Advertisement

ವಿಶ್ವ ಮಹಿಳಾ ದಿನ: ಕರಾವಳಿಯ ಮಹಿಳೆಯರ ಯಶೋಗಾಥೆ

01:14 AM Mar 08, 2022 | Team Udayavani |

ಎಸಳು ಮತ್ತು ಕುಸುಮ ಎರಡೂ ನಳನಳಿಸುತ್ತಿದ್ದರಷ್ಟೇ ಹೂವು ಹೇಗೆ ಸುಂದರವಾಗುವುದೋ ಹಾಗೆಯೇ ಪುರುಷ ಮತ್ತು ಸ್ತ್ರೀ ಸಮಾನ ಸ್ಥಾನಮಾನ, ಅರ್ಹತೆ, ಅವಕಾಶಗಳನ್ನು ಹೊಂದಿದ್ದರೆ ಮಾತ್ರ ಸಮಾಜ ಸುಭಿಕ್ಷವಾಗಿರಲು ಸಾಧ್ಯ. ವಿಶ್ವ ಮಹಿಳಾ ದಿನದ ಹಿನ್ನೆಲೆಯಲ್ಲಿ ಉಲ್ಲೇಖಾರ್ಹ ಸಾಧನೆ ಮಾಡಿರುವ ಕರಾವಳಿಯ ಮಹಿಳೆಯರ ಯಶೋಗಾಥೆ ಇಲ್ಲಿದೆ.

Advertisement

ಪಿಎಚ್‌ಡಿ ಪಡೆಯಲಿರುವ ಮೊದಲ ಕೊರಗ ಮಹಿಳೆ
ಉಡುಪಿ: ಪಿಎಚ್‌ಡಿ ಪಡೆಯುತ್ತಿರುವ ಕೊರಗ ಸಮುದಾಯದ ಮೊದಲ ಮಹಿಳೆ ಸಹಾಯಕ ಪ್ರಾಧ್ಯಾಪಕಿ ಸಬಿತಾ ಗುಂಡ್ಮಿ. ಇವರು ಸದ್ಯ ಮಂಗಳೂರು ವಿ.ವಿ. ಸಮಾಜ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ.
ಕೊರಗ ಸಮುದಾಯದಿಂದ ಬಾಬು ಬೆಳ್ತಂಗಡಿ ಎಂಬವರು ಈಗಾಗಲೇ ಪಿಎಚ್‌ಡಿ ಪಡೆದಿದ್ದಾರೆ. ಆದರೆ ಈ ಸಮುದಾಯದಿಂದ ಮಹಿಳೆಯರು ಯಾರೂ ಪಿಎಚ್‌ಡಿ ಪಡೆದಿಲ್ಲ.

“ಕರ್ನಾಟಕ ರಾಜ್ಯದ ಬುಡಕಟ್ಟು ಅಭಿವೃದ್ಧಿ ನೀತಿಗಳು ಮತ್ತು ಕಾರ್ಯಕ್ರಮದ ಮೌಲ್ಯಮಾಪನ: ಒಂದು ಸಾಂದರ್ಭಿಕ ವಿಶ್ಲೇಷಣೆ’ ಎಂಬ ವಿಷಯದಲ್ಲಿ ಪ್ರೊ| ಜೋಗನ್‌ ಶಂಕರ್‌ ಮಾರ್ಗದರ್ಶನದಲ್ಲಿ ಪ್ರೌಢ ಪ್ರಬಂಧ ಮಂಡಿಸಿದ್ದಾರೆ. ಇದನ್ನು ಫೆ. 17ರಂದು ಮಂಗಳೂರು ವಿ.ವಿ. ಡಾಕ್ಟರೇಟ್‌ ಪದವಿಗೆ ಅಂಗೀಕರಿಸಿದೆ. ಎಪ್ರಿಲ್‌ನಲ್ಲಿ ಘಟಿಕೋತ್ಸವದಲ್ಲಿ ಡಾಕ್ಟರೇಟ್‌ ಪದವಿ ಸ್ವೀಕರಿಸಲಿದ್ದಾರೆ. ರಾಜ್ಯದ ನಿರ್ಲಕ್ಷಿತ ಬುಡಕಟ್ಟು ಸಮುದಾಯಗಳಾದ ಜೇನುಕುರುಬ ಮತ್ತು ಕೊರಗ ಸಮುದಾಯದಲ್ಲಿ ಡಾಕ್ಟರೇಟ್‌ ಪಡೆದ ಪ್ರಥಮ ಮಹಿಳೆ.

