ್‌ ಒಬ್ಬರು ಈ ಪ್ರಶಸ್ತಿ ಪಡೆದದ್ದು ಇದೇ ಮೊದಲು. ಸದ್ಯ ಇವರ ನೇತೃತ್ವದಲ್ಲೇ ಮಹಿಳಾ ವಿಶ್ವಕಪ್‌ ಕ್ರೀಡಾಕೂಟದಲ್ಲಿ ಭಾರತ ಭಾಗಿಯಾಗಿದೆ.

Advertisement

ಸಾಯಿಕೋಮ್‌ ಮಿರಾಬಾಯಿ ಚಾನು
ಜಪಾನ್‌ನ ಟೋಕಿಯೋದಲ್ಲಿ ಕಳೆದ ವರ್ಷ ನಡೆದ ಒಲಿಂಪಿಕ್ಸ್‌ನ ಮೊದಲ ದಿನವೇ ಭಾರತಕ್ಕೆ ಬೆಳ್ಳಿಯ ಉಡುಗೊರೆ ಕೊಟ್ಟ ಕೀರ್ತಿ ಮಿರಾಬಾಯಿ ಚಾನು ಅವರಿಗೆ ಸಲ್ಲುತ್ತದೆ.


49 ಕೆಜಿ ವಿಭಾಗ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಅವರು 202 ಕೆಜಿ ತೂಕ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದರು. ಮಣಿಪುರ ಮೂಲದವರಾದ ಮೀರಾಬಾಯಿ, ಕಷ್ಟದಿಂದಲೇ ಬಾಲ್ಯ ಕಳೆದವರು. 2018ರಲ್ಲೇ ಇವರಿಗೆ ಪದ್ಮಶ್ರೀ ಮತ್ತು ಖೇಲ್‌ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಹರ್ನಾಜ್‌ ಸಂಧು
21 ವರ್ಷಗಳ ಬಳಿಕ ಭಾರತಕ್ಕೆ ಮತ್ತೊಂದು ವಿಶ್ವಸುಂದರಿ ಪಟ್ಟ ನೀಡಿದ ಖ್ಯಾತಿ ಹರ್ನಾಜ್‌ ಸಂಧು ಅವರಿಗೆ ಸಲ್ಲುತ್ತದೆ.

2000ರಲ್ಲಿ ಲಾರಾ ದತ್ತಾ ಅವರು ಮಿಸ್‌ ಯೂನಿವರ್ಸ್‌ ಪ್ರಶಸ್ತಿ ಗೆದ್ದದ್ದೇ ಕೊನೆ. ಇದಾದ ಬಳಿಕ ಪಂಜಾಬ್‌ನ ಹರ್ನಾಜ್‌ ಸಂಧು ಗೆದ್ದಿದ್ದಾರೆ.

ವೈಶಾಲಿ ಹಿವಾಸೇ
ಭಾರತ-ಚೀನ ಗಡಿ ರಸ್ತೆಯ ನಿರ್ಮಾಣದ ಹೊಣೆ ಹೊತ್ತಿರುವ ಬಾರ್ಡರ್‌ ರೋಡ್ಸ್‌ ಆರ್ಗನೈಸೇಶನ್‌(ಬಿಆರ್‌ಓ)ದ ಆಫೀಸರ್‌ ಕಮಾಂಡಿಂಗ್‌ ಆಗಿ ವೈಶಾಲಿ ಎಸ್‌ ಹಿವಾಸೇ ಅವರು ನೇಮಕವಾಗಿದ್ದಾರೆ.


ಈ ಹುದ್ದೆಗೆ ನೇಮಕವಾದ ಮೊದಲ ಮಹಿಳಾ ಅಧಿಕಾರಿ ಎಂಬ ಖ್ಯಾತಿಗೂ ಇವರು ಪಾತ್ರರಾಗಿದ್ದಾರೆ. ಮಹಾರಾಷ್ಟ್ರದ ವಾರ್ದಾದ ಇವರು ಎಂಟೆಕ್‌ ವ್ಯಾಸಂಗ ಮಾಡಿದ್ದು, ಬಿಆರ್‌ಒದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಅವನಿ ಲೇಖರ
ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕೂಟದಲ್ಲಿ ಒಂದು ಚಿನ್ನ ಮತ್ತು ಒಂದು ಕಂಚಿನ ಪದಕ ಗೆದ್ದು ದಾಖಲೆ ನಿರ್ಮಿಸಿರುವ ಅವನಿ ಲೇಖರ ಶೂಟಿಂಗ್‌ ನಲ್ಲಿ ಅಪಾರ ಸಾಧನೆ ಮಾಡಿದ್ದಾರೆ.

