Advertisement

ವಿಶ್ವ ಶೂಟಿಂಗ್‌ ಸ್ಪರ್ಧೆ: ಜಿತು ರಾಯ್‌-ಹೀನಾ ಸಿಧು ಬಂಗಾರ ಸಿಂಗಾರ

11:37 AM Feb 28, 2017 | Harsha Rao |

ಹೊಸದಿಲ್ಲಿ: ಇಲ್ಲಿ ನಡೆಯು ತ್ತಿರುವ ಐಎಸ್‌ಎಸ್‌ಎಫ್ ವರ್ಲ್ಡ್ ಕಪ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಕಳೆದೆರಡು ದಿನ ಗಳಿಂದ ಪದಕದ ಬರಗಾಲ ಅನುಭವಿಸಿದ್ದ ಭಾರತದ ಪಾಳೆಯದಲ್ಲಿ ಸೋಮವಾರ ಸಂಭ್ರಮದ ವಾತಾವರಣ ಮೂಡಿದೆ. 10 ಮೀ. ಮಿಕ್ಸೆಡ್‌ ಟೀಮ್‌ ಏರ್‌ ಪಿಸ್ತೂಲ್‌ ವಿಭಾಗದ ಫೈನಲ್‌ನಲ್ಲಿ ಜಿತು ರಾಯ್‌-ಹೀನಾ ಸಿಧು ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಪುರುಷರ ಡಬಲ್‌ ಟ್ರ್ಯಾಪ್‌ ವಿಭಾಗದಲ್ಲಿ ಆಂಕುರ್‌ ಮಿತ್ತಲ್‌ ಬೆಳ್ಳಿ ಪದಕಕ್ಕೆ ಗುರಿ ಇರಿಸಿದ್ದಾರೆ.

Advertisement

ವಿದ್ಯುತ್‌ ವೈಫ‌ಲ್ಯದಿಂದಾಗಿ ಒಂದು ತಾಸು ತಡವಾಗಿ ನಡೆದ ಫೈನಲ್‌ನಲ್ಲಿ ಜಿತು ರಾಯ್‌-ಹೀನಾ ಸಿಧು ಜಪಾನಿನ ಯುಕಾರಿ ಕೊನಿಶಿ-ಟೊಮೊಯುಕಿ ಮತ್ಸುದಾ ವಿರುದ್ಧ 5-3 ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ಸ್ಲೊವೇ
ನಿಯಾದ ನಫಾಸ್ವಾನ್‌ ಪೈಬೂನ್‌-ಕೆವಿನ್‌ ವೆಂಟಾ ತೃತೀಯ ಸ್ಥಾನಿಯಾದರು. 

2020ರ ಟೋಕಿಯೋ ಒಲಿಂಪಿಕ್ಸ್‌ಗೆ ಪ್ರಾಯೋಗಿಕವಾಗಿ ಐಎಸ್‌ಎಸ್‌ಎಫ್ ವರ್ಲ್ಡ್ ಕಪ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಮಿಶ್ರ ತಂಡ ಸ್ಪರ್ಧೆಯನ್ನು ಅಳವಡಿಸಲಾಗಿದೆ. ಇದು ಈ ಕೂಟದ ಅಧಿಕೃತ ಸ್ಪರ್ಧೆಯಲ್ಲ. ಹೀಗಾಗಿ ಇಲ್ಲಿನ ವಿಜೇತರಿಗೆ ಪದಕದ ಬದಲು ಪದಕ ಸಮಾನ “ಬ್ಯಾಜ್‌’ ನೀಡ ಲಾಯಿತು. ಟೋಕಿಯೋ ಒಲಿಂಪಿಕ್ಸ್‌ ನಲ್ಲಿ ಲಿಂಗ ಸಮಾನತೆಯನ್ನು ಸಾರುವ ಉದ್ದೇಶ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯದ್ದಾಗಿದೆ.

“ಮಿಶ್ರ ವಿಭಾಗದ’ ಮೊದಲ ಹಂತವಾಗಿ ಶನಿವಾರ 10 ಮೀ. ಏರ್‌ ರೈಫ‌ಲ್‌ ಸ್ಪರ್ಧೆ ನಡೆದಿತ್ತು. ಇಲ್ಲಿ ಜಪಾನನ್ನು ಸೋಲಿಸಿದ ಚೀನ ಮೊದಲ ಸ್ಥಾನ ಪಡೆದಿತ್ತು. 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆ ಮಿಕ್ಸೆಡ್‌ ವಿಭಾಗದ 2ನೇ ಪ್ರಾಯೋಗಿಕ ಸ್ಪರ್ಧೆಯಾಗಿದೆ.

