Advertisement

Desi Swara: ಕೊಂಚ ಬಿಡುವು ಪಡೆದು ಸುತ್ತಾಡಿ, ಜೀವನವನ್ನು ಅನ್ವೇಷಿಸಿ

12:37 PM Sep 28, 2024 | Team Udayavani |

ರಜೆಯ ದಿನಗಳು ತಡವಾಗಿ ಏಳೋದು, ಎಲ್ಲ ಕೆಲಸಗಳನ್ನು ನಿಧಾನವಾಗಿ ಮಾಡೋದು ಅಥವಾ ಪಕ್ಕಕ್ಕೆ ತಳ್ಳುವುದು ಹೀಗೆ. ವೆಕೇಷನ್‌ ಎಂಬ ಮಾತು ಕೇಳಿದ ಕೂಡಲೇ, ದಿನನಿತ್ಯದ ಜಂಜಾಟದ ಕೆಲಸಗಳನ್ನು ಬದಿಗೊತ್ತಿ, ನಾವಿರುವ ಗೂಡಿನಿಂದ ಮತ್ತೆಲ್ಲೋ ಹೋಗಿ ಬರುವುದು ಎಂದೇ ಅರ್ಥವಾಗುತ್ತದೆ. ಕಾಲ ಒಂದಿತ್ತು. ವೆಕೇಷನ್‌ ಎಂಬುದಕ್ಕೆ LTC ಅಥವಾ ಲೀವ್‌, ಟ್ರಾವೆಲ್‌, ಕನ್ಸೆಷನ್‌ ಎಂಬ ಹೆಸರಿತ್ತು. ದೇಶದೊಳಗೆ ಎಲ್ಲಿ ಬೇಕಾದರೂ ಪಯಣಿಸುವಂಥಾ ಸೌಲಭ್ಯ. ಕೆಲವರು ಪ್ರಯಾಣ ಮಾಡುವ ಹವ್ಯಾಸ ಉಳ್ಳವರು ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿ ಬಂದರೆ ಹಲವರು ಸೌಲಭ್ಯ ಬಳಸಿಕೊಳ್ಳದೇ ಬರೀ ಹಣವನ್ನು ಮಾತ್ರ ಪಡೆಯುತ್ತಿದ್ದರು.

Advertisement

ಸಾಮಾನ್ಯವಾಗಿ ವೆಕೇಷನ್‌ ಎಂಬುದು ಒಂದರ್ಥದಲ್ಲಿ ಹತ್ತಾರು ದಿನಗಳ ರಜೆ ಎಂಬುದಾಗಿ ಅರ್ಥೈಸಿಕೊಳ್ಳಬಹುದು. ವೆಕೇಷನ್‌ ಎಂದರೆ ಬೇರೆಲ್ಲೂ ಹೋಗಬೇಕು ಎಂಬ ಪ್ರಯಾಣದ ಖರ್ಚು, ಅನಂತರ ಅಲ್ಲಿ ಉಳಿದುಕೊಳ್ಳುವ ಖರ್ಚು, ಅನಂತರ ಅಲ್ಲಿನ ಊಟ-ತಿಂಡಿ ಖರ್ಚು, ಕೊನೆಗೆ ಹೋಗಿರುವ ಸ್ಥಳದ ಸುತ್ತಮುತ್ತಲು ನೋಡಬಹುದಾದ ಸ್ಥಳಗಳ ವೀಕ್ಷಣೆ ಎಂಬ ಖರ್ಚು. ಇದೆಲ್ಲ ಖರ್ಚುಗಳ ನಡುವೆ, ವೆಕೇಷನ್‌ ಬಂದಷ್ಟೇ ವೇಗವಾಗಿ ಮುಗಿದೂ ಹೋಗಿರುತ್ತದೆ ಎಂಬುದು ಎಲ್ಲರಿಗೂ ಅರಿವಿರುವ ವಿಷಯ. ಕೆಲವೊಮ್ಮೆ ಹೇಗಾಗುತ್ತೆ ಎಂದರೆ, ಮರುದಿನ ಪ್ರಯಾಣ ಮಾಡಬೇಕು ಎಂದರೆ ಹಿಂದಿನ ರಾತ್ರಿ ಯಾರಿಗೂ ಆರೋಗ್ಯ ಕೆಡಬಹುದು ಅಥವಾ ಇನ್ನೇನೋ ಅಡ್ಡಿ ಆತಂಕಗಳು. ಈ ಮಾತು ಏಕೆ ಹೇಳಿದೆ ಎಂದರೆ ಒಂದು ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸ ಎಂದರೆ ಹೂವಿನ ಹಾಸಿಗೆಯಲ್ಲ ಎಂಬರ್ಥದಲ್ಲಿ. ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಎಂದರೆ ಹೀಗೆಯೇ ಇರಬೇಕೆ?

