Advertisement

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

12:27 AM Sep 28, 2022 | Team Udayavani |

ಪಣಂಬೂರು: ತಣ್ಣೀರುಬಾವಿ ಬಳಿ ಇರುವ ನಾಯರ್‌ ಕುದ್ರು ಅಭಿವೃದ್ಧಿಗೆ 40 ಕೋ.ರೂ., ತಣ್ಣೀರುಬಾವಿ ಬೀಚ್‌ಗೆ ಬ್ಲೂ ಫ್ಲ್ಯಾಗ್‌ ಮಾನ್ಯತೆಯ ಜತೆಗೆ ಅಲ್ಲಿ ಇತರ ಮೂಲಸೌಕರ್ಯ ಮತ್ತು ನಮ್ಮ ಸಂಸ್ಕೃತಿಗಳ ವೈಭವ ಸಾರಲು ಹೆಚ್ಚುವರಿ 9.5 ಕೋ.ರೂ. ಹೂಡಿಕೆ ಮಾಡಲಾಗುವುದು ಎಂದು ಶಾಸಕ ಡಾ| ಭರತ್‌ ಶೆಟ್ಟಿ ವೈ. ಹೇಳಿದರು.

Advertisement

ದ.ಕ. ಜಿಲ್ಲಾಡಳಿತ, ಮಂಗಳೂರು ಸ್ಮಾರ್ಟ್‌ ಸಿಟಿ, ಪರಿಸರ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ತಣ್ಣೀರುಬಾವಿ ಬೀಚ್‌ನಲ್ಲಿ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಮತ್ತು ಬ್ಲೂ ಫ್ಲ್ಯಾಗ್‌ ಬೀಚ್‌ಗೆ ಶಂಕುಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾಯರ್‌ ಕುದ್ರುವಿನಲ್ಲಿ ಉತ್ತಮ ಸಂಪರ್ಕ, ಕಲಾ ಕೇಂದ್ರ, ಸಂಸ್ಕೃತಿಗಳ ಅನಾವರಣಕ್ಕೆ ವೇದಿಕೆ, ಸಾಹಸ ಕ್ರೀಡಾ ಕೇಂದ್ರ, ಹೊಟೇಲ್‌, ಸಣ್ಣ ಮಳಿಗೆಗಳು ಇರಲಿವೆ. ಇದರ ಜತೆಗೆ ತಣ್ಣೀರುಬಾವಿ ಬೀಚ್‌ಗೆ ಬ್ಲೂ ಫ್ಲ್ಯಾಗ್‌ ಮಾನ್ಯತೆ ಸಿಗುವಂತಾಗಲು ಎಲ್ಲ ಷರತ್ತುಗಳನ್ನು ಪಾಲಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಸಿಆರ್‌ಝಡ್‌ ಸರಳೀಕರಣದಿಂದ ಉದ್ಯೋಗ ಸೃಷ್ಟಿಯಾಗಲಿದೆ ಮಾತ್ರವಲ್ಲ ಸ್ಥಳೀಯರಿಗೆ ಹೋಂ ಸ್ಟೇ ಸಹಿತ ವಿವಿಧ ಸ್ವ ಉದ್ಯೋಗಕ್ಕೆ ಅನುಕೂಲವಾಗಿದೆ. ಸರಕಾರ ಪ್ರವಾಸೋದ್ಯಮ ಚಟುವಟಿಕೆಗೆ ಪೂರಕವಾಗಿ ತಾತ್ಕಾಲಿಕವಾಗಿ ಅನುಮತಿ ನೀಡಲು ಇದರಿಂದ ಸಾಧ್ಯವಾಗಿದೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಬೇರೆ ದೇಶ, ರಾಜ್ಯಕ್ಕೆ ಹೋಲಿಸಿದರೆ ಪ್ರವಾಸೋದ್ಯಮ ನಮ್ಮ ಜಿಲ್ಲೆಯಲ್ಲಿ ಅಭಿವೃದ್ಧಿಯಾಗಿಲ್ಲ. ಉಡುಪಿಯಲ್ಲಿ ಮರಿನಾ ನಿರ್ಮಾಣಕ್ಕೆ ಅಡೆತಡೆ ಬಂದ ಕಾರಣ ಸಾಗರಮಾಲಾದಿಂದ ಬರಬೇಕಿದ್ದ 800 ಕೋ.ರೂ. ಅನುದಾನ ಸದ್ಬಳಕೆ ಮಾಡುವಲ್ಲಿ ವಿಫಲವಾದೆವು ಎಂದರು.

