Advertisement
ಶತಮಾನಗಳ ಹಿಂದೆ ಜನರು ತಮ್ಮ ಮನೋ ರಂಜನೆಗಾಗಿ ವಿವಿಧ ಜಾನಪದ, ಸಾಂಸ್ಕೃತಿಕ ಮತ್ತು ಶಾಸ್ತ್ರೀಯ ಕಲೆಗಳನ್ನು ಅವಲಂಬಿಸಿದ್ದರು. ಇದು ತಲೆತಲಾಂತರದಿಂದ ನಡೆದು ಬಂದ ಪರಂಪರೆ. ವರ್ಷಗಳುರುಳಿದಂತೆ ಜನರ ಮನೋರಂಜನ ಕ್ಷೇತ್ರದ ವ್ಯಾಪ್ತಿ ವಿಸ್ತಾರವಾಗತೊಡಗಿತು. ಇತ್ತೀಚಿನ ದಶಕಗಳಲ್ಲಿ ಸಿನೆಮಾ ರಂಗ ಆಗಾಧವಾಗಿ ಮತ್ತು ಅತ್ಯಂತ ಪರಿಣಾಮಕಾರಿ ಮನೋರಂಜನ ಮಾಧ್ಯಮವಾಗಿ ರೂಪುಗೊಂಡಿದೆ. ಎಲ್ಲ ಕ್ಷೇತ್ರಗಳಂತೆ ಇಲ್ಲೂ ಆಧುನಿಕ ತಂತ್ರಜ್ಞಾನದ ನವನವೀನ ಆವಿಷ್ಕಾರಗಳು ಮನೋರಂಜನೆಯನ್ನು ನಮ್ಮ ಅಂಗೈಯಲ್ಲಿರಿಸಿವೆ.
Related Articles
Advertisement
ರಂಗಭೂಮಿ ಸಾಂಸ್ಕೃತಿಕವಾದ ಜನಪರ ವೇದಿಕೆ ಯಾಗಿದೆ. ಇದು ಹಳೆಯ ಕಲಾ ಪ್ರಕಾರವಾಗಿದ್ದರೂ ಈಗಿನ ಆಧುನಿಕ ಪ್ರಪಂಚದಲ್ಲೂ ಒಂದು ಸಮರ್ಥವಾದ ಕಲಾ ಮಾಧ್ಯಮವಾಗಿ ಬೆಳೆದಿದೆ. ಹಲವಾರು ಕಲಾ ಪ್ರಕಾರಗಳ ಮೂಲಕ ಇಂದು ಜಗತ್ತಿನೆದುರು ರಂಗಭೂಮಿ ಗುರುತಿಸಿಕೊಂಡಿದೆ. ಇವುಗಳಲ್ಲಿ ನಾಟಕ, ಬೀದಿ ನಾಟಕ, ದೊಡ್ಡಾಟ, ಯಕ್ಷಗಾನ ಹಾಗೂ ಬೊಂಬೆಯಾಟ ಆದಿಯಾಗಿ ಇನ್ನೂ ಹಲವಾರು ಪ್ರಕಾರಗಳಿವೆ. ಇವು ಕೇವಲ ಮನೋರಂಜನೆಗಾಗಿ ಮಾತ್ರ ಉದಯಿಸಿದ್ದಲ್ಲ, ಬದಲಾಗಿ ಮನೋವಿಕಾಸಕ್ಕಾಗಿ ಎಂಬುದಿಲ್ಲಿ ಉಲ್ಲೇಖನೀಯ. ರಂಗಭೂಮಿಯ ಎಲ್ಲ ಕಲಾ ಪ್ರಕಾರಗಳೂ ಸಮಾಜದಲ್ಲಿನ ತುಡಿತಗಳಿಗೆ, ಮಾನವನ ಸಂಕಷ್ಟಗಳಿಗೆ ಧ್ವನಿಯಾದವು.