ಪ್ರಮುಖವಾಗಿ ಒಂದು ಪ್ರೇಕ್ಷಣೀಯ ಸ್ಥಳ ಎಂದ ಕೂಡಲೇ ಹಸುರು ವನಸಿರಿ, ಬೆಟ್ಟಗುಡ್ಡ-ನೀರು, ಊಟತಿಂಡಿ, ವನ್ಯಮೃಗ, ಪಕ್ಷಿಸಂಕುಲ ಹೀಗೆ ನಾನಾ ಪಂಗಡದಲ್ಲಿ ಆ ವೈಭವವನ್ನು ಹೇಳಲಾಗುತ್ತದೆ. “ಎಂಥಾ ಬೆಟ್ಟಗಳ ಸಾಲು ಗೊತ್ತೇ? ಅಲ್ಲಿನ ನೀರು ಅದೆಷ್ಟು ತಿಳಿ ಗೊತ್ತೇ? ನಗರದ ಹೊಗೆಯುಕ್ತ ಗಾಳಿಯ ಸೇವನೆಯಿಂದ ದೂರಾಗಿ ಇಂಥಾ ಕಡೆ ಬಂದು ಶುದ್ಧ ಗಾಳಿ ಸೇವಿಸಿದರೆ ಯಾವುದೇ ಶ್ವಾಸಕೋಶ ಖಾಯಿಲೆ ಬರುವುದಿಲ್ಲ’ ಎಂಬೆಲ್ಲ ರೀತಿ ಮಾತುಗಳನ್ನು ಕೇಳಿಯೇ ಇರುತ್ತೇವೆ. ಒಂದು ರೀತಿಯಲ್ಲಿ ಪಂಚಭೂತಗಳ ವೈಭವವೇ ಈ ಪ್ರೇಕ್ಷಣೀಯ ಸ್ಥಳಗಳ ಮಹಿಮೆ. ಹಲವೊಮ್ಮೆ ಜೀವನದ ರಂಗುರಂಗಾದ ಪ್ರಕೃತಿಯ ವೈಭವ ಈ ಪ್ರೇಕ್ಷಣೀಯ ಸ್ಥಳವಾದರೆ, ಕೆಲವೊಮ್ಮೆ ಪಳೆಯುಳಿಕೆಗಳ ಕ್ಷೇತ್ರ, ಪ್ರಾಚೀನ ನಾಗರಿಕತೆಯ ಪ್ರದೇಶಗಳೇ ಮೊದಲಾದ ಕಲಿಕೆಗೆ ಆಸ್ಪದವೀಯುವ ಸ್ಥಳಗಳೂ ಪ್ರೇಕ್ಷಣೀಯ ಸ್ಥಳಗಳೇ ಆಗಿರುತ್ತದೆ.

ಒಂದು ಪ್ರೇಕ್ಷಣೀಯ ಸ್ಥಳದ ಬಗ್ಗೆ ಅರಿವು ಮೂಡುವುದಾದರೂ ಹೇಗೆ? ಈ ಮಾತು ಕೇವಲ ಪ್ರೇಕ್ಷಣೀಯ ಸ್ಥಳಕ್ಕೆ ಮಾತ್ರವಲ್ಲದೆ ಬೇರೆಯ ವಿಷಯಕ್ಕೂ ಹೇಳಬಹುದಾಗಿದೆ. ಒಂದು, ಅಂಥಾ ಒಂದು ಸ್ಥಳಕ್ಕೆ ಭೇಟಿ ಕೊಡುವುದರಲ್ಲಿ ನಾವೇ ಮೊದಲಿಗರಾಗೋದು. ಎರಡು, ಎಲ್ಲರೂ ಹೋಗಿ ಬಂದರು ಅಂತ ನಾವೂ ಹೋಗೋದು. ನೀವು ಯಾವ ಪೈಕಿ?

