Advertisement

World Water Day: ಜುಳು ಜುಳು ಸದ್ದೇಕೆ ಉರಿ ಮೌನ

11:13 AM Mar 22, 2024 | Team Udayavani |

ಹೀಗೆ ವಾಟ್ಸಾಪ್ ನೋಡುತ್ತಿದ್ದಾಗ ದಿಢೀರನೆ ಒಂದು ವಿಡಿಯೋ ನನ್ನ ಗಮನ ಸೆಳೆದಿತ್ತು. ಅದು ನೀರಿನ ಕುರಿತಾಗಿತ್ತು. ಮೊದಲು ನಮ್ಮ ಅಜ್ಜಂದಿರು ನೀರನ್ನು ನದಿಯಲ್ಲಿ ಕಾಣುತ್ತಿದ್ದರಂತೆ, ನಮ್ಮಪ್ಪಂದಿರು ಬಾವಿಯಲ್ಲಿ ಕಂಡರಂತೆ, ಮುಂದುವರಿಯುತ್ತಾ ನಮ್ಮ ಜನಾಂಗದವರು ನಳ್ಳಿಯಲ್ಲಿ ಕಂಡರಂತೆ, ಪ್ರಸ್ತುತ ಈಗಿನ ಮಕ್ಕಳು ಬಾಟಲಿಯಲ್ಲಿ ಕಂಡರೆ ಮುಂದಿನ ಜನಾಂಗದ ಮಕ್ಕಳು ಬಾಟಲಿಯಲ್ಲಿ ಕಾಣುವರೇ ಎಂಬ ಪ್ರಶ್ನಾರ್ಥಕ ಚಿಹ್ನೆ. ನಾವು ಇನ್ನೂ ಎಚ್ಚೆತ್ತು ಕೊಳ್ಳದಿದ್ದರೆ ಮನುಷ್ಯನ ಕಣ್ಣೀರಿನಲ್ಲಿ ಮಾತ್ರ ನೀರು ಕಾಣಲು ಸಾಧ್ಯ ಎಂಬುವುದು ಭಯಾನಕ ಸತ್ಯ. ಈಗಿನ ಪರಿಸ್ಥಿತಿ ನೋಡಿದರೆ ಇವೆಲ್ಲಾ ಮಾತುಗಳು ನಿಜ ಅನ್ಸುತ್ತೆ ಅಲ್ವಾ?

Advertisement

ನೀರು ಪ್ರತಿಯೊಬ್ಬನಿಗೂ ಬೇಕಾದ ಅತ್ಯಮೂಲ್ಯ ದ್ರವ್ಯ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳು ಸರಿಯಾಗಿ ಕಾರ್ಯ ನಿರ್ವಹಿಸಲು ನೀರು ಅತ್ಯಗತ್ಯ ಎಂಬುದು ತಿಳಿದ ಸಂಗತಿ. ಸಂಕ್ಷಿಪ್ತವಾಗಿ ಹೇಳುವುದಾದರೆ ನಮ್ಮ ಅಸ್ತಿತ್ವದ ಅಡಿಪಾಯವೇ ನೀರಾಗಿದೆ. ಹೀಗೆ ನಾನಾ ಉಪಯೋಗಗಳನ್ನು ಒಳಗೊಂಡ ನೀರು ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಸರಿಯಾಗಿ ದೊರೆಯುತ್ತಿಲ್ಲ. ನೀರಿನ ತಾಣವೇ ಆಗಿರುವ ಕರ್ನಾಟಕದಲ್ಲಿ ಇಂದು ನೀರಿನ ಅಭಾವ ಸಾಕಷ್ಟು ಜನರನ್ನು ಕಾಡುತ್ತಿದೆ. ತುಂಬಿ ಹರಿಯುತ್ತಿದ್ದ ನದಿ ತೊರೆಗಳು ಇದೀಗ ತಮ್ಮ ಸದ್ದನ್ನೇ ನಿಲ್ಲಿಸಿಬಿಡುವ ಮಟ್ಟಕ್ಕೆ ಬಂದು ನಿಂತಿವೆ. ಕುಡಿಯುವ ನೀರಿಗೂ ಸಹ ಜನ ಪರದಾಡುವಂತಾಗಿದೆ.