ಮನೋರಂಜನೆಗಾಗಿ ನಮ್ಮಲ್ಲಿ ಹಲವಾರು ಕಲಾ ಪ್ರಕಾರಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ವಿಶೇಷ. ಇವು ಜನರಿಗೆ ಮನೋರಂಜನೆ ನೀಡುವ ಜತೆ ಜತೆಗೆ ಅವರಲ್ಲಿರುವ ಸೃಜನಶೀಲತೆಯನ್ನು ಅರಳಿಸುವಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತವೆ(ಇಂದಿನ ಕೆಲವು ವೆಬ್‌ಸಿರೀಸ್‌ಗಳು, ಕೆಲವು ಚಲನಚಿತ್ರಗಳು ಜನರ ಮನಸ್ಸನ್ನು ಕೆರಳಿಸುತ್ತವೆ ಎಂಬ ಮಾತುಗಳಿಗೆ ನಾವು ಕಿವಿಯಾಗಿದ್ದೇವೆ). ಹೀಗಾಗಿ ಜನರ ಮನಸ್ಸನ್ನು ಅರಳಿಸುವಂಥ ಕಲೆಗಳಲ್ಲಿ ನಾಟಕ ಅಥವಾ ರಂಗಭೂಮಿಯೂ ಒಂದು. ಇವು ಪ್ರೇಕ್ಷಕರನ್ನು ಒಂದು ಅದೃಶ್ಯವಾದ ಲೋಕಕ್ಕೆ ಕರೆದೊಯ್ಯುತ್ತದೆ. ಇದರಲ್ಲಿನ ಪ್ರತಿಯೊಂದು ಪಾತ್ರಗಳನ್ನು ಜನರು ತಮ್ಮ ಬದುಕಿಗೆ ಹೋಲಿಸಿ ನೋಡುತ್ತಾರೆ. ಅವುಗಳಲ್ಲಿ ಬರುವ ಕೆಲವು ಪಾತ್ರಗಳನ್ನು, ಕೆಲವು ಸನ್ನಿವೇಶಗಳನ್ನು ತಮ್ಮ ಬದುಕಿಗೆ ಅನ್ವಯಿಸಿಕೊಂಡು ಬಿಡುತ್ತಾರೆ. ಜನರ ಯೋಚನಾ ಶಕ್ತಿಯನ್ನು ಬದಲಿಸುವ ಸಾಮರ್ಥ್ಯ ನಾಟಕಗಳಿಗಿವೆ. ಆದ್ದರಿಂದ ಇದು ಕಲೆಯ ಒಂದು ಸಮರ್ಥ ಮಾಧ್ಯಮವಾಗಿದೆ. ನಾಟಕ ಮತ್ತು ಆಧುನಿಕ ಮನೋರಂಜನೆಗಿರುವ ವ್ಯತ್ಯಾಸ ಇದೇ ಆಗಿದೆ.ಈಗ ರಂಗಭೂಮಿ ಮೊದಲಿನಂತಿಲ್ಲ. ಆಧುನಿಕತೆ ಎಂಬ ಬಿರುಗಾಳಿಗೆ ಸಿಲುಕಿ, ರೆಕ್ಕೆ-ಪುಕ್ಕಗಳಿಲ್ಲದ ಹಕ್ಕಿಯಂತಾಗಿದೆ. ಹಕ್ಕಿಗೇನೋ ಹಾರುವ ತವಕ, ಕುಣಿದಾಡುವ ಉತ್ಸಾಹ ಇದ್ದರೂ ಕೂಡ ಪ್ರೇಕ್ಷಕ- ಪ್ರೋತ್ಸಾಹ ಇಲ್ಲದಂತಾಗಿದೆ. ಈ ಮಧ್ಯೆಯೂ ಇಂದು ರಂಗಭೂಮಿ ವಿವಿಧ ಕಲಾ ಪ್ರಕಾರಗಳ ಮೂಲಕ ಸಾಮಾಜಿಕ ಕಳಕಳಿಯೊಂದಿಗೆ ಜೀವಂತವಾಗಿದ್ದು, ಇದನ್ನು ಪೋಷಿಸಿ, ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ. ಸ್ವಾತಂತ್ರ್ಯ ಪೂರ್ವ ದಲ್ಲಿ ರಂಗಭೂಮಿ ನಿರ್ವಹಿಸಿದ ಸಾಮಾಜಿಕ ಜವಾಬ್ದಾರಿಯನ್ನು ಭವಿಷ್ಯದಲ್ಲಿಯೂ ಒಂದು ಚಟುವಟಿಕೆಯಾಗಿ, ಚಳವಳಿ ರೂಪದಲ್ಲಿ ಮುಂದು ವರಿಸಬೇಕಿದೆ. ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯದೇ ಸಮಾಜದ ಶುದ್ಧತೆ ಮತ್ತು ಹಿತಕ್ಕಾಗಿ ಈ ವರೆಗೆ ಪಾಲಿಸಿಕೊಂಡು ಬಂದ ಅಲಿಖೀತ ನಿಯಮವನ್ನು ರಂಗಭೂಮಿ ಮುಂದುವರಿಸಬೇಕಾಗಿದೆ. – ಕಾರ್ತಿಕ್ ಅಮೈ