Advertisement

ದಕ್ಷಿಣ ಅಮೆರಿಕದ ಪೆರು ದೇಶದಲ್ಲಿರುವ “ಮಾಚು ಪೀಚು’ ಎಂಬ ಸ್ಥಳ ಪರ್ವತ ಶ್ರೇಣಿಯಲ್ಲಿ ಅಡಕವಾಗಿತ್ತು. ಇಂಥದ್ದೊಂದು ಜಾಗವಿದೆ ಎಂದು ಅರಿವು ಮೂಡಿದ್ದು 1911ರಲ್ಲಿ. ಈಚೆಗೆ ಅಂದರೆ 2007ರಲ್ಲಿ ಪ್ರಪಂಚದ ಏಳು ವಿಸ್ಮಯಗಳಲ್ಲಿ ಒಂದು ಎಂದು ನಿರ್ಧಾರಿತವಾದ ಮೇಲಂತೂ “ಮಾಚು ಪೀಚು’ ತನ್ನತ್ತ ಲಕ್ಷಾಂತರ ಜನರನ್ನು ಸೆಳೆಯುತ್ತಿದೆ. ಉರುಬಾಂಬ ನದಿಯ ಮೇಲೆ ಸಾಗುತ್ತಾ ನಾಲ್ಕು ದಿನಗಳ ಟ್ರೆಕ್ಕಿಂಗ್‌ ಮಾಡಿಕೊಂಡು ಮಾಚು-ಪೀಚು ಕಡೆ ಸಾಗುತ್ತಾರೆ. ಇಂಕಾ (Inca) ಸಾಮ್ರಾಜ್ಯದ ಅವಶೇಷಗಳನ್ನು ವೀಕ್ಷಿಸಲು, ಅಂದಿನ ನಾಗರಿಕತೆಯನ್ನು ಅರಿಯಲು, ಬೆಟ್ಟದ ಶೇಣಿಯ ಮೇಲೆ ಟ್ರೆಕ್ಕಿಂಗ್‌ ಮಾಡುವುದೇ ಮೊದಲಾದ ಆಕರ್ಷಣೆಗಳನ್ನು ಇದು ಹೊಂದಿದೆ.

ಮತ್ತೊಂದು ಬಗೆಯಲ್ಲಿ, ಯಾರೋ ಹೋಗಿ ಬಂದವರು ಇರಬಹುದು, ಹೊಸ ಜಾಗವನ್ನು ಪರಿಚಯಿಸುವ ಒಂದು ಟಿವಿ ಚಾನಲ್‌ ಇರಬಹುದು ಅಥವಾ ಒಂದು ಸ್ಥಳವನ್ನು ವೈಭವೀಕರಿಸಿ ತೋರುವ ಚಲನಚಿತ್ರ ಕೂಡಾ ಆಗಿರಬಹುದು. “ನಮ್ಮೂರ ಮಂದಾರ ಹೂವೆ’ ಎಂಬ ಚಲನಚಿತ್ರವು “ಯಾಣ’ ಎಂಬ ಹೆಚ್ಚು ಅರಿವೇ ಇರದ ಸ್ಥಳದ ಬಗ್ಗೆ ಜನತೆಗೆ ಪರಿಚಯ ಮಾಡಿಸಿತು. ಅಲ್ಲಿಂದಾಚೆ “ಯಾಣ’ ದಿಕ್ಕಿನತ್ತ ಯಾನ ಮಾಡಿದವರು ಲಕ್ಷಾಂತರ ಜನ. ನೈಸರ್ಗಿಕ ಸಂಪತ್ತು ಎಂದರೆ ಯಾಣ. ಈ ಹಿಂದೆಯೂ ಇಂಥಾ ಹಲವಾರು ಯತ್ನಗಳು ನಡೆದಿವೆ.