ರಾಯ್‌-ಸಿಧು ಸೆಮಿಫೈನಲ್‌ನಲ್ಲಿ ಭಾರೀ ಸಂಕಟದ ಸ್ಥಿತಿಯಿಂದ ಮೇಲೆದ್ದು ಬಂದಿದ್ದರು. ಆದರೆ ಫೈನಲ್‌ನಲ್ಲಿ ಇಂಥ ಸಮಸ್ಯೆ ಎದುರಾಗಲಿಲ್ಲ. ಜಪಾನಿ ಎದುರಾಳಿಯನ್ನು ವಿಶೇಷ ಒತ್ತಡವಿಲ್ಲದೆ ಹಿಮ್ಮೆಟ್ಟಿಸಿದರು.

Advertisement

ರೋಚಕ ಸ್ಪರ್ಧೆಯಾಗಲಿದೆ…
“ಇದೇ ಮೊದಲ ಬಾರಿಗೆ ಮಿಶ್ರ ಡಬಲ್ಸ್‌ ಶೂಟಿಂಗ್‌ ಸ್ಪರ್ಧೆ ನಡೆದಿದೆ. ಇದಿನ್ನೂ ಆರಂಭವಾದ್ದರಿಂದ ನಮ್ಮಿಬ್ಬರ ನಡುವೆ ಸವಾಲು, ಸಮಸ್ಯೆ, ಹೊಂದಾಣಿಕೆ ಕೊರತೆ ಸಹಜ. ಆದರೆ ಒಮ್ಮೆ ರೀತಿ ನಿಯಮಗಳೆಲ್ಲ ಅಂತಿಮಗೊಂಡ ಬಳಿಕ ಸಮಸ್ಯೆ ದೂರಾಗಲಿದೆ. ಇದೊಂದು ರೋಚಕ ಸ್ಪರ್ಧೆಯಾಗ ಲಿದೆ…’ ಎಂದಿದ್ದಾರೆ ವಿಶ್ವ ಚಾಂಪಿಯನ್‌ಶಿಪ್‌ ಹಾಗೂ ಏಶ್ಯನ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತ ಜಿತು ರಾಯ್‌.

“ನಿಜಕ್ಕೂ ಇದೊಂದು ಕುತೂಹಲಕರ ಸ್ಪರ್ಧೆ. ಆರಂಭದ ದಿನವಾದ್ದರಿಂದ ಮಿಶ್ರ ಅಭಿಪ್ರಾಯಗಳಿವೆ. ವಿಶ್ವ ಮಟ್ಟದಲ್ಲಿ ಬೇರೂರಲು ಸ್ವಲ್ಪ ಸಮಯ ತಗಲುವುದು ಸಹಜ. ಆದರೆ ಅಷ್ಟರಲ್ಲಿ ನಾವು ಈ ನೂತನ ಸ್ಪರ್ಧೆಗೆ ಹೊಂದಿಕೊಳ್ಳಬೇಕು. ಆಗ ವಿಶ್ವ ಚಾಂಪಿಯನ್‌ಶಿಪ್‌, ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಅನುಕೂಲವಾಗಲಿದೆ…’ ಎಂದಿ ದ್ದಾರೆ ವಿಶ್ವದ ಮಾಜಿ ನಂ.1 ಶೂಟರ್‌ ಹೀನಾ ಸಿಧು.

ಆಭಿನವ್‌ ಬಿಂದ್ರಾ ನೇತೃತ್ವದ ಐಎಸ್‌ಎಸ್‌ಎಫ್ ಆ್ಯತ್ಲೀಟ್ಸ್‌ ಕಮಿಟಿ ಮಿಶ್ರ ಶೂಟಿಂಗ್‌ ಸ್ಪರ್ಧೆ ಬಗ್ಗೆ ಶಿಫಾರಸು ಮಾಡಿತ್ತು. ಇದಕ್ಕೆ ಅಂತಾರಾಷ್ಟ್ರೀಯ ಶೂಟಿಂಗ್‌ ಹಾಗೂ ಒಲಿಂಪಿಕ್‌ ಸಮಿತಿ ಯಿಂದ ಶೀಘ್ರದಲ್ಲೇ ಅನುಮೋದನೆ ಲಭಿಸಲಿದೆ.