Advertisement

ನಗರಯೋಜನೆ ವಿಭಾಗದ ಅಭಿಷೇಕ್‌, ಸಿಆರ್‌ಝಡ್‌ ಅಧಿಕಾರಿ ಮಹೇಶ್‌ ಕುಮಾರ್‌, ಮನಪಾ ಸದಸ್ಯೆ ಸುನಿತಾ ಮೊದಲಾದವರು ಉಪಸ್ಥಿತರಿದ್ದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ದಿನೇಶ್‌ ಕುಮಾರ್‌ ಪ್ರಸ್ತಾವನೆಗೈದರು. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಎನ್‌.ಮಾಣಿಕ್ಯ ಸ್ವಾಗತಿಸಿದರು. ಮಂಜುಳಾ ನಿರೂಪಿಸಿದರು.

ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಪ್ರವಾಸೋದ್ಯಮ ಚಟುವಟಿಕೆ ಕುರಿತು ಮಾಹಿತಿ ನೀಡಿ ಕೋವಿಡ್‌ನಿಂದ ಹಿನ್ನಡೆ ಆಗಿದ್ದರೂ ಸಸಿಹಿತ್ಲು ಬೀಚ್‌ನಲ್ಲಿ ಅರಣ್ಯ ಇಲಾಖೆಯ 29 ಎಕರೆಯಲ್ಲಿ ಜಂಗಲ್‌ ಲಾಡ್ಜ್, ಸರ್ಫಿಂಗ್‌ ಶಾಲೆ, ನದಿ, ಸಮುದ್ರ ಸಂಗಮವಾಗುವ ಸ್ಥಳದಲ್ಲಿ ವೀಕ್ಷಣಾ ಗೋಪುರ, ಇಕೋ ಟೂರಿಸಂಗೆ ಒತ್ತು ನೀಡಲಾಗುವುದು. ಮತ್ಸ್ಯ ಗ್ರಾಮದ ಮೂಲಕ ಸ್ಥಳೀಯ ಮೀನುಗಾರರಿಗೂ ಸಹಾಯಹಸ್ತ ನೀಡಿ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಸಹಯೋಗವನ್ನು ಪಡೆದುಕೊಳ್ಳಲಾಗುವುದು. ಇದರಿಂದ ಅವರಿಗೆ ಆದಾಯ ಗಳಿಸಲು ಸಾಧ್ಯವಾಗಲಿದೆ ಎಂದರು.

ಮಂಗಳ ಕಾರ್ನಿಶ್‌ ಮೂಲಕ ಬೀಚ್‌ ಸಂಪರ್ಕ ರಸ್ತೆ ನಿರ್ಮಾಣಕ್ಕೆ ವೇಗ, ಬೀಚ್‌ಗಳಲ್ಲಿ ದೀಪಗಳ ಅಳವಡಿಕೆ, ಸಣ್ಣ ದ್ವೀಪಗಳ ಅಭಿವೃದ್ಧಿಗೆಯೊಂದಿಗೆ ಸುರಕ್ಷೆ ಹಾಗೂ ಸ್ಥಳೀಯ ಸಂಸ್ಕೃತಿಗೆ ಧಕ್ಕೆಯಾಗದಂತೆ ಬೀಚ್‌ ಪ್ರವಾಸೋದ್ಯಮ ಜತೆಗೆ ಪುಣ್ಯ ಕ್ಷೇತ್ರಗಳ ದರ್ಶನ, ಪರಿಸರ ಪೂರಕ ಪ್ರವಾಸೋದ್ಯಮ ಚಟುವಟಿಕೆ ಬೆಳೆಸಲು ಜಿಲ್ಲಾಡಳಿತ ಹಂತ ಹಂತವಾಗಿ ಕಾರ್ಯನಿರತವಾಗಿದೆ ಎಂದು ಹೇಳಿದರು.