ನಾಗರಹೊಳೆಯ ಪ್ರಾಣಿ-ಪಕ್ಷಿಲೋಕದ ಪರಿಚಯವಾಗಿದೆ. ಅಭಯಾರಣ್ಯಗಳು, ಮಳೆನಾಡುಗಳು, ಮಲೆನಾಡು ಹೀಗೆ ಅನೇಕಾನೇಕ ಸ್ಥಳಗಳು ಖ್ಯಾತವಾಗಿದೆ. ಪ್ರೇಕ್ಷಣೀಯ ಸ್ಥಳದ ಬಗ್ಗೆಯ ಯಾನದ ಬಗ್ಗೆ ಹೇಳಿದಾಗ ಅಲ್ಲೂ ಎರಡು ಬಗೆ ಇದೆ. ಗುಂಪಿನಲ್ಲಿ ಹೋಗೋದು ಒಂದು ಬಗೆಯಾದರೆ, ಒಬ್ಬಂಟಿಯಾಗಿ ಹೋಗಿ ಬರುವುದು ಮಗದೊಂದು. ಭಾಷೆ ಬಾರದ ನಾಡಿಗೆ ಅಂತ ಹೋಗುವಾಗ, ಹೆಚ್ಚಿನ ವೇಳೆ ಗುಂಪಿನಲ್ಲಿ ಹೋಗುವುದನ್ನು ಇಷ್ಟಪಡುತ್ತಾರೆ.

ಉದಾಹರಣೆಗೆ ಇಂದಿನ ಕಾಶೀಯಾತ್ರೆ. ಒಂದು ಧಾರ್ಮಿಕ ಗುಂಪಿನ ಟೂರ್‌ ಅಡಿಯಲ್ಲಿ ಏರ್ಪಡಿಸುವ ಇಂಥಾ ಕಾರ್ಯಕ್ರಮದಲ್ಲಿ ಊಟ-ವಸತಿಗಳು ಇರುವ ಸೌಭಾಗ್ಯ ಇರುವುದರಿಂದ, ದರ್ಶನಾದಿಗಳಿಗೆ ಒಳ್ಳೆಯ ಸೌಲಭ್ಯವೂ ಇರುವುದರಿಂದ ಗುಂಪಿನಲ್ಲಿ ಹೋಗುತ್ತಾರೆ.
ಗುಂಪಿನಲ್ಲಿ ಹೋದಾಗ ನಮಗೆ ಬೇಕೆಂದ ರೀತಿಯಲ್ಲಿ ಇರಲಾಗದೇ, ಆ ಗುಂಪಿಗೆ ಮಾಡಿರುವ ರೂಲ್ಸ್‌ ಅನ್ನು ಅನುಸರಿಸಲೇಬೇಕಾಗುತ್ತದೆ. ಒಂದು ಸ್ಥಳಕ್ಕೆ ಕರೆದೊಯ್ದು ಅನಂತರ ಇಂಥಾ ಸಮಯಕ್ಕೆ ಇಲ್ಲಿಂದ ಬಸ್‌ ಹೊರಡಲಿದೆ ಎಂದು ಹೇಳಿರುತ್ತಾರೆ.

ಅಬ್ಬಬ್ಬಾ ಎಂದರೆ ಗೊಣಗೊಣ ಎಂದುಕೊಂಡೇ ಐದು-ಹತ್ತು ನಿಮಿಷಗಳು ನಿಲ್ಲಬಹುದು ಆ ಬಳಿಕ ಇಲ್ಲ. ನಾವು ಒಮ್ಮೆ ಅlಚskಚ ಇruಜಿsಛಿಗೆ ಹೋಗಿದ್ದಾಗ, ಒಂದು ಹಂತದವರೆಗೆ ವಿಮಾನದಲ್ಲಿ ಸಾಗಿ ಅನಂತರ ಹಡಗಿನ ಬಂದರಿಗೆ ಒಂದು ದಿನದ ಬಸ್‌ ಪ್ರಯಾಣ ಮಾಡಿದೆವು. ಹಾದಿಯುದ್ದಕ್ಕೂ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ಸಾಗುವ ಈ ಬಸ್‌ ಪ್ರಯಾಣ ಬಹಳ ಸೊಗಸಾಗಿತ್ತು. ಹಾಗೆ ಸಾಗುವಾಗ ಮಧ್ಯದಲ್ಲಿ ಎಲ್ಲಿಯೇ ನಿಲ್ಲಿಸಿದರೂ, ಒಂದಷ್ಟು ಸಮಯ ಅಂತ ಮೊದಲೇ ನಿಗದಿಯಾಗಿರುತ್ತಿತ್ತು.