ಕೊರಗ ಮತ್ತು ಮಲೆಕುಡಿಯ ಸಮುದಾಯಗಳನ್ನು ಕೇಂದ್ರವಾಗಿಟ್ಟುಕೊಂಡು, ಇವರಿಗಾಗಿ ಇರುವ ಸರಕಾರದ ನೀತಿ ಮತ್ತು ಕಾರ್ಯಕ್ರಮಗಳ ವಿಸ್ತೃತ ಅಧ್ಯಯನ ನಡೆಸಿದ್ದೇನೆ. ರಾಜ್ಯದ ಹಾಗೂ ಮಹಾರಾಷ್ಟ್ರ ಮತ್ತು ಕೇರಳದ ವಿ.ವಿ.ಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಸಮ್ಮೇಳನಗಳಲ್ಲಿ 50ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದೇನೆ. 10ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜರ್ನಲ್‌, ಪುಸ್ತಕಗಳಲ್ಲಿ ಪ್ರಕಟವಾಗಿವೆ. ಮಂಗಳೂರು ವಿ.ವಿ.ಯ ಪ. ಜಾತಿ ಮತ್ತು ಪಂಗಡ ಘಟಕದ ವಿಶೇಷಾಧಿಕಾರಿಯಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದೇನೆ ಎಂದು ಸಬಿತಾ ಮಾಹಿತಿ ನೀಡಿದರು.

ಸ್ವೋದ್ಯೋಗಿ, ಸಮಾಜ ಸೇವಕಿ ಕಾರ್ಮಿನ್‌ ಲೂವಿಸ್‌
ಕುಂದಾಪುರ: ಮುಳ್ಳಿಕಟ್ಟೆಯ ಕಾರ್ಮಿನ್‌ ಲೂವಿಸ್‌ ಅವರಿಗೆ ಊರಲ್ಲಿ “ಬಾಯಮ್ಮ’ ಎಂದೇ ಪ್ರೀತಿಯ ಹೆಸರು. ಸ್ವೋದ್ಯೋಗ ದೊಂದಿಗೆ ಸಂಕಷ್ಟದಲ್ಲಿ ನೆರವಾಗುವ ಸಮಾಜ ಸೇವಕಿಯಾಗಿದ್ದಾರೆ.

Advertisement

64 ವರ್ಷದ ಕಾರ್ಮಿನ್‌ ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆಯ ಸ್ವಸಹಾಯ ಸಂಘ, ಜ್ಞಾನ ವಿಕಾಸ ಕೇಂದ್ರಗಳಲ್ಲಿ ಸಕ್ರಿಯರು. 30 ವರ್ಷಗಳಿಗೂ ಹೆಚ್ಚು ಕಾಲದಿಂದ ಹಂದಿ ಸಾಕಾಣಿಕೆಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಫಿನಾಯಿಲ್‌ ತಯಾರಿ ತರಬೇತಿ ಪಡೆದು, 5 ವರ್ಷಗಳಿಂದ ಮನೆಯಲ್ಲೇ ಫಿನಾಯಿಲ್‌ ತಯಾರಿಸಿ, ಮಾರಾಟ ಮಾಡುತ್ತಿದ್ದಾರೆ.

ಊರಿನ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಂಗಡಿ ಗರೊಂದಿಗೆ ಸ್ವಯಂ ಸೇವಕಿಯಾಗಿ ಸಹಕರಿಸುತ್ತಾರೆ. ಸರ್ವಧರ್ಮ ಪ್ರಿಯ ಮಹಿಳೆಯಾಗಿ ಹೆಸರು ವಾಸಿಯಾಗಿದ್ದಾರೆ. ಮೃತ್ಯು ಸಂಭವಿಸಿದ ಮನೆಗಳಿಗೆ ತೆರಳಿ ಮುಂಚೂಣಿಯಲ್ಲಿ ನಿಂತು ನೆರವಾಗುತ್ತಾರೆ.