ಬೆಳ್ಳಿ ಪದಕ ಗೆದ್ದ ಅಂಕುರ್‌ ಮಿತ್ತಲ್‌
ಸೋಮವಾರ ನಡೆದ ಪುರುಷರ ಡಬಲ್‌ ಟ್ರ್ಯಾಪ್‌ ಸ್ಪರ್ಧೆಯಲ್ಲಿ ಅಂಕುರ್‌ ಮಿತ್ತಲ್‌ ಬೆಳ್ಳಿ ಪದಕ ಗೆದ್ದರು. ನಿಕಟ ಸ್ಪರ್ಧೆ ಕಂಡ ಫೈನಲ್‌ನಲ್ಲಿ ಮಿತ್ತಲ್‌ 74 ಅಂಕ ಸಂಪಾ ದಿಸಿದರು. ಇವರಿಗಿಂತ ಕೇವಲ ಒಂದು ಅಂಕ ಹೆಚ್ಚು ಗಳಿಸಿದ ಆಸ್ಟ್ರೇಲಿಯದ ಜೇಮ್ಸ್‌ ವಿಲ್ಲೆಟ್‌ ಚಿನ್ನಕ್ಕೆ ಗುರಿ ಇರಿಸಿದರೆ, ಗ್ರೇಟ್‌ ಬ್ರಿಟನ್‌ನ ಜೇಮ್ಸ್‌ ಡೆಡ್‌ಮ್ಯಾನ್‌ 56 ಅಂಕಗಳೊಂದಿಗೆ ಕಂಚಿಗೆ ತೃಪ್ತರಾದರು.

24ರ ಹರೆಯದ ಅಂಕುರ್‌ ಮಿತ್ತಲ್‌ ಭಾರತದ ಪ್ರತಿಭಾನ್ವಿತ ಶೂಟರ್‌ ಆಗಿದ್ದು, 2014 ಹಾಗೂ 2016ರ ಏಶ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ ಡಬಲ್‌ ಟ್ರ್ಯಾಪ್‌ ಸ್ಪರ್ಧೆಯಲ್ಲಿ ಚಿನ್ನ ಮತ್ತು ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದರು. 
ಸೋಮವಾರದ ಫೈನಲ್‌ನಲ್ಲಿ ಅವರು ಸತತ 3 ಹಕ್ಕಿಗಳಿಗೆ ಗುರಿ ಇಡುವುದರಿಂದ ವಂಚಿತರಾಗಿ ಬಂಗಾರದ ಪದಕವನ್ನು ಕಳೆದು ಕೊಳ್ಳಬೇಕಾಯಿತು. ಇನ್ನೊಂದೆಡೆ ಜೇಮ್ಸ್‌ ವಿಲ್ಲೆಟ್‌ಗೆ ತಪ್ಪಿದ್ದು ಒಂದು ಹಕ್ಕಿ ಮಾತ್ರ.

ಇದೇ ವಿಭಾಗದಲ್ಲಿ ಸ್ಪರ್ಧೆಗಿಳಿದಿದ್ದ ಭಾರತದ ಮತ್ತೋರ್ವ ಶೂಟರ್‌ ಸಂಗ್ರಾಮ್‌ ದಹಿಯಾ ಅಗ್ರ ಆರರಲ್ಲಿ ಕಾಣಿಸಿ 
ಕೊಂಡರೂ ಕೇವಲ 24 ಅಂಕಗಳಿಗೆ ತೃಪ್ತ ರಾಗಬೇಕಾಯಿತು. ಇದೇ ಮೊದಲ ಸಲ ಸೀನಿಯರ್‌ ವಿಭಾಗದಲ್ಲಿ ಸ್ಪರ್ಧೆಗೆ ಇಳಿದ 15ರ ಹರೆಯದ ಶಪಥ್‌ ಭಾರದ್ವಾಜ್‌ ಅರ್ಹತಾ ಸುತ್ತಿನಲ್ಲಿ 10ನೆಯವರಾಗಿ ಹೊರ ಬಿದ್ದರು (132 ಅಂಕ).
ಇದಕ್ಕೂ ಮುನ್ನ ಐಎಸ್‌ಎಸ್‌ಎಫ್ ವಿಶ್ವಕಪ್‌ ವೈಯಕ್ತಿಕ ವಿಭಾಗದಲ್ಲಿ ಪೂಜಾ ಘಾಟ್ಕರ್‌ ಕಂಚಿನ ಪದಕಕ್ಕೆ ಗುರಿ ಇರಿಸಿ
ದ್ದರು. ವನಿತೆಯರ 10 ಮೀ. ಏರ್‌ ರೈಫ‌ಲ್‌ ವಿಭಾಗ ಸ್ಪರ್ಧೆಯಲ್ಲಿ ಪೂಜಾಗೆ ಈ ಪದಕ ಒಲಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next