ಭಾಷೆ ಬಾರದ ನಾಡಿನ ಪ್ರೇಕ್ಷಣೀಯ ಸ್ಥಳಕ್ಕೆ ಹೋಗುವಾಗ ಕೊಂಚ ಹೆಚ್ಚು ಎಚ್ಚರವಹಿಸಬೇಕು. ಅಂಥಾ ಸ್ಥಳದಲ್ಲಿ ಶಾಪಿಂಗ್‌ ಮಾಡುವಾಗಲಾದರೂ ಎಚ್ಚರಿಕೆ ಇರಲೇಬೇಕು. ಇನ್ನು ಎಂಟೆದೆ ಬಂಟರು ಒಂಟಿ ಸಲಗದಂತೆ Backpack ಅನ್ನು ಹೆಗಲಿಗೇರಿಸಿಕೊಂಡು ಸಾಗುತ್ತಾರೆ. ಹೀಗೆ ಮಾಡಲು ಮೊದಲಿಗೆ ಧೈರ್ಯಬೇಕು ಮತ್ತು ಯಾವುದೇ ಸಂದರ್ಭವನ್ನು ನಿಭಾಯಿಸುವ ಚಾಕಚಕ್ಯತೆ ಬೇಕು. ನಮ್ಮ ಪರಿಚಯದ ಒಬ್ಟಾತನಿಗೆ ದೇಶ ಸುತ್ತುವ ಹವ್ಯಾಸ.

ಮೊದಲಿಗೆ ಆತ ಮದುವೆಯಾಗದ ಒಂಟಿ ಜೀವ. ವರ್ಷಕ್ಕೆ ಎರಡು ಬಾರಿ ಕಾಣದ ದೇಶಕ್ಕೆ ಪ್ರಯಾಣ ಹೊರಡುತ್ತಾನೆ. ಯಾವುದೋ ದೇಶಕ್ಕೆ ಹೋಗುತ್ತಾನೆ, ಜನರೊಂದಿಗೆ ಮಾತನಾಡುತ್ತಾನೆ, ವಿಶ್ರಾಂತಿ ಗೃಹದಲ್ಲಿ ತಂಗುತ್ತಾನೆ, ಎಲ್ಲರೊಂದಿಗೆ ಬೆರೆಯುತ್ತಾನೆ, ಯಾವ ವಯೋಮಾನದವರೊಂದಿಗೆ ಬೇರೆಯಲೂ ಅವನಿಗೆ ಹಿಂಜರಿಕೆ ಇಲ್ಲ. ಅಷ್ಟು ಸಲೀಸಾಗಿ ಜನರೊಂದಿಗೆ ಬೆರೆವ ಗುಣ ಇರುವವರಿಗೆ ಒಂಟಿಯಾಗಿ ತಿರುಗುವುದು ಕಷ್ಟವಾಗಲಾರದು. ಜತೆಗೆ, ಹೀಗೆ ಪ್ರಯಾಣ ಮಾಡುವವರು, ಪೆನ್ಸಿಲ್‌, ಟಾರ್ಚ್‌, ಸ್ಕ್ರೂ -ಡ್ರೈವರ್‌, ಬ್ಯಾಟರಿ, ಮಾತ್ರೆ-ಔಷಧ ಎಂಬುದನ್ನೆಲ್ಲ ತಮ್ಮ ಚೀಲದಲ್ಲಿ ಹೊತ್ತು ಸಾಗುತ್ತಾರೆ. ಯಾವ ಸಂಧರ್ಭ ಹೇಗೋ ಯಾರಿಗೆ ಗೊತ್ತು?

