ಕಾಪು: ನೀರು ಪ್ರಕೃತಿ ನಮಗೆ ನೀಡಿರುವ ವರ. ಬೇಸಗೆಯ ಈ ದಿನಗಳಲ್ಲಿ ನೀರು ನಮ್ಮ ಕೈಜಾರಿ ಹೋಗದಂತೆ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಹಾಗೂ ಮುಂದಿನ ಜನಾಂಗದ ಭವ್ಯ ಭವಿಷ್ಯಕ್ಕಾಗಿ ನೆಲ ಜಲದ ಸಂರಕ್ಷಣೆ ಅತ್ಯಗತ್ಯವಾಗಿದೆ. ನೀರಿನ ಮಹತ್ವ ಅರಿತು, ಜಲಸಂಪನ್ಮೂಲದ ರಕ್ಷಣೆಗೆ ರಚನಾತ್ಮಕವಾಗಿ ವ್ಯೂಹ ರಚಿಸಿದರೆ ಇದರ ಸಂರಕ್ಷಣೆ ಸಾಧ್ಯ ಎಂದು ಎಲ್ಲೂರು ಗ್ರಾ.ಪಂ. ಕಾರ್ಯದರ್ಶಿ ಚಂದ್ರಶೇಖರ್ ಸಾಲಿಯಾನ್ ಹೇಳಿದರು.
ಮಾ. 22ರಂದು ಎಲ್ಲೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಶುದ್ಧ ನೀರಿನ ಮಹತ್ವ ತಿಳಿಸುವ ಉದ್ದೇಶದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಭಿವೃದ್ದಿಯ ನೆಪದಲ್ಲಿ ನಾವು ಕಾಡನ್ನು ನಾಶ ಮಾಡುತ್ತಿದ್ದೇವೆ. ತಾಪಮಾನದ ಏರಿಳಿತದಿಂದಾಗಿ ದಿನ ಹೋದಂತೆ ಕೆರೆ, ಹಳ್ಳಗಳು ಮಾಯವಾಗುತ್ತಿವೆ. ಲಭ್ಯವಿರುವ ಜಲಮೂಲ ನಿರ್ಮಿಸುವ ಮೂಲಕ ಜಲಸಂಪನ್ಮೂಲದ ರಕ್ಷಣೆ ಸಾಧ್ಯ. ಹೆಚ್ಚು ಮರಗಳನ್ನು ನೆಡುವ ಮೂಲಕ ಹಸಿರು ಹೊದಿಕೆ ಹೆಚ್ಚಿಸಲು ಪ್ರಯತ್ನಿಸಬೇಕಾಗಿದೆ. ನಾಡಿನಲ್ಲಿ ಹನಿ ನೀರನ್ನು ಉಳಿಸಿ, ಕಾಡನ್ನು ಬೆಳೆಸಿ ಆರೋಗ್ಯವಂತ ಭೂಮಿಯನ್ನು ಭವಿಷ್ಯದ ಜನಾಂಗಕ್ಕೆ ಹಸ್ತಾಂತರಿಸುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಮುದರಂಗಡಿ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಪಿಲಿಪ್ ಡಿ’ಸೋಜಾ ಗಿಡನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಲ್ಲೂರು ಅಂಗನವಾಡಿ ಕಾರ್ಯಕರ್ತೆ ದಯಾವತಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಲಸಂರಕ್ಷಣೆಯ ಕುರಿತಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಎಲ್ಲೂರು ಗ್ರಾ. ಪಂ. ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.ಎಲ್ಲೂರು ಗ್ರಾ. ಪಂ. ಗುಮಾಸ್ತ ಗಣೇಶ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.