ಹ್ಯೂಸ್ಟನ್ (ಯುಎಸ್‌ಎ): ವರ್ಲ್ಡ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಮಣಿಕಾ ಬಾತ್ರಾ ಅವರನ್ನೊಳಗೊಂಡ ಭಾರತದ ಎರಡು ಜೋಡಿ ಕ್ವಾರ್ಟರ್ ಫೈನಲ್ ತಲುಪಿದೆ. ಇನ್ನೊಂದು ಹೆಜ್ಜೆ ಮುಂದಿರಿಸಿದರೆ ಐತಿಹಾಸಿಕ ಪದಕ ಭಾರತಕ್ಕೆ ಒಲಿದು ಬರಲಿದೆ.
ಮಣಿಕಾ ಬಾತ್ರಾ-ಅರ್ಚನಾ ಕಾಮತ್ ವನಿತಾ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು. ಮಿಶ್ರ ಡಬಲ್ಸ್‌ನಲ್ಲಿ ಮಣಿಕಾ ಓಟಕ್ಕೆ ಜತೆಯಾದವರು ಜಿ. ಸಥಿಯನ್.
ಮಣಿಕಾ ಬಾತ್ರಾ-ಅರ್ಚನಾ ಕಾಮತ್ ಹಂಗೇರಿಯ ಡೋರಾ ಮದರಾಜ್-ಜಾರ್ಜಿನಾ ಪೋಟಾ ಅವರನ್ನು 11-4, 11-9, 6-11, 11-7 ಅಂತರದಿಂದ ಪರಾಭವಗೊಳಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಆಟಗಾರ್ತಿಯರು ಲಕ್ಸೆಂಬರ್ಗ್‌ನ ಸಾರಾ ಡೆ ನುಟ್-ಕ್ಸಿಯಾ ಲಿಯಾನ್ ನಿ ಅವರನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ:ವಿಮಾನದಿಂದ ಇಳಿಯುವವರು ಕೊರೊನಾ ವರದಿ ತೋರಿಸಬೇಕಿಲ್ಲ
ಮಿಶ್ರ ಡಬಲ್ಸ್‌ನಲ್ಲಿ ಮಣಿಕಾ ಬಾತ್ರಾ-ಜಿ. ಸಥಿಯನ್ ಅಮೆರಿಕದ ಕನಾಕ್ ಜಾ-ಚೀನದ ವಾಂಗ್ ಮನ್ಯು ಎದುರಿನ ಮೊದಲೆರಡು ಗೇಮ್ ಕಳೆದುಕೊಂಡೂ ಗೆಲುವು ಸಾಧಿಸಿದ್ದು ವಿಶೇಷವಾಗಿತ್ತು. ಇವರ ಗೆಲುವಿನ ಅಂತರ 15-17, 10-12, 12-10, 11-6, 11-7. ಮಣಿಕಾ-ಸಥಿಯನ್ ಇನ್ನು ಜಪಾನ್‌ನ ಹಿರೊಮೊಟೊ ಟೊಮೊಕಾಜು-ಹಯಾತಾ ಹಿನಾ ಜೋಡಿಯನ್ನು ಎದುರಿಸಲಿದ್ದಾರೆ.