ಒಂದು ಪ್ರೇಕ್ಷಣೀಯ ಸ್ಥಳಕ್ಕೆ ಹೋದಾಗ ಊಟ ತಿಂಡಿ ವ್ಯವಸ್ಥೆ ಮಾಡಿಕೊಳ್ಳುವುದು, ತಂಗುದಾಣದಲ್ಲಿ ಉಳಿಯುವುದು, ಯಾವುದೇ ಹವಾಮಾನಕ್ಕೂ ಹೊಂದಿಕೊಳ್ಳುವುದು, ಸ್ವಲ್ಪ ಭಾಷೆ ಅರಿತಿರುವುದು ಎಂಬುದೆಲ್ಲ ಮಾಡುವುದರ ಜತೆಗೆ Code of Conduct ಅಥವಾ ರೀತಿ-ರಿವಾಜುಗಳನ್ನು ಅರಿತಿರಬೇಕು. ಯಾವ ಪ್ರದೇಶದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಸಾಮಾನ್ಯಜ್ಞಾನವನ್ನೂ ಅರಿತುಕೊಂಡಿರಬೇಕು. ನೋಡಿ ಸ್ವಾಮಿ ನಾವಿರೋದೇ ಹೀಗೆ ಎಂಬುದು ಎಲ್ಲೆಡೆ ನಡೆಯದು. ಕೆಲವು ದೇಶಗಳಲ್ಲಿ, ನಮ್ಮ ಚೀಲವನ್ನು ಒಂದೆಡೆ ಇರಿಸಿ ಮುಂದಿನ ಅರ್ಧ ಗಂಟೆಯಲ್ಲಿ ವಾಪಸ್‌ ಬಂದು ನೋಡಿದರೂ ಅದು ಅಲ್ಲಿಯೇ ಇರುತ್ತದೆ. ಹಲವೆಡೆ ಜೇಬಿನಲ್ಲಿ ಭದ್ರವಾಗಿರೋ ಪಾಸ್‌ಪೋರ್ಟ್‌ ಕೂಡ ಹೊಡೆಯಬಲ್ಲವರು ಇರುತ್ತಾರೆ. ನಮ್ಮ ಮನೆಯಲ್ಲಿರುವ ಹಾಗೆಯೇ ಹೊರಗೆ ಬಂದಾಗಲೂ ಇರುತ್ತೇನೆ ಎಂಬ ಧೋರಣೆ ಸಲ್ಲದು.

ಯಾವುದೇ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ಕೊಡುವಾಗ, ಅಲ್ಲಿಯ ನಕಾಶೆ ದೊರೆಯುವುದಿದ್ದರೆ ಪಡೆದುಕೊಳ್ಳಬೇಕು. ಸ್ಥಳೀಯರಿಂದ ಸಾಧಕ, ಬಾಧಕಗಳ ಬಗ್ಗೆ ಕೊಂಚ ಅರಿತಿರಬೇಕು. ಯಾವ ಸ್ಥಳಕ್ಕೆ ಭೇಟಿ ಕೊಟ್ಟಿರುತ್ತೇವೆ ಎಂಬುದನ್ನು ಬರೆದಿಟ್ಟುಕೊಂಡರೆ ಇನ್ನೂ ಉತ್ತಮ. ಪ್ರೇಕ್ಷಣೀಯ ಸ್ಥಳವನ್ನು ಕಣ್ತುಂಬಿಸಿಕೊಳ್ಳಿ, ಕೆಮರಾ ಹೊಟ್ಟೆಯಲ್ಲಿ ಚಿತ್ರಗಳನ್ನು ತುಂಬಿಸಿಕೊಳ್ಳಿ, ಸ್ಥಳದ ಮಾಹಿತಿಯನ್ನು ತಲೆಗೂ ತುಂಬಿಸಿಕೊಳ್ಳಿ. ಪ್ರೇಕ್ಷಣೀಯ ಸ್ಥಳದ ಬಗ್ಗೆ ಬರೆಯುವಾಗ ಇಂಥಾ ಕಡೆ ಹೋಗಿ ಬನ್ನಿ ಎಂದೆಲ್ಲ ಪ್ರಚಾರ ಮಾಡುವ ಬರಹದ ಬದಲಿಗೆ ಒಂದಷ್ಟು ವಿಭಿನ್ನ ದೃಷ್ಟಿ ಬೀರಿ ಬರೆದ ಈ ಲೇಖನ ನಿಮಗೆ ಉಪಯೋಗವಾಗಬಹುದು ಎಂದುಕೊಂಡಿದ್ದೇನೆ. ಅಭಿಪ್ರಾಯ ತಿಳಿಸಿ.

*ಶ್ರೀನಾಥ್‌ ಭಲ್ಲೇ, ರಿಚ್ಮಂಡ್‌

Advertisement

Udayavani is now on Telegram. Click here to join our channel and stay updated with the latest news.

Next