ತನ್ನಷ್ಟಕ್ಕೆ ತಾನೇ ರಭಸದಿಂದ ಹರಿಯುತ್ತಿದ್ದ ತುಂಗೆ, ನೇತ್ರಾವತಿ, ಕಾವೇರಿ ಕುಮಾರಧಾರಗಳೆಲ್ಲವೂ ಇಂದು ಮೌನ ಸ್ಥಿತಿಗೆ ಬಂದು ತಲುಪಿವೆ. ರಣಬಿಸಿಲಿಗೆ ನದಿಯ ತಟದಲ್ಲಿ ನೀರಿಲ್ಲದೆ, ಜನ ತೊಟ್ಟು ನೀರಿಗೂ ಮುಗಿಬೀಳುವಂತಾಗಿದೆ. ತುಂಬಿ ತುಳುಕುವ ವೆಂಟೆಡ್ ಡ್ಯಾಮ್ ನಲ್ಲೂ ನೀರಿನ ಕೊರತೆ ಎದುರಾಗುವ ಸನಿಹದಲ್ಲಿದ್ದು, ಟ್ಯಾಂಕರ್ ಗಳ ಮೂಲಕ ನೀರಿನ್ನು ಸಾಗಿಸುವ ಅನಿವಾರ್ಯತೆ ಎದುರಾಗಿದೆ. ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೊಳವೆಬಾವಿಗಳೂ ಕೆಲವೆಡೆ ಬತ್ತಿ ಹೋದ ಸನ್ನಿವೇಶಗಳೂ ಉದಾಹರಣೆಯಲ್ಲಿವೆ. ಸುಡು ಸುಡು ಬಿಸಿಲಿನಿಂದ ಕಾಡ್ಗಿಚ್ಚು ಸಂಭವಿಸಿದರೆ ಅದನ್ನು ನಂದಿಸಲೂ ಸಹ ನೀರಿಲ್ಲದಂತಹ ಸಂಕಷ್ಟ ಎದುರಾಗಿದೆ.  ಎಲ್ಲಾ ಜನರ ಬಾಯಿಯಿಂದಲೂ “ಹೀಗಾದ್ರೆ ಮುಂದೇನು” ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿಚಾರ ಮಾಡಿ ನೋಡಿದರೆ ನೀರಿನ ಅಭಾವ ಕಂಡುಬರುತ್ತಿರುವುದು ಸ್ವತಃ ಮನುಷ್ಯನಿಂದಲೇ ಎನ್ನುವುದು ಕಹಿಸತ್ಯ. ಈಗ ನೀರಿಲ್ಲ ಎಂದು ಪರದಾಡುವ ನಾವು ನೀರನ್ನು ಎಷ್ಟರ ಮಟ್ಟಿಗೆ ಮಿತವಾಗಿ ಬಳಸಿಕೊಂಡಿದ್ದೆವು. ನೀರಿನ ಮೂಲವೇ ಆಗಿದ್ದ ನದಿಗಳನ್ನು ಎಷ್ಟರ ಮಟ್ಟಿಗೆ ಸ್ವಚ್ಛವಾಗಿರಿಸಿಕೊಂಡಿದ್ದೆವು. ತೊಟ್ಟಿಯನ್ನು ಸೇರಬೇಕಾಗಿದ್ದ ಕಸದ ರಾಶಿಯೇ ನದಿಗಳನ್ನು ಸೇರಿ ನದಿ ಹಾಗೂ ನೀರಿನ ಇತರೆ ಮೂಲಗಳನ್ನು ಮಲಿನಗೊಳಿಸಿದರೆ ಅವುಗಳ ಪರಿಸ್ಥಿತಿ ಏನಾಗಬೇಕು. ತ್ಯಾಜ್ಯ ವಸ್ತುಗಳು ನದಿಯನ್ನು ಸೇರುವುದರಿಂದ ನದಿಗಳು ಕಲುಷಿತವಾಗುವುದಲ್ಲದೆ, ಅವುಗಳ ಪಾತ್ರವೂ ಕಿರಿದಾಗುತ್ತಾ ಹೋಗುತ್ತವೆ. ಇಂದು ನೀರಿಲ್ಲ ಎಂದು ಒಬ್ಬರನ್ನೊಬ್ಬರು ದೂರುವ ಬದಲಿಗೆ ನೀರಿನ ಮೂಲಗಳನ್ನು ಮಿತವಾಗಿ ಬಳಸಿ ಸ್ವಚ್ಛತೆಯಿಂದ ಇರಿಸಿಕೊಳ್ಳುತ್ತಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.