ಪರಿಸರದಲ್ಲಿ ಅಸಹಾಯಕರು, ಮಾನಸಿಕ ಅಸ್ವಸ್ಥರು ಬಂದರೆ ಉಪಚರಿಸಿ ಕಳುಹಿಸುವ ದೊಡ್ಡ ಗುಣವಿದೆ. ಅಂಥವರನ್ನು ಆಸ್ಪತ್ರೆಗೂ ದಾಖಲಿಸುತ್ತಾರೆ. ಇವರ ಸಾಮಾಜಿಕ ಕಳಕಳಿಗೆ ಹತ್ತಾರು ಸಂಘಟನೆಗಳು ಸಮ್ಮಾನಿಸಿ, ಗೌರವಿಸಿದ್ದು, “ಸಂಪದ ಉಡುಪಿ’ ಸಂಸ್ಥೆಯು “ಸಾಧಕಿ’ ಎನ್ನುವ ಪ್ರಶಸ್ತಿ ನೀಡಿದೆ. ಅರಾಟೆಯಲ್ಲಿಯೂ ಸಮ್ಮಾನಿಸಲಾಗಿತ್ತು.

ಸ್ವಸಹಾಯ ಸಂಘದಡಿ ಮಹಿಳಾ ಹೊಟೇಲ್‌ ಕಮಾಲ್‌
ಬೆಳ್ತಂಗಡಿ: ಇಲ್ಲಿನ ಕಕ್ಕಿಂಜೆಯಲ್ಲಿ ಮಹಿಳೆಯರೇ ಹೊಟೇಲ್‌ ಆರಂಭಿಸಿ ಮುನ್ನಡೆಸುತ್ತಿದ್ದಾರೆ. ಸಂಜೀವಿನಿ ಒಕ್ಕೂಟದಡಿ 10 ಮಹಿಳೆಯರು ಪಂಚಶ್ರೀ ಸ್ವಸಹಾಯ ಸಂಘ ಕಟ್ಟಿದ್ದಾರೆ. ಸದಸ್ಯೆ ಶೈಲಜಾ ಹೊಟೇಲ್‌ ತೆರೆಯುವ ಚಿಂತನೆ ನಡೆಸಿದ್ದರು. ಸಂಘದಿಂದ 3 ಲಕ್ಷ ರೂ. ಸಾಲ ಪಡೆದು ಗ್ರಾ.ಪಂ. – ನರೇಗಾ ಎನ್‌ಆರ್‌ಎಲ್‌ಎಂ ಯೋಜನೆಯಡಿ ಶೆಡ್‌ ಸಹಾಯದಿಂದ 2019ರಲ್ಲಿ ಕಕ್ಕಿಂಜೆ ಪೇಟೆಯಲ್ಲಿ ಹೊಟೇಲ್‌ ಪ್ರಾರಂಭಿಸಿದರು.


