Advertisement
ನ. 23 ಹಾಗೂ 24ರಂದು ದುಬಾೖ (ಯುಎಇ)ಯ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವ ತುಳು ಸಮ್ಮೇಳನ ದುಬಾೖ-2018ಕ್ಕೆ ಬೆಳ್ತಂಗಡಿ ತಾಲೂಕಿನಿಂದ ಬರೋಬ್ಬರಿ ಒಂದು ಸಾವಿರದಷ್ಟು ಮುಟ್ಟಾಳೆಗಳು ಈಗಾಗಲೇ ಅರಬ್ ರಾಷ್ಟ್ರವನ್ನು ತಲುಪಿವೆೆ. ಅಖಿಲ ಭಾರತ ತುಳು ಒಕ್ಕೂಟದಿಂದ 1 ತಿಂಗಳ ಹಿಂದೆ ಬೆಳ್ತಂಗಡಿಯ ವ್ಯಕ್ತಿಯೊಬ್ಬರಿಗೆ 2 ಸಾವಿರದಷ್ಟು ಮುಟ್ಟಾಳೆಗಳನ್ನು ಸಿದ್ಧ ಮಾಡುವುದಕ್ಕೆ ತಿಳಿಸಿದ್ದರು. ಆದರೆ ಮುಟ್ಟಾಳೆ ತಯಾರಿಗೆ ಕಚ್ಚಾ ವಸ್ತುಗಳ ಕೊರತೆ ಹಾಗೂ ಸಿದ್ಧಪಡಿಸುವವರ ಕೊರತೆಯಿಂದ ಕೇವಲ ಒಂದು ಸಾವಿರದಷ್ಟು ಮುಟ್ಟಾಳೆಗಳನ್ನು ನೀಡಲಾಗಿದೆ.
ಸಾಮಾನ್ಯವಾಗಿ ಕೃಷಿಕರು ಗೊಬ್ಬರ ಸಹಿತ ಯಾವುದೇ ಭಾರವನ್ನು ಹೊರುವುದಕ್ಕೆ ಮುಟ್ಟಾಳೆಯನ್ನು ಉಪಯೋಗಿಸುತ್ತಾರೆ. ಅಂದರೆ ಅಡಿಕೆ ಮರದ ಹಾಳೆಯನ್ನು ಹಗ್ಗ (ಬಳ್ಳಿ)ದಿಂದ ಜೋಡಿಸಿ ಮುಟ್ಟಾಳೆ ತಯಾರಿಸಲಾಗುತ್ತದೆ. ಹಿಂದೆ ಹಳ್ಳಿ ಪ್ರದೇಶದಲ್ಲಿ ದುಡಿಯುವ ಪ್ರತಿಯೊಬ್ಬ ಕೃಷಿಕ, ಕೂಲಿ ಕಾರ್ಮಿಕನ ತಲೆಯಲ್ಲಿ ಈ ಮುಟ್ಟಾಳೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಕಾಲ ಬದಲಾಗಿದ್ದು, ಮುಟ್ಟಾಳೆಗೆ ಪರ್ಯಾಯವಾಗಿ ಬೇರೆ ಬೇರೆ ರೀತಿಯ ಟೋಪಿಗಳು ಮಾರುಕಟ್ಟೆಯಲ್ಲಿ ಸಿಗುವುದರಿಂದ ಕೃಷಿಕರು ಅದನ್ನೇ ಉಪಯೋಗಿಸುತ್ತಿದ್ದಾರೆ. ಬೇಡಿಕೆಯಷ್ಟು ಪೂರೈಸಲಾಗಿಲ್ಲ
ಸಮ್ಮೇಳನಕ್ಕೆ 2 ಸಾವಿರ ಮುಟ್ಟಾಳೆಗಳನ್ನು ಕೇಳಿದ್ದರೂ ಗುಣಮಟ್ಟದ ಅಡಿಕೆಯ ಹಾಳೆ ಸಿಗದೆ ಬೆಳ್ತಂಗಡಿಯಿಂದ ಕೇವಲ ಸಾವಿರದಷ್ಟು ಮುಟ್ಟಾಳೆಗಳನ್ನು ಮಾತ್ರ ನೀಡಲಾಗಿದೆ. ಮುಟ್ಟಾಳೆಗಳನ್ನು ತಯಾರಿಸುವುದಕ್ಕೆ ಉತ್ತಮ ಗುಣಮಟ್ಟದ ಹಾಳೆಗಳು ಬೇಕಾಗಿದ್ದು, ಆದರೆ ಈ ಬಾರಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಹಾಳೆಗಳು ಸಿಗದೆ ಅವರ ಬೇಡಿಕೆಯಷ್ಟು ಮುಟ್ಟಾಳೆಗಳನ್ನು ನೀಡುವುದಕ್ಕೆ ಸಾಧ್ಯವಾಗಿಲ್ಲ.
– ಸಂಜೀವ ನೆರಿಯ, ಮುಟ್ಟಾಳೆ ಪೂರೈಸಿದವರು
Related Articles
ಒಬ್ಬ ವ್ಯಕ್ತಿಯು ದಿನಕ್ಕೆ ಸುಮಾರು 10 ಮುಟ್ಟಾಳೆಗಳನ್ನು ಮಾತ್ರ ತಯಾರಿಸುವುದಕ್ಕೆ ಸಾಧ್ಯ. ಹೀಗಾಗಿ ಮುಟ್ಟಾಳೆ ತಯಾರಿಸುವವರ ಕೊರತೆಯಿಂದಲೂ ಗುರಿ ಮುಟ್ಟುವುದು ಅಸಾಧ್ಯವಾಗಿತ್ತು. ಹೀಗಾಗಿ ಸುಮಾರು 600 ಮುಟ್ಟಾಳೆಗಳನ್ನು ಸಿದ್ಧಪಡಿಸಿ, ಉಳಿದಂತೆ ಅಂಗಡಿಗಳಿಂದ ಖರೀದಿಸಿ ಸಮ್ಮೇಳನಕ್ಕೆ ನೀಡಲಾಗಿದೆ ಎಂದು ಮುಟ್ಟಾಳೆ ಹೊಂದಿಸುವ ಜವಾಬ್ದಾರಿ ನಿರ್ವಹಿಸಿದ ಸಂಜೀವ ನೆರಿಯ ಅವರು ತಿಳಿಸಿದ್ದಾರೆ. ತಾಲೂಕಿನ ನೆರಿಯ ಪ್ರದೇಶದಿಂದ ಹೆಚ್ಚಿನ ಮುಟ್ಟಾಳೆಗಳನ್ನು ಪಡೆಯಲಾಗಿದೆ. ದೊಡ್ಡ ಮಟ್ಟದ ಮುಟ್ಟಾಳೆಗಳನ್ನು ತಯಾರಿಸುವುದಕ್ಕೆ ಹೇಳುವಾಗ ಮುಂಗಡ ಹಣದ ಬೇಡಿಕೆಯನ್ನೂ ಮುಟ್ಟಾಳೆ ಸಿದ್ಧಪಡಿಸುವವರು ಕೇಳುತ್ತಾರೆ. ಸುಮಾರು ನಾಲ್ಕೈದು ಮಂದಿಯನ್ನು ಮಾತನಾಡಿಸಿ, ಅವರಿಂದ ಮುಟ್ಟಾಳೆಯನ್ನು ತಯಾರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement
— ಕಿರಣ್ ಸರಪಾಡಿ