Advertisement

ನೀರು ಸಂರಕ್ಷಣೆ ಮಾಡಲು ಸರ್ಕಾರ ಕೆಲವೊಂದು ಪ್ರಾಜೆಕ್ಟ್ ಗಳನ್ನೂ ಕೈಗೊಂಡಿದೆ. ಅದರಲ್ಲೊಂದು ಜಲ ಸಂಚಯ ಪ್ರಾಜೆಕ್ಟ್‌. ಇದು ನೀರು ಸಂರಕ್ಷಣೆ ಉಪಕ್ರಮವಾಗಿದ್ದು, ಬಿಹಾರದ ನಳಂದ ಜಿಲ್ಲೆಯಲ್ಲಿ ಆರಂಭಿಸಲಾಗಿತ್ತು. ಚೆಕ್ ಡ್ಯಾಮ್‌ಗಳನ್ನು ನಿರ್ಮಾಣ ಮಾಡುವುದು ಮತ್ತು ನೀರಾವರಿ ವ್ಯವಸ್ಥೆ ಮತ್ತು ಸಾಂಪ್ರದಾಯಿಕ ಜಲ ಮೂಲದ ಹೂಳೆತ್ತುವುದು ಮತ್ತು ಪುನಶ್ಚೇತನ ಮಾಡುವುದು ಇದರ ಪ್ರಮುಖ ಉದ್ದೇಶ.  2017 ರಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರೀಯ ಪುರಸ್ಕಾರಕ್ಕೂ ಈ ಯೋಜನೆ ಆಯ್ಕೆಯಾಗಿತ್ತು. ಪ್ರಸ್ತುತ ನೀರಿನ್ನು ಉಳಿಸುವಲ್ಲಿ ಸರ್ಕಾರ ಸೇರಿದಂತೆ ಸಾಮಾನ್ಯ ಜನರೂ ಎಚ್ಚೆತ್ತುಕೊಳ್ಳಬೇಕಾಗಿದೆ. ನೀರಿನ ಅಳಿವು ಉಳಿವು ಜನರ ಮೇಲೆಯೇ ಕೇಂದ್ರೀಕೃತವಾಗಿದ್ದು, ಮಿತವಾದ ನೀರಿನ ಬಳಕೆ ಹಾಗೂ ನೀರನ್ನು ಸಂರಕ್ಷಿಸಲು ಕೈಜೋಡಿಸಬೇಕಿದೆ.

ನೀರಿನ ದುರ್ಬಳಕೆಯಂತಹ ವಿಕೃತಿಗಳು ಇನ್ನಾದರೂ ನಿಲ್ಲಲಿ. ಬರ ಸಮೀಪದಲ್ಲಿರುವ ಈ ಸಮಯದಲ್ಲಿ ನೀರಿನ ಹಾಗೂ ನದಿಗಳ ಪ್ರಾಮುಖ್ಯತೆ ಏನೆಂದು ಮನುಷ್ಯನಿಗೆ ಈಗಲಾದರೂ ಮನವರಿಕೆಯಾಗಲಿ. ನದಿಗಳನ್ನು, ನೀರಿನ ಇತರೆ ಮೂಲಗಳನ್ನು ಕಲುಷಿತಗೊಳಿಸಿದವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು.

ನೀರಿನ ಅಭಾವವನ್ನು ಕಡಿಮೆ ಮಾಡಲು ಇರುವ ಒಂದೇ ಒಂದು ದಾರಿ ಎಂದರೆ ನೀರಿನ ಮಿತವಾದ ಬಳಕೆ. ಆದರೆ ದುರಾದೃಷ್ಟವಶಾತ್ ನೀರು ಇಂದು ಅತ್ಯಂತ ವೇಗವಾಗಿ ವ್ಯರ್ಥವಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಪ್ರತಿಯೊಬ್ಬ ನಾಗರಿಕನೂ ಒಗ್ಗೂಡಬೇಕು. ನೀರನ್ನು ಅನಗತ್ಯವಾಗಿ ವ್ಯರ್ಥ ಮಾಡದೆ, ಬಹಳ ಬುದ್ಧಿವಂತಿಕೆಯಿಂದ ಬಳಸಿ ಭೂಮಿ ಮೇಲಿನ ಅಪೂರ್ವ ಜಲ ಸಂಪತ್ತನ್ನು ಉಳಿಸಬೇಕೆಂದು ಪ್ರತಿಯೊಬ್ಬನೂ ಸಂಕಲ್ಪ ಮಾಡಬೇಕು.

ಲಾವಣ್ಯ. ಎಸ್.

ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಸ್ವಾಯತ್ತ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next