ತಂಡದಲ್ಲಿ 6 ಮಂದಿ ಪಂ. ಸದಸ್ಯರು ಮತ್ತು ನಾಲ್ವರು ಗೃಹಿಣಿಯರು. ನಾಲ್ವರು ಮಹಿಳೆಯರು ವ್ಯವಸ್ಥಾಪಕ ಹುದ್ದೆಯಿಂದ ಕ್ಲೀನಿಂಗ್‌ ತನಕದ ಕೆಲಸ ನಿರ್ವಹಿಸುತ್ತಾರೆ. ಎಲ್ಲ 10 ಸದಸ್ಯರು ಹೊಟೇಲ್‌ನ ಯಾವುದೇ ಕೆಲಸವನ್ನು ನಿರ್ವಹಿಸಲು ಸಮರ್ಥರು. ಫೆ. 12ಕ್ಕೆ ಹೋಟೆಲ್‌ ಮೂರನೇ ವರ್ಷಕ್ಕೆ ಕಾಲಿರಿಸಿದೆ.
ಶೈಲಜಾ, ವಿನೋದಾ, ಶಾಂಭವತಿ, ದೇವಕಿ, ಆಶಾ, ಕೇಶವತಿ ಈ ಆರು ಪಂ. ಸದಸ್ಯರು ಹಾಗೂ ಸೌಮ್ಯಾ, ಲತಾ, ಬೇಬಿ, ಶ್ರೀಲತಾ ಪಂಚಾಯತ್‌ ಪ್ರೇರಣೆಯಿಂದ ಸಂಜೀವಿನಿ ಪಂಚಶ್ರೀ ಸ್ವಸಹಾಯ ಸಂಘವನ್ನು ಆರಂಭಿಸಿ ಮುನ್ನಡೆದವರು. ಶೈಲಜಾ ನೇತೃತ್ವದಲ್ಲಿ ಪದ್ಮಾವತಿ, ಚಂದ್ರಾವತಿ, ಶ್ರೀಲತಾ ಹೊಟೇಲ್‌ ಮುನ್ನಡೆಸುತ್ತಿದ್ದಾರೆ. ಮಿತ ದರದ ತಿಂಡಿ-ಊಟ ಸಹಿತ ಬೆಳಗ್ಗೆ 7ರಿಂದ ಸಂಜೆ 5.30ರ ತನಕ ಹೊಟೇಲ್‌ ಕಾರ್ಯನಿರ್ವಹಿಸುತ್ತಿದೆ.

ಸಾಕ್ಷರತೆಯಲ್ಲಿ ಕ್ರಾಂತಿ ಮಾಡಿದ ಕಾರ್ಯಕರ್ತೆ
ಪುತ್ತೂರು: ಮೂವತ್ತು ವರ್ಷಗಳ ಸೇವಾವಧಿಯಲ್ಲಿ ಗ್ರಾಮದಲ್ಲಿ ಸಾಕ್ಷರತೆಯ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಿ 150ಕ್ಕೂ ಅಧಿಕ ಮಂದಿಗೆ ಓದು, ಬರವಣಿಗೆಯ ಅಭ್ಯಾಸ ಮಾಡಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿ ಸಾಕ್ಷರತೆಯ ಕ್ರಾಂತಿ ಮಾಡಿದವರು ಪುತ್ತೂರು ತಾಲೂಕಿನ ಚಿಕ್ಕಮುಟ್ನೂರು ಗ್ರಾಮದ ಬೀರಿಗ ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ.

2013 ಮತ್ತು 2014ರಲ್ಲಿ ಎರಡು ಬಾರಿ ರಾಜ್ಯ ಮಟ್ಟದ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಇವರಿಗೆ ಸಂದಿವೆ. ಸ್ವತ್ಛತೆ, ಸಾಕ್ಷರತೆ, ಉದ್ಯೋಗ ಖಾತರಿ ಯೋಜನೆ, ಸೋಲಾರ್‌ ಅಳವಡಿಕೆ, ಮಹಿಳಾ ಸಶಕ್ತೀಕರಣ ಕ್ಷೇತ್ರಗಳಲ್ಲಿ ಗ್ರಾಮದಲ್ಲಿ ಅಪೂರ್ವ ಸಾಧನೆ ಮಾಡಿದ ಹೆಗ್ಗಳಿಕೆ ಇವರದ್ದು. ವಿದ್ಯುತ್‌ ರಹಿತ ಮನೆಗಳಿಗೆ ಸೋಲಾರ್‌ ಅಳವಡಿಕೆಯ ಬಗ್ಗೆ ಜಾಗೃತಿ ಮೂಡಿಸಿ ಸಂಘ ಸಂಸ್ಥೆಗಳ ಸಹಕಾರ ಪಡೆದು ಬೆಳಕು ಹರಿಸುವಲ್ಲಿ ಕೊಡುಗೆ ನೀಡಿದ್ದಾರೆ. ಇವರ ಮೂಲಕ ಅಕ್ಷರ ಕಲಿತ ಗ್ರಾಮದ ಇಬ್ಬರು ಎಸೆಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಸಾಧನೆ ಮಾಡಿದ್ದಾರೆ. 2008ರಲ್ಲಿ ಉದ್ಯೋಗ ಖಾತರಿ ಯೋಜನೆ ಪ್ರಾರಂಭಗೊಂಡಾಗ ಅದರಲ್ಲಿ ತೊಡಗಿಸಿಕೊಳ್ಳಲು ಮನೆ ಮನೆಗೆ ತೆರಳಿ ಜನರಿಗೆ ಪ್ರೇರಣೆ ನೀಡಿದ್ದರು.

ಅಂಗನವಾಡಿ ಕಾರ್ಯಕರ್ತೆಯಾಗಿ ಸಾಧನೆ
ಉಡುಪಿ: ತಾನು ಸೇವೆ ಸಲ್ಲಿಸುತ್ತಿರುವ ಅಂಗನವಾಡಿಯಲ್ಲಿ ಚಿಣ್ಣರ ದಾಖಲಾತಿಯನ್ನು ಗಣನೀಯವಾಗಿ ಹೆಚ್ಚಿಸಲು ಶ್ರಮ ವಹಿಸಿರುವ ಜತೆಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೇಂದ್ರವನ್ನು ಮಾದರಿಯಾಗಿ ರೂಪಿಸಿ, ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಉಡುಪಿ ಜಿಲ್ಲೆಯ ಪಲಿಮಾರು ಗ್ರಾ.ಪಂ.ನ ನಂದಿಕೂರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಲತಾ ಪೂಜಾರಿ.

2015ರ ಮೊದಲು ಡಾಟಾ ಎಂಟ್ರಿ ಆಪರೇಟರ್‌ ಆಗಿದ್ದೆ. ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆಗೆ ಸೇರಿದಾಗ ನಮ್ಮ ಅಂಗನವಾಡಿಯಲ್ಲಿ 7ರಿಂದ 8 ಮಕ್ಕಳು ಇದ್ದರು. ಈಗ 30ರಿಂದ 35 ಮಕ್ಕಳು ಬರುತ್ತಾರೆ. ಆಟಿಕೆ ಮತ್ತು ವಿವಿಧ ಸೌಲಭ್ಯಗಳನ್ನು ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಜೋಡಿಸಿಕೊಂಡಿದ್ದೇವೆ. ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗೆ ಒತ್ತು ನೀಡುವ ಜತೆಗೆ ಅವರನ್ನು ಇದರಲ್ಲಿ ಸಕ್ರಿಯಗೊಳಿಸುತ್ತಿದ್ದೇವೆ ಎಂದು ಲತಾ ಮಾಹಿತಿ ನೀಡಿದರು.

ನಮ್ಮ ಅಂಗನವಾಡಿ ವ್ಯಾಪ್ತಿಯಲ್ಲಿರುವ ಮಕ್ಕಳ ಬೆಳವಣಿಗೆಯ ಮೇಲೆ ನಿರಂತರ ನಿಗಾ ವಹಿಸಿ, ಅವರ ಪೌಷ್ಟಿಕತೆ ಪ್ರಮಾಣ ಅರಿತು ನಿರಂತರ ಪಾಲಕರಿಗೆ ತಿಳಿಸುವ ಕಾರ್ಯ ಮಾಡುತ್ತಿದ್ದೇವೆ. ಅಂಗನವಾಡಿ ಕೇಂದ್ರದ ಸುತ್ತ ಕೈತೋಟ ಮಾಡಿದ್ದೇವೆ. 15ಕ್ಕೂ ಅಧಿಕ ಬಗೆಯ ತರಕಾರಿಗಳನ್ನು ಸಾವಯವ ಗೊಬ್ಬರ ಹಾಕಿ ಬೆಳೆಯುತ್ತಿದ್ದೇವೆ. ಎಲ್ಲ ತರಕಾರಿಗಳನ್ನು ಮಕ್ಕಳ ಬಿಸಿಯೂಟಕ್ಕೆ ಬಳಸುತ್ತೇವೆ. ಊರಿನವರು ಸಹಕಾರ ನೀಡುತ್ತಿದ್ದಾರೆ. ಮೇಲ್ವಿಚಾರಕಿ ಶಕುಂತಳಾ ಮತ್ತು ಸಹಾಯಕಿ ಅಂಬಿಕಾ ಅವರ ಶ್ರಮವೂ ಇದರಲ್ಲಿದೆ ಎಂದು ವಿವರ ನೀಡಿದರು.

ಪೂರ್ಲಿಪಾಡಿಯ ಧನಲಕ್ಷ್ಮೀ ಸ್ತ್ರೀಶಕ್ತಿ ಗುಂಪು
ಬಂಟ್ವಾಳ: ಇದು 10-12 ಮಹಿಳೆಯರ ತಂಡ. ಎಲ್ಲರೂ ಆರ್ಥಿಕ ಚಟುವಟಿಕೆಯ ಮೂಲಕ ಸ್ವಾಭಿಮಾನದ ಬದುಕು ಕಂಡವರು. ಇಂಥ ಸ್ವಾಭಿಮಾನದ ಬದುಕು ಕಲ್ಪಿಸಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ತ್ರೀಶಕ್ತಿ ಗುಂಪು. ಇದು ರಾಜ್ಯ ಮಟ್ಟದ ಪ್ರಶಸ್ತಿಗೂ ಆಯ್ಕೆಯಾಗಿದೆ.

ಕಲ್ಲಡ್ಕ ಸಮೀಪದ ಪೂರ್ಲಿಪಾಡಿಯ ಧನಲಕ್ಷ್ಮೀ ಸ್ತ್ರೀಶಕ್ತಿ ತಂಡದ ನಾಗರತ್ನಾ ಇದೇ ಗುಂಪಿನ ಮೂಲಕ ಸಾಲ ಪಡೆದು ಸ್ಥಾಪಿಸಿದ ಬೇಕರಿ ಉದ್ಯಮ ಹತ್ತಾರು ಕಡೆ ಹೆಸರು ಪಡೆದಿದೆ. ತಮ್ಮ ಉದ್ಯಮಕ್ಕೆ ಅವರು ಧನಲಕ್ಷ್ಮೀ ಹೋಮ್‌ ಪ್ರೊಡಕ್ಟ್ ಎಂದೇ ಹೆಸರಿಟ್ಟಿದ್ದಾರೆ. ಗುಂಪಿನ ಮೂರ್‍ನಾಲ್ಕು ಸದಸ್ಯರಿಗೆ ಉದ್ಯೋಗವನ್ನೂ ನೀಡಿದ್ದಾರೆ.
ಗುಂಪಿನ ಇತರ ಸದಸ್ಯೆಯರು ಹೈನುಗಾರಿಕೆ, ಮನೆಯಲ್ಲೇ ಹಪ್ಪಳ, ಸಂಡಿಗೆ ತಯಾರಿ, ಕೃಷಿ ಹೀಗೆ ಇತರ ಆರ್ಥಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಉತ್ಪನ್ನಗಳನ್ನು ಜಿಲ್ಲೆ, ರಾಜ್ಯ ಮಟ್ಟದ ಮಾರಾಟ ಮೇಳಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

2001ರಲ್ಲಿ 10 ಸದಸ್ಯೆಯರನ್ನು ಒಳಗೊಂಡು ಆರಂಭಗೊಂಡ ತಂಡದಲ್ಲಿ ಪ್ರಸ್ತುತ 12 ಮಂದಿ ಸದಸ್ಯೆಯರಿದ್ದು, ಇವರ ಚಟುವಟಿಕೆಗಳಿಗೆ ಬಂಟ್ವಾಳ ಸಿಡಿಪಿಒ, ಮೇಲ್ವಿಚಾರಕರು ಮತ್ತು ಇಲಾಖೆ ಸಿಬಂದಿ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಕೊರೊನಾ ಸಂದರ್ಭ ನಾಗರತ್ನಾ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ನೆರವಾಗಿದ್ದಾರೆ. ಈ ಎಲ್ಲ ಚಟುವಟಿಕೆಗಳನ್ನು ಪರಿಗಣಿಸಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಉಮಾವತಿ ವಿವರಿಸುತ್ತಾರೆ.

ಅಂಗನವಾಡಿಯನ್ನು ಮನೆಯಂತೆ ಪ್ರೀತಿಸಿದ ಅರುಣಕುಮಾರಿ
ಬಂಟ್ವಾಳ: ಇವರು ಅಂಗನವಾಡಿ ಕೇಂದ್ರವನ್ನು ತನ್ನ ಮನೆಯಂತೆ ಪ್ರೀತಿಸಿದವರು. ಅದಕ್ಕೆ ಏನೇನು ಬೇಕೋ ಅದೆಲ್ಲವನ್ನೂ ಕಲ್ಪಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದಾನಿಗಳ ನೆರವನ್ನೂ ಪಡೆದರು. ಅದರ ಫಲವಾಗಿಯೇ ಅವರ ಅಂಗನವಾಡಿ ಮಾದರಿ ಕೇಂದ್ರವಾಯಿತು. ಈಗ ಆ ಕೇಂದ್ರದಂತೆ ಅದರ ಕಾರ್ಯಕರ್ತೆಯೂ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದು ಬಂಟ್ವಾಳದ ನೆಟ್ಲ ಶಾಲಾ ಅಂಗನ ವಾಡಿ ಕಾರ್ಯಕರ್ತೆ ಅರುಣಕುಮಾರಿ ಅವರ ಪರಿಶ್ರಮದ ಕತೆ. ಅವರು ಈಗ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡುವ 2021- 22ನೇ ಸಾಲಿನ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಾಮಾನ್ಯವಾಗಿ ಅಂಗನವಾಡಿ ಕೇಂದ್ರಗಳ ನಿವೇಶನಗಳ ಆರ್‌ಟಿಸಿ ಆಗಿರುವುದಿಲ್ಲ. ಆದರೆ ಈ ಕೇಂದ್ರದ ಆರ್‌ಟಿಸಿಯು ಇವರ ಪ್ರಯತ್ನದಿಂದಲೇ ಆಗಿದೆ. ಕೇಂದ್ರಕ್ಕೆ ಕಟ್ಟಡ ಸರಕಾರದಿಂದ ಒದಗಿದ್ದರೂ ಅದನ್ನು ಸುಂದರಗೊಳಿಸುವ ಪೂರ್ಣ ಜವಾಬ್ದಾರಿ ಹೊತ್ತರು. ಕೇಂದ್ರಕ್ಕೆ ಅಕ್ವಾಗಾರ್ಡ್‌, ಕಂಪ್ಯೂಟರ್‌, ಮಕ್ಕಳ ಕುರ್ಚಿ, ಇತರರಿಗೆ ಕುರ್ಚಿಗಳು, ಜಾರುಬಂಡಿ, ಉಯ್ನಾಲೆ -ಹೀಗೆ ಎಲ್ಲವೂ ಇಲ್ಲಿದೆ. ಲಸಿಕೆ ವಿತರಣೆಯಲ್ಲೂ ಈ ಕೇಂದ್ರ ಗುರಿ ಸಾಧಿಸಿದೆ, ಸ್ತ್ರೀಶಕ್ತಿ ಗುಂಪು ಅಚ್ಚುಕಟ್ಟಾಗಿದೆ. ಅಂಗನವಾಡಿಗೆ ಎಲ್ಲ ವ್ಯವಸ್ಥೆಗಳನ್ನು ದಾನಿಗಳ ಸಹಕಾರದಿಂದ ಒದಗಿಸಿದ್ದೇನೆ, ಜತೆಗೆ ಇಲಾಖೆ ನೀಡಿದ ಜವಾಬ್ದಾರಿಗಳನ್ನೂ ಗರಿಷ್ಠ ಮಟ್ಟದಲ್ಲಿ ನಿಭಾಯಿಸಿದ್ದೇನೆ. ಇಲಾಖೆಯ ಸಿಡಿಪಿಒ, ಮೇಲ್ವಿಚಾರಕರು, ಊರವರ ಸಹಕಾರದಿಂದ ಈ ಪ್ರಶಸ್ತಿ ಬಂದಿದೆ ಎಂದು ಅರುಣಕುಮಾರಿ ಹೇಳುತ್ತಾರೆ.

20ನೇ ವಯಸ್ಸಿಗೆ ಟಿಲ್ಲರ್‌ ಉಳುಮೆ ಕಲಿತರು
ಕಾರ್ಕಳ: ಮುದ್ರಾಡಿ ವರಂಗ ಬಳಿಯ ನಿವಾಸಿ 55ರ ವಯಸ್ಸಿನ ರೇವತಿ ನಾಯಕ್‌ (ಇಂದಿರಾ ನಾಯಕ್‌) ರೈತ ಮಹಿಳೆ. ಪದವಿ ಶಿಕ್ಷಣ ಪಡೆದಿದ್ದಾರೆ. 35 ವರ್ಷಗಳಷ್ಟು ಹಿಂದಿನಿಂದ ಕೃಷಿಯಲ್ಲಿ ತೊಡಗಿದ್ದಾರೆ. ಟಿಲ್ಲರ್‌ ಖರೀದಿಸಿ, ಚಾಲನೆ ಕಲಿತು ಭತ್ತದ ಗದ್ದೆಯ ಉಳುಮೆ ಮಾಡಿದ ಸಾಧನೆ ಇವರದು.

ಕೆಲಸದ ಒತ್ತಡದಿಂದ ಕೆಲವೊಮ್ಮೆ ಟಿಲ್ಲರ್‌ ಚಲಾಯಿಸಲು ಬೇರೆ ಜನ ಮಾಡಿದರೂ ಹೆಚ್ಚಾಗಿ ಇವರೇ ಟಿಲ್ಲರ್‌ನಿಂದ ಉಳುಮೆ ಮಾಡುತ್ತಾರೆ. 1.5 ಎಕರೆ ಭತ್ತದ ಗದ್ದೆ ಜತೆಗೆ ಅಡಿಕೆ ಕೃಷಿ ಹೊಂದಿದ್ದಾರೆ. ಸ್ವಲ್ಪ ಸಮಯ ಶಿಕ್ಷಕಿಯಾಗಿದ್ದರು. ಆಧುನಿಕ ತಂತ್ರಜ್ಞಾನ ಬಂದ ಬಳಿಕ ನಾನೇ ಟಿಲ್ಲರ್‌ ಚಾಲನೆ ಕಲಿತು ಮಾಡಿ ಉಳುಮೆ ಮಾಡಲು ಆರಂಭಿಸಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. 20 ವರ್ಷ ವಯಸ್ಸಿನಲ್ಲಿಯೇ ಟಿಲ್ಲರ್‌ ಚಾಲನೆ ಮಾಡಿ ಉಳುಮೆ ಮಾಡುತ್ತಿದ್ದ ಇವ ರನ್ನು ಕೃಷಿ ಇಲಾಖೆ, ಸಂಘ ಸಂಸ್ಥೆಗಳು ಸಮ್ಮಾ ನಿಸಿವೆ. ಶ್ರೀ ಕ್ಷೇ.ಧ. ಯೋಜನೆಯವರು ಕೃಷಿ ಮೇಳದಲ್ಲಿ ಗೌರವಿಸಿದ್ದಾರೆ. ಇವರು ಅಪರ್ಣಾ ಸ್ವಸಹಾಯ ಗುಂಪಿನ ಸದಸ್ಯೆಯೂ ಆಗಿದ್ದಾರೆ.

ಬರಹಗಳು: ರಾಜು ಖಾರ್ವಿ ಕೊಡೇರಿ, ಕಿರಣ್‌ ಸರಪಾಡಿ,
ಕಿರಣ್‌ ಪ್ರಸಾದ್‌ ಕುಂಡಡ್ಕ, ಪ್ರಶಾಂತ್‌ ಪಾದೆ, ಚೈತ್ರೇಶ್‌ ಇಳಂತಿಲ, ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next