ಪ್ರವಾಸಿ ತಾಣ ಪರಿಚಯಿಸಲು “ಫೋಕಸ್‌ ಉಡುಪಿ’ ಪರಿಕಲ್ಪನೆ
ಉಡುಪಿ: ಜಿಲ್ಲೆಯಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳು ಜನ ಮನ್ನಣೆ ಪಡೆದಿವೆ. ಪಶ್ಚಿಮ ಘಟ್ಟ, ಕುದ್ರು ಪ್ರದೇಶ ಸಹಿತ ಹಲವು ಪ್ರವಾಸಿ ತಾಣಗಳ ಬಗ್ಗೆ ಜನರಿಗೆ ತಿಳಿಸಲು “ಫೋಕಸ್‌ ಉಡುಪಿ’ ಪರಿಕಲ್ಪನೆಯಲ್ಲಿ ಅರಿವು ಕಾರ್ಯಕ್ರಮದ ಮೂಲಕ ಪ್ರವಾಸೋದ್ಯಮ ಚಟುವಟಿಕೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಉಡುಪಿಯ ಕರಾವಳಿ ಪ್ರವಾಸೋದ್ಯಮ ಸಂಘದ ವತಿಯಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಿಂದ ಮಲ್ಪೆ ವರೆಗೆ ನಡೆದ ಬೈಕ್‌ ರ್ಯಾಲಿಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಶ್ರೀಕೃಷ್ಣ ಮಠ, ಮಲ್ಪೆ ಬೀಚ್‌, ಸೈಂಟ್‌ ಮೇರಿಸ್‌ ದ್ವೀಪದಂತಹ ಪ್ರಸಿದ್ಧ ಪ್ರವಾಸಿತಾಣಗಳ ಹೊರತಾಗಿಯೂ ಸೂರಾಲು ಮಣ್ಣಿನ ಅರಮನೆ, ಹಸ್ತಶಿಲ್ಪ ಸೇರಿದಂತೆ ಇನ್ನೂ ಅನೇಕ ಪ್ರವಾಸಿ ಸ್ಥಳಗಳು ಜಿಲ್ಲೆಯಲ್ಲಿವೆ. ಅವುಗಳ ಅಭಿವೃದ್ಧಿ ಬಗ್ಗೆ ಗಮನ ಹರಿಸಿ, ಪ್ರವಾಸಿಗರಿಗೆ ಅವುಗಳನ್ನು ಪರಿಚಯಿಸಬೇಕಿದೆ. ಮಣಿಪಾಲದ ಮಣ್ಣಪಳ್ಳ ಕೆರೆಯನ್ನು ಅಭಿವೃದ್ಧಿಪಡಿಸಲಾಗುವುದು. ಸಿಆರ್‌ಝಡ್‌ ನಿಯಮ ಸಡಿಕೆಯಾಗಿರುವುದರಿಂದ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಲಿದೆ ಎಂದರು.

ಪ್ರಚಾರ ರಥ
ಜಿಲ್ಲೆ ರಜತೋತ್ಸವ ಆಚರಿಸುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಮೂಲಕ ಪ್ರಮುಖ ಪ್ರವಾಸಿ ತಾಣಗಳ ವೀಡಿಯೋ ತುಣುಕುಗಳನ್ನು ಸಿದ್ಧಪಡಿಸಿ ಡಿಜಿಟಲ್‌ ಪರದೆಯ ಮೂಲಕ ರಾಜ್ಯಾದ್ಯಂತ ಪ್ರಚಾರ ಮಾಡುವ ಕಾರ್ಯಕ್ಕೆ ನವೆಂಬರ್‌ನಲ್ಲಿ ಚಾಲನೆ ಸಿಗಲಿದೆ ಎಂದರು.

ನಿಯಮ ಸಡಿಲಿಕೆ
ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ನಿಯಮಗಳನ್ನು ಸರಳಗೊಳಿಸುವುದು ಅಗತ್ಯ. ಜಿಲ್ಲೆಗೆ ಸಿಆರ್‌ಝಡ್‌ ನಿಯಮಗಳಲ್ಲಿ ವಿನಾಯಿತಿ ದೊರೆತಿದೆ. ಹೋಂ ಸ್ಟೇಗಳಿಗೆ ಆನ್‌ಲೈನ್‌ ಮೂಲಕ ಸರಳ ರೀತಿಯಲ್ಲಿ ಅನುಮತಿ ನೀಡಲು ಚಿಂತಿಸುತ್ತಿದ್ದೇವೆ ಎಂದು ತಿಳಿಸಿದರು.

ಜಿ.ಪಂ. ಉಪಕಾರ್ಯದರ್ಶಿ ಕಿರಣ್‌ , ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್‌ ಲೋಬೋ, ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ ಎಸ್‌. ಶೆಟ್ಟಿ, ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ಅರುಣ್‌ ಕುಮಾರ್‌, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್‌ ಶೆಟ್ಟಿ, ಪೌರಾಯುಕ್ತ ಡಾ| ಉದಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 60ಕ್ಕೂ ಅಧಿಕ ಮಂದಿ ಬೈಕ್‌ ರೈಡರ್‌ಗಳಿಂದ ಬೈಕ್‌ ರ್‍ಯಾಲಿ ಮತ್ತು ವಿಂಟೇಜ್‌ ಕಾರುಗಳ ರ್ಯಾಲಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next