ರಾಜಸ್ಥಾನ ಮೂಲದ ಇವರು, ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮೊದಲ ಆಟಗಾರ್ತಿಯಾಗಿದ್ದಾರೆ. ಕಳೆದ ವರ್ಷದ ನವೆಂಬರ್‌ನಲ್ಲಿ ಅವನಿ ಲೇಖರ ಅವರಿಗೆ ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿ ಮತ್ತು ಈ ವರ್ಷ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬ್ರಿಗೇಡಿಯರ್‌ ಎಸ್‌ ವಿ ಸರಸ್ವತಿ
ಮಿಲಿಟರಿ ನರ್ಸಿಂಗ್‌ ಸೇವೆಯಲ್ಲಿ ಅಸಾಧಾರಣ ಕರ್ತವ್ಯ ನಿರ್ವಹಿಸುತ್ತಿರುವ ಡೆಪ್ಯುಟಿ ಡೈರೆಕ್ಟರ್‌ ಜನರಲ್‌ ಆಫ್‌ ಮಿಲಿಟರಿ ನರ್ಸಿಂಗ್‌ ಸರ್ವೀಸ್‌ ಬ್ರಿಗೇಡಿಯರ್‌ ಎಸ್‌.ವಿ.ಸರಸ್ವತಿ ಅವರಿಗೆ ಕೇಂದ್ರ ಸರಕಾರ 2000ನೇ ಸಾಲಿನ ನ್ಯಾಷನಲ್‌ ಫ್ಲೋರೆ ನೈಟಿಂಗೇಲ್‌ ಪ್ರಶಸ್ತಿ ನೀಡಿ ಗೌರವಿಸಿದೆ.

ಆಂಧ್ರ ಪ್ರದೇಶದ ಚಿತ್ತೂರು ಮೂಲದವರಾದ ಬ್ರಿಗೇಡಿಯರ್‌ ಸರಸ್ವತಿ ಅವರು 1983ರ ಡಿಸೆಂಬರ್‌ನಲ್ಲಿ ಎಂಎನ್‌ಎಸ್‌ಗೆ ಸೇರಿದ್ದರು. ಮಿಲಿಟರಿ ಸೇವೆಯಲ್ಲಿ ಇದ್ದುಕೊಂಡು 3,000 ಯೋಧರ ಪ್ರಾಣ ಉಳಿಸುವಲ್ಲಿ ಸಹಾಯಮಾಡಿದ ಸಾಧನೆ ಇವರದ್ದು. 2021ರಲ್ಲಿ ರಾಷ್ಟ್ರಪತಿ ರಾಮನಾಥ್‌ಕೋವಿಂದ್‌ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

ಸೌಮ್ಯಾ ಸ್ವಾಮಿನಾಥನ್‌
ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಮುಖ್ಯ ವಿಜ್ಞಾನಿಯಾಗಿ ಕೆಲಸ ನಿರ್ವಹಿಸುತ್ತಿರುವ, ಭಾರತ ಮೂಲದ ಸೌಮ್ಯಾ ಸ್ವಾಮಿನಾಥನ್‌ ಅವರನ್ನು ಮರೆಯು ವಂತಿಲ್ಲ.

ಕಳೆದ ವರ್ಷ ಇಡೀ ಜಗತ್ತು ಕೊರೊನಾ ಸಂಕಷ್ಟದಲ್ಲಿ ಮುಳುಗಿತ್ತು. ಇಂಥ ವೇಳೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕುಳಿತು, ಜನ ಭಯ ಬೀಳದಂತೆ ಮಾಡಿ, ಕಾಲ ಕಾಲಕ್ಕೆ ಇಡೀ ಜಗತ್ತಿಗೇ ಮಾರ್ಗದರ್ಶನ ನೀಡಿದ ಕೀರ್ತಿ ಸೌಮ್ಯಾ ಸ್ವಾಮಿನಾಥನ್‌ ಅವರದ್ದು. ತಮಿಳುನಾಡು ಮೂಲದವರಾದ ಇವರು ಹಸುರು ಕ್ರಾಂತಿಯ ಜನಕ ಎಂದೇ ಖ್ಯಾತರಾಗಿರುವ ಎಂ.ಎಸ್‌.ಸ್ವಾಮಿನಾಥನ್‌
ಅವರ ಪುತ್ರಿ.

ಸೇನೆಗೆ ಕರ್ನಲ್‌ ರ್‍ಯಾಂಕ್‌ನ
5 ಮಹಿಳಾ ಅಧಿಕಾರಿಗಳು
ಭಾರತೀಯ ಸೇನೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್‌ ರ್‍ಯಾಂಕ್‌ ನೀಡಲಾಯಿತು.

ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ ಕೇಂದ್ರ ಸರಕಾರ, ಕಾರ್ಪಸ್‌ ಆಫ್‌ ಸಿಗ್ನಲ್‌ನ ಲೆಫ್ಟಿನೆಂಟ್‌ ಕರ್ನಲ್‌ ಸಂಗೀತಾ ಸರ್ದಾನಾ, ಇಎಂಇ ಕಾರ್ಪಸ್‌ನ ಲೆಫ್ಟಿನೆಂಟ್‌ ಕರ್ನಲ್‌ ಸೋನಿಯಾ ಆನಂದ್‌, ಲೆಫ್ಟಿನೆಂಟ್‌ ಕರ್ನಲ್‌ ನವನೀತ್‌ ದುಗ್ಗಲ್‌, ಕಾರ್ಪಸ್‌ ಆಫ್‌ ಎಂಜಿನಿಯರ್ಸ್‌ನ ಲೆಫ್ಟಿನೆಂಟ್‌ ಕರ್ನಲ್‌ ರೀನು ಖನ್ನಾ ಮತ್ತು ಲೆಫ್ಟಿನೆಂಟ್‌ ಕರ್ನಲ್‌ ರಿಟಾc ಸಾಗರ್‌ ಅವರಿಗೆ ಪದೋನ್ನತಿ ನೀಡಿತು.

 

Advertisement

Udayavani is now on Telegram. Click here to join our channel and stay updated with